ಜೀವರಕ್ಷಕ ಔಷಧಗಳಿಗೆ ಸುಂಕ ಪುನರ್ವಿಮರ್ಶೆ ಮಾಡಲಿ ಸುಮಾರು 74 ಔಷಧಗಳ ಮೇಲೆ ಆಮದು ಸುಂಕ ವಿನಾಯಿತಿಯನ್ನು ಹಿಂತೆಗೆದುಕೊಂಡಿರುವುದಾಗಿ ಅಬಕಾರಿ ಹಾಗೂ ಕಸ್ಟಮ್ಸ್ ಕೇಂದ್ರೀಯ ಮಂಡಳಿ ಅಧಿಸೂಚನೆ ಹೊರಡಿಸಿದೆ. ಆದರೆ ಈ 74 ಔಷಧಗಳ ಪಟ್ಟಿಯಲ್ಲಿ ಅನೇಕ ಜೀವರಕ್ಷಕ ಔಷಧಗಳಿವೆ. ಕ್ಯಾನ್ಸರ್, ಮಧುಮೇಹ, ಎಚ್‌ಐವಿ, ಪಾರ್ಕಿನ್‌ಸನ್ ಕಾಯಿಲೆ, ಹಿಮೊಫಿಲಿಯಾ, ಮೂತ್ರಪಿಂಡ ಹಾಗೂ ಮೂಳೆಗೆ ಸಂಬಂಧಿಸಿದ ಕಾಯಿಲೆಗಳಲ್ಲದೆ ಅನೇಕ ಸೋಂಕುಗಳಿಗೆ ಸಂಬಂಧಿಸಿದ ಔಷಧಗಳೂ ಇದರಲ್ಲಿ ಸೇರಿವೆ. ಈ ಪೈಕಿ 47 ಔಷಧಗಳಂತೂ ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯ (ಎನ್‌ಎಲ್‌ಇಎಂ) ಭಾಗವಾಗಿವೆ. ಈ ಔಷಧಗಳನ್ನೂ ಸುಂಕದ ವ್ಯಾಪ್ತಿಗೆ ತರುತ್ತಿರುವುದು ಅಚ್ಚರಿಯ ಸಂಗತಿ. ಇದು ಎಷ್ಟರಮಟ್ಟಿಗೆ ಸರಿ? ‘ಸಾರ್ವಜನಿಕ ಹಿತ’ದ ದೃಷ್ಟಿಯಿಂದ ಈ ವಿನಾಯಿತಿ ಹಿಂತೆಗೆದುಕೊಂಡಿರುವುದಾಗಿ ಸರ್ಕಾರ ಹೇಳುತ್ತದೆ. ಈ ಕ್ರಮದಿಂದ ಇದೇ ಔಷಧಗಳನ್ನು ತಯಾರಿಸುವ ದೇಶಿ ಔಷಧ ತಯಾರಕ ಕಂಪೆನಿಗಳಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂಬುದು ಸರ್ಕಾರ ಮಂಡಿಸಿರುವ ತರ್ಕ. ಇದು ಸರ್ಕಾರದ ‘ಮೇಕ್ ಇನ್ ಇಂಡಿಯಾ’ ನೀತಿಗೆ ಅನುಗುಣವಾಗಿದೆ ಎಂಬಂತಹ ವಾದವನ್ನೂ ಮುಂದಿಡಲಾಗಿದೆ. ಆದರೆ ಇದು ಬೀರಬಹುದಾದ ಪರಿಣಾಮ ಎಂತಹದ್ದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಆಮದು ಸುಂಕದಿಂದಾಗಿ ಆಮದು ಮಾಡಿಕೊಳ್ಳುವ ಔಷಧ ಬೆಲೆಗಳಲ್ಲಿ ಶೇ 22ರಿಂದ ಶೇ 35ರಷ್ಟು ಏರಿಕೆ ಆಗಬಹುದು ಎಂಬುದು ಬಹುರಾಷ್ಟ್ರೀಯ ಔಷಧ ಕಂಪೆನಿಗಳ ಪ್ರತಿಪಾದನೆ. ಇದು ನಿಜವೇ ಆಗಿದ್ದಲ್ಲಿ ಜೀವರಕ್ಷಕ ಔಷಧಗಳನ್ನು ಅವಲಂಬಿಸಿದ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುವಂತಹದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಔಷಧದ ವಿಚಾರದಲ್ಲಿ ರೋಗಿಗಳಿಗೆ ಆಯ್ಕೆಗಳಿರುವುದಿಲ್ಲ ಎಂಬುದನ್ನು ಮನಗಾಣಬೇಕು. ಇದು ಗ್ರಾಹಕ ವಸ್ತು ಖರೀದಿಸಿದಂತಲ್ಲ. ವೈದ್ಯರು ಸೂಚಿಸಿದ ಔಷಧಗಳನ್ನಷ್ಟೇ ರೋಗಿಗಳು ತೆಗೆದುಕೊಳ್ಳುತ್ತಾರೆ. ಭಾರತೀಯ ಕಂಪೆನಿಗಳ ಔಷಧಗಳು ಅಗ್ಗವಾಗಿದ್ದರೂ ವೈದ್ಯರು ಸೂಚಿಸದೆ ಹೋಗಬಹುದು. ಆಮದಾದ ಔಷಧಗಳ ಪರವಾದ ಪೂರ್ವಗ್ರಹಗಳೂ ಇಲ್ಲಿ ಕೆಲಸ ಮಾಡಬಹುದು. ಔಷಧದ ಬೆಲೆ ಮಾತ್ರ ಇಲ್ಲಿ ಪರಿಗಣನೆಗೆ ಒಳಪಡುವುದಿಲ್ಲ ಎಂಬುದನ್ನು ಗಮನಿಸಬೇಕು. ಹೀಗಾಗಿ ಸರ್ಕಾರದ ಈ ನಿರ್ಧಾರದಿಂದ ಸಾರ್ವಜನಿಕ ಹಿತ ಸಾಧನೆಯಾಗುತ್ತದೆ ಎಂಬುದು ಸುಳ್ಳು. ಬದಲಿಗೆ ಚಿಕಿತ್ಸೆ ವೆಚ್ಚ ಮತ್ತಷ್ಟು ದುಬಾರಿಯಾಗಿ ಔಷಧಗಳನ್ನು ಪಡೆದುಕೊಳ್ಳುವುದು ಜನರಿಗೆ ಕಷ್ಟವಾಗುತ್ತದೆ. ಹಿಮೊಫಿಲಿಯಾ ಕಾಯಿಲೆಗೆ ಸಂಬಂಧಿಸಿದಂತೆ ಭಾರತದಲ್ಲಿ ಔಷಧಗಳು ತಯಾರಾಗುವುದಿಲ್ಲ. ರೋಗಿಗಳು ದುಬಾರಿಯಾದ ಆಮದು ಔಷಧವನ್ನೇ ಅವಲಂಬಿಸಬೇಕು. ಈಗ ಸರ್ಕಾರದ ಈ ನಿರ್ಧಾರದ ಬಗ್ಗೆ ಹಿಮೊಫಿಲಿಯಾ ರೋಗಿಗಳು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನೆಗಳನ್ನು ವ್ಯಕ್ತಪಡಿಸಿದ್ದಾರೆ. ತೆರಿಗೆ ಸ್ವರೂಪದಲ್ಲಿ ಹೀಗೆ ದಿಢೀರ್ ಬದಲಾವಣೆ ತಂದಿರುವುದು ದೇಶಿ ಔಷಧ ಕಂಪೆನಿಗಳಿಗೆ ನೆರವಾಗುವ ಉದ್ದೇಶ ಹೊಂದಿದ್ದರೂ ರೋಗಿಗಳಿಗೆ ಅನುಕೂಲಕರವಾಗಿಲ್ಲ. ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಔಷಧದ ವೆಚ್ಚವಷ್ಟೇ ಅಲ್ಲ ಕಾಯಿಲೆ ಪತ್ತೆಯ ಪರೀಕ್ಷೆ ಹಾಗೂ ಚಿಕಿತ್ಸಾ ವೆಚ್ಚವನ್ನು ಭರಿಸುವುದೂ ಬಹುತೇಕ ಜನರಿಗೆ ಕಷ್ಟಕರ ಎನಿಸುವ ಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ ನೀಡುವ ಪ್ರಕ್ರಿಯೆಯಲ್ಲಿ ಆರೋಗ್ಯ ರಕ್ಷಣೆ ಬಲಿಯಾಗಬಾರದು. ಸರ್ವರಿಗೂ ಆರೋಗ್ಯ ಪಾಲನೆ ಎಂಬಂತಹ ನೀತಿಗೆ ಇದು ಅನುಗುಣವಾಗುವುದಿಲ್ಲ. ಜೀವರಕ್ಷಕ ಔಷಧಗಳ ಮೇಲಂತೂ ಸುಂಕ ವಿಧಿಸುವುದು ಜನಪರ ನೀತಿಯಾಗುವುದಿಲ್ಲ. ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ದಕ್ಕಬೇಕು ಎಂಬುದು ಕಾಳಜಿಯಾಗಬೇಕು. ತೆರಿಗೆ ಹೆಚ್ಚಳದಿಂದ ಭಾರತದ ದೇಶಿ ಔಷಧ ಕಂಪೆನಿಗಳಿಗೆ ಅನುಕೂಲವಾಗುತ್ತದೆ ಎಂಬುದು ಅರ್ಥಹೀನ. ಜನರಿಗೆ ಔಷಧಗಳು ಲಭ್ಯವಾಗುವ ಹಾಗೆ ಮೊದಲು ಮಾಡಲಿ. ಸದ್ಯದಲ್ಲೇ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಅದಕ್ಕೆ ಮುಂಚೆ ಕೈಗೊಂಡಿರುವ ಈ ಕ್ರಮ ಆರೋಗ್ಯ ಕ್ಷೇತ್ರ ಸುಧಾರಿಸುವ ಸರ್ಕಾರದ ಪ್ರಯತ್ನಗಳಿಗೆ ವ್ಯತಿರಿಕ್ತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.