ವ್ಯಾಪಾರಿ ಚಿತ್ರಗಳಿಗೆ ಮನ್ನಣೆ ಪ್ರಶಸ್ತಿಗಳ ಉದ್ದೇಶಕ್ಕೆ ಹಿನ್ನಡೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನಿರ್ಣಯಿಸುವ ನಿಟ್ಟಿನಲ್ಲಿ ಗಮನಿಸುವ ಬಹು ಮುಖ್ಯ ಅಂಶಗಳಲ್ಲಿ ಆ ಸಿನಿಮಾ ಒಳಗೊಂಡಿರುವ ಸೌಂದರ್ಯಪ್ರಜ್ಞೆ, ತಾಂತ್ರಿಕ ಕುಶಲತೆಗಳ ಜೊತೆಗೆ ಸಿನಿಮಾದ ಸಾಮಾಜಿಕ ಪ್ರಸ್ತುತತೆಯೂ ಸೇರಿರುತ್ತದೆ. ಚಲನಚಿತ್ರವನ್ನು ಒಂದು ಕಲಾಪ್ರಕಾರವಾಗಿ ಅಧ್ಯಯನ ಮಾಡುವುದು ಹಾಗೂ ಪ್ರಶಂಸಿಸುವುದು, ದೇಶದ ವಿವಿಧ ಭಾಗಗಳಲ್ಲಿನ ಸಂಸ್ಕೃತಿಗಳನ್ನು ಸಿನಿಮಾ ಮಾಧ್ಯಮದಲ್ಲಿ ಬಿಂಬಿಸುವುದು ಮತ್ತು ರಾಷ್ಟ್ರೀಯ ಏಕತೆಗೆ ಆ ಸಿನಿಮಾ ಹೇಗೆ ಪೂರಕವಾಗುತ್ತದೆ ಎನ್ನುವ ಸಂಗತಿಗಳು ಕೂಡ ಪ್ರಶಸ್ತಿಯ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದರೆ, 63ನೇ ರಾಷ್ಟ್ರೀಯ ಪ್ರಶಸ್ತಿಗಳ ಬಹುತೇಕ ಆಯ್ಕೆಗಳು ‘ಪ್ರಶಸ್ತಿ’ಯ ಮೂಲ ಉದ್ದೇಶಗಳಿಗೆ ಪೂರಕವಾಗಿ ಇದ್ದಂತಿಲ್ಲ. ‘ಫೀಚರ್‌ ಫಿಲ್ಮ್‌’ ವಿಭಾಗದ ಮೂವತ್ತು ಪ್ರಶಸ್ತಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಹಿಂದಿ ಚಿತ್ರಗಳಿಗೆ ಹಂಚಿರುವುದು ‘ಭಾರತೀಯ ಸಿನಿಮಾ ಎಂದರೆ ಬಾಲಿವುಡ್‌ ಮಾತ್ರ’ ಎಂದು ಬಿಂಬಿಸುವ ಹಿಂದಿ ಚಿತ್ರರಂಗದ ಹಳೆಯ ಚಾಳಿಗೆ ಅನುಗುಣವಾಗಿದೆ. ನಟನೆ, ನಿರ್ದೇಶನ, ಮನರಂಜನೆ, ರಾಷ್ಟ್ರೀಯ ಏಕತೆ, ಮಕ್ಕಳ ಸಿನಿಮಾ, ಚಿತ್ರಕಥೆ, ಛಾಯಾಗ್ರಹಣ– ಹೀಗೆ ಪ್ರಮುಖ ಪ್ರಶಸ್ತಿಗಳೆಲ್ಲವೂ ಬಾಲಿವುಡ್‌ ಪಾಲಾಗಿರುವುದನ್ನು ನೋಡಿದರೆ ಚಲನಚಿತ್ರದ ಕಲಾತ್ಮಕ ಆಯಾಮಕ್ಕಿಂತಲೂ ವ್ಯಾಪಾರಿ ಆಯಾಮಕ್ಕೆ ಆಯ್ಕೆ ಸಮಿತಿ ಹೆಚ್ಚು ಒತ್ತು ನೀಡಿದಂತಿದೆ. ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ತೆಲುಗಿನ ‘ಬಾಹುಬಲಿ’ ಚಿತ್ರವನ್ನು ‘ಅತ್ಯುತ್ತಮ ಪ್ರಶಸ್ತಿ’ಗೆ ಆಯ್ಕೆ ಮಾಡಿರುವುದು ಸಮಿತಿಯ ವ್ಯಾಪಾರಿ ಚಿತ್ರಗಳ ಒಲವಿಗೆ ಉದಾಹರಣೆಯಂತಿದೆ. ಕಾಲ್ಪನಿಕ ವಿಶ್ವವೊಂದನ್ನು ಅದ್ಭುತ ‘ಸಿನಿಮಾತ್ಮಕ ಜಾಣ್ಮೆ’ಯಲ್ಲಿ ತೆರೆಗೆ ಅಳವಡಿಸಲಾಗಿದೆ ಎಂದು ಆಯ್ಕೆ ಸಮಿತಿ ಬಣ್ಣಿಸಿದೆ. ಸಿನಿಮಾದ ತಾಂತ್ರಿಕ ಕಣ್ಕಟ್ಟಿಗೆ ಮರುಳಾಗಿರುವ ಜೂರಿಗಳು ಅದರ ಸಾಮಾಜಿಕ ಪ್ರಸ್ತುತತೆ, ಕಲಾತ್ಮಕ ಅಥವಾ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ‘ಬಾಹುಬಲಿ’ಯನ್ನು ಅದ್ಭುತ ಎಂದು ಬಣ್ಣಿಸುವ ಜೂರಿಗಳು, ಆ ಅದ್ಭುತವನ್ನು ಸಾಕಾರಗೊಳಿಸಿದ ನಿರ್ದೇಶಕರಿಗೆ ವೈಯಕ್ತಿಕ ಪ್ರಶಸ್ತಿ ನೀಡದಿರುವುದನ್ನು ನೋಡಿದರೆ, ಆಯ್ಕೆಯ ವಿಷಯದಲ್ಲಿ ಅವರಿಗೆ ಸ್ಪಷ್ಟತೆಯಿಲ್ಲ ಎನ್ನುವಂತಿದೆ. ‘ಬಾಹುಬಲಿ’ ಮಾತ್ರವಲ್ಲ, ಪ್ರಶಸ್ತಿ ಗಳಿಕೆಯಲ್ಲಿ ಏಕಸ್ವಾಮ್ಯ ಸಾಧಿಸಿರುವ ‘ತನು ವೆಡ್ಸ್ ಮನು ರಿಟರ್ನ್ಸ್’, ‘ಪೀಕು’ ಹಾಗೂ ‘ಬಾಜಿರಾವ್ ಮಸ್ತಾನಿ’ ಚಿತ್ರಗಳ ಆಯ್ಕೆ ಕೂಡ ಒಟ್ಟಾರೆ ಪ್ರಶಸ್ತಿ ಪ್ರಕ್ರಿಯೆಯ ಬಗ್ಗೆ ಅನುಮಾನ ಮೂಡಿಸುವಂತಿದೆ. ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಆಯ್ಕೆಯಾಗಿರುವ ಅಮಿತಾಭ್‌ ಬಚ್ಚನ್‌ ಹಾಗೂ ಕಂಗನಾ ರನೋಟ್‌ ಅವರ ಪ್ರತಿಭೆಯ ಬಗ್ಗೆ ಪ್ರಶ್ನೆಗಳಿಲ್ಲ. ಆದರೆ, ಅಮಿತಾಭ್‌ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ರಮೇಶ್‌ ಸಿಪ್ಪಿ ಅವರ ಸ್ನೇಹ ಯಾರೂ ತಿಳಿಯದ್ದೇನಲ್ಲ. ‘ಪೀಕು’ ಚಿತ್ರದ ದೀಪಿಕಾ ಪಡುಕೋಣೆ ಅವರನ್ನು ನಿರ್ಲಕ್ಷಿಸಿರುವುದು ಕೂಡ ಚಿತ್ರರಸಿಕರ ಟೀಕೆಗೆ ಗುರಿಯಾಗಿದೆ. ಅತ್ಯುತ್ತಮ ಚಿತ್ರಗಳ ವಿಭಾಗದಲ್ಲಿ ಕನ್ನಡದ ‘ತಿಥಿ’, ತಮಿಳಿನ ‘ವಿಸಾರಣೈ’, ತೆಲುಗಿನ ‘ಕಂಚೆ’ ಚಿತ್ರಗಳು ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳು ತೀವ್ರ ಪೈಪೋಟಿ ಒಡ್ಡಿದ್ದವು. ರಾಮ್‌ ರೆಡ್ಡಿ ನಿರ್ದೇಶನದ ‘ತಿಥಿ’ ಪ್ರತಿಷ್ಠಿತ ಲೊಕಾರ್ನೊ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆಯುವ ಮೂಲಕ ಅಂತರರಾಷ್ಟ್ರೀಯ ಗಮನಸೆಳೆದಿತ್ತು. ಅದರ ನಿರೂಪಣಾ ಶೈಲಿ ಕೂಡ ತೀರಾ ಹೊಸತು ಎನ್ನಲಾಗಿದೆ. ಆದರೆ, ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ‘ಅತ್ಯುತ್ತಮ ಕನ್ನಡ ಚಿತ್ರ’ ಪ್ರಶಸ್ತಿ ಹೊರತುಪಡಿಸಿದರೆ ಬೇರಾವುದೇ ಪ್ರಶಸ್ತಿಯನ್ನು ಪಡೆಯುವಲ್ಲಿ ‘ತಿಥಿ’ ವಿಫಲವಾಗಿದೆ. ಬಹು ನಿರೀಕ್ಷೆಯ ‘ವಿಸಾರಣೈ’ ಕೂಡ ನಿರೀಕ್ಷಿಸಿದಷ್ಟು ಪ್ರಶಸ್ತಿಗಳನ್ನು ಗಳಿಸಿಲ್ಲ. ಮಲಯಾಳಂ, ಮರಾಠಿಯ ಚಿತ್ರಗಳಿಗೆ ಕೆಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡುವ ಮೂಲಕ ದಕ್ಷಿಣ ಭಾರತದ ಚಿತ್ರರಂಗವನ್ನು ಸಮಾಧಾನ ಮಾಡುವ ಪ್ರಯತ್ನವನ್ನು ಆಯ್ಕೆ ಸಮಿತಿ ಮಾಡಿದಂತಿದೆ. ಅರ್ಥಪೂರ್ಣ ಹಾಗೂ ಜನಪರ ಸಿನಿಮಾಗಳನ್ನು ಜನರ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ‘ರಾಷ್ಟ್ರೀಯ ಪ್ರಶಸ್ತಿಗಳು’ ಪ್ರಸ್ತುತ ಜನಪ್ರಿಯ ಚಿತ್ರಗಳಿಗೆ ಮಣೆಹಾಕಿರುವುದು ಹೊಸ ಪ್ರಯೋಗಗಳನ್ನು ಉತ್ತೇಜಿಸುವಂತಿದೆ. ಇದು ಲಾಬಿ ನಡೆಸಲಾಗದ ಹಾಗೂ ಹೆಚ್ಚಿನ ಬಂಡವಾಳ ಹೂಡುವ ಸಾಮರ್ಥ್ಯವಿಲ್ಲದ ಸಿನಿಮಾ ಪ್ರತಿಭೆಗಳನ್ನು ನಿರುತ್ಸಾಹಗೊಳಿಸುವಂತಿದೆ ಹಾಗೂ ಹಿಂದಿ ಭಾಷೆಯ ಮೇಲಿನ ಕೇಂದ್ರ ಸರ್ಕಾರದ ಪ್ರೀತಿಗೆ ತಕ್ಕಂತಿದೆ. ಈ ವರ್ಷದಿಂದ ಹೊಸತಾಗಿ ಸೇರ್ಪಡೆಯಾಗಿರುವ ‘ಅತ್ಯುತ್ತಮ ಸಿನಿಮಾ ಸ್ನೇಹಿ ರಾಜ್ಯ’ ವಿಭಾಗದಲ್ಲಿ ಗುಜರಾತ್‌ ಅನ್ನು ಗುರುತಿಸಿರುವುದು ಕೂಡ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯದ ವಾಸನೆ ಇರುವುದನ್ನು ಸೂಚಿಸುವಂತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.