ಜಲ್ಲಿಕಟ್ಟು ನಿಷೇಧ: ಕೋರ್ಟ್ ತೀರ್ಪು ಜಾರಿಗೆ ಸಜ್ಜಾಗಿ ಜಲ್ಲಿಕಟ್ಟು, ಎತ್ತಿನ ಗಾಡಿ ಓಟದ ಸ್ಪರ್ಧೆ ನಿಷೇಧವನ್ನು ಸುಪ್ರೀಂ ಕೋರ್ಟ್ ಮುಂದುವರಿಸಿದೆ. 2014ರಲ್ಲೇ ಸುಪ್ರೀಂ ಕೋರ್ಟ್ ಈ ನಿಷೇಧ ಹೇರಿತ್ತು. ಆದರೆ ಈ ನಿಷೇಧವನ್ನು ತೆರವುಗೊಳಿಸಿ ಕೇಂದ್ರ ಸರ್ಕಾರ ಜನವರಿ 7ರಂದು ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಈಗ ತಡೆ ನೀಡಿದೆ. ಆ ಮೂಲಕ ಪ್ರಾಣಿಗಳ ಹಕ್ಕುಗಳನ್ನು ಎತ್ತಿ ಹಿಡಿದಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಸಂಪ್ರದಾಯವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕಾಗಿ ಹೋರಿಗಳನ್ನು ಪಳಗಿಸಲು ಅತಿರೇಕದ ಹಿಂಸೆ ಬಳಕೆಯಾಗುವುದರಿಂದ ಇದು ಕ್ರೂರವಾದದ್ದು ಎಂಬುದು ಪ್ರಾಣಿ ದಯಾ ಸಂಘಟನೆಗಳ ವಾದ. ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಯಾಗಿರುವ ಈ ಸಂಪ್ರದಾಯದ ಆಧುನಿಕ ಅವತಾರದಲ್ಲಿ ಕ್ರೌರ್ಯ ಮತ್ತಷ್ಟು ವಿಜೃಂಭಿಸುತ್ತದೆ, ಹಿಂಸಾನಂದವೇ ಮೇಲುಗೈಯಾಗಿ ರಕ್ತ ಹರಿಸುವ ಕ್ರೀಡೆಯಾಗಿದೆ ಇದು ಎಂಬುದು ಈ ಸಂಘಟನೆಗಳ ಪ್ರತಿಪಾದನೆ. ಈ ಕ್ರೀಡೆಯನ್ನಾಡುವ ವೇಳೆ ಹೋರಿಯ ಬಾಲ, ಕೊಂಬು, ಕಿವಿಗಳಿಗೆ ಬಹುಮಾನಗಳನ್ನು ಸಿಕ್ಕಿಸಲಾಗುತ್ತದೆ. ಈ ಬಹುಮಾನಗಳನ್ನು ಪಡೆಯುವ ಭರದಲ್ಲಿ ಪ್ರಾಣಿ ಪಳಗಿಸುವವರ ಕೈಗೆ ಈ ಅಂಗಾಂಗಗಳು ಕಿತ್ತುಬರುವುದುಂಟು. ಖಾರದಪುಡಿ ಎರಚುವ ಮೂಲಕ ಪ್ರಾಣಿಯನ್ನು ಕೆರಳಿಸಲಾಗುತ್ತದೆ. ಕೆರಳಿದ ಪ್ರಾಣಿಯನ್ನು ಪಳಗಿಸುವ ಸಾಹಸ ಪ್ರದರ್ಶನ ಜನರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಆದರೆ ಇಂತಹ ಹಿಂಸೆಯಿಂದ ರಂಜನೆ ಪಡೆಯುವುದು 1960ರ ‘ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯಿದೆ’ಯ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು. ಇದರಿಂದ ಇಂತಹ ಹಿಂಸಾನಂದಕ್ಕೆ ತಡೆ ಬಿದ್ದಿತ್ತು. ಮನುಷ್ಯರು ಹೇರುವಂತಹ ಅನಗತ್ಯ ಕ್ರೌರ್ಯ, ನೋವು ಸಂಕಟಗಳ ವಿರುದ್ಧ ರಕ್ಷಣೆ ಪಡೆಯಲು ಪ್ರಾಣಿಗಳಿಗೂ ಹಕ್ಕುಗಳಿವೆ ಎಂಬುದನ್ನು ಕೋರ್ಟ್ ಎತ್ತಿ ಹಿಡಿದಿದೆ. ಪ್ರಾಣಿಗಳಿಗೆ ಹಿಂಸೆ ನೀಡುವ ಕ್ರೀಡೆಗಳನ್ನು ಉತ್ತೇಜಿಸುವುದು ಕ್ರೌರ್ಯದ ವಿರುದ್ಧದ ಕಾನೂನಿನ ಉಲ್ಲಂಘನೆ ಎಂದು ಕೋರ್ಟ್ ವ್ಯಾಖ್ಯಾನಿಸಿದೆ. ಸಂಪ್ರದಾಯಬದ್ಧವಾದ ಕ್ರೀಡೆಗಳ ಆಚರಣೆಯಲ್ಲಿನ ಕ್ರೌರ್ಯ, ವಿಕೃತ ಹಿಂಸೆ ತಗ್ಗಿಸುವ ಪ್ರಯತ್ನಗಳನ್ನು ಈ ಹಿಂದೆ ಮಾಡಲಾಗಿತ್ತು. ಇದಕ್ಕಾಗಿ ಮಾರ್ಗಸೂಚಿಗಳನ್ನೂ ನೀಡಲಾಗಿತ್ತು. ಆದರೆ ಈ ಮಾರ್ಗಸೂಚಿಗಳು ಪಾಲನೆಯಾಗಲಿಲ್ಲ. ಹೀಗಾಗಿ, ಜಲ್ಲಿಕಟ್ಟು ಸ್ಪರ್ಧೆ ಮೇಲೆ ಸುಪ್ರೀಂ ಕೋರ್ಟ್ ಸಂಪೂರ್ಣ ನಿಷೇಧ ಹೇರಿತ್ತು. ಆದರೆ ಕೋರ್ಟ್‌ನ ಈ ಆದೇಶವನ್ನು ತೆರವುಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯು ವಿವಾದಾತ್ಮಕವಾಗಿದ್ದು ನ್ಯಾಯಾಂಗದ ಅಧಿಕಾರವನ್ನು ಕುಗ್ಗಿಸಿದಂತಾಗಿದೆ. ಕಾರ್ಯಾಂಗದ ಅಧಿಸೂಚನೆಯ ಮೂಲಕ ನ್ಯಾಯಾಂಗದ ಆದೇಶವನ್ನು ತೆರವುಗೊಳಿಸಿದ್ದ ಈ ಕ್ರಮ ಸರಿಯಾಗಿರಲಿಲ್ಲ. ಈ ತೀರ್ಪನ್ನು ಬದಲಿಸಬೇಕಾಗಿದ್ದಲ್ಲಿ ಸಂಸತ್‌ನಲ್ಲಿ ಮಸೂದೆ ಮಂಡಿಸಿ ಸದನದ ಅನುಮೋದನೆಯೊಂದಿಗೆ ಹೊಸ ಶಾಸನ ರೂಪಿಸಬೇಕಾಗಿದ್ದುದು ಸರ್ಕಾರದ ಬಾಧ್ಯತೆಯಾಗಿತ್ತು. ಈವರೆಗೆ ನಡೆದುಕೊಂಡು ಬಂದಿರುವ ವಿಧಾನ ಇದು. ಆದರೆ ಈ ವಿಧಾನವನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಯೂ ಏಳುತ್ತದೆ. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿವೆ. ಹೀಗಾಗಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಹಾದಿ ಅನುಸರಿಸಿತು ಎಂಬಂತಹ ಮಾತುಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಸರಿಯಲ್ಲ. ಈಗಲೂ ಪಟ್ಟುಬಿಡದೆ ಜಲ್ಲಿಕಟ್ಟು ಆಚರಣೆಗೆ ಅವಕಾಶ ಮಾಡಿಕೊಡುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಒತ್ತಾಯಿಸಿದ್ದಾರೆ. ಆದರೆ ಈ ವಿಚಾರಕ್ಕೆ ಸುಗ್ರೀವಾಜ್ಞೆ ಖಂಡಿತಾ ಪರಿಹಾರವಾಗದು. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕಾದುದು ಸರಿಯಾದ ನಡೆ. ಸಂಪ್ರದಾಯ ಹಾಗೂ ಆಧುನಿಕ ಕಾನೂನಿನ ನಡುವಿನ ಕೃತಕ ಸಂಘರ್ಷ ಅನಗತ್ಯ. ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನಕ್ಕೆ ರಾಜ್ಯದ ಆಡಳಿತಯಂತ್ರ ಸಜ್ಜಾಗುವುದು ಒಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.