ಉಗ್ರರ ದುಷ್ಕೃತ್ಯ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ ಪಾಕಿಸ್ತಾನದಲ್ಲಿ ಕಳೆದ ಒಂದು ವರ್ಷದಲ್ಲಿ ಎರಡನೇ ಸಲ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಕೇಂದ್ರದ ಮೇಲೆ ಉಗ್ರರು ದಾಳಿ ನಡೆಸಿ ಹಲವರನ್ನು ಕೊಂದಿದ್ದಾರೆ. ನಿರಾಯುಧ ವಿದ್ಯಾರ್ಥಿಗಳ ಹತ್ಯೆ ಹೇಯವಾದುದು. ತಾಲಿಬಾನ್ ಉಗ್ರಗಾಮಿಗಳು ಪಾಕಿಸ್ತಾನದಲ್ಲಿ ಮತ್ತೊಮ್ಮೆ ತಮ್ಮ ಅಟ್ಟಹಾಸ ಪ್ರದರ್ಶಿಸಿದ್ದಾರೆ. ಈ ಸಲವೂ ಅವರು ನರಮೇಧಕ್ಕೆ ಆಯ್ಕೆ ಮಾಡಿಕೊಂಡದ್ದು ಶೈಕ್ಷಣಿಕ ಕೇಂದ್ರವೊಂದನ್ನು. ಖೈಬರ್ ಫಖ್ತುನ್‌ಖ್ವಾ ಪ್ರಾಂತ್ಯದ ಬಾಚಾಖಾನ್ ವಿಶ್ವವಿದ್ಯಾಲಯಕ್ಕೆ ನುಗ್ಗಿ, ನಿರಾಯುಧ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ದುರಂತ ಎಂದರೆ ಅವರ ಮತಿಹೀನ ದುಷ್ಕೃತ್ಯಕ್ಕೆ ಬೆಲೆ ತೆತ್ತ ಈ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ಗಡಿನಾಡ ಗಾಂಧಿ ಎಂದೇ ಹೆಸರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ ಸ್ಮರಣೆಯಲ್ಲಿ. ದಾಳಿಯಾಗುವಾಗ ಖಾನ್ ಸಾಹೇಬರ ನೆನಪಿನಲ್ಲಿ ಕಾವ್ಯ ಕಮ್ಮಟ ನಡೆಯುತ್ತಿತ್ತು ಎಂಬುದು ವಿಪರ್ಯಾಸ. ಏಕೆಂದರೆ, ಬದುಕಿನುದ್ದಕ್ಕೂ ಅಹಿಂಸೆಯನ್ನೇ ಪ್ರತಿಪಾದಿಸುತ್ತ ಅಖಂಡ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರು ಮಹಾತ್ಮ ಗಾಂಧಿ ಅವರ ಅಪ್ಪಟ ಶಿಷ್ಯ. ಕಳೆದ ವರ್ಷವೂ ಪೆಶಾವರ್‌ನಲ್ಲಿ ಸೇನಾ ಸಿಬ್ಬಂದಿಯ ಮಕ್ಕಳು ಕಲಿಯುತ್ತಿದ್ದ ಶಾಲೆ ಮೇಲೆ ದಾಳಿ ಮಾಡಿದ್ದ ಉಗ್ರರ ಗುಂಪು ನೂರಾರು ಮಕ್ಕಳನ್ನು ನಿರ್ದಯವಾಗಿ ಕೊಂದು ಹಾಕಿತ್ತು. ಉಗ್ರರ ಸಂಘಟನೆಗಳ ಮೇಲೆ ಪಾಕ್ ಸೇನೆ ಕೈಗೊಂಡ ನಿಷ್ಠುರ ಕ್ರಮಗಳಿಗೆ ಇದು ಪ್ರತೀಕಾರ ಎಂದು ದಾಳಿಯ ಹೊಣೆ ಹೊತ್ತ ತೆಹ್ರಿಕ್ ಎ ತಾಲಿಬಾನ್ ಸಂಘಟನೆ ಹೇಳಿಕೊಂಡಿದೆ. ಉಗ್ರರಿಗೆ ಜಾತಿ, ಧರ್ಮದ ಭೇದವಿಲ್ಲ; ಕ್ರೌರ್ಯವನ್ನು ಮೆರೆಯುವುದೇ ಏಕಮಾತ್ರ ಉದ್ದೇಶ ಎಂಬುದು ಈ ಹೇಯ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಅಮಾಯಕರು ಮತ್ತು ನಿರಾಯುಧರ ಮೇಲೆ ವಿನಾಕಾರಣ ಎರಗುವ ಇಂಥ ಉಗ್ರ ಸಂಘಟನೆಗಳನ್ನು ಬೆಳೆಯಲು ಬಿಡಬಾರದು. ಇವುಗಳನ್ನು ದಮನ ಮಾಡುವುದು ಅಗತ್ಯ. ಇಲ್ಲವಾದರೆ ಇಡೀ ವಿಶ್ವ ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಪಾಕಿಸ್ತಾನದ ಸಮಸ್ಯೆಯೇ ವಿಚಿತ್ರ, ಅದು ಅನುಭವಿಸುತ್ತಿರುವ ಯಾತನೆಗಳೂ ಅಷ್ಟೇ ವಿಚಿತ್ರ. ಅದರದೇ ಸೇನೆಯ ನಿಯಂತ್ರಣದಲ್ಲಿ ಇರುವ ಅಂತರ್‌ಸೇನಾ ಬೇಹುಗಾರಿಕೆ ದಳ ಅಥವಾ ಐಎಸ್‌ಐ, ಭಾರತ ಮತ್ತು ಆಫ್ಘಾನಿಸ್ತಾನದಲ್ಲಿ ಉಗ್ರರ ಚಟುವಟಿಕೆಗೆ ಎಲ್ಲ ರೀತಿಯ ಕುಮ್ಮಕ್ಕು ಕೊಡುತ್ತಿರುವುದು ಇಡೀ ವಿಶ್ವಕ್ಕೇ ಗೊತ್ತು. ತೀರ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕೂಡ, ‘ಪಾಕಿಸ್ತಾನ ವಿಶ್ವದ ಉಗ್ರರ ಅಡಗುದಾಣ, ಸಹಾಯ ಕೇಂದ್ರವಾಗಿ ಬೆಳೆದಿದೆ’ ಎಂದು ನೇರವಾಗಿಯೇ ಟೀಕಿಸಿದ್ದರು. ಅಲ್ಲಿ ತರಬೇತಿಯಿಂದ ಹಿಡಿದು ಎಲ್ಲ ಬಗೆಯ ಸಹಾಯ ಪಡೆದು ದಷ್ಟಪುಷ್ಟವಾಗಿ ಕೊಬ್ಬಿ ಬೆಳೆದ ಉಗ್ರರ ವಿವಿಧ ಬಣಗಳು ಆರಂಭದಲ್ಲಿ ಭಾರತವನ್ನು ತಮ್ಮ ಚಟುವಟಿಕೆಗೆ ಗುರಿ ಮಾಡಿಕೊಂಡಿದ್ದವು. ನಂತರ ಅವುಗಳ ಕಣ್ಣು, ತಮಗೆ ಆಶ್ರಯ ಕೊಟ್ಟವರ ಮೇಲೇ ಬಿದ್ದಿರುವುದು ವಿಪರ್ಯಾಸ. ಅದರ ಪರಿಣಾಮವಾಗಿಯೇ ಪಾಕಿಸ್ತಾನ ಕೂಡ ಉಗ್ರರ ದಾಳಿಯಿಂದ ನಲುಗುತ್ತಿದೆ. ಆದರೂ ತನ್ನ ನೆಲದಲ್ಲಿ ತರಬೇತಾದ ಉಗ್ರರು ಬೇರೆ ದೇಶಗಳ ಮೇಲೆ ದಾಳಿ ಮಾಡಿದರೆ ಅದು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಇತ್ತೀಚೆಗೆ ಪಠಾಣ್‌ಕೋಟ್ ವಾಯು ನೆಲೆ ಮೇಲೆ ಐಎಸ್‌ಐನಿಂದ ತರಬೇತಾದ ಪಾಕ್ ಮೂಲದ ಉಗ್ರರು ನಡೆಸಿದ ದಾಳಿ, ಆಫ್ಘಾನಿಸ್ತಾನದ ವಿವಿಧ ಸ್ಥಳಗಳಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲೆ ನಡೆದ ದಾಳಿಗಳು ಇದಕ್ಕೊಂದು ನಿದರ್ಶನ. ಪಠಾಣ್‌ಕೋಟ್‌ ದಾಳಿಯನ್ನು ರೂಪಿಸಿದ ಉಗ್ರ ಮೌಲಾನಾ ಮಸೂದ್‌ ಅಜರ್ ಬಗ್ಗೆ ಪಾಕಿಸ್ತಾನ ದೃಢ ಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದೆ. ಉಗ್ರರನ್ನು ಸಾಕಿ ಸಲಹುವುದು ನರಭಕ್ಷಕ ಹುಲಿ ಮೇಲಿನ ಸವಾರಿ ಇದ್ದಂತೆ. ಇದು ಎಷ್ಟು ಅಪಾಯಕಾರಿ ಎಂಬುದನ್ನು ಪಾಕಿಸ್ತಾನ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ತನ್ನ ದೇಶದಲ್ಲಿ ಇರುವ ಉಗ್ರರ ತರಬೇತಿ ಶಿಬಿರಗಳನ್ನು ನಿರ್ನಾಮ ಮಾಡಬೇಕು. ಉಗ್ರರಿಗೆ ತನು, ಮನ, ಧನ ಸೇರಿದಂತೆ ಎಲ್ಲ ವಿಧದ ಸಹಾಯ ಮಾಡುತ್ತಿರುವ ಐಎಸ್‌ಐಯನ್ನು ಹದ್ದುಬಸ್ತಿನಲ್ಲಿ ಇಡಬೇಕು. ಉಗ್ರರ ಪಾಲಿಗೆ ಪಾಕಿಸ್ತಾನ ಸುರಕ್ಷಿತ ತಾಣ ಎಂಬ ಭಾವನೆ ಎಲ್ಲೆಡೆ ಇದೆ. ಇದನ್ನು ಹುಸಿಗೊಳಿಸುವ ಧೈರ್ಯ, ಶಕ್ತಿ ಪ್ರದರ್ಶಿಸಬೇಕು. ಉಗ್ರರನ್ನು ನಾಶ ಮಾಡುವುದು ಯಾವುದೋ ಒಂದೆರಡು ದೇಶಕ್ಕೆ ಸೀಮಿತವಾದ ಕಾರ್ಯವಲ್ಲ. ಎಲ್ಲರ ಸಹಕಾರ ಬೇಕು. ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಉಗ್ರರು ನಡೆಸಿದ ನರಮೇಧದ ನಂತರವಾದರೂ ಪಾಠ ಕಲಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.