ಜೈಲು ವ್ಯವಸ್ಥೆಗೆ ಬೇಕಿದೆ ಮಾನವೀಯ ಸ್ಪರ್ಶ ಅಫ್ಜಲ್ ಗುರುವಿಗೆ 2013ರಲ್ಲಿ ಮರಣದಂಡನೆ ಜಾರಿಗೊಳಿಸಲಾಯಿತು. ಆಗ, ಕಡೆಯ ಬಾರಿಗೊಮ್ಮೆ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಅವಕಾಶವನ್ನು ಆತನಿಗೆ ನಿರಾಕರಿಸಲಾಗಿತ್ತು. ಆತನನ್ನು ಯಾವಾಗ ನೇಣಿಗೇರಿಸಲಾಗುತ್ತದೆ ಎಂಬುದನ್ನೂ ಆತನ ಕುಟುಂಬಕ್ಕೆ ತಿಳಿಸಿರಲಿಲ್ಲ. ಆದರೆ ಇನ್ನು ಮುಂದೆ ಇಂತಹ ಸ್ಥಿತಿ ಇರುವುದಿಲ್ಲ. ಮರಣದಂಡನೆಗೆ ಗುರಿಯಾದ ಕೈದಿಗಳ ಹಕ್ಕುಗಳ ಕುರಿತಂತೆ ವಿಶೇಷ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಗೃಹ ಸಚಿವಾಲಯ ಅಂಗೀಕರಿಸಿರುವ ಹೊಸ ಜೈಲು ಕೈಪಿಡಿ ಒಳಗೊಂಡಿದೆ. ಜೈಲು ವ್ಯವಸ್ಥೆಯನ್ನು ಮಾನವೀಯಗೊಳಿಸುವ ಪ್ರಯತ್ನ ಈ ಕೈಪಿಡಿಯಲ್ಲಿದೆ. ಕೇಂದ್ರ ಗೃಹ ಸಚಿವಾಲಯ ಅಂಗೀಕರಿಸಿರುವ ಈ ಹೊಸ ಜೈಲು ಕೈಪಿಡಿ, ಸರಿಯಾದ ದಿಕ್ಕಿನಲ್ಲಿ ಇರಿಸಿದ ಮಹತ್ವದ ಹೆಜ್ಜೆ ಎಂದು ಹೇಳಬಹುದು. ಇದು ಕೈದಿಗಳನ್ನು ಶಿಕ್ಷೆಗೊಳಗಾದ ಅಪರಾಧಿ ಎಂಬುದಕ್ಕಿಂತ ಮನುಷ್ಯರನ್ನಾಗಿ ಪರಿಗಣಿಸುತ್ತದೆ ಎಂಬುದು ಮುಖ್ಯ. ಕೈದಿಗಳ ಮಾನವ ಹಕ್ಕುಗಳು ಎಂಬಂತಹ ವಿಚಾರ ಜೈಲು ಆಡಳಿತದಲ್ಲಾಗಲಿ ಸಮಾಜದಲ್ಲಾಗಲಿ ಈಗಲೂ ಕೂಡ ಅಷ್ಟೊಂದು ಒಪ್ಪಿತವಾದದ್ದಲ್ಲ. ಇಂತಹ ಸಂದರ್ಭದಲ್ಲಿ ಕೈದಿಗಳ ವಿಚಾರಗಳನ್ನು ಮಾನವೀಯ ನೆಲೆಯಲ್ಲಿ ಗ್ರಹಿಸುವ ನಿಟ್ಟಿನಲ್ಲಿ ಇರಿಸಿದ ಹೆಜ್ಜೆ ಇದು. ಜೊತೆಗೆ ರಾಷ್ಟ್ರದಾದ್ಯಂತ ಜೈಲುಗಳ ಆಡಳಿತ ಹಾಗೂ ಕೈದಿಗಳ ನಿರ್ವಹಣೆಗೆ ಸಂಬಂಧಿಸಿದ ಕಾನೂನು, ನಿಯಮ ಹಾಗೂ ನಿಯಂತ್ರಣಗಳಲ್ಲಿ ಏಕರೂಪತೆ ತರುವ ಉದ್ದೇಶವೂ ಇಲ್ಲಿದೆ. ರಾಷ್ಟ್ರದಲ್ಲಿ 4 ಲಕ್ಷ ಕೈದಿಗಳು ಜೈಲುಗಳಲ್ಲಿದ್ದಾರೆ. ಈ ಪೈಕಿ ಶೇ 65ರಷ್ಟು ಮಂದಿ ವಿಚಾರಣಾಧೀನ ಕೈದಿಗಳು. ಅಲ್ಲದೆ ಶೇ 70ರಷ್ಟು ಕೈದಿಗಳು ಅನಕ್ಷರಸ್ಥರು ಎಂಬುದನ್ನು 2014ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಅಂಕಿಅಂಶಗಳು ತಿಳಿಸುತ್ತವೆ. ಜಾಮೀನು ಪಡೆದುಕೊಳ್ಳಲು ಸಾಧ್ಯವಾಗದಿರುವುದೇ ಹೆಚ್ಚಿನ ಸಂಖ್ಯೆಯ ವಿಚಾರಣಾಧೀನ ಕೈದಿಗಳು ಜೈಲುಗಳಲ್ಲೇ ಉಳಿದಿರುವುದಕ್ಕೆ ಮುಖ್ಯ ಕಾರಣ ಎಂಬುದು ಶೋಚನೀಯ. ಬಡತನದಿಂದಾಗಿ ಕಾನೂನು ನೆರವು ಪಡೆದುಕೊಳ್ಳುವುದೂ ಅಸಾಧ್ಯವಾದಂತಹ ಸ್ಥಿತಿ ಅದು. ಅದರಲ್ಲೂ ವಿಚಾರಣಾಧೀನ ಕೈದಿಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ತೀರಾ ದೊಡ್ಡದಾಗಿ ಬೆಳೆಯುತ್ತಲೇ ಇದೆ. ನ್ಯಾಯಾಲಯಗಳಲ್ಲಿ ಅಗತ್ಯ ಸಂಖ್ಯೆಯ ನ್ಯಾಯಮೂರ್ತಿಗಳು ಇಲ್ಲದಿರುವುದು ಮತ್ತಿತರ ಕಾರಣಗಳಿಗಾಗಿ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯೂ ಈ ಮಧ್ಯೆ ಏರುತ್ತಲೇ ಇದೆ. ಅಂಕಿಅಂಶಗಳ ಪ್ರಕಾರ, ನ್ಯಾಯಾಲಯಗಳಲ್ಲಿ ಸುಮಾರು ಮೂರು ಕೋಟಿ ಪ್ರಕರಣಗಳು ಬಾಕಿ ಇವೆ. ಅಪರಾಧ ದಂಡನೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯಕ್ಕೆ ಇದು ಸಾಕ್ಷಿ. ಇಂತಹ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಚ್ಚು ನಲುಗುವವರು ದಲಿತರು, ಮುಸ್ಲಿಮರು ಹಾಗೂ ಆದಿವಾಸಿಗಳು ಎಂಬುದು ನಮಗೆ ನೆನಪಲ್ಲಿರಬೇಕು. ಇಂತಹ ಕಟು ವಾಸ್ತವಗಳ ಸನ್ನಿವೇಶದಲ್ಲಿ ಜೈಲು ವ್ಯವಸ್ಥೆ ಸುಧಾರಣೆಯ ಪ್ರಯತ್ನದಂತಿರುವ ಹೊಸ ಕೈಪಿಡಿ ಸ್ವಾಗತಾರ್ಹ. ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ಒದಗಿಸುವುದಲ್ಲದೆ ವಿಚಾರಣಾಧೀನ ಕೈದಿಗಳ ಪರಿಶೀಲನಾ ಸಮಿತಿ ಸ್ಥಾಪಿಸುವ ಉದ್ದೇಶ ಇದರಲ್ಲಿದೆ. ಜೊತೆಗೆ ಕೈದಿಗಳಿಗೆ ಕಾನೂನು ಸಲಹೆ ತರಗತಿಗಳನ್ನು ನಡೆಸಬೇಕೆಂಬ ಪ್ರಸ್ತಾವವೂ ಇದೆ. ಮಹಿಳಾ ಕೈದಿಗಳಿಗೆ ವಿಶೇಷ ಪರಿಗಣನೆಗಳಿರಬೇಕು ಎಂಬ ವಿಚಾರ ಪ್ರಸ್ತುತವಾದದ್ದು. ನಿಯಮಿತ ಆರೋಗ್ಯ ತಪಾಸಣೆ, ಆಪ್ತ ಸಲಹೆಗಳಲ್ಲದೆ ಜೈಲು ಸಿಬ್ಬಂದಿಗೆ ಲಿಂಗತ್ವ ಸಂವೇದನಾಶೀಲತೆ ಹೆಚ್ಚಿಸುವ ಕಾರ್ಯಕ್ರಮಗಳ ಕುರಿತ ಪ್ರಸ್ತಾವಗಳಿವೆ. ಕೈದಿಗಳ ಪುನರ್ವಸತಿಯ ಅಗತ್ಯವನ್ನು ಪ್ರಸ್ತಾಪಿಸಿರುವುದು ಈ ಕೈಪಿಡಿಯ ಮಹತ್ವದ ಅಂಶ. ಬಿಡುಗಡೆಯಾದ ಕೈದಿಗಳಿಗೆ ಪಾಲನಾ ವ್ಯವಸ್ಥೆಯೊಂದನ್ನು ಸೃಷ್ಟಿಸುವ ಅಗತ್ಯವನ್ನು ಇದು ಪ್ರತಿಪಾದಿಸುತ್ತದೆ. ಬಿಡುಗಡೆಯಾದ ಕೈದಿಗಳು ಮುಖ್ಯವಾಹಿನಿಗೆ ಮಿಳಿತಗೊಳ್ಳುವುದು ಇದರಿಂದ ಸುಗಮವಾಗುತ್ತದೆ ಎಂಬಂತಹ ಚಿಂತನೆ ಸರಿಯಾದದ್ದು. ರಾಜ್ಯದಲ್ಲಿ ಇತ್ತೀಚೆಗೆ ಕ್ಷಮಾದಾನದ ಮೂಲಕ ಜೈಲಿನಿಂದ ಬಿಡುಗಡೆಯಾದ ಮಹಿಳೆಯೊಬ್ಬರು ಮತ್ತೆ ಜೈಲಿಗೇ ಮರಳಿದ ಪ್ರಕರಣವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಜೈಲಿನಲ್ಲೇ ಬಹಳ ವರ್ಷಗಳು ಕಳೆದ ಮೇಲೆ ಲಭ್ಯವಾಗುವ ಸ್ವಾತಂತ್ರ್ಯದ ನಂತರದ ಬದಲಾವಣೆಗಳನ್ನು ನಿರ್ವಹಿಸಲು ಅನೇಕ ಮಂದಿಗೆ ಕಷ್ಟವಾಗಬಹುದು. ಕುಟುಂಬದ ಬೆಂಬಲ ವ್ಯವಸ್ಥೆಯೂ ಸಿಗದಿರಬಹುದು. ಇಂತಹ ಸಂದರ್ಭದಲ್ಲಿ ಸಮಾಜದ ಅವಜ್ಞೆ ಅಥವಾ ಸ್ವೀಕರಿಸದ ಧೋರಣೆಗಳಿಂದಾಗಿ ಈ ಕೈದಿಗಳು ಅಪರಾಧ ಜಗತ್ತಿಗೇ ಮತ್ತೆ ಹಿಂದಿರುಗಿರುವ ಪ್ರಕರಣಗಳು ನಡೆದಿವೆ. ಯಾವುದೇ ಉದ್ಯೋಗವಿಲ್ಲದ ಸ್ಥಿತಿ ಅಂತಹವರನ್ನು ಮತ್ತಷ್ಟು ಅತಂತ್ರಗೊಳಿಸುವುದು ಸಹಜ. ಹೀಗಾಗಿ ಬಿಡುಗಡೆಯ ನಂತರ ಜೀವನೋಪಾಯಕ್ಕೆ ಸನ್ನದ್ಧರನ್ನಾಗಿಸುವ ಕೌಶಲಗಳನ್ನು ಜೈಲುಗಳಲ್ಲಿ ಕೈದಿಗಳಿಗೆ ಕಲಿಸುವುದೂ ಮುಖ್ಯ. ಆದರೆ ಇಷ್ಟೆಲ್ಲಾ ಉಪಕ್ರಮಗಳ ಜೊತೆಗೆ ಸಮಾಜದಲ್ಲಿ ಮುಖ್ಯವಾಗಿ ಆಗಬೇಕಾಗಿರುವುದು ಮನೋಧರ್ಮ ಬದಲಾವಣೆ. ಕೈದಿಗಳನ್ನು ಪರಿಭಾವಿಸುವ ಮನೋಭಾವಗಳು ಸಮಾಜದಲ್ಲಿ ಬದಲಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.