ಗಾಯಾಳು ನೆರವಿಗೆ ಧಾವಿಸಿ ಜೀವ ಉಳಿಸಲು ಸಹಕರಿಸಿ ಅಪಘಾತಗಳಲ್ಲಿ ಗಾಯಗೊಂಡವರ ಜೀವ ಉಳಿಸುವುದೇ ಎಲ್ಲರ ಪ್ರಧಾನ ಕಾಳಜಿಯಾಗಬೇಕು. ಈ ಸಂಬಂಧದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಬೇಕಿರುವುದು ತುರ್ತು ಚಿಕಿತ್ಸೆ. ಅಪಘಾತ ಸಂಭವಿಸಿದ ನಂತರದ ಒಂದು ತಾಸಿನ ಅವಧಿ, ಗಾಯಾಳುಗಳ ಜೀವ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮೌಲಿಕವಾದುದು. ಅದಕ್ಕಾಗಿಯೇ ಅದನ್ನು ‘ಸುವರ್ಣಾವಧಿ’ ಎಂದು ಕರೆಯುತ್ತಾರೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸಾ ಸೌಲಭ್ಯ ದೊರಕಿದರೆ ಅವರ ಜೀವ ಉಳಿಯಬಹುದು. ‘ಅಂಥ ತುರ್ತು ಚಿಕಿತ್ಸೆಗೆ ಕಾನೂನು–ಕಟ್ಟಳೆ ಅಡ್ಡಿಯಾಗಬಾರದು. ನೆರವಿಗೆ ಧಾವಿಸುವ ಸಾರ್ವಜನಿಕರಿಗೆ ಕೋರ್ಟು–ಕಚೇರಿ ಅಲೆದಾಟ ಮತ್ತು ಪೊಲೀಸರ ಕಿರಿಕಿರಿ ಇರಬಾರದು’ ಎಂಬ ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ವರ್ಷ ಮಾರ್ಗಸೂಚಿ ಹೊರಡಿಸಿದೆ. ಗಾಯಾಳುಗಳ ತುರ್ತು ಚಿಕಿತ್ಸೆಗೆ ಹಣದ ನೆರವು ಒದಗಿಸಲು ರಾಜ್ಯ ಸರ್ಕಾರ ಇತ್ತೀಚೆಗಷ್ಟೆ ‘ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ’ ಆರಂಭಿಸಿದೆ. ಕೇಂದ್ರದ ಮಾರ್ಗಸೂಚಿ ಹಾಗೂ ಹರೀಶ್‌ ಸಾಂತ್ವನ ಯೋಜನೆಯ ಉದ್ದೇಶ ಒಳ್ಳೆಯದೆ. ಆದರೆ ಅವು ಪರಿಣಾಮಕಾರಿಯಾಗಿ ಅನುಷ್ಠಾನ ಆಗದಿದ್ದರೆ ಪ್ರಯೋಜನ ಏನು? ಶನಿವಾರ ಮಧ್ಯರಾತ್ರಿ ಬೆಂಗಳೂರು ಹೊರವಲಯದ ರಸ್ತೆಯಲ್ಲಿ ಬೈಕ್‌ ಸವಾರರೊಬ್ಬರು ಅಪಘಾತಕ್ಕೀಡಾಗಿ ಗಾಯಗೊಂಡರು. 15 ತಾಸಿಗೂ ಹೆಚ್ಚು ಕಾಲ ಚಿಕಿತ್ಸೆ ದೊರೆಯದೆ ನರಳಾಡಿದರು. ಈ ಘಟನೆ ಇಂಥ ಯೋಜನೆಗಳ ಜಾರಿಯ ಪರಿಯನ್ನೇ ಅಣಕಿಸುವಂತಿದೆ. ‘ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ವೈಟ್‌ಫೀಲ್ಡ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆತಂದಿದ್ದಾರೆ. ಗಾಯಾಳುವಿನ ವಾರಸುದಾರರು ಇಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ’ ಅಂತ ವರದಿಯಾಗಿದೆ. ಗಾಯಾಳು ಆಸ್ಪತ್ರೆಯಲ್ಲೇ ಇದ್ದರೂ ಮಾರನೆ ದಿನ ಬೆಳಿಗ್ಗೆವರೆಗೂ ಚಿಕಿತ್ಸೆ ಇಲ್ಲದೆ ನರಳುವಂಥ ಸ್ಥಿತಿ, ನಮ್ಮ ಆಸ್ಪತ್ರೆಗಳ ರೋಗಗ್ರಸ್ತ ಮನಸ್ಥಿತಿಯನ್ನಷ್ಟೇ ಬಿಂಬಿಸಬಲ್ಲದು. ಮಧ್ಯರಾತ್ರಿಯಿಂದ ಮಾರನೆಯ ದಿನ ಬೆಳಿಗ್ಗೆ 9 ಗಂಟೆಯವರೆಗೂ ಆ ಖಾಸಗಿ ಆಸ್ಪತ್ರೆಯಲ್ಲಿ ನರಳಾಟ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ. ಅಲ್ಲಿ ಸ್ಕ್ಯಾನಿಂಗ್‌ ಶಾಸ್ತ್ರ ಪೂರೈಸಿದ ಮೇಲೆ ನಿಮ್ಹಾನ್ಸ್‌ಗೆ ಕರೆದೊಯ್ಯುವಂತೆ ಸೂಚನೆ. ನಿಮ್ಹಾನ್ಸ್‌ಗೆ ಬರುವಷ್ಟರಲ್ಲಿ ಮಧ್ಯಾಹ್ನ 3 ಗಂಟೆ. ಹೀಗಿದೆ ನಮ್ಮ ವೈದ್ಯೋಪಚಾರ. ರಾಜ್ಯದಲ್ಲಿ ಯಾವುದೇ ವ್ಯಕ್ತಿ ಅಪಘಾತಕ್ಕೆ ಈಡಾದರೂ ಅವರ ಹಿನ್ನೆಲೆ, ವಿಳಾಸ ಕೆದಕುವ ಗೊಡವೆಗೆ ಹೋಗದೆ ಆರಂಭಿಕ 48 ಗಂಟೆಗಳ ಕಾಲ ಎಲ್ಲ ಆಸ್ಪತ್ರೆಗಳಲ್ಲೂ ₹ 25 ಸಾವಿರದವರೆಗಿನ ಚಿಕಿತ್ಸೆಯನ್ನು ಮುಖ್ಯಮಂತ್ರಿ ಸಾಂತ್ವನ ಯೋಜನೆ ಅನ್ವಯ ಉಚಿತವಾಗಿ ನೀಡಬೇಕು. ಬಳಿಕ ಈ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಸದುದ್ದೇಶದ ಈ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಯೋಜನೆಯ ಉದ್ದೇಶ, ವಿವರಗಳ ಮಾಹಿತಿ ಆಸ್ಪತ್ರೆಗಳಿಗೇ ರವಾನೆ ಆಗಿಲ್ಲ ಎಂಬುದಕ್ಕೆ ಬೈಕ್‌ ಅಪಘಾತದ ಈ ದುರ್ಘಟನೆ ನಿದರ್ಶನ ಒದಗಿಸುತ್ತದೆ. ಗಾಯಾಳುವನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ನೀಡದ ವೈದ್ಯ ಮಹಾಶಯರು, ಇನ್ನು ದಾರಿಹೋಕರು ತಂದು ಸೇರಿಸಿದರೆ ಚಿಕಿತ್ಸೆ ನೀಡುತ್ತಾರೆಯೇ? ರಸ್ತೆ ಅಪಘಾತಗಳಿಂದ ದೇಶದಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಚಿಕಿತ್ಸೆ ದೊರೆಯುವುದು ತಡವಾಗುವ ಕಾರಣದಿಂದಲೇ ಗಾಯಾಳುಗಳ ಮರಣ ಪ್ರಮಾಣ ಹೆಚ್ಚುತ್ತಿದೆ. ಆದರೂ ಜೀವ ರಕ್ಷಣೆಯ ಹೊಣೆ ಹೊತ್ತ ಆಸ್ಪತ್ರೆಗಳು, ವೈದ್ಯರು ಎಚ್ಚೆತ್ತುಕೊಂಡಿಲ್ಲ ಎಂಬುದು ಬೇಸರದ ಸಂಗತಿ. ಯಾವುದೇ ಯೋಜನೆ ಮತ್ತು ಅದರ ಉದ್ದೇಶ ಒಳ್ಳೆಯದಿರಬಹುದು. ಆದರೆ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗದಿದ್ದರೆ ಅದರಿಂದ ಜನರಿಗೆ ಏನು ಉಪಯೋಗ? ಅಪಘಾತಗಳಲ್ಲಿ ಗಾಯಗೊಂಡವರ ನೆರವಿಗೆ ಧಾವಿಸುವ ವಿಷಯದಲ್ಲಿ ಸಾರ್ವಜನಿಕರು, ವೈದ್ಯ ಸಮೂಹ ಹಾಗೂ ಪೊಲೀಸ್‌ ವ್ಯವಸ್ಥೆಯನ್ನು ಹೆಚ್ಚು ಸಂವೇದನಾಶೀಲಗೊಳಿಸಬೇಕು. ಚಿಕಿತ್ಸೆ ಫಲಿಸದೆ ಸಾವು– ನೋವು ಸಂಭವಿಸಿದಾಗ ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು, ಹಣಕ್ಕಾಗಿ ಪೀಡಿಸುವ ಪ್ರವೃತ್ತಿಯೂ ಇತ್ತೀಚೆಗೆ ಕಂಡುಬರುತ್ತಿದೆ. ಇದರಿಂದ ವೈದ್ಯರ ಮನೋಸ್ಥೈರ್ಯ ಕುಗ್ಗುತ್ತದೆ. ಇಂಥ ಪ್ರವೃತ್ತಿ ಸರಿಯಲ್ಲ. ಗಾಯಗೊಂಡವರ ಜೀವ ಉಳಿಸುವುದೇ ಎಲ್ಲರ ಪ್ರಧಾನ ಕಾಳಜಿಯಾಗಬೇಕು. ಆಗ ಮಾತ್ರ ಆಘಾತಕ್ಕೆ ಒಳಗಾದ ದೇಹ–ಮನಸ್ಸಿಗೆ ಸಾಂತ್ವನ ಸಿಗಲು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.