ಸರ್ಕಾರ ಕಣ್ಣು ತೆರೆಯಲಿ ನೀರಿನ ಸದ್ಬಳಕೆಯಾಗಲಿ ಬರದಿಂದ ತತ್ತರಿಸಿರುವ ಜಗಳೂರು ತಾಲ್ಲೂಕಿನಲ್ಲಿ ಸಿಹಿ ನೀರಿನ ಸೆಲೆಯೊಂದು ಹೊರಹೊಮ್ಮಿರುವುದು ವಿಸ್ಮಯ. ಈ ನೀರಿನ ಸದ್ಬಳಕೆಗೆ ಸರ್ಕಾರ ಕ್ರಮ ಜರುಗಿಸಬೇಕು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ದೊಣೆಹಳ್ಳಿ ಗ್ರಾಮದ ಬೆಣ್ಣೆಹಳ್ಳಿ ಗೋಮಾಳದ ಬಳಿಯ ಕಲ್ಲು ಗಣಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಜಲರಾಶಿ ಪತ್ತೆಯಾಗಿದೆ. ಸುಮಾರು 300 ಅಡಿ ಉದ್ದ, 200 ಅಡಿ ಅಗಲದ ಹೊಂಡದಲ್ಲಿ 60 ಅಡಿಯಷ್ಟು ನೀರು ಸಂಗ್ರಹವಾಗಿದೆ. ನಿರಂತರ ಬರಗಾಲದಿಂದ ತತ್ತರಿಸಿರುವ ಜಗಳೂರು ತಾಲ್ಲೂಕಿನಲ್ಲಿ ಸಿಹಿ ನೀರಿನ ಸೆಲೆಯೊಂದು ಹೊರಹೊಮ್ಮಿರುವುದು ವಿಸ್ಮಯ. ಜಗಳೂರು ತಾಲ್ಲೂಕು ಮಾತ್ರ ಅಲ್ಲದೆ ಅಕ್ಕಪಕ್ಕದ ತಾಲ್ಲೂಕುಗಳಿಗೂ ಸಿಹಿ ನೀರನ್ನು ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಇದೊಂದು ಸದವಕಾಶ. ಆದರೆ ಜಿಲ್ಲಾಡಳಿತ ಯಂತ್ರಗಳನ್ನು ಬಳಸಿ ಈ ನೀರನ್ನು ಬರಿದು ಮಾಡಲು ಯತ್ನಿಸುತ್ತಿರುವುದು ಮೂರ್ಖತನದ ಪರಮಾವಧಿ. ಯಾವುದೇ ಕಾರಣಕ್ಕೂ ನೀರನ್ನು ಬರಿದು ಮಾಡಬಾರದು ಹಾಗೂ ತಾಲ್ಲೂಕಿನ ಜನರಿಗೆ ಈ ನೀರನ್ನು ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರೂ ಹಟಕ್ಕೆ ಬಿದ್ದಂತೆ ನಡೆದುಕೊಳ್ಳುತ್ತಿರುವ ಜಿಲ್ಲಾಡಳಿತ ನೀರು ಖಾಲಿ ಮಾಡುವ ಕೆಲಸ ನಿಲ್ಲಿಸಿಲ್ಲ. ಇದು ಅಕ್ಷಮ್ಯ. ಬೇಜವಾಬ್ದಾರಿ ನಡವಳಿಕೆ. ಸಂಬಂಧಿಸಿದ ಇಲಾಖೆ ಸಚಿವರಾದರೂ ಜಿಲ್ಲಾಧಿಕಾರಿಗೆ ತಿಳಿಹೇಳಬಹುದಿತ್ತು. ಆದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತಿದೆ. ಇದು ಹಲವಾರು ಗುಮಾನಿಗಳಿಗೆ ಕಾರಣವಾಗಿದೆ. ಇಡೀ ರಾಜ್ಯ ಬರಗಾಲದಿಂದ ಪರಿತಪಿಸುತ್ತಿದೆ. ಎಲ್ಲ ಕಡೆ ಕುಡಿಯುವ ನೀರಿಗೆ ಹಾಹಾಕಾರವಿದೆ. ಅದರಲ್ಲೂ ಜಗಳೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಯಾವಾಗಲೂ ಇದೆ. ಇಲ್ಲಿ ಸಿಗುವ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್ ಪ್ರಮಾಣ ವಿಪರೀತವಾಗಿದೆ. ಆದರೆ ಈಗ ಕಲ್ಲು ಗಣಿ ಪ್ರದೇಶದಲ್ಲಿ ಸಿಕ್ಕಿರುವ ನೀರು ಅತ್ಯಂತ ಪರಿಶುದ್ಧವಾಗಿದೆ. ಈ ನೀರಿನಲ್ಲಿ ಕರಗಿರಬಹುದಾದ ಲವಣಾಂಶ (ಟಿಡಿಎಸ್‌) ಕೇವಲ 148 ಪಿಪಿಎಂ ಇದೆ ಎಂದು ಜಲತಜ್ಞರು ಹೇಳಿದ್ದಾರೆ. ಹೀಗೆ ಅನಾಯಾಸವಾಗಿ ಸಿಕ್ಕಿರುವ ಶುದ್ಧ ನೀರನ್ನು ಬಳಸಿಕೊಳ್ಳುವುದನ್ನು ಬಿಟ್ಟು ಅದನ್ನು ವ್ಯರ್ಥ ಮಾಡುತ್ತಿರುವುದರ ಹಿಂದೆ ಯಾರ ಕೈವಾಡ ಇದೆ ಎನ್ನುವುದನ್ನೂ ಪತ್ತೆ ಮಾಡಬೇಕಾಗಿದೆ. ಹೀಗೆ ನೀರು ವ್ಯರ್ಥ ಮಾಡುತ್ತಿರುವವರಿಗೆ ಸರಿಯಾದ ಬುದ್ಧಿ ಕಲಿಸಬೇಕಾಗಿದೆ. ದಿಢೀರನೆ ಉದ್ಭವವಾದ ನೀರಿನ ಹೊಂಡದಲ್ಲಿ ಈಜಲು ಹೋದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎನ್ನುವುದನ್ನೇ ನೆಪ ಮಾಡಿಕೊಂಡು ನೀರನ್ನು ವ್ಯರ್ಥ ಮಾಡುವುದು ಸರಿಯಲ್ಲ. ಹೊಂಡದಲ್ಲಿ ಈಜಾಡುವುದನ್ನು ತಡೆಯುವುದು ಕೂಡ ಜಿಲ್ಲಾಡಳಿತದ ಕರ್ತವ್ಯ. ಬಾಲಕ ಬಿದ್ದು ಮೃತಪಟ್ಟ ಎಂದು ನೀರನ್ನೇ ಖಾಲಿ ಮಾಡುವುದು ಎಂದರೆ ನೆಗಡಿಯಾಗಿದೆ ಎಂದು ಮೂಗು ಕೊಯ್ದು ಹಾಕಿದಂತೆ. ಸಿಹಿ ನೀರಿನ ಸಂಗ್ರಹವನ್ನು ಖಾಲಿ ಮಾಡುತ್ತಿರುವ ಜಿಲ್ಲಾಡಳಿತದ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು. ಈ ಜಲರಾಶಿಯನ್ನು ಉಳಿಸಬೇಕು. ಅದಕ್ಕೆ ಸಂಪೂರ್ಣ ರಕ್ಷಣೆ ನೀಡಬೇಕು. ಇತ್ತೀಚೆಗೆ ತಾನೆ ‘ವಿಶ್ವ ಜಲ ದಿನ’ವನ್ನು ಆಚರಣೆ ಮಾಡಲಾಗಿದೆ. ಹನಿ ಹನಿ ನೀರನ್ನೂ ಉಳಿಸಬೇಕು ಎಂದು ವೇದಿಕೆಯಲ್ಲಿ ನಿಂತು ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಭಾಷಣ ಮಾಡಿದ್ದಾರೆ. ಇಂತಹ ಭಾಷಣಗಳಿಗೆ ಅರ್ಥ ಬರಬೇಕು ಎಂದರೆ ನೈಸರ್ಗಿಕವಾಗಿ ಲಭ್ಯವಾದ ನೀರನ್ನು ರಕ್ಷಿಸಬೇಕು. ಅದು ಸದುಪಯೋಗವಾಗಬೇಕು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಕಂದಾಯ ಇಲಾಖೆಗಳು ಗಮನ ನೀಡಿದಂತೆ ಕಾಣುತ್ತಿಲ್ಲ. ಇಲ್ಲಿ ಸಿಹಿ ನೀರು ಉದ್ಭವವಾಗಿರುವುದು ಗೊತ್ತಿದ್ದರೂ ಗ್ರಾಮೀಣಾಭಿವೃದ್ಧಿ ಸಚಿವರು ಅದು ವ್ಯರ್ಥವಾಗದಂತೆ ತಡೆಯದೆ ಇರುವುದು ಸರಿಯಲ್ಲ. ವಿಧಾನ ಮಂಡಲದಲ್ಲಿ ಚಿಕ್ಕಪುಟ್ಟ ವಿಷಯಗಳಿಗೂ ಧರಣಿ, ಕೋಲಾಹಲ ಸೃಷ್ಟಿಸುವ ವಿರೋಧ ಪಕ್ಷಗಳು ಈ ಬಗ್ಗೆ ಮೌನ ವಹಿಸಿರುವುದು ಅಚ್ಚರಿ ಉಂಟು ಮಾಡಿದೆ. ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಈ ಸಿಹಿ ನೀರಿನ ಹೊಂಡವನ್ನು ರಕ್ಷಿಸಬೇಕು. ಇಲ್ಲವಾದರೆ ರಾಜಕಾರಣಿಗಳನ್ನು ಜನರು ಕ್ಷಮಿಸುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.