ಮುಕ್ತ ಮಾರುಕಟ್ಟೆಯ ವಾಸ್ತವ ಗ್ರಹಿಸಲಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಅಂತರ್ಜಾಲದಲ್ಲಿ ಹರಿವ ದತ್ತಾಂಶವೆಲ್ಲವೂ ಸಮಾನ ಎಂಬ ತೀರ್ಮಾನಕ್ಕೆ ಬಂದು ತಕ್ಷಣದಿಂದಲೇ ಅದನ್ನು ಕಾರ್ಯಗತಗೊಳಿಸಿದೆ. ಇದನ್ನು ಕೇವಲ ನೆಟ್‌ನ್ಯೂಟ್ರಾಲಿಟಿ ಅಥವಾ ತಟಸ್ಥ ಅಂತರ್ಜಾಲದ ಪರವಾಗಿ ಹೋರಾಟ ನಡೆಸಿದವರಿಗೆ ದೊರೆತ ವಿಜಯ ಎನ್ನಲು ಸಾಧ್ಯವಿಲ್ಲ. ಇದು ಬೃಹತ್ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಳಕೆದಾರರಿಗೆ ದೊರೆತ ವಿಜಯ. ಅಷ್ಟೇ ಅಲ್ಲ ಮುಖ್ಯವಾಹಿನಿಯ ರಾಜಕೀಯ ನಾಯಕರು ಅಥವಾ ‘ವೃತ್ತಿಪರ’ ಹೋರಾಟಗಾರರ ಪಾತ್ರವೇ ಇಲ್ಲದೆ ನಡೆದ ಬಳಕೆದಾರರ ಆಂದೋಲನವೊಂದಕ್ಕೆ ಸಿಕ್ಕ ಯಶಸ್ಸು. ವಾಟ್ಸ್ಆ್ಯಪ್‌ನಂಥ ಅಂತರ್ಜಾಲ ಆಧಾರಿತ ಮೆಸೇಜಿಂಗ್ ಸೇವೆಗಳು ಮತ್ತು ವೈಬರ್, ಸ್ಕೈಪ್‌ನಂಥ ಕರೆ ಸೇವೆಗಳನ್ನು ಗ್ರಾಹಕರು ಬಳಸುತ್ತಿರುವುದರಿಂದ ತಮಗೆ ನಷ್ಟವಾಗುತ್ತಿದೆ, ಈ ಸೇವೆಗಳನ್ನು ಬಳಸುವವರಿಗೆ ಪ್ರತ್ಯೇಕ ಶುಲ್ಕ ವಿಧಿಸುವುದಾಗಿ ಮೊಬೈಲ್ ಸೇವಾದಾತರು ಹೇಳಿದ್ದರೊಂದಿಗೆ ಭಾರತದಲ್ಲಿ ತಟಸ್ಥ ಅಂತರ್ಜಾಲದ ಕುರಿತ ಚರ್ಚೆ ಆರಂಭವಾಯಿತು. ಇದರ ಹಿಂದೆಯೇ ಏರ್‌ಟೆಲ್ ಆಯ್ದ ಜಾಲತಾಣಗಳು ಮತ್ತು ಸೇವೆಗಳಿಗೆ ಶೂನ್ಯ ಶುಲ್ಕದ ಯೋಜನೆಯೊಂದನ್ನು ಪ್ರಕಟಿಸಿತು. ಫೇಸ್‌ಬುಕ್ ಕೂಡಾ ಶೂನ್ಯ ಶುಲ್ಕದ ‘ಫ್ರೀ ಬೇಸಿಕ್ಸ್’ ಯೋಜನೆಯನ್ನು ಜಾರಿಗೊಳಿಸಲು ಹೊರಟಿತು. ಇವೆಲ್ಲವೂ ಅಂತರ್ಜಾಲದಲ್ಲಿ ಹರಿದಾಡುವ ದತ್ತಾಂಶ ಸಮಾನ ಎಂಬ ಆದರ್ಶಕ್ಕೆ ವಿರುದ್ಧವಾಗಿದ್ದವು. ಈ ಭಿನ್ನ ದತ್ತಾಂಶಕ್ಕೆ ಭಿನ್ನ ದರ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಈ ಯೋಜನೆಗಳಿಗೆ ಅವಕಾಶ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಟ್ರಾಯ್ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಮುಂದಾಯಿತು. ಸಾರ್ವಜನಿಕ ಅಭಿಪ್ರಾಯವನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಫೇಸ್‌ಬುಕ್ ಇನ್ನಿಲ್ಲದ ಪ್ರಯತ್ನ ನಡೆಸಿತು. ಬಹುಶಃ ಶೂನ್ಯ ಶುಲ್ಕ ಮತ್ತು ದತ್ತಾಂಶದ ಸ್ವರೂಪ ಆಧಾರಿತ ಭಿನ್ನ ಶುಲ್ಕದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಸಂಶಯ ಮೂಡಲು ಫೇಸ್‌ಬುಕ್‌ನ ಅತಿಯಾದ ಪ್ರಚಾರವೂ ಕಾರಣವಾಯಿತು. ವಿದ್ಯುತ್ ಸಂಪರ್ಕವನ್ನು ಪಡೆದವರು ತಾವು ಬಳಸುವ ವಿದ್ಯುತ್ ಉಪಕರಣಕ್ಕೆ ಅನುಗುಣವಾಗಿ ವಿದ್ಯುತ್ ಶುಲ್ಕವನ್ನು ಪಾವತಿಸುವುದಿಲ್ಲ. ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಸಿದ್ದಾರೋ ಅದಕ್ಕೆ ಶುಲ್ಕ ಪಾವತಿಸುತ್ತಾರೆ. ಟ್ರಾಯ್‌ನ ತೀರ್ಪು ಇಂಟರ್ನೆಟ್ ಸಂಪರ್ಕವನ್ನೂ ಇದೇ ಬಗೆಯ ಸೇವೆ ಎಂದು ಪರಿಗಣಿಸುತ್ತದೆ. ಇನ್ನೂ ಇಂಟರ್ನೆಟ್ ಸಂಪರ್ಕಕ್ಕೆ ಬಾರದ ನೂರು ಕೋಟಿ ಜನರಿಗೆ ಇಂಟರ್ನೆಟ್ ತಲುಪಿಸಲೇಬೇಕೆಂಬ ಮಹದುದ್ದೇಶ ಫೇಸ್‌ಬುಕ್ ಮತ್ತು ಟೆಲಿಕಾಂ ಕಂಪೆನಿಗಳಿಗೆ ಇದ್ದರೆ ಅದನ್ನು ಟ್ರಾಯ್ ನಿರ್ಬಂಧಿಸುತ್ತಿಲ್ಲ. ಸರ್ಕಾರ ಬಡವರಿಗೆ ನಿರ್ದಿಷ್ಟ ಪ್ರಮಾಣ ವಿದ್ಯುತ್ತನ್ನು ಉಚಿತವಾಗಿ ನೀಡುವಂತೆ ಟೆಲಿಕಾಂ ಕಂಪೆನಿಗಳು ಉಚಿತ ಇಂಟರ್ನೆಟ್ ಸೇವೆಯನ್ನು ಈಗಲೂ ಒದಗಿಸಬಹುದು. ಆದರೆ ನಿರ್ದಿಷ್ಟ ತಾಣಗಳು ಮತ್ತು ಸೇವೆಗಳು ಮಾತ್ರ ಉಚಿತ ಎಂದು ಅವರು ಹೇಳುವಂತಿಲ್ಲ ಅಷ್ಟೇ. ಫೇಸ್‌ಬುಕ್ ಕೂಡಾ ‘ಫ್ರೀ ಬೇಸಿಕ್ಸ್’ ಯೋಜನೆಯನ್ನು ಈ ಬಗೆಯ ಯೋಜನೆಯನ್ನಾಗಿ ರೂಪಿಸಬಹುದು. ಇನ್ನು ಅಂತರ್ಜಾಲ ಆಧಾರಿತ ಮೆಸೇಜಿಂಗ್ ಮತ್ತು ಕರೆ ಸೇವೆಗಳಿಗೆ ಮೊಬೈಲ್ ಸೇವೆ ನೀಡುವ ಕಂಪೆನಿಗಳಿಗೆ ನಷ್ಟವಾಗುತ್ತಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ತಂತ್ರಜ್ಞಾನ ಬದಲಾದಂತೆ ವ್ಯಾಪಾರದ ಮಾದರಿಗಳೂ ಬದಲಾಗಬೇಕಾಗುತ್ತದೆ. ಮೊಬೈಲ್ ಫೋನುಗಳು ಸ್ಥಿರ ದೂರವಾಣಿಗಳನ್ನು ಅಪ್ರಸ್ತುತವಾಗಿಸಿವೆ. ಸ್ಥಿರ ದೂರವಾಣಿ ಉಳಿಸಿಕೊಳ್ಳುವುದಕ್ಕಾಗಿ ಮೊಬೈಲ್ ಕಂಪೆನಿಗಳ ಮೇಲೆ ನಿರ್ಬಂಧ ಹೇರಿದ್ದರೆ ಈ ಕಂಪೆನಿಗಳು ಒಪ್ಪುತ್ತಿದ್ದವೇ? ಮೊಬೈಲ್ ಕಂಪೆನಿಗಳಿಗೆ ನಷ್ಟವಾದರೆ ಅವು ಮೂಲ ಸೌಕರ್ಯಕ್ಕಾಗಿ ಹಣ ಹೂಡುವುದಿಲ್ಲ. ಇದರಿಂದ ಪ್ರಧಾನ ಮಂತ್ರಿಯವರ ‘ಡಿಜಿಟಲ್ ಇಂಡಿಯಾ’ ಯೋಜನೆಗೆ ತೊಂದರೆಯಾಗುತ್ತದೆ ಎಂಬುದು ಮತ್ತೊಂದು ವಾದ. ಒಂದು ವೇಳೆ ಈಗ ಲೈಸೆನ್ಸ್ ಪಡೆದಿರುವ ಕಂಪೆನಿಗಳು ಮೂಲಸೌಕರ್ಯಕ್ಕೆ ಅಗತ್ಯವಿರುವ ಹೂಡಿಕೆ ಮಾಡದೇ ಇದ್ದರೆ ಇನ್ನಷ್ಟು ಲೈಸನ್ಸ್‌ಗಳನ್ನು ನೀಡುವ ಅವಕಾಶವಂತೂ ಸರ್ಕಾರದ ಮುಂದಿದೆ. ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪೆನಿಗಳಿಗೆ ಸ್ಪರ್ಧಿಯಾಗಿ ಖಾಸಗಿಯವರು ಬಂದ ಮೇಲಷ್ಟೇ ಭಾರತದಲ್ಲಿ ಟೆಲಿಕಾಂ ಸೇವೆ ಎಲ್ಲರಿಗೂ ತಲುಪಿತು ಎಂಬುದನ್ನು ನಾವು ಮರೆಯುವಂತಿಲ್ಲ. ಇದು ಮುಕ್ತ ಮಾರುಕಟ್ಟೆಯ ವಾಸ್ತವ. ಇದನ್ನು ಬಳಸಿಕೊಂಡೇ ಖಾಸಗಿ ಟೆಲಿಕಾಂ ಕ್ಷೇತ್ರ ಬೆಳೆಯಿತು. ಅದೀಗ ನಿಯಂತ್ರಿತ ಮಾರುಕಟ್ಟೆ ಬೇಕು ಎಂದು ವಾದಿಸುತ್ತಿರುವುದು ವಿಪರ್ಯಾಸ. ಈ ಬಗೆಯ ಮೊಂಡು ವಾದಗಳನ್ನು ಬದಿಗಿಟ್ಟು ಹೊಸ ತಂತ್ರಜ್ಞಾನದ ವಾಸ್ತವಕ್ಕೆ ತೆರೆದುಕೊಂಡು ಸೃಜನಶೀಲವಾಗಿ ಪರಿಕಲ್ಪನೆಗಳೊಂದಿಗೆ ವಾಸ್ತವವನ್ನು ಎದುರಿಸುವುದಕ್ಕೆ ಈ ಕಂಪೆನಿಗಳು ಮುಂದಾಗಬೇಕು. ಫೇಸ್‌ಬುಕ್‌ನಂಥ ದೈತ್ಯರು ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕೆ ಸಮಾಜ ಸೇವೆಯ ಸೋಗು ಹಾಕುವುದನ್ನು ಬಿಟ್ಟು ನಿಜವಾದ ಲಾಭವನ್ನು ಸಮುದಾಯದೊಂದಿಗೆ ಹಂಚಿಕೊಳ್ಳುವ ನಿಜವಾದ ಔದ್ಯಮಿಕ ಸಾಮಾಜಿಕ ಜವಾಬ್ದಾರಿಯನ್ನು ಕಾರ್ಯಗತಗೊಳಿಸಲು ಮುಂದಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.