ದೇಶದಲ್ಲಿ ಕಾಲೂರಲು ಐಎಸ್‌ ಯತ್ನ: ಆತಂಕದ ವಿದ್ಯಮಾನ ವಿಶ್ವದ ಅತ್ಯಂತ ಅಪಾಯಕಾರಿ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ಗೆ (ಐಎಸ್) ನಮ್ಮ ದೇಶದಲ್ಲಿ ಹೆಜ್ಜೆ ಊರಲು ಅವಕಾಶ ಸಿಕ್ಕಿಲ್ಲ ಎಂಬ ನಂಬಿಕೆ ಹುಸಿಯಾಗಿದೆ. ಇಲ್ಲೂ ಯುವಕರನ್ನು ಪ್ರಚೋದಿಸಿ ತನ್ನೆಡೆ ಸೆಳೆಯುವ ಪ್ರಯತ್ನದಲ್ಲಿ ಅದು ಕೆಲಮಟ್ಟಿಗಾದರೂ ಯಶಸ್ಸು ಕಂಡಿದೆ ಎಂಬುದು ಶುಕ್ರವಾರದಿಂದ ಈಚೆಗೆ ದೇಶದ ವಿವಿಧೆಡೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ಶೋಧನಾ ಕಾರ್ಯಾಚರಣೆಗಳಿಂದ ದೃಢಪಟ್ಟಿದೆ. ಎನ್‌ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ 14 ಮಂದಿಯನ್ನು ಬಂಧಿಸುವ ಮೂಲಕ ಸಂಭವನೀಯ ದುಷ್ಕೃತ್ಯವೊಂದನ್ನು ತಡೆದಿದ್ದಾರೆ. ‘ಬಂಧಿತರೆಲ್ಲ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು; ಅದಕ್ಕಾಗಿ ಸಾಕಷ್ಟು ಸಿದ್ಧತೆಯಲ್ಲಿ ತೊಡಗಿದ್ದರು; ಐಎಸ್‌ನ ಸಿದ್ಧಾಂತಗಳಿಗೆ ಮನಸೋತಿದ್ದರು’ ಎನ್ನುವ ಮಾಹಿತಿಗಳು ಹೊರಬೀಳುತ್ತಿವೆ. ಇವರಲ್ಲಿ ಹೆಚ್ಚಿನವರು ಸುಶಿಕ್ಷಿತರು, ಚೆನ್ನಾಗಿ ಓದಿಕೊಂಡವರು. ಒಳ್ಳೆಯ ಕೆಲಸದಲ್ಲಿ ಇದ್ದವರು. ಸಾಕಷ್ಟು ತಿಳಿವಳಿಕೆ ಹೊಂದಿದವರನ್ನೂ ಸುಲಭವಾಗಿ ಮತಾಂಧರನ್ನಾಗಿ ಮಾಡಬಹುದು, ಹಿಂಸೆಯ ಮಾರ್ಗಕ್ಕೆ ಎಳೆದುಕೊಂಡು ಹೋಗಬಹುದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಈಗ ಬಂಧಿತರಾದವರಲ್ಲಿ ಬೆಂಗಳೂರಿನ ನಾಲ್ವರು, ಮಂಗಳೂರು ಮತ್ತು ತುಮಕೂರಿನ ತಲಾ ಒಬ್ಬರಿದ್ದಾರೆ. ಐಎಸ್‌ನ ಟ್ವಿಟರ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು 13 ತಿಂಗಳ ಹಿಂದೆ ಸೆರೆಹಿಡಿಯಲಾಗಿತ್ತು. ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿಯೇ ಒಬ್ಬ ಮೌಲ್ವಿಯನ್ನು ಬಂಧಿಸಲಾಗಿತ್ತು. ಇವರಿಂದ ಸಂಗ್ರಹಿಸಿದ ಮಾಹಿತಿಗಳು, ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ನೀಡಿದ ಸುಳಿವು ಶಂಕಿತರ ಬಂಧನಕ್ಕೆ ಸಹಾಯ ಮಾಡಿವೆ. ಪಠಾಣ್‌ಕೋಟ್‌ ಘಟನೆ ಮತ್ತು ಈ ಬಾರಿ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ ನಂತರವಂತೂ ಹೆಚ್ಚು ಜಾಗರೂಕತೆ ವಹಿಸಲಾಗುತ್ತಿದೆ. ಫ್ರಾನ್ಸ್ ವಿರುದ್ಧ ಐಎಸ್ ಮತ್ತು ಇತರ ಮುಸ್ಲಿಂ ಉಗ್ರಗಾಮಿ ಸಂಘಟನೆಗಳು ಕಿಡಿ ಕಾರುತ್ತಲೇ ಇರುವುದರಿಂದ ಇದು ಅನಿವಾರ್ಯ. ಇದರ ನಡುವೆಯೇ ಬೆಂಗಳೂರಿನ ಫ್ರಾನ್ಸ್ ಕಾನ್ಸಲ್ ಕಚೇರಿಗೆ ಬೆದರಿಕೆ ಪತ್ರ ಬಂದಿತ್ತು. ಇವನ್ನೆಲ್ಲ ನೋಡಿದರೆ ಉಗ್ರರ ಜಾಲ ಬೇರೂರುತ್ತಿರುವ ಲಕ್ಷಣಗಳು ಕಾಣುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಯಾವುದೇ ಭಾಗದಲ್ಲಿ ಶಂಕಿತರ ಬಂಧನ, ಉಗ್ರರ ಜಾಲ ಬಯಲು ಮಾಡಿದಾಗ ಅದರ ಬೇರುಗಳು ಕರ್ನಾಟಕದವರೆಗೂ ಚಾಚಿಕೊಳ್ಳುತ್ತಿವೆ. ಇದು ಆತಂಕ ಪಡಲೇಬೇಕಾದ ಸಂಗತಿ. ಕರಾವಳಿಯ ಕೆಲ ನಗರಗಳು ಮತ್ತು ಬೆಂಗಳೂರು ಮಹಾನಗರ ಭಯೋತ್ಪಾದಕರ ಆಶ್ರಯ ತಾಣವಾಗುತ್ತಿವೆ. ಕರ್ನಾಟಕ ಶಾಂತಿಪ್ರಿಯ ನಾಡು ಎಂಬ ಖ್ಯಾತಿಗೆ ಇವು ಕಳಂಕ ತರುತ್ತಿವೆ. ಆದರೆ, ಈ ರೀತಿ ಹಿಂದೆಯೂ ಬೇರೆ ಬೇರೆ ಸಂದರ್ಭಗಳಲ್ಲಿ ಅನುಮಾನದ ಮೇಲೆ ಅನೇಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಕೆಲವರು ಅಮಾಯಕರು ಎಂಬುದು ನಂತರ ಸಾಬೀತಾಗಿತ್ತು. ಆದ್ದರಿಂದ ಯಾರನ್ನಾದರೂ ಬಂಧಿಸಿದ ತಕ್ಷಣವೇ ‘ಉಗ್ರರು’ ಎಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ. ಯುವಕರು ತಪ್ಪು ಹಾದಿ ತುಳಿಯದಂತೆ ಆಯಾ ಸಮುದಾಯಗಳು, ಹಿರಿಯರು ನಿರಂತರವಾಗಿ ನಿಗಾ ಇಡಬೇಕು. ದೇಶದ್ರೋಹದ ಕೃತ್ಯಗಳಿಗೆ ಸಂಚು ರೂಪಿಸಿದರೆ ಒಂದಲ್ಲ ಒಂದು ಸಲ ಸಿಕ್ಕಿ ಬೀಳಲೇಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ತಮ್ಮ ಗುರಿ ಸಾಧಿಸಿಕೊಳ್ಳಲು ಉಗ್ರಗಾಮಿ ಸಂಘಟನೆಗಳು ಈಗ ಅಂತರ್ಜಾಲ, ಸಾಮಾಜಿಕ ತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿವೆ. ದುಷ್ಕೃತ್ಯಕ್ಕೆ ಅಗತ್ಯ ಹಣ ಪೂರೈಸಲು ಹವಾಲಾ ಜಾಲವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಿವೆ. ಧರ್ಮದ ಬಗ್ಗೆ ಅಂಧಾಭಿಮಾನ ಇಟ್ಟುಕೊಂಡವರನ್ನು ಮರುಳು ಮಾಡುವುದರಲ್ಲಿ ಅವುಗಳದು ಎತ್ತಿದ ಕೈ. ವಿಧ್ವಂಸಕ ಕೃತ್ಯಕ್ಕೆ ಬೇಕಾದ ಸಾಧನ, ಸಂಪನ್ಮೂಲ ಸಂಗ್ರಹದಲ್ಲಿ ಅವುಗಳನ್ನು ಮೀರಿಸುವವರು ಇಲ್ಲ. ಅನೇಕ ವಿದೇಶಿ ಸರ್ಕಾರಗಳು, ಸರ್ಕಾರಿ ಸಂಸ್ಥೆಗಳು ತಮಗಾಗದವರ ಮೇಲೆ ಸೇಡು ತೀರಿಸಿಕೊಳ್ಳಲು ಇಂಥ ಸಂಘಟನೆಗಳನ್ನು ಹುಟ್ಟು ಹಾಕಿದ, ಪೋಷಿಸುತ್ತ ಬಂದ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇವನ್ನು ಹೊಸಕಿ ಹಾಕುವುದು ಅನಿವಾರ್ಯ. ಲಷ್ಕರ್, ಅಲ್‌ಕೈದಾ, ಇಂಡಿಯನ್ ಮುಜಾಹಿದ್ದೀನ್, ತಾಲಿಬಾನ್ ಹೀಗೆ ಬೇರೆ ಬೇರೆ ಸಂಘಟನೆಗಳು ಭಾರತದಲ್ಲಿ ತಮ್ಮ ನೆಲೆ ವಿಸ್ತರಿಸಿಕೊಳ್ಳಲು ಸಮಯ ಸಿಕ್ಕಾಗೆಲ್ಲ ಹುನ್ನಾರ ನಡೆಸಿವೆ. ಆದರೆ ಅವೆಲ್ಲಕ್ಕಿಂತ ಐಎಸ್ ಹೆಚ್ಚು ವಿನಾಶಕಾರಿ. ಅಂಥ ಸಂಘಟನೆ ಇಲ್ಲಿ ಚಿಗುರೊಡೆಯುವುದನ್ನು ಶತಾಯಗತಾಯ ತಡೆಯಲೇಬೇಕು. ಅದಕ್ಕೆ ಕೋಮು, ಧರ್ಮದ ಎಲ್ಲೆ ಮೀರಿ ಎಲ್ಲರ ಸಹಕಾರ ಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.