ಲೋಧಾ ಶಿಫಾರಸು ಜಾರಿಗೆ ‘ಸುಪ್ರೀಂ’ ಒತ್ತಡ ಶ್ಲಾಘನಾರ್ಹ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ ಪಾರದರ್ಶಕ ಆಡಳಿತ ತರುವ ನಿಟ್ಟಿನಲ್ಲಿ ಲೋಧಾ ಸಮಿತಿ ಮಾಡಿರುವ ಶಿಫಾರಸುಗಳ ಕುರಿತು ಮಂಡಳಿ ಮೌನವಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಇದೀಗ ಚಾಟಿ ಬೀಸಿದೆ. 2013ರ ಐಪಿಎಲ್‌ ಹಗರಣದ ಬಗ್ಗೆ ತನಿಖೆ ನಡೆಸಲು ಅದೇ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಸಮಿತಿಯು 2014ರ ನವೆಂಬರ್‌ನಲ್ಲಿ ವರದಿ ಸಲ್ಲಿಸಿತ್ತು. ತಪ್ಪಿತಸ್ಥರನ್ನು ಆ ವರದಿ ಗುರುತಿಸಿತ್ತು. ಶಿಕ್ಷೆಯ ಪ್ರಮಾಣವನ್ನೂ ಹೇಳಿತ್ತು. ಭಾರತದಲ್ಲಿ ಕ್ರಿಕೆಟ್ ಆಡಳಿತದ ಸುಧಾರಣೆ ಮತ್ತು ಬಿಸಿಸಿಐನಲ್ಲಿ ಪಾರದರ್ಶಕ ಆಡಳಿತ ತರುವುದಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಕಳೆದ ವರ್ಷ ಜನವರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರ ನೇತೃತ್ವದಲ್ಲಿ ಸಮಿತಿಯನ್ನು ಸುಪ್ರೀಂ ಕೋರ್ಟ್‌ ನೇಮಿಸಿತ್ತು. ಈ ಸಮಿತಿಯು ಇದೇ ಜನವರಿ 4ರಂದು ವರದಿ ಸಲ್ಲಿಸಿತ್ತು. ಈ ವರದಿಯಲ್ಲಿರುವ ಶಿಫಾರಸುಗಳ ಜಾರಿಗೆ ಬಿಸಿಸಿಐ ಮೀನಮೇಷ ಎಣಿಸುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಮಾರ್ಚ್‌ ಮೂರರ ಒಳಗೆ ಈ ಕುರಿತು ಬಿಸಿಸಿಐ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕು ಎಂಬ ಗಡುವನ್ನೂ ನೀಡಿದೆ. ಆದರೆ ಬಿಸಿಸಿಐ ಪರ ವಕೀಲರು ‘ಲೋಧಾ ಸಮಿತಿಯ ವರದಿಯಲ್ಲಿ ಕೆಲವು ಅಸ್ಪಷ್ಟತೆಗಳಿವೆ. ಅಧ್ಯಯನ ನಡೆಸಿ ಒಂದು ತೀರ್ಮಾನಕ್ಕೆ ಬರಲು ಹೆಚ್ಚಿನ ಕಾಲಾವಕಾಶ ಬೇಕು’ ಎಂದು ಮನವಿ ಸಲ್ಲಿಸಿದರು. ಈ ಮನವಿಯನ್ನು ಪೀಠ ತಿರಸ್ಕರಿಸಿತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಶಶಾಂಕ್‌ ಮನೋಹರ್‌ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಮಂಡಳಿಯ ಕಾನೂನು ಸಲಹಾ ಸಮಿತಿ ಸಭೆಯಲ್ಲಿ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಿದೆ. ತಕ್ಷಣ ವಿಶೇಷ ಮಹಾಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರಲು ಬಿಸಿಸಿಐ ನಿರ್ಧರಿಸಿದೆ. ಲೋಧಾ ಸಮಿತಿಯ ವರದಿಯನ್ನು ಎಲ್ಲಾ ರಾಜ್ಯ ಸಂಸ್ಥೆಗಳಿಗೂ ಕಳುಹಿಸಲಾಗಿದೆ. ಈ ಸಂಸ್ಥೆಗಳಿಂದ ಸಂಗ್ರಹಿಸಲಾದ ಅಭಿಪ್ರಾಯಗಳನ್ನೂ ವಿಶೇಷ ಮಹಾಸಭೆಯಲ್ಲಿ ಚರ್ಚಿಸಲಾಗುವುದು ಎಂದು ಬಿಸಿಸಿಐ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿಲುವು ಶ್ಲಾಘನಾರ್ಹ. ಭಾರತದಲ್ಲಿ ಕ್ರಿಕೆಟ್‌ ಅತ್ಯಂತ ಜನಪ್ರಿಯ ಕ್ರೀಡೆ. ಈ ಕ್ರೀಡೆಯ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಬಿಸಿಸಿಐ, ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದು. ವಾಣಿಜ್ಯೀಕರಣ ಪ್ರಕ್ರಿಯೆಯಲ್ಲಿ ಕ್ರೀಡೆಯ ಮೂಲ ಆಶಯಗಳಿಗೇ ಧಕ್ಕೆ ಉಂಟು ಮಾಡುವಂತಹ ಚಟುವಟಿಕೆಗಳೂ ಈಚೆಗೆ ಬಿಸಿಸಿಐ ವ್ಯಾಪ್ತಿಯಲ್ಲಿ ನಡೆದಿವೆ ಎನ್ನುವುದು ಜಗಜ್ಜಾಹೀರು. ಇಂತಹ ಸಂದಿಗ್ಧದಲ್ಲಿ ಸುಪ್ರೀಂ ಕೋರ್ಟ್‌ ಅತೀವ ಆಸಕ್ತಿಯಿಂದ ಕ್ರಿಕೆಟ್‌ ಆಡಳಿತದ ಶುದ್ಧೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದೆ. ಲೋಧಾ ಅವರು ಈ ದೇಶದ ಕ್ರಿಕೆಟ್‌ ಆಡಳಿತದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇವರು ಸಿದ್ಧಪಡಿಸಿರುವ ವರದಿಯಲ್ಲಿರುವ ಶಿಫಾರಸುಗಳು ಕಾರ್ಯರೂಪಕ್ಕೆ ಬಂದರೆ ಮಂಡಳಿಯ ಸ್ವರೂಪವೇ ಬದಲಾಗಲಿದೆ. ದೇಶದ ಎಲ್ಲಾ ಪ್ರದೇಶಗಳಿಗೂ ಸಮಾನ ಪ್ರಾತಿನಿಧ್ಯ ಸಿಗಲಿದೆ. ಹಿಂದಿನಂತೆ ಮುಂಬೈ ಅಥವಾ ಕೋಲ್ಕತ್ತ, ಚೆನ್ನೈನಂತಹ ನಗರಗಳಷ್ಟೇ ಶಕ್ತಿ ಕೇಂದ್ರಗಳಾಗುವುದಕ್ಕೆ ಅವಕಾಶ ಇರುವುದಿಲ್ಲ. ಮಂಡಳಿಯ ಚುನಾವಣೆಗೆ ನಿಲ್ಲುವವರು ನಿರ್ದಿಷ್ಟ ಅರ್ಹತೆ ಹೊಂದಿರಬೇಕಾಗಿರುತ್ತದೆ. ಮಂಡಳಿಯ ಖರ್ಚು ವೆಚ್ಚದ ಎಲ್ಲಾ ಮಾಹಿತಿಗಳೂ ತೆರೆದ ಪುಸ್ತಕದಂತಿರಲಿವೆ. ಹಾಗಾದಲ್ಲಿ ಈ ದೇಶದಲ್ಲಿ ಕ್ರಿಕೆಟ್‌ ಇನ್ನಷ್ಟು ಜನಮನ್ನಣೆ ಪಡೆಯುವ ಸಾಧ್ಯತೆಗಳಿವೆ. ಹೀಗಾಗಿಯೇ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ಅವರು ‘ಲೋಧಾ ಸಮಿತಿಯ ಶಿಫಾರಸುಗಳು ಅತ್ಯುತ್ತಮವಾಗಿದ್ದು, ಅವುಗಳನ್ನು ಕ್ರಿಕೆಟ್‌ ಮಂಡಳಿ ಆದಷ್ಟು ಬೇಗ ಕಾರ್ಯರೂಪಕ್ಕೆ ತರುವುದು ಒಳ್ಳೆಯದು’ ಎಂದಿದ್ದಾರೆ. ಕ್ರಿಕೆಟ್‌ ಆಡಳಿತದ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಈ ನಾಡಿನ ಕೋಟ್ಯಂತರ ಜನ ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ ಆ ಜನರ ನಂಬಿಕೆಯನ್ನು ಹುಸಿ ಮಾಡಿಲ್ಲ. ಕ್ರಿಕೆಟ್‌ ಆಡಳಿತದಲ್ಲಿರುವ ಪಟ್ಟಭದ್ರರು ಲೋಧಾ ‘ಬಲೆ’ಯಿಂದ ನುಣುಚಿಕೊಳ್ಳಲು ಅದೆಷ್ಟೇ ಪ್ರಯತ್ನ ಪಟ್ಟರೂ ಸುಪ್ರೀಂಕೋರ್ಟ್‌ ಪಟ್ಟು ಬಿಡುತ್ತಿಲ್ಲ. ಸ್ವತಃ ಕಾನೂನು ತಜ್ಞರೇ ಆಗಿರುವ ಶಶಾಂಕ್‌ ಮನೋಹರ್‌ ಅವರೂ ಇಂತಹ ಸಂದಿಗ್ಧದಲ್ಲಿ ಸುಪ್ರೀಂ ಕೋರ್ಟ್‌ ತೋರಿದ ಹಾದಿಯಲ್ಲಿ ಹೆಜ್ಜೆ ಇಡುವುದು ಒಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.