ಸೇನಾರಹಿತ ವಲಯ ಫಲಿಸದ ಪ್ರಯತ್ನ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿಯೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಕಡೆಗೂ ಸಾವಿಗೆ ಮಣಿದು ರಾಷ್ಟ್ರದ ವೀರಯೋಧನಾಗಿ ಅಮರರಾಗಿದ್ದಾರೆ. ವಿಶ್ವದ ಅತಿ ಎತ್ತರದ ಸಮರಭೂಮಿಯಾದ ಸಿಯಾಚಿನ್‌ನ ಸೋನಂ ಸೇನಾನೆಲೆಯಲ್ಲಿ 35 ಅಡಿ ಹಿಮಬಂಡೆಯಡಿ ಹೂತುಹೋಗಿ ಐದು ದಿನ ಕಳೆದಿದ್ದರೂ ಹನುಮಂತಪ್ಪ ಕೊಪ್ಪದ ಉಸಿರಾಡುತ್ತಿದ್ದದ್ದು ಪವಾಡವೇ ಆಗಿತ್ತು. ಅವರಿಗಾಗಿ ಮಿಡಿದು ಇಡೀ ದೇಶ ಒಂದಾಗಿ ಪ್ರಾರ್ಥನೆ ಸಲ್ಲಿಸಿದ್ದು ಫಲಿಸಲಿಲ್ಲ. ಕೊಪ್ಪದ ಜೊತೆಗಿದ್ದ ಮದ್ರಾಸ್ ರೆಜಿಮೆಂಟ್‌ನ ಇತರ 9 ಮಂದಿ ಸಹಯೋಧರೂ ಈ ಅವಘಡದಲ್ಲಿ ಜೀವ ತೆತ್ತಿದ್ದಾರೆ. ವಿಶ್ವದ ಅತಿ ಎತ್ತರದ ಸಮರಭೂಮಿಯಾಗಿರುವ ಸಿಯಾಚಿನ್‌ನಲ್ಲಿನ ಕಾರ್ಯಾಚರಣೆಯ ಕಷ್ಟಗಳು ಈ ಪ್ರಕರಣದಿಂದಾಗಿ ಜನರ ಪ್ರಜ್ಞೆಯನ್ನು ಕಲಕಿವೆ. ಜೊತೆಗೆ ಈ ಎತ್ತರದ ಸ್ಥಳದಲ್ಲಿನ ಮಿಲಿಟರಿ ನಿಯೋಜನೆಯ ಕಷ್ಟಗಳನ್ನು, ದುಬಾರಿ ವೆಚ್ಚವನ್ನು ಮತ್ತೊಮ್ಮೆ ನೆನಪು ಮಾಡಿವೆ. ಜಾಗತಿಕ ತಾಪಮಾನ ಏರಿಕೆ, ಸಿಯಾಚಿನ್ ನೀರ್ಗಲ್ಲು ಪ್ರದೇಶದ ಮೇಲೆ ಪರಿಣಾಮ ಉಂಟು ಮಾಡುವುದು ಸಹಜ. ಹೀಗಾಗಿ ಅಲ್ಲಿ ಯುದ್ಧ ನಡೆಯದಿದ್ದರೂ ತೀವ್ರತರವಾದ ಪ್ರತಿಕೂಲ ಹವಾಮಾನದಿಂದಾಗುವ ತೊಂದರೆಗಳು ಹಾಗೂ ನೈಸರ್ಗಿಕ ವಿಕೋಪಗಳಿಂದಾಗುವ ಹಿಮಪಾತಗಳೇ ಜೀವಗಳನ್ನು ಬಲಿಪಡೆಯುತ್ತಿವೆ ಎಂಬುದು ವಿಪರ್ಯಾಸ. ಇಂತಹ ಹಿಮಪಾತಗಳು ಭಾರತ ಸೈನಿಕರಿಗೆ ಮಾತ್ರವಲ್ಲ ಪಾಕಿಸ್ತಾನಿ ಪಡೆಗಳಿಗೂ ಬೆದರಿಕೆಯಾಗಿಯೇ ಇವೆ. 1949ರ ಕರಾಚಿ ಒಪ್ಪಂದ ಹಾಗೂ 1972ರ ಶಿಮ್ಲಾ ಒಪ್ಪಂದಗಳಲ್ಲಿ ಭಾರತ – ಪಾಕ್ ಗಡಿ ನಿಯಂತ್ರಣ ರೇಖೆಯ ಉತ್ತರ ತುದಿಯಲ್ಲಿರುವ ಎನ್‌ಜೆ 9842 ಸಂಖ್ಯೆ ತಾಣವು ಮನುಷ್ಯ ವಾಸಕ್ಕೆ ಅಯೋಗ್ಯ ಎಂದು ಒಪ್ಪಿಕೊಳ್ಳಲಾಗಿತ್ತು. ಹೀಗಾಗಿ ಗಡಿರೇಖೆ ಎಳೆಯದೆ ಬಿಟ್ಟ ಪ್ರದೇಶವಾಗಿದೆ ಸಿಯಾಚಿನ್ ಹಿಮಪರ್ವತ. ಆದರೆ ಈ ಒಪ್ಪಂದಗಳಿಗೆ ತದ್ವಿರುದ್ಧವಾಗಿ ಸಿಯಾಚಿನ್ ಹಿಮ ಪರ್ವತ ಶಿಖರವನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪಾಕ್ ಸೇನೆಯ ಪ್ರಯತ್ನಗಳನ್ನು ಭಾರತೀಯ ಸೇನೆ 1984ರಲ್ಲಿ ವಿಫಲಗೊಳಿಸಿ ತನ್ನ ನೆಲೆಯನ್ನು ಸ್ಥಾಪಿಸಿತು. ಅಂದು ಆರಂಭವಾದ ‘ಮೇಘದೂತ ಕಾರ್ಯಾಚರಣೆ’, ಸ್ವತಂತ್ರ ಭಾರತದ ಇತಿಹಾಸದಲ್ಲಿ ಮುಂದುವರಿದುಕೊಂಡು ಬಂದಿರುವಂತಹ ಸುದೀರ್ಘ ಕಾರ್ಯಾಚರಣೆಯಾಗಿದೆ. 1984ರಲ್ಲಿ ಸಿಯಾಚಿನ್ ನೀರ್ಗಲ್ಲಿನ ಆಯಕಟ್ಟಿನ ಸ್ಥಳಗಳನ್ನು ಭಾರತ ಆಕ್ರಮಿಸಿಕೊಂಡ ನಂತರ ಅಲ್ಲಿ ಎರಡೂ ರಾಷ್ಟ್ರಗಳ ಸುಮಾರು 2,000 ಸೈನಿಕರು ಸತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. 2003ರಿಂದ ಉಭಯ ದೇಶಗಳ ನಡುವೆ ಕದನ ವಿರಾಮ ಜಾರಿಗೆ ಬಂದಿದೆ. ಹೀಗಿದ್ದೂ, ಹಿಮಾವೃತ ಪ್ರದೇಶದ ಸಂಕಷ್ಟಗಳಿಂದಾಗಿ ಸೈನಿಕರು ಜೀವ ಕಳೆದುಕೊಳ್ಳುವುದು ಮುಂದುವರಿದಿದೆ. ಈ ಸಾವು, ನೋವುಗಳ ನಡುವೆಯೂ ಸಿಯಾಚಿನ್‌ನಲ್ಲಿ ಸೇವೆ ಸಲ್ಲಿಸುವುದನ್ನು ಪ್ರತಿಷ್ಠೆಯ ಸಂಗತಿಯಾಗಿಯೇ ನಮ್ಮ ಸೈನಿಕರು ಭಾವಿಸುತ್ತಾರೆ. ಸಿಯಾಚಿನ್‌ನಲ್ಲಿ ಎರಡೂ ರಾಷ್ಟ್ರಗಳು ದುಬಾರಿ ವೆಚ್ಚದಲ್ಲಿ ಕಾಯಂ ಸೇನಾ ನೆಲೆಗಳನ್ನು ಸ್ಥಾಪಿಸಿವೆ. ನಂತರ ಇದನ್ನು ಸೇನಾರಹಿತ ವಲಯವಾಗಿಸುವ ಪ್ರಯತ್ನಗಳೂ ನಡೆದಿವೆ. 1989ರ ಜೂನ್‌ನಲ್ಲಿ ಈ ಬಗ್ಗೆ ಅಂತಿಮ ಒಪ್ಪಂದವಾಗಬಹುದು ಎಂಬಷ್ಟು ಸನಿಹಕ್ಕೆ ಬರಲಾಗಿತ್ತು. ಆಗಿನಿಂದಲೂ ರಾಜತಾಂತ್ರಿಕ ಪ್ರಯತ್ನಗಳು ನಡೆದಿವೆ. ಈಗ 10 ಯೋಧರ ಸಾವಿನ ನಂತರ ಸಿಯಾಚಿನ್ ಅನ್ನು ಸೇನಾ ಮುಕ್ತಪ್ರದೇಶವಾಗಿಸಬೇಕೆಂಬ ಸಲಹೆಯನ್ನು ಭಾರತದಲ್ಲಿ ಪಾಕಿಸ್ತಾನ ಹೈಕಮಿಷನರ್ ಆಗಿರುವ ಅಬ್ದುಲ್ ಬಸಿತ್ ಪುನರುಚ್ಚರಿಸಿದ್ದಾರೆ. ಆದರೆ ಸಿಯಾಚಿನ್ ಅನ್ನು ಸೇನಾರಹಿತ ವಲಯವಾಗಿಸುವ ವಾತಾವರಣ ಸದ್ಯದ ಸ್ಥಿತಿಯಲ್ಲಿ ಕಂಡುಬರುತ್ತಿಲ್ಲ. ಏಕೆಂದರೆ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಆ ಮಟ್ಟಿನ ವಿಶ್ವಾಸ ಇನ್ನೂ ವೃದ್ಧಿಯಾಗಿಲ್ಲ. ಜೊತೆಗೆ ಚೀನಾ ಕೂಡ ಭಾರತದ ಭೂ ಪ್ರದೇಶದ ಅತಿಕ್ರಮಣಕ್ಕೆ ಹೊಂಚು ಹಾಕುತ್ತಲೇ ಇರುವುದು ತಿಳಿದಿರುವ ಸಂಗತಿ. ಹೀಗಾಗಿ ಪ್ರಕೃತಿಯ ಭೀಕರತೆಯಿಂದ ಸೈನಿಕರನ್ನು ರಕ್ಷಿಸಲು ಅತ್ಯಾಧುನಿಕ ಉಪಕರಣಗಳಲ್ಲಿ ಹೂಡಿಕೆ ಇನ್ನೂ ಹೆಚ್ಚಾಗಬೇಕು. ಸಿಯಾಚಿನ್‌ನಲ್ಲಿ ನಿಯೋಜನೆಗೊಳ್ಳುವ ಸೈನಿಕರಿಗೆ ಮಾಸಿಕ ₹ 21 ಸಾವಿರ ಶ್ರಮಭತ್ಯೆ ನೀಡಬೇಕು ಎಂದು ಏಳನೇ ವೇತನ ಆಯೋಗ ಶಿಫಾರಸು ಮಾಡಿದೆ. ಆದರೆ, ಶಿಲ್ಲಾಂಗ್, ಲೆಹ್ ಹಾಗೂ ಗುವಾಹಟಿಯಂತಹ ಪ್ರದೇಶಗಳಲ್ಲಿ ನಿಯೋಜನೆಗೊಳ್ಳುವ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳಿಗೆ ಕಠಿಣ ಪ್ರದೇಶ ಭತ್ಯೆಯಾಗಿ ಮಾಸಿಕ ಸುಮಾರು ₹ 30 ಸಾವಿರ ನೀಡಲಾಗುತ್ತದೆ. ಇದನ್ನು ಪರಿಗಣಿಸಿದಾಗ ತೀವ್ರತರವಾದ ಪ್ರತಿಕೂಲ ಹವಾಮಾನದಲ್ಲಿ ಕೆಲಸ ಮಾಡುವ ಯೋಧರಿಗೆ ಹೆಚ್ಚಿನ ಸೌಕರ್ಯಗಳು ಒದಗಿಸಬೇಕಾದುದು ಸರ್ಕಾರದ ಜವಾಬ್ದಾರಿ. ನಮ್ಮ ಯೋಧರು ಗಡಿ ಕಾಯುವುದರಿಂದ ನಾವು ಸುರಕ್ಷಿತವಾಗಿ ನಿದ್ದೆ ಮಾಡುತ್ತೇವೆ ಎಂಬುದು ನಮಗೆ ನೆನಪಿರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.