ಅತಿರೇಕದ ಪ್ರತಿಕ್ರಿಯೆ ಬೇಡ ಸಮತೋಲಿತ ದೃಷ್ಟಿ ಇರಲಿ ವಿದ್ಯಾರ್ಥಿ ಪ್ರತಿಭಟನೆಗಳು ಭಾರತಕ್ಕೆ ಹೊಸದೇನಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೇ ಈ ಪ್ರತಿಭಟನೆ ಸಂಸ್ಕೃತಿಯ ಬೇರುಗಳಿವೆ. ಸ್ವಾತಂತ್ರ್ಯೋತ್ತರ ಭಾರತದಲ್ಲೂ ಇದು ಮುಂದುವರಿದಿದೆ. ಕಾಲೇಜು ವಿದ್ಯಾಭ್ಯಾಸದ ದಿನಗಳು ಸಹಜವಾಗಿಯೇ ಎಲ್ಲವನ್ನೂ ಪ್ರಶ್ನಿಸುವಂತಹ ಬದುಕಿನ ಹಂತವಾಗಿರುತ್ತದೆ. ಅಧ್ಯಯನದ ಜೊತೆಗೆ ರಾಜಕೀಯ ಚಟುವಟಿಕೆ ಹಾಗೂ ಸಾಮಾಜಿಕ ಹೊಣೆಗಾರಿಕೆಗಳ ಪಾಠಗಳಿಗೂ ವಿದ್ಯಾರ್ಥಿಗಳು ಮುಖಾಮುಖಿಯಾಗುತ್ತಿರುತ್ತಾರೆ ಎಂಬುದು ನೆನಪಿರಬೇಕು. ಈ ವಿಚಾರಗಳ ಬೆಳಕಲ್ಲಿ, ನವದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಭಾರತ ವಿರೋಧಿ ಹಾಗೂ ಕಾಶ್ಮೀರ ವಿಮೋಚನೆ ಪರ ಘೋಷಣೆ ಕೂಗಿದ ವಿದ್ಯಮಾನವನ್ನು ಪರಿಶೀಲಿಸಬೇಕು. ಸಂಸತ್ ಭವನದ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಅಫ್ಜಲ್ ಗುರುನನ್ನು ಮೂರು ವರ್ಷಗಳ ಹಿಂದೆ ಗಲ್ಲಿಗೇರಿಸಿದ್ದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳ ಬಣವೊಂದು ಪ್ರತಿಭಟನಾ ಸಮಾವೇಶ ನಡೆಸಿದ್ದು ಹಾಗೂ ಆ ಸಂದರ್ಭ ಬಳಸಿಕೊಂಡು ಕೆಲವರು ಭಾರತದ ವಿರುದ್ಧ ಘೋಷಣೆ ಕೂಗಿದ್ದರಿಂದ ಉಂಟಾದ ಬೆಳವಣಿಗೆಗಳು ಅಹಿತಕರವಾದದ್ದು. ಪ್ರತಿಭಟನಾನಿರತ ಯುವಜನರ ನಿರ್ವಹಣೆಯಲ್ಲಿ ಅಗತ್ಯವಾಗಿ ಬೇಕಾದದ್ದು ವಿವೇಚನೆ. ಘೋಷಣೆ ಕೂಗಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವಿಶ್ವವಿದ್ಯಾಲಯದ ಆಡಳಿತಕ್ಕೆ ಎಲ್ಲಾ ಅವಕಾಶ ಇತ್ತು. ಆದರೆ ವಿಶ್ವವಿದ್ಯಾಲಯದ ಆವರಣದೊಳಗೆ ಪೊಲೀಸರು ಪ್ರವೇಶಿಸಿದ್ದಾರೆ. ಕೇಂದ್ರ ಗೃಹ ಸಚಿವ ಹಾಗೂ ಮಾನವ ಸಂಪನ್ಮೂಲ ಸಚಿವರ ತೀವ್ರ ಪ್ರತಿಕ್ರಿಯೆಗಳು, ಈ ವಿವಾದವನ್ನು ರಾಜಕೀಯಗೊಳಿಸಿದ್ದು ದುರದೃಷ್ಟಕರ. ಜೊತೆಗೆ ಈ ಚಟುವಟಿಕೆಗಳಿಗೆ ಎಲ್‌ಇಟಿ ಬೆಂಬಲವಿದೆ ಎಂಬಂತಹ ಹೇಳಿಕೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ನೀಡಿರುವುದು ವಿವಾದದ ಬೆಂಕಿಗೆ ತುಪ್ಪ ಸುರಿದಿದೆ. ಇದು ಗಂಭೀರವಾದ ಆರೋಪ. ಈ ಕುರಿತು ತನಿಖೆ ಆಗುವುದು ಅಗತ್ಯ. ಹಾಗೆಯೇ ಕಾಂಗ್ರೆಸ್ ಹಾಗೂ ಎಡಪಕ್ಷಗಳೂ ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು ವಿವಾದ ದೊಡ್ಡದಾಗುತ್ತಿದೆ. ವಿಶ್ವವಿದ್ಯಾಲಯಕ್ಕೆ ಪೊಲೀಸ್ ಪ್ರವೇಶ ಹಾಗೂ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ಅವರನ್ನು ರಾಷ್ಟ್ರದ್ರೋಹ ಆರೋಪದ ಮೇಲೆ ಬಂಧಿಸಿರುವುದರ ವಿರುದ್ಧ ಜೆಎನ್‌ಯು ಟೀಚರ್ಸ್ ಯೂನಿಯನ್ ಹಾಗೂ ವಿಶ್ವವಿದ್ಯಾಲಯದ ಡೀನ್‌ಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ರಾಜಕೀಯ ಅಧಿಕಾರದಲ್ಲಿರುವವರನ್ನು ಸಂತೃಪ್ತಗೊಳಿಸುವಂತಹ ಇಂತಹ ಬೆಳವಣಿಗೆ ಪ್ರಜಾತಂತ್ರದ ಆಶಯಗಳನ್ನು ಗೌಣಗೊಳಿಸುತ್ತದೆ. ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗದ ತೀರ್ಪನ್ನು ಪ್ರಶ್ನಿಸುವಲ್ಲಿ ವಿದ್ಯಾರ್ಥಿಗಳು ತಪ್ಪೆಸಗಿರಬಹುದು. ಆದರೆ ಅದಕ್ಕಾಗಿ ರಾಷ್ಟ್ರದ್ರೋಹದ ಆರೋಪವನ್ನು ಹೊರಿಸುವುದು ಸರಿಯೇ ಎಂಬುದು ಚರ್ಚಾರ್ಹ. ಏಕೆಂದರೆ, ಸರ್ಕಾರದ ವಿರುದ್ಧ ನೇರ ಹಾಗೂ ತಕ್ಷಣದ ಹಿಂಸೆಗೆ ಕಾರಣವಾದಲ್ಲಿ ಮಾತ್ರ ಅದನ್ನು ರಾಷ್ಟ್ರದ್ರೋಹ ಎಂದು ಸುಪ್ರೀಂಕೋರ್ಟ್ ತೀರ್ಪುಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಹೀಗಾಗಿ ಅತೃಪ್ತ ನಾಗರಿಕರು ಕಾಶ್ಮೀರ ವಿಮೋಚನೆಯ ಪರ ವಾದಿಸಲಿ ಅಥವಾ ದೇಶದ್ರೋಹದಡಿ ಶಿಕ್ಷೆಗೊಳಗಾಗದ ಅಫ್ಜಲ್ ಗುರು ಹಾಗೂ ನಾಥೂರಾಂ ಗೋಡ್ಸೆಯನ್ನು ಆರಾಧಿಸಲಿ ಅಂತಹದನ್ನು ತಾಳಿಕೊಳ್ಳುವ ಶಕ್ತಿ ಸರ್ಕಾರಕ್ಕೆ ಇರುತ್ತದೆ ಎಂಬುದು ಚಾಲ್ತಿಯಲ್ಲಿರುವ ನಂಬಿಕೆ. ಇತ್ತೀಚೆಗಷ್ಟೇ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲೂ ದಲಿತ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳಿಗೆ ರಾಜಕೀಯ ಶಕ್ತಿಗಳ ಒತ್ತಡ ಇತ್ತು ಎಂದು ಟೀಕೆಗೊಳಗಾಗಿದ್ದು ಸಾರ್ವಜನಿಕ ಸ್ಮೃತಿಯಲ್ಲಿದೆ. ಸೈದ್ಧಾಂತಿಕ ಸಂಘರ್ಷಗಳು ರಾಷ್ಟ್ರೀಯವಾದದ ಚರ್ಚೆಯಾಗಿ ಪರಿಣಮಿಸುತ್ತಿರುವುದು ದುರಂತ. ಇಂತಹ ಸನ್ನಿವೇಶದಲ್ಲಿ ದೇಶದ್ರೋಹದ ಕಾನೂನು ದುರ್ಬಳಕೆಯಾಗುವುದಕ್ಕೆ ಆಸ್ಪದ ನೀಡಬಾರದು. ಆಫ್ಜಲ್ ಗುರುನನ್ನು ಗಲ್ಲಿಗೇರಿಸಿದ್ದು ‘ನ್ಯಾಯದ ಅಣಕ’ ಎಂದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ಮಿತ್ರ ಪಕ್ಷವಾಗಿರುವ ಪಿಡಿಪಿ ಪ್ರತಿಪಾದಿಸುತ್ತದೆ. ಹೀಗಿದ್ದೂ ಆ ಪಕ್ಷದ ಜೊತೆ ಬಿಜೆಪಿಯ ಪ್ರಜಾಸತ್ತಾತ್ಮಕ ತೊಡಗಿಕೊಳ್ಳುವಿಕೆಯ ಹಿಂದಿರುವ ಗ್ರಹಿಕೆ ಏನು? ಭಾರತ ವಿರೋಧಿ ಭಾವನೆಯನ್ನು ತಗ್ಗಿಸಲು ಇಂತಹ ಒಳಗೊಳ್ಳುವಿಕೆಯ ನಡೆ ಅನುಕೂಲಕರವಾಗುತ್ತದೆ ಎಂಬಂತಹ ವಿಚಾರ ಸರಿಯಾದದ್ದೆ. ನಿಜಕ್ಕೂ ಪ್ರತೀಕಾರಾತ್ಮಕ ಕ್ರಮಗಳು ಪ್ರತ್ಯೇಕತಾವಾದದ ಬೆಳವಣಿಗೆಗೆ ಮತ್ತಷ್ಟು ಇಂಬು ನೀಡುತ್ತವೆ ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ವಿಚಾರಗಳ ಸಂಘರ್ಷ ಉನ್ನತ ಅಧ್ಯಯನದ ಕೇಂದ್ರಗಳಲ್ಲಿ ಸಹಜವಾದದ್ದು. ಇವು ಧಾರ್ಮಿಕ– ಲೌಕಿಕ, ಎಡ– ಬಲ, ಕ್ರಾಂತಿಕಾರಿ ಅಥವಾ ಯಥಾಸ್ಥಿತಿವಾದದ ವಿಚಾರಗಳ ಸಂಘರ್ಷಗಳ ತಾಣವಾಗಿರುವುದು ಸಹಜವಾದದ್ದೆ. ಭಿನ್ನಾಭಿಪ್ರಾಯಗಳು ಅಥವಾ ವಾಗ್ವಾದಗಳು, ಸಹನೆಯನ್ನು ಕಲಿಸುವಂತಹ ‘ವಿಚಾರಗಳ ಕುಲುಮೆ’ಯಾಗಬೇಕಾದುದು ನಿಜವಾದ ಆದರ್ಶ. ಹೀಗಾಗಿ ಪ್ರಜಾಸತ್ತಾತ್ಮಕವಾದ ಪ್ರತಿರೋಧ ಸಂಸ್ಕೃತಿಯನ್ನು ಹತ್ತಿಕ್ಕುವುದು ಸಲ್ಲದು. ಪ್ರಜಾತಂತ್ರದ ಸಂವೇದನೆಯನ್ನು ನಾಶ ಮಾಡುವುದು ಬೇಡ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.