ದೇಶಿ ಉತ್ಪಾದನೆಗೆ ಆದ್ಯತೆ ಸರಿಯಾದ ಹೆಜ್ಜೆ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಪ್ರಕಟಿಸಿರುವ ರಕ್ಷಣಾ ಸಾಮಗ್ರಿ ಖರೀದಿ ಪ್ರಕ್ರಿಯೆ (ಡಿಪಿಪಿ) ಪರಿಷ್ಕೃತ ನೀತಿಯನ್ನು ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ) ನೀತಿಯ ಉದ್ದೇಶ ಹಾಗೂ ಗುರಿ ಜೊತೆಗೆ ಜೋಡಿಸಲು ಯತ್ನಿಸಲಾಗಿದೆ. ಈ ಹೊಸ ಡಿಪಿಪಿ ಕುರಿತಂತಹ ಅಧಿಸೂಚನೆಯನ್ನು ಇನ್ನೂ ಸರ್ಕಾರ ಹೊರಡಿಸಿಲ್ಲ. ಆದರೆ ಅದರ ಮುಖ್ಯ ಅಂಶಗಳಂತೂ ಸ್ಪಷ್ಟವಾಗಿಯೇ ಇವೆ. ಮಾಜಿ ಗೃಹ ಸಚಿವ ಧೀರೇಂದ್ರ ಸಿಂಗ್ ನೇತೃತ್ವದ ತಜ್ಞರ ಸಮಿತಿಯ ಶಿಫಾರಸುಗಳನ್ನು ಇದು ಒಳಗೊಂಡಿದೆ. ದೇಶಿ ವಿನ್ಯಾಸ, ಅಭಿವೃದ್ಧಿ ಹಾಗೂ ತಯಾರಿಕೆಗೆ ಒತ್ತು ನೀಡಿರುವುದು ಡಿಪಿಪಿಯ ಮುಖ್ಯ ಅಂಶ. ಈಗ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರದ ಸಣ್ಣ ಕೈಗಾರಿಕೆ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶ ಇಲ್ಲಿದೆ. ವಾಸ್ತವವಾಗಿ ಈಗಿರುವ ನೀತಿಯೂ ದೇಶಿ ತಯಾರಿಕೆಗೆ ಒತ್ತು ನೀಡುವಂತೆಯೇ ಇದೆ. ಆದರೆ, ಸ್ಥಳೀಯ ಉತ್ಪಾದನೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲು ಪ್ರಕ್ರಿಯೆಗಳನ್ನು ಪರಿಷ್ಕೃತ ಡಿಪಿಪಿ ರೂಪಿಸಲಿದೆ. ತಯಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಖಾಸಗಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲು ಪ್ರಯತ್ನಿಸಲಾಗುವುದು. ಬಹಳ ವರ್ಷಗಳಿಂದ, ವಿಶ್ವದಲ್ಲೇ ಶಸ್ತ್ರಾಸ್ತ್ರಗಳ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದೆ ಭಾರತ. ಖರೀದಿ ಮಾಡುವಂತಹ ರಕ್ಷಣಾ ಉಪಕರಣಗಳ ವ್ಯಾಪ್ತಿಯನ್ನು ಗಮನಿಸಿದಲ್ಲಿ ರಕ್ಷಣಾ ಖರೀದಿ ಅನೇಕ ಹಗರಣಗಳಿಗೂ ಕಾರಣವಾಗಿರುವುದು ಸರ್ವವಿದಿತ. ಖರೀದಿ ಪ್ರಕ್ರಿಯೆಗಳೇನೂ ಸರಳವಲ್ಲ ಎಂಬುದು ನಿಜ. ಇವು ಸಂಕೀರ್ಣವಾದದ್ದು ಹಾಗೂ ಸುದೀರ್ಘ ಕಾಲ ಹಿಡಿಸುವಂತಹದ್ದು. ಹೀಗಾಗಿ ಪ್ರತಿ ವರ್ಷ ಇಲಾಖೆಗೆ ಹಂಚಿಕೆಯಾದ ಬಜೆಟ್ ಹಣ ಬಳಕೆ ಮಾಡಿಕೊಳ್ಳುವಲ್ಲಿ ರಕ್ಷಣಾ ಸಚಿವಾಲಯ ವಿಫಲವಾಗುತ್ತಿದೆ. ಜೊತೆಗೆ ಪಾರದರ್ಶಕತೆ ಕೊರತೆಯಿಂದ ಖರೀದಿ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಹಗರಣಗಳಿಂದಲೂ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ಎಷ್ಟೋ ಸಲ ಖರೀದಿ ಒಪ್ಪಂದಗಳು ರದ್ದಾಗಿರುವುದೂ ಉಂಟು. ಇಂತಹ ವಿದ್ಯಮಾನಗಳಿಂದ ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಧಕ್ಕೆಯಾಗುತ್ತಿರುವುದು ಕಹಿ ವಾಸ್ತವ. ಈಗ ಹೊಸ ಡಿಪಿಪಿ ರೂಪದಲ್ಲಿ ಈ ಪರಿಸ್ಥಿತಿಯನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಅನೇಕ ರೀತಿಗಳಲ್ಲಿ ಮುಖ್ಯ. ಏಕೆಂದರೆ, ಸ್ವಾವಲಂಬನೆ ಸಾಧಿಸಬೇಕಾದುದು ಭಾರತಿಯ ರಕ್ಷಣಾ ವಲಯದಲ್ಲಿರುವ ಸದ್ಯದ ಸವಾಲು. ರಕ್ಷಣಾ ಉಪಕರಣಗಳಿಗಾಗಿ ವಿದೇಶಿ ಮಾರಾಟಗಾರರನ್ನೇ ಭಾರತ ಸುದೀರ್ಘ ಕಾಲ ಅವಲಂಬಿಸಿಕೊಂಡು ಕೂಡಲಾಗದು. ಏಕೆಂದರೆ ಇದು ವೆಚ್ಚವನ್ನು ತೀವ್ರ ರೀತಿಯಲ್ಲಿ ಹೆಚ್ಚಿಸುತ್ತದೆ. ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಉಪಕರಣಗಳನ್ನು ರಾಷ್ಟ್ರದೊಳಗೇ ಅಭಿವೃದ್ಧಿಪಡಿಸಿ ಉತ್ಪಾದಿಸುವುದರಿಂದ ಆಮದು ವೆಚ್ಚ ಗಣನೀಯವಾಗಿ ತಗ್ಗಲಿದೆ. ಇದರಿಂದ ದೇಶಿ ಉದ್ಯಮಕ್ಕೂ ಚೇತರಿಕೆ ಸಿಗಲಿದೆ. ಗುಣಮಟ್ಟವೂ ಹೆಚ್ಚಲಿದೆ. ವಿದೇಶಿ ಮಾರಾಟಗಾರರು ಹಾಗೂ ಹೊರ ರಾಷ್ಟ್ರಗಳ ಮೇಲಿನ ಅವಲಂಬನೆ ತಗ್ಗಲಿದೆ. ಹೀಗಾಗಿ, ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲು ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಭಾರತದ ಸಂಸ್ಥೆಗಳಿಗೆ ಡಿಪಿಪಿ ಉತ್ತೇಜನ ನೀಡಲಿದೆ. ಹಣಕಾಸು ನೆರವು ಒದಗಿಸಲಿದೆ. ಹೊಸ ನೀತಿ ಅನುಷ್ಠಾನಕ್ಕೆ ‘ದೇಶಿ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಾದ ಹಾಗೂ ತಯಾರಿಸಲಾದ’ (ಐಡಿಡಿಎಂ) ಉತ್ಪನ್ನಗಳ ಹೊಸ ವರ್ಗವನ್ನು ಹೊಸ ಡಿಪಿಪಿ ಸೃಷ್ಟಿಸಿದೆ. ಇದರಿಂದ ಖರೀದಿ ಪ್ರಕ್ರಿಯೆಯಲ್ಲಿ ವಿದೇಶಿ ಉಪಕರಣಗಳಿಗಿಂತ ದೇಶಿ ರಕ್ಷಣಾ ಸಾಮಗ್ರಿಗಳಿಗೆ ಆದ್ಯತೆ ದೊರಕಲಿದೆ. ಆದರೆ ಇದರಿಂದ ರಕ್ಷಣಾ ಖರೀದಿ ಸಮಸ್ಯೆಗಳು ಅಂತ್ಯವಾಗುತ್ತವೆ ಎಂದು ಈಗಲೇ ಹೇಳುವುದು ಅಸಾಧ್ಯ. ಈ ನಿರ್ಧಾರಗಳನ್ನು ಎಷ್ಟರಮಟ್ಟಿಗೆ ಜಾರಿಗೊಳಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.