ಹೆಡ್ಲಿ ತಪ್ಪೊಪ್ಪಿಗೆ ಹೆಚ್ಚಿನ ಪರಿಶೀಲನೆ ಅಗತ್ಯ ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ಉಗ್ರರ ದಾಳಿ ಕುರಿತಂತೆ ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಅನೇಕ ಮಾಹಿತಿಗಳನ್ನು ಕಳೆದೆರಡು ದಿನಗಳಲ್ಲಿ ನೀಡಿದ್ದಾನೆ. ಇವುಗಳಲ್ಲಿ ಅನೇಕ ವಿಚಾರಗಳು ಈಗಾಗಲೇ ಗೊತ್ತಿದ್ದಂತಹವು. ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇತ್ತು ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಇಡೀ ದಾಳಿ ಮತ್ತು ಅದಕ್ಕಿಂತಲೂ ಮುಂಚೆ ನಡೆಸಿದ ಪ್ರಯತ್ನಗಳು, ಸಂಚು ರೂಪಿಸಿದ ಬಗೆ, ಸಂಚಿನಲ್ಲಿ ಭಾಗಿಯಾದವರು ಮತ್ತಿತರ ವಿಚಾರಗಳು ಹೆಡ್ಲಿಯ ಬಾಯಿಯಿಂದಲೇ ಬಹಿರಂಗಗೊಂಡಿವೆ. ಹೆಡ್ಲಿ ತಪ್ಪೊಪ್ಪಿಗೆ ಹೇಳಿಕೆಯ ಈ ಪ್ರಕ್ರಿಯೆ ಹೊಸ ಬಗೆಯದು ಎಂಬುದು ಇಲ್ಲಿ ಮುಖ್ಯ. ಭಯೋತ್ಪಾದಕನೊಬ್ಬ ದೂರದ ದೇಶದ ಜೈಲಿನಿಂದ ವಿಡಿಯೊ ಕಾನ್ಫರೆನ್‌್ಸ ಮೂಲಕ ಹೇಳಿಕೆ ನೀಡುವುದು, ಪಾಟಿಸವಾಲಿಗೆ ಒಳಗಾಗುವುದು ನಮ್ಮ ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು. ಈತನನ್ನು ಸೆರೆಯಲ್ಲಿ ಇಟ್ಟಿರುವ ಅಮೆರಿಕದ ಆಡಳಿತ ಕೂಡ ಈ ವಿಷಯದಲ್ಲಿ ಸಹಕಾರ ನೀಡಿದೆ. ಹೆಡ್ಲಿ ನೀಡಿರುವ ಸಾಕ್ಷ್ಯಗಳು ಲಷ್ಕರ್‌ ಎ ತಯಬಾ (ಎಲ್ಇಟಿ) ಹಾಗೂ ಪಾಕಿಸ್ತಾನ ಸೇನಾ ಬೇಹುಗಾರಿಕೆ ದಳ (ಐಎಸ್ಐ) ವಿರುದ್ಧದ ಬಲವಾದ ಸಾಕ್ಷಿಗಳಾಗುತ್ತವೆ ಎಂದು ಪ್ರಾಸಿಕ್ಯೂಷನ್ ಭಾವಿಸಿ ದಂತಿದೆ. ಆದರೆ ಇದು ಬಹು ದೊಡ್ಡ ನಿರೀಕ್ಷೆಯಾಗಿಬಿಡಬಹುದು. ಏಕೆಂದರೆ, ಹೆಡ್ಲಿ ಹೇಳಿಕೆಗಳನ್ನೇ ಈ ಪ್ರಕರಣ ಆಧರಿಸುವುದು ಸಾಧ್ಯವಿಲ್ಲ. ಹೆಡ್ಲಿ ಈಗಾಗಲೇ ಗೊತ್ತಿರುವ ಹಾಗೆ ದೊಡ್ಡ ವಂಚಕ. ಆತನನ್ನು ಎಷ್ಟರಮಟ್ಟಿಗೆ ನಂಬಬಹುದು ಎಂದು ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ. ಭಾರತ, ಪಾಕಿಸ್ತಾನ, ಅಮೆರಿಕ ಹೀಗೆ ಎಲ್ಲ ದೇಶಗಳನ್ನೂ ವಂಚಿಸಿದವನು ಆತ. ಬಹಳಷ್ಟು ಕಾಲ ಶತ್ರು ಪಾಳಯದಲ್ಲಿದ್ದು ಈಗ ಏಕಾಏಕಿ ಅಲ್ಲಿನ ರಹಸ್ಯಗಳನ್ನೆಲ್ಲ ಬಯಲು ಮಾಡುತ್ತಿರುವುದರ ಹಿಂದೆ ಇನ್ನೇನು ಸಂಚಿದೆಯೋ? ಭಾರತ– ಪಾಕ್‌ ನಡುವಿನ ಸಂಬಂಧ ಸುಧಾರಣೆಯನ್ನು ಇಷ್ಟಪಡದ ಶಕ್ತಿಗಳು ಪಾಕಿಸ್ತಾನದಲ್ಲಂತೂ ಕ್ರಿಯಾಶೀಲವಾಗಿವೆ. ಈ ಬೆಳಕಿನಲ್ಲಿ ಆತನ ಒಂದೊಂದು ಮಾತನ್ನೂ ಒರೆಗೆ ಹಚ್ಚಬೇಕು. ಈ ಸಾಕ್ಷ್ಯ ಹೇಳುವ ವಿಚಾರದಲ್ಲೂ ಆತ ಮತ್ತೇನೊ ಆಟ ಹೂಡಿರಬಹುದು ಎಂಬುದೆಲ್ಲಾ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಹೀಗಾಗಿಯೇ ಹೆಡ್ಲಿಯ ಮಾಜಿ ಪತ್ನಿ ಮೊರಾಕ್ಕೊ ದೇಶದ ಮಹಿಳೆಯೊಬ್ಬರ ಸಂಪರ್ಕ ಸಾಧಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಯತ್ನಿಸುತ್ತಿದೆ. ಹೆಡ್ಲಿ ಹೇಳಿರುವ ವಿಚಾರಗಳಲ್ಲಿ ಸತ್ಯಾಂಶ ಎಷ್ಟು ಎಂಬುದನ್ನು ಸಾಬೀತುಪಡಿಸಲು ಮತ್ತಷ್ಟು ವಿಚಾರಣೆ ಹಾಗೂ ಸಾಕ್ಷ್ಯ ಸಂಗ್ರಹ ಅಗತ್ಯ. ಹೆಡ್ಲಿ ನೀಡಿದ ಬಹುತೇಕ ವಿವರ ಭಾರತದ ಗುಪ್ತಚರ ದಳ ಮತ್ತು ಭದ್ರತಾ ಪಡೆಗಳಿಗೆ ಮೊದಲೇ ಗೊತ್ತಿತ್ತು ಸರಿ. ಆದರೆ, 2008ರ ನವೆಂಬರ್‌ ದಾಳಿಗೂ ಮುನ್ನ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಎರಡು ಸಲ ಮುಂಬೈ ಮೇಲೆ ದಾಳಿಗೆ ನಡೆಸಿದ ಯತ್ನಗಳು ವಿಫಲವಾಗಿದ್ದವು ಎಂದು ಹೆಡ್ಲಿ ಹೇಳಿದ್ದಾನೆ. ಈ ಯತ್ನಗಳಲ್ಲಿ 10 ಜನರ ಒಂದೇ ತಂಡ ಭಾಗಿಯಾಗಿತ್ತು ಎಂದು ಹೆಡ್ಲಿ ಬಹಿರಂಗಪಡಿಸಿರುವ ಸಂಗತಿ ಹೊಸದಿರಬಹುದು. ಆದರೆ ಅಚ್ಚರಿಯ ವಿಚಾರವಂತೂ ಅಲ್ಲ. ಏಕೆಂದರೆ ಅಂತಿಮ ದಾಳಿ ನಡೆಯುವ ಮುಂಚೆ ಈ ರೀತಿಯ ವಿಫಲ ಯತ್ನಗಳಾಗುವುದು ಮಾಮೂಲು. ಸಿದ್ಧತಾ ದಾಳಿಗೆ ಎಲ್ಲ ರೀತಿಯ ನೆರವು ಕೊಟ್ಟ ಐಎಸ್‌ಐನ ಕೆಲ ಅಧಿಕಾರಿಗಳ ಹೆಸರನ್ನೂ ಹೆಡ್ಲಿ ಉಲ್ಲೇಖಿಸಿದ್ದಾನೆ. ಎಲ್ಇಟಿ ಮುಖ್ಯಸ್ಥ ಹಫೀಜ್‌ ಸಯೀದ್‌ನ ಭಾಷಣಗಳೇ ತನ್ನಲ್ಲಿ ಭಾರತದ ಬಗ್ಗೆ ದ್ವೇಷದ ಭಾವನೆ ತುಂಬಿದವು ಹಾಗೂ ಮುಂಬೈ ಹೋಟೆಲ್‌ನಲ್ಲಿ ಸಭೆ ನಡೆಸುತ್ತಿದ್ದ ರಕ್ಷಣಾ ವಿಜ್ಞಾನಿಗಳ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬಂತಹ ವಿವರಗಳು ಆಸಕ್ತಿದಾಯಕ. ಎಂಟು ಸಲ ಭಾರತಕ್ಕೆ ಪ್ರವಾಸ ಮಾಡಿರುವ ವಿವರಗಳನ್ನೂ ಹೆಡ್ಲಿ ಹಂಚಿಕೊಂಡಿದ್ದಾನೆ. ಭಾರತೀಯ ವೀಸಾ ಪಡೆಯಲು ಅಮೆರಿಕದ ಷಿಕಾಗೊದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಗೆ ಸುಳ್ಳು ಮಾಹಿತಿ ನೀಡಿದ್ದೆ ಎಂಬ ಆತನ ಮಾತು ನಿಜವೇ ಆಗಿದ್ದರೆ ನಮ್ಮ ವ್ಯವಸ್ಥೆಯಲ್ಲಿ ಲೋಪ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹೆಡ್ಲಿ ನೀಡಿರುವ ಸಾಕ್ಷ್ಯಗಳು ಮತ್ತಷ್ಟು ತೀವ್ರ ಪರಿಶೀಲನೆಗೆ ಒಳಪಡುವುದು ಅಗತ್ಯ. ಜೊತೆಗೆ ಆತ ನೀಡಿರುವ ಮಾಹಿತಿಗಳ ವಿಶ್ಲೇಷಣೆಗೆ ಆತನ ಅಪರಾಧ ಹಿನ್ನೆಲೆಯನ್ನೂ ಸರಿಯಾಗಿ ಅರ್ಥಮಾಡಿಕೊಳ್ಳುವುದು ಅಷ್ಟೇ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.