ರಾಷ್ಟ್ರಪತಿ ಆಡಳಿತ ಹೇರಿಕೆ ಪ್ರಜಾತಂತ್ರ ವಿರೋಧಿ ನಡೆ ಉತ್ತರಾಖಂಡ ಸರ್ಕಾರ ವಜಾ ಮಾಡಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಆತುರದ ತೀರ್ಮಾನ ಕೈಗೊಂಡಿದೆ. ಹರೀಶ್‌ ರಾವತ್‌ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವ ಒಂದು ದಿನ ಮೊದಲೇ ಸಂವಿಧಾನದ 356ನೇ ಕಲಂ ಪ್ರಯೋಗಿಸಿದ ಕ್ರಮ ವ್ಯಾಪಕ ಟೀಕೆಗೊಳಗಾಗಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹತ್ಯೆ ಮಾಡುವ ಪ್ರಯತ್ನ ಎಂಬ ಆರೋಪಗಳು ಕೇಳಿಬಂದಿವೆ. ಸಂವಿಧಾನಾತ್ಮಕ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜ್ಯ ಸರ್ಕಾರಗಳನ್ನು ವಜಾ ಮಾಡುವ ಪ್ರವೃತ್ತಿ ಈಚಿನ ವರ್ಷಗಳಲ್ಲಿ ಕಡಿಮೆಯಾಗಿತ್ತು. ಹಿಂದೆಲ್ಲಾ ಅಧಿಕಾರದಲ್ಲಿದ್ದ ಕಾಂಗ್ರೆಸ್‌, ಈ ಅಧಿಕಾರವನ್ನು ಯದ್ವಾತದ್ವ ದುರ್ಬಳಕೆ ಮಾಡಿಕೊಂಡು ಬೇರೆ ಪಕ್ಷಗಳ ಸರ್ಕಾರಗಳನ್ನು ವಜಾ ಮಾಡಿತ್ತು. ಈಗ ಎನ್‌ಡಿಎ ಸರ್ಕಾರವೂ ಅದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಿದೆ ಎಂಬುದು ದುರದೃಷ್ಟಕರ. ಅರುಣಾಚಲ ಪ್ರದೇಶದಲ್ಲಿ ನಬಂ ಟುಕಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆದು, ಕೇಂದ್ರದ ಆಳ್ವಿಕೆ ಜಾರಿಗೊಳಿಸಿದ ಕೆಲವೇ ದಿನಗಳಲ್ಲಿ ಬಿಜೆಪಿ ಬೆಂಬಲಿತ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದಾದ ಎರಡೇ ತಿಂಗಳಲ್ಲಿ ಉತ್ತರಾಖಂಡದ ಸರ್ಕಾರಕ್ಕೂ ಅದೇ ಗತಿ ಎದುರಾಗಿದೆ. ವಿಧಾನಸಭೆಯಲ್ಲಿ ಹರೀಶ್‌ ರಾವತ್‌ ನೇತೃತ್ವದ ಸರ್ಕಾರದ ಬಲಾಬಲ ಪರೀಕ್ಷೆ ನಡೆಯುವ ಮೊದಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿರುವ ಕ್ರಮ ಅಸಮರ್ಥನೀಯ. ಇದರಿಂದ ಕೆಟ್ಟ ಸಂಪ್ರದಾಯ ಹುಟ್ಟುಹಾಕಿದಂತಾಗಿದೆ. ಕರ್ನಾಟಕ ಮುಖ್ಯಮಂತ್ರಿ ಆಗಿದ್ದ ಎಸ್‌.ಆರ್‌. ಬೊಮ್ಮಾಯಿ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಯಾವುದೇ ಸರ್ಕಾರದ ಬಲಾಬಲ ಪರೀಕ್ಷೆ ವಿಧಾನಸಭೆಯೊಳಗೆ ನಡೆಯಲು ಅವಕಾಶ ಇರಬೇಕೆಂದು ಹೇಳಿದೆ. ಆದರೆ, ಬಲಾಬಲ ಪರೀಕ್ಷೆ ನಡೆಯುವ ಮೊದಲೇ ರಾಜ್ಯ ಸರ್ಕಾರವನ್ನು ವಜಾ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ಕ್ರಮ ಸಂವಿಧಾನಬಾಹಿರ ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿಗೆ ತದ್ವಿರುದ್ಧವಾಗಿದೆ. ರಾಜ್ಯಪಾಲರು ಉತ್ತರಾಖಂಡ ಸರ್ಕಾರದ ಬಲಾಬಲ ಪರೀಕ್ಷೆಗೆ ಸಮಯ ನಿಗದಿಪಡಿಸಿದ್ದರು. ರಾವತ್‌ ಸೋಮವಾರ (ಮಾರ್ಚ್‌ 28) ವಿಶ್ವಾಸಮತ ಕೇಳಬೇಕಿತ್ತು. ಅದರ ನಡುವೆಯೇ, ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದ ಒಂಬತ್ತು ಶಾಸಕರ ಸದಸ್ಯತ್ವ ರದ್ದುಗೊಳಿಸಲು ಸ್ಪೀಕರ್‌ ಮುಂದಾಗಿದ್ದರು. ಇದರಿಂದ ಬಲಾಬಲ ಪರೀಕ್ಷೆ ಕ್ರಮಬದ್ಧವಾಗಿ ನಡೆಯುವ ಬಗ್ಗೆಯೇ ಸಂಶಯ ವ್ಯಕ್ತವಾಗಿತ್ತು. ಇದನ್ನೇ ನೆಪ ಮಾಡಿಕೊಂಡು ಸರ್ಕಾರ ವಜಾ ಮಾಡಲಾಗಿದೆ. ರಾಜ್ಯ ಸರ್ಕಾರ ಬಹುಮತ ಕಳೆದುಕೊಂಡಿದ್ದರಿಂದ ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬಲಾಬಲ ಪರೀಕ್ಷೆ ವೇಳೆ ಸದನದಲ್ಲಿ ಗದ್ದಲ ನಡೆಯುವ ಸಾಧ್ಯತೆ ಇರುವುದರಿಂದ ಕೇಂದ್ರದ ಆಳ್ವಿಕೆ ಜಾರಿಗೊಳಿಸಬೇಕೆಂದು ಶಿಫಾರಸು ಮಾಡಿ ರಾಜ್ಯಪಾಲರು ವರದಿ ಕಳುಹಿಸಿದ್ದರು. ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಮಾರ್ಚ್‌ 18ರಂದು ವಿಧಾನಸಭೆಯಲ್ಲಿ ಬಜೆಟ್‌ಗೆ ಒಪ್ಪಿಗೆ ಪಡೆಯುವ ಸಂದರ್ಭದ ಸ್ಪೀಕರ್‌ ವರ್ತನೆಯನ್ನು ರಾಜ್ಯಪಾಲರು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಬಜೆಟ್‌ ಅನ್ನು ಮತಕ್ಕೆ ಹಾಕದೆಯೇ ಸದನದ ಒಪ್ಪಿಗೆ ಪಡೆಯಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆಂಬ ಆಕ್ಷೇಪಗಳೂ ಇವೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೂ ತಮ್ಮ ಬ್ಲಾಗ್‌ನಲ್ಲಿ ಬರೆದಿರುವ ಲೇಖನದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದಾರೆ. ಸಂವಿಧಾನ ವ್ಯವಸ್ಥೆ ಕುಸಿದಿದೆ ಎನ್ನುವುದಕ್ಕೆ ಇಷ್ಟು ಸಾಕೇ ಎಂಬ ಪ್ರಶ್ನೆ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಸಹಕಾರ ಒಕ್ಕೂಟದ ಬಗ್ಗೆ ಮಾತನಾಡಿದ್ದರು. ಎಲ್ಲ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಭರವಸೆ ನೀಡಿದ್ದರು. ಈಗ ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಅವರು ಸಾಗುತ್ತಿದ್ದಾರೆ. ಕೇಂದ್ರದ ಈ ಕ್ರಮದಿಂದಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರುವಂತೆ ಕಾಣುತ್ತಿದೆ. ಅತ್ಯಂತ ಮಹತ್ವದ್ದು ಎಂದು ಭಾವಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ ಸೇರಿದಂತೆ ಅಂಗೀಕಾರಕ್ಕೆ ಕಾದಿರುವ ಇನ್ನಷ್ಟು ಮಸೂದೆಗಳು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡಬಹುದು. ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಕಾಂಗ್ರೆಸ್‌ ಪಕ್ಷ ವಿಫಲವಾಗಿದೆ. ಬಿಜೆಪಿ ಇದರ ಲಾಭ ಪಡೆದುಕೊಳ್ಳುತ್ತಿರುವುದು ಉತ್ತರಾಖಂಡದ ಬೆಳವಣಿಗೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.