ಹೂಡಿಕೆಯ ಹೊಸ ಶಕೆ ಅನುಷ್ಠಾನಕ್ಕೆ ಬದ್ಧತೆ ಬೇಕು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಆಶಯ ಸಾಕಾರಗೊಳಿಸಲು ಸರ್ಕಾರ ಬದ್ಧತೆ ತೋರಬೇಕು. ಒಡಂಬಡಿಕೆಗಳು ಬಂಡವಾಳ ಹೂಡಿಕೆಗಳಾಗಿ ಮುಂದುವರಿಯುವುದು ಮುಖ್ಯ. ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ 121 ಒಪ್ಪಂದಗಳಿಗೆ ಸಹಿ ಹಾಕಿರುವುದು, ₹ 1.33 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆಯ ಭರವಸೆ ದೊರೆತಿರುವುದು ಸಮಾವೇಶದ ಯಶಸ್ಸಿಗೆ ಕನ್ನಡಿ ಹಿಡಿದಿದೆ. ಈ ಅಂಕಿ ಅಂಶಗಳೆಲ್ಲ ವಾಸ್ತವದಲ್ಲಿ ಕಾರ್ಯಗತಗೊಂಡು 7 ಲಕ್ಷದಷ್ಟು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾದರೆ ರಾಜ್ಯದ ಅರ್ಥ ವ್ಯವಸ್ಥೆಗೆ ಹೊಸ ಚೈತನ್ಯ ದೊರೆಯಲಿದೆ. ಯೋಜನೆಗಳ ಅನುಷ್ಠಾನಕ್ಕೆ ‘ಇನ್ವೆಸ್ಟ್‌ ಕರ್ನಾಟಕ ನಿಗಮ’ ಸ್ಥಾಪನೆ ಮತ್ತು ಕಾಲಮಿತಿಯೊಳಗೆ ಯೋಜನೆಗಳಿಗೆ ಒಪ್ಪಿಗೆ ನೀಡಲು ನಿರ್ಧರಿಸಿರುವುದು ಉತ್ತಮ ಆಲೋಚನೆಯಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಗಾರಿಕಾ ಸ್ನೇಹಿಯಲ್ಲ ಎಂಬಂತಹ ಭಾವನೆಯನ್ನು ತೊಡೆಯುವ ಪ್ರಯತ್ನ ಇಲ್ಲಿದೆ. ಆದರೆ, ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸಿ ಕೈತೊಳೆದುಕೊಂಡರೆ ಸಾಲದು. ದೇಶವಿದೇಶಗಳ ಉದ್ಯಮಿಗಳ ಆಶಯ, ಕನಸುಗಳನ್ನು ಸಾಕಾರಗೊಳಿಸಲು ಬದ್ಧತೆ ತೋರುವುದು ಮುಖ್ಯ. ಸಾಫ್ಟ್‌ವೇರ್ ರಾಜಧಾನಿ ಖ್ಯಾತಿಯ ಬೆಂಗಳೂರು, ಸ್ಟಾರ್ಟ್‌ಅಪ್‌ ರಾಜಧಾನಿಯಾಗಿಯೂ ಬೆಳೆಯುತ್ತಿರುವ ಕಾಲಘಟ್ಟದಲ್ಲಿ, ಎರಡು ಮತ್ತು ಮೂರನೇ ಹಂತದ ನಗರಗಳತ್ತ ಹೂಡಿಕೆದಾರರಿಂದ ಆಸಕ್ತಿ ವ್ಯಕ್ತವಾಗಿದೆ ಎನ್ನಲಾಗಿದೆ. ಕೈಗಾರಿಕಾ ವಿಕೇಂದ್ರೀಕರಣಕ್ಕಾಗಿ ಇದು ಅಗತ್ಯವಾಗಿ ಆಗಬೇಕಾದ ಕೆಲಸ. ಆದರೆ ಇದು ಬಾಯಿಮಾತಿನದಾಗಬಾರದು. ಇದನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಅಗತ್ಯ. ಹಾಗೆಯೇ ಅರ್ಥ ವ್ಯವಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯುವ ಹೊಸ ಎಂಜಿನ್‌ ಆಗಿರುವ ವೈಮಾಂತರಿಕ್ಷ ವಲಯದ ಬೆಳವಣಿಗೆಗೆ ಸರ್ಕಾರ ಅಗತ್ಯ ಬೆಂಬಲ ನೀಡಬೇಕಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ರಾಜ್ಯದ ಯೋಜನೆಗಳನ್ನು ಪೈಪೋಟಿ ಮೇಲೆ ಸೆಳೆಯುತ್ತಿರುವಾಗ, ಇನ್ನಷ್ಟು ಯೋಜನೆಗಳು ಅನ್ಯ ರಾಜ್ಯಗಳ ಪಾಲಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಜಾಗತಿಕ ಅರ್ಥ ವ್ಯವಸ್ಥೆಯಲ್ಲಿನ ಅನಿಶ್ಚಿತತೆಯ ಕಾರಣಕ್ಕೆ ಇಡೀ ವಿಶ್ವ ಭಾರತದತ್ತ ನೋಡುತ್ತಿರುವ ಸಂದರ್ಭದಲ್ಲಿ ನಡೆದ ಸಮಾವೇಶವು ಉದ್ದಿಮೆ ವಲಯದಲ್ಲಿ ಹೊಸ ಆಶಾಕಿರಣ ಮೂಡಿಸುವಲ್ಲಿ ಸಫಲವಾಗಿದೆ. ವಿದೇಶಿ ಕಂಪೆನಿಗಳು ಭಾರತದಲ್ಲಿ ವಹಿವಾಟು ನಡೆಸಲು ಇಲ್ಲಿಯ ಭ್ರಷ್ಟಾಚಾರ, ಆಡಳಿತಶಾಹಿ ಧೋರಣೆಗಳು ಮುಖ್ಯ ತೊಡಕಾಗಿ ಪರಿಣಮಿಸಿವೆ ಎಂದು ಸ್ವೀಡನ್‌ ರಾಯಭಾರಿಯು ಸಮಾವೇಶದ ವೇದಿಕೆ ಮೇಲೆಯೇ ಚಾಟಿಏಟು ಬೀಸಿದ್ದಾರೆ. ಜೊತೆಗೆ ತೆರಿಗೆ ನೀತಿ, ಮೂಲ ಸೌಕರ್ಯಗಳ ಕೊರತೆ, ಭೂಮಿ ಮಂಜೂರಾತಿ ಬಗ್ಗೆ ಉದ್ಯಮಿಗಳೂ ಟೀಕಿಸಿರುವುದು ಸರ್ಕಾರದ ಕಣ್ಣು ತೆರೆಸಬೇಕಾಗಿದೆ. ಇಂತಹ ಸಮಸ್ಯೆಗಳಿಂದಾಗಿ ಈ ಹಿಂದೆ ಒಡಂಬಡಿಕೆಯಾಗಿದ್ದ ಪೋಸ್ಕೊ ಯೋಜನೆ ರದ್ದಾದುದನ್ನು ಸ್ಮರಿಸಬೇಕು. ಉದ್ಯಮಗಳ ಸ್ಥಾಪನೆ, ವಿಸ್ತರಣೆಗೆ ಪೂರಕ ಪರಿಸರ ಕಲ್ಪಿಸುವ ವಾಗ್ದಾನ ಜಾರಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಶಾಹಿ, ಆಡಳಿತ ಯಂತ್ರ ಚುರುಕಾಗಿ ಕಾರ್ಯನಿರ್ವಹಿಸುವಂತೆ ಜನಪ್ರತಿನಿಧಿಗಳೂ ಆಸಕ್ತಿ ತೋರಿಸಬೇಕಾಗಿದೆ. ದೇಶದ ಅರ್ಥಿಕ ವೃದ್ಧಿ ದರಕ್ಕಿಂತ (ಜಿಡಿಪಿ) ಶೇ 2 ರಿಂದ 3ರಷ್ಟು ಹೆಚ್ಚು ವೃದ್ಧಿ ದರ ದಾಖಲಿಸುವ ಸಾಮರ್ಥ್ಯ ಕರ್ನಾಟಕ ರಾಜ್ಯಕ್ಕೆ ಇದೆ ಎನ್ನುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಆಶಯ ಮತ್ತು ಮೆಚ್ಚುಗೆಯನ್ನು ನಿಜ ಮಾಡಿ ತೋರಿಸಿದರೆ ಹೂಡಿಕೆದಾರರನ್ನು ಸೆಳೆಯಲು ಸರ್ಕಾರಕ್ಕೆ ಹೆಚ್ಚಿನ ಸಮಸ್ಯೆಗಳಿರುವುದಿಲ್ಲ. ಭೌಗೋಳಿಕ ವೈವಿಧ್ಯದ ಅನುಕೂಲ ಹೊಂದಿರುವ ರಾಜ್ಯದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯ. ಉತ್ತಮ ಹವಾಮಾನ ಹೊಂದಿರುವ ಬೆಂಗಳೂರಿನಲ್ಲಿ ಸಂಚಾರದಟ್ಟಣೆ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ. ವಿದ್ಯುತ್ ಸಮಸ್ಯೆಯೂ ಕೈಗಾರಿಕೀಕರಣಕ್ಕೆ ದೊಡ್ಡ ತೊಡಕು. ಇಂತಹ ಸಂದರ್ಭದಲ್ಲಿ ಇಂಧನ ವಲಯಕ್ಕೆ ಹೆಚ್ಚಿನ ಪ್ರಸ್ತಾವಗಳು ಬಂದಿರುವುದು ಒಳ್ಳೆಯ ಬೆಳವಣಿಗೆ. ಕೈಗಾರಿಕೆಗಳಿಗೆ ಅಗತ್ಯವಾಗಿ ಬೇಕಾಗುವ ವಿದ್ಯುತ್‌ ಪೂರೈಕೆ ಸಮಸ್ಯೆ ಇದರಿಂದ ಪರಿಹಾರವಾಗುವಂತಾಗಬೇಕು. ಸಮಾವೇಶದ ಬೆನ್ನಲ್ಲೇ ದಿನಬೆಳಗಾಗುವುದರ ಒಳಗೆ ಇಡೀ ರಾಜ್ಯದ ಆರ್ಥಿಕತೆಯ ಚಿತ್ರಣವು ಬದಲಾಗಲಾರದು ಎನ್ನುವುದು ನಿಜ. ಆದರೆ, ಬದಲಾವಣೆಗೆ ಬದ್ಧತೆ ತೋರುವುದಲ್ಲದೆ ಉದ್ದಿಮೆದಾರರ ನಿರೀಕ್ಷೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದರಿಂದ ಮುಂಬರುವ ದಿನಗಳಲ್ಲಿ ರಾಜ್ಯದ ಕೈಗಾರಿಕಾ ಚಿತ್ರಣ ಬದಲಾಗಲಿದೆ. ಸಮಾವೇಶದ ಮುಖ್ಯ ಧ್ಯೇಯವಾಗಿದ್ದ ‘ಕರ್ನಾಟಕವನ್ನು ಭವಿಷ್ಯ ರೂಪುಗೊಳ್ಳುವ ತಾಣ’ವನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.