ಬ್ರಸಲ್ಸ್‌ನಲ್ಲಿ ಉಗ್ರರ ದಾಳಿ ಭದ್ರತಾ ವ್ಯವಸ್ಥೆ ಬಿಗಿಯಾಗಲಿ ಮೊನ್ನೆ ಪ್ಯಾರಿಸ್‌ನಲ್ಲಿ ಸ್ಫೋಟ. ಈಗ ಬ್ರಸಲ್ಸ್‌ ಮೇಲೆ ದಾಳಿ. ಭಯೋತ್ಪಾದನೆಯು ಯುರೋಪ್‌ಗೆ ಕಠಿಣ ಸವಾಲಾಗಿ ಪರಿಣಮಿಸಿದೆ. ಬ್ರಸಲ್ಸ್ ವಿಮಾನ ನಿಲ್ದಾಣ ಹಾಗೂ ಮೆಟ್ರೊ ಸ್ಟೇಷನ್‌ನಲ್ಲಿ ಮಂಗಳವಾರ ನಡೆದ ಸರಣಿ ಬಾಂಬ್ ಸ್ಫೋಟಗಳಿಂದಾಗಿ 35 ಜನರು ಸತ್ತಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 130 ಜನ ಸತ್ತಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಏಕೆಂದರೆ ಪ್ಯಾರಿಸ್ ದಾಳಿಯ ಪ್ರಮುಖ ಸಂಚುಕೋರ ಸಲಾಹ್‌ ಅಬ್ದೆಸ್ಲಾಮ್ ಆ ದಾಳಿಯಲ್ಲಿ ಸತ್ತಿರಲಿಲ್ಲ. ಅಲ್ಲದೆ ಮರುದಿನವೇ ಬೆಲ್ಜಿಯಂಗೆ ಹಿಂದಿರುಗಿದ್ದ ಆತ ಮೊನ್ನೆ ಮಾರ್ಚ್ 18ರವರೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಆದರೆ ಆತನ ಬಂಧನವಾದ ನಾಲ್ಕು ದಿನಗಳಲ್ಲೆ ಬ್ರಸಲ್ಸ್ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ದಾಳಿ ನಡೆದಿದೆ. ಹೀಗಾಗಿ ಇದು ಸಲಾಹ್‌ ಅಬ್ದೆಸ್ಲಾಮ್ ಬಂಧನದ ವಿರುದ್ಧ ನಡೆದಿರುವ ಪ್ರತೀಕಾರಾತ್ಮಕ ದಾಳಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಹೊತ್ತುಕೊಂಡಿದೆ. ವಾಸ್ತವವಾಗಿ, ಪ್ಯಾರಿಸ್‌ನಲ್ಲಿ ದಾಳಿ ನಡೆಸಿದ ಬಹುತೇಕರು ಬ್ರಸಲ್ಸ್ ಸಮೀಪದ ಮೊಲೆನ್‌ಬೀಕ್‌ನವರು ಎಂಬುದನ್ನು ಗಮನಿಸಬೇಕು. ಯುರೋಪ್‌ನಲ್ಲೇ ಅತ್ಯಂತ ಹೆಚ್ಚಿನ ಭಯೋತ್ಪಾದನಾ ‘ಸ್ಲೀಪರ್ ಸೆಲ್’ಗಳು ಇರುವುದೂ ಕೂಡ ಬೆಲ್ಜಿಯಂನಲ್ಲಿ. ಜೊತೆಗೆ 2012 ರಿಂದ 2015ರವರೆಗೆ ಸುಮಾರು 400 ಜನರು (ಅವರಲ್ಲಿ ಅನೇಕ ಮಂದಿ ಬೆಲ್ಜಿಯನ್ನರು) ಇರಾಕ್ ಹಾಗೂ ಸಿರಿಯಾಗಳಲ್ಲಿ ಐಎಸ್ ಜೊತೆ ಹೋರಾಡಲು ಬೆಲ್ಜಿಯಂ ತೊರೆದಿದ್ದರು ಎಂಬುದನ್ನೂ ಗಮನಿಸಬೇಕು. ಹೀಗಾಗಿ ಬೆಲ್ಜಿಯಂನಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂಬಂತಹ ಭೀತಿ ಇದ್ದೇ ಇತ್ತು. ಇದಕ್ಕಾಗಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯವನ್ನೂ ಕೈಗೊಂಡಿದ್ದವು. ಹೀಗಿದ್ದೂ ಸಲಾಹ್‌ ಅಬ್ದೆಸ್ಲಾಮ್‌ನನ್ನು ಬಂಧಿಸಲು ಬರೋಬ್ಬರಿ ನಾಲ್ಕು ತಿಂಗಳು ಬೇಕಾಯಿತು ಎಂಬುದು ವಿಪರ್ಯಾಸ. ಭಯೋತ್ಪಾದನೆಯ ಸವಾಲನ್ನು ಎದುರಿಸಲು ಬ್ರಸಲ್ಸ್ ಭದ್ರತಾ ವ್ಯವಸ್ಥೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಜ್ಜಾಗಬೇಕಿದೆ ಎಂಬುದಕ್ಕೆ ಇದು ದ್ಯೋತಕ. ಬ್ರಸಲ್ಸ್, ಬೆಲ್ಜಿಯಂನ ರಾಜಧಾನಿ. ಅಷ್ಟೇ ಅಲ್ಲ ಯುರೋಪಿಯನ್ ಒಕ್ಕೂಟದ (ಇಯು) ಅಧಿಕಾರಶಾಹಿಯ ಕೇಂದ್ರಸ್ಥಾನವಾಗಿದೆ ಬ್ರಸಲ್ಸ್ ಎಂಬುದು ಇಲ್ಲಿ ಮುಖ್ಯ. ಜೊತೆಗೆ ನ್ಯಾಟೊ, ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಹಾಗೂ ಕಂಪೆನಿಗಳಲ್ಲದೆ ಬೆಲ್ಜಿಯಂನ ಸರ್ಕಾರಕ್ಕೂ ಬ್ರಸಲ್ಸ್ ನೆಲೆಯಾಗಿದೆ. ಹೀಗಾಗಿ ಬ್ರಸಲ್ಸ್ ಮೇಲಿನ ದಾಳಿ ಯುರೋಪಿಯನ್ ಸಮುದಾಯದ ಹೃದಯ ಭಾಗದ ಮೇಲಿನ ದಾಳಿಯಾಗುತ್ತದೆ ಎಂಬುದು ಜಿಹಾದಿಗಳಿಗೆ ಗೊತ್ತಿರುವಂತಹ ಸಂಗತಿ. ಮಂಗಳವಾರದ ದಾಳಿ ಹೇಡಿತನದ ಕೃತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಯಾವುದೇ ರೀತಿಯ ಭಯೋತ್ಪಾದನಾ ಕೃತ್ಯಕ್ಕೆ ಯಾವುದೇ ಸಮರ್ಥನೆ ಇರುವುದಂತೂ ಸಾಧ್ಯವಿಲ್ಲ. 2015ರ ಜನವರಿ ನಂತರ ಇರಾಕ್ ಹಾಗೂ ಸಿರಿಯಾಗಳಲ್ಲಿ ತಾನು ಹೊಂದಿದ್ದ ಶೇ 22ರಷ್ಟು ಪ್ರದೇಶಗಳನ್ನು ಐಎಸ್ ಕಳೆದುಕೊಂಡಿದೆ. ಈ ಒತ್ತಡದಲ್ಲಿ ಸಿಲುಕಿರುವ ಐಎಸ್ ವಿದೇಶಗಳಲ್ಲಿ ಅಟಾಟೋಪ ಮೆರೆಯುತ್ತಿದೆ ಎಂದು ಹೇಳಲಾಗುತ್ತದೆ. ಇತರ ರಾಷ್ಟ್ರಗಳಿಗೆ ಭಯೋತ್ಪಾದನೆಯನ್ನು ರಫ್ತು ಮಾಡಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಂತಹ ಹತಾಶ ಯತ್ನ ಇದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಆತ್ಮಹತ್ಯಾ ದಾಳಿ ನಡೆಸಿ ಅಮಾಯಕರನ್ನು ಹತ್ಯೆ ಮಾಡಿ ಜನರಲ್ಲಿ ಭೀತಿ ಉಂಟುಮಾಡುವುದು ಹೇಯವಾದದ್ದು. ಪ್ಯಾರಿಸ್ ಹಾಗೂ ಬ್ರಸಲ್ಸ್ ದಾಳಿಗಳ ನಂತರ ಯುರೋಪ್ ಎದುರಿಸುತ್ತಿರುವಂತಹ ಸವಾಲು ನಿಜಕ್ಕೂ ಕ್ಲಿಷ್ಟಕರವಾದದ್ದು. ಭದ್ರತಾ ಕಾರ್ಯಾಚರಣೆಗಳನ್ನು ಇನ್ನಷ್ಟು ಬಲಗೊಳಿಸುವುದು ಇಂದಿನ ತುರ್ತು ಅಗತ್ಯ. ಆದರೆ ಇಂತಹ ಕಾರ್ಯಾಚರಣೆಗಳಿಂದ ನಾಗರಿಕ ಸ್ವಾತಂತ್ರ್ಯಕ್ಕೆ ಯಾವುದೇ ರೀತಿ ಧಕ್ಕೆ ಒದಗುವಂತಾಗಬಾರದು ಎಂಬಂತಹ ಕಾಳಜಿಯೂ ಮುಖ್ಯವಾದದ್ದು. ಇರಾಕ್ ಹಾಗೂ ಸಿರಿಯಾದ ಯುದ್ಧ ಪ್ರದೇಶಗಳಿಂದ ಪಲಾಯನ ಮಾಡಿ ಪಾಶ್ಚಾತ್ಯ ದೇಶಗಳಿಗೆ ಆಶ್ರಯ ಕೋರಿ ಬರುತ್ತಿರುವ ವಲಸಿಗರ ಮೇಲೆ ಇದು ಪರಿಣಾಮ ಬೀರುವಂತಾಗಬಾರದು. ಏಕೆಂದರೆ ಮುಸ್ಲಿಂಭೀತಿವಾದ ಸಮಾಜದಲ್ಲಿ ಸೃಷ್ಟಿಸಬಹುದಾದ ಪರಕೀಯ ಪ್ರಜ್ಞೆ ಉಗ್ರವಾದಕ್ಕೆ ಮತ್ತೆ ನೀರೆರೆಯುವಂತಹದ್ದಾಗುತ್ತದೆ. ಭಯೋತ್ಪಾದಕರಿಗೆ ಬೇಕಾಗಿರುವುದೇ ಅದು. ಹೀಗಾಗಿ ಈ ಸಂಕೀರ್ಣ ವಿದ್ಯಮಾನವನ್ನು ಸೂಕ್ಷ್ಮವಾಗಿ ದಕ್ಷ ರೀತಿಯಲ್ಲಿ ನಿರ್ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.