ಮೆಹಬೂಬಾ ಸರ್ಕಾರ: ಹೊಸ ಸವಾಲುಗಳ ಕಠಿಣ ಹಾದಿ ಎರಡು ತಿಂಗಳಿಗೂ ಹೆಚ್ಚಿನ ಕಾಲದ ರಾಜಕೀಯ ಅನಿಶ್ಚಿತತೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತ್ರ ಪಕ್ಷಗಳಾದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಹಾಗೂ ಬಿಜೆಪಿ ಮತ್ತೆ ಸರ್ಕಾರ ರಚನೆಗೆ ಮುಂದಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿಯ ಮೆಹಬೂಬಾ ಮುಫ್ತಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಿಜೆಪಿಯ ನಿರ್ಮಲ್ ಸಿಂಗ್ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಎರಡೂ ಪಕ್ಷಗಳು ಮಾಡಿಕೊಂಡಿರುವಂತಹ ಈ ಏರ್ಪಾಡನ್ನು ಮೈತ್ರಿ ಎಂದು ಕರೆದುಕೊಳ್ಳಲು ಹಿಂಜರಿಕೆ ತೋರ್ಪಡಿಸುತ್ತಲೇ ಬಂದಿವೆ. ಏಕೆಂದರೆ ಉಭಯ ಪಕ್ಷಗಳದ್ದೂ ಪರಸ್ಪರ ವೈರುಧ್ಯದ ನಿಲುವುಗಳು. ಆದರೆ ಸಾಧಾರಣ ಹಾಗೂ ಸೂಕ್ಷ್ಮ ವಿಷಯಗಳಲ್ಲಿ ಎರಡೂ ಪಕ್ಷಗಳು ವೈಮನಸ್ಯವನ್ನು ಮುಂದುವರಿಸಿದ್ದೇ ಆದಲ್ಲಿ ರಾಜಕೀಯ ಹಾಗೂ ಆರ್ಥಿಕವಾಗಿ ರಾಜ್ಯ ಸ್ಥಿರತೆ ಕಾಯ್ದುಕೊಳ್ಳಬಹುದು ಎಂಬ ಬಗ್ಗೆ ಯಾವ ಖಾತ್ರಿಯೂ ಇರುವುದಿಲ್ಲ . ಈ ವಿಚಾರವನ್ನು ಎರಡೂ ಪಕ್ಷಗಳು ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ 10 ತಿಂಗಳ ಕಾಲ ಒಟ್ಟಾಗಿ ಸರ್ಕಾರ ನಡೆಸಿದರೂ ಎರಡೂ ಪಕ್ಷಗಳ ನಡುವಣ ಅಂತರ ಕಡಿಮೆಯಾಗಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇರ್ಪಡುವುದಕ್ಕಿಂತ ಒಟ್ಟಾಗಿ ಕೆಲಸ ಮಾಡುವುದು ಹೆಚ್ಚು ಒಳ್ಳೆಯದು ಎಂದು ಎರಡೂ ಪಕ್ಷಗಳು ತೀರ್ಮಾನಿಸಿದಂತಿದೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ಪಕ್ಷಕ್ಕೆ ಹಾನಿಯಾಗಿದೆ. ಪಕ್ಷದ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಮೆಹಬೂಬಾ ಮುಫ್ತಿ ಸೇರಿದಂತೆ ಪಿಡಿಪಿಯ ಕೆಲವು ನಾಯಕರು ಭಾವಿಸಿದಂತಿದೆ. ಹೀಗಾಗಿ ಈ ಮೈತ್ರಿ ಮುರಿದುಕೊಳ್ಳುವುದು ರಾಜಕೀಯವಾಗಿ ಒಳ್ಳೆಯದು ಎಂಬ ಭಾವನೆಯೂ ಪಕ್ಷದೊಳಗೆ ಹೆಡೆಯಾಡುತ್ತಲೇ ಇದೆ. ಹಾಗೆಯೇ ಈ ಮೈತ್ರಿಯನ್ನು ಮೆಹಬೂಬಾ ಅವರು ತಮ್ಮ ತಂದೆ ಮುಫ್ತಿ ಮೊಹಮ್ಮದ್ ಸಯೀದ್‌ರಷ್ಟು ನಾಜೂಕಾಗಿ ನಿಭಾಯಿಸಲಾರರು ಎಂಬ ಭಾವನೆಯೂ ಇದೆ. ಹೀಗಾಗಿ ತಂದೆಯ ನಿಧನದ ನಂತರ ಮೈತ್ರಿಯನ್ನು ಪುನರುಜ್ಜೀವಗೊಳಿಸುವ ಮುಂಚೆ ಬಿಜೆಪಿಯ ಕೇಂದ್ರೀಯ ನಾಯಕತ್ವದಿಂದ ಕೆಲವು ಆಶ್ವಾಸನೆಗಳು ಹಾಗೂ ಕೇಂದ್ರದ ಎನ್‌ಡಿಎ ಸರ್ಕಾರದಿಂದ ಕೆಲವು ರಿಯಾಯಿತಿಗಳನ್ನು ಬಹುಶಃ ಮೆಹಬೂಬಾ ಮುಫ್ತಿ ಬಯಸಿದ್ದರು. ಈಗ ಉಭಯ ಪಕ್ಷಗಳೂ ಮೈತ್ರಿಯನ್ನು ಸೃಜನಾತ್ಮಕವಾಗಿ ಮರು ರೂಪಿಸಿಕೊಳ್ಳಬೇಕಾದುದು ಅಗತ್ಯ. ರಾಜ್ಯದಲ್ಲಿ ಸದ್ಯಕ್ಕೆ ಆಡಳಿತವನ್ನು ನೀಡುವುದು ಮುಖ್ಯ ಎಂಬುದನ್ನು ಮರೆಯಬಾರದು. ಕಳೆದ ವರ್ಷ ಎರಡೂ ಪಕ್ಷಗಳು ರೂಪಿಸಿಕೊಂಡಿದ್ದ ಕಾರ್ಯಸೂಚಿ ಆಡಳಿತಕ್ಕೆ ಮಾರ್ಗದರ್ಶಿಯಾಗುವ ಬದಲು ನಿರರ್ಥಕವಾಗಿ ಕಾಗದದಲ್ಲಿಯೇ ಉಳಿದಿದೆ ಎಂಬುದು ವಾಸ್ತವ ಸಂಗತಿ. ಕೇಂದ್ರದಿಂದ ಹೆಚ್ಚಿನ ಸಹಾಯ, ನಾಗರಿಕ ಪ್ರದೇಶಗಳಿಂದ ಸೇನೆಯ ಹಿಂತೆಗೆತದಂತಹ ವಿಚಾರಗಳಲ್ಲದೆ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಪಾಕಿಸ್ತಾನದ ಜೊತೆ ಫಲಪ್ರದ ಮಾತುಕತೆಗೆ ಸಂಬಂಧಿಸಿದಂತೆಯೂ ಒಂದಷ್ಟು ಕೆಲಸ ಹಾಗೂ ಪ್ರಗತಿ ಆಗಬೇಕೆಂಬುದು ಪಿಡಿಪಿ ಆಶಯ. ಆದರೆ ಸರ್ಕಾರ ಮೊದಲು ರಚನೆಯಾಗಲಿ, ಬೇಡಿಕೆಗಳ ಚರ್ಚೆ ನಂತರ ಎಂಬುದು ಬಿಜೆಪಿ ವಾದವಾಗಿತ್ತು. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಜೊತೆ ಮೆಹಬೂಬಾ ಅವರು ಮಾತುಕತೆ ನಡೆಸಿದ ನಂತರವೂ ಯಾವ ಗಟ್ಟಿ ಆಶ್ವಾಸನೆಗಳನ್ನೂ ಪಡೆದುಕೊಂಡಂತಿಲ್ಲ ಎಂಬುದು ವ್ಯಕ್ತ. ಆದರೆ ಸರ್ಕಾರ ರಚನೆ ಸದ್ಯಕ್ಕೆ ಮುಖ್ಯವಾದದ್ದು ಎಂಬುದನ್ನು ಪಿಡಿಪಿ ಕಂಡುಕೊಂಡಂತಿದೆ. ಕಳೆದ ಎರಡು ತಿಂಗಳಿಗೂ ಹೆಚ್ಚಿನ ಕಾಲದಿಂದ ರಾಜ್ಯ ದಲ್ಲಿ ರಾಜ್ಯಪಾಲರ ಆಡಳಿತವಿದೆ. ಹೀಗಾಗಿ ಅಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ರಚನೆಯಾಗುವುದು ತಕ್ಷಣದ ಅಗತ್ಯ. ಈ ದೃಷ್ಟಿಯಿಂದ ಸರ್ಕಾರ ರಚನೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಪಿಡಿಪಿ–ಬಿಜೆಪಿ ಮೈತ್ರಿ ಸಹಜವಾದ ಮಿತ್ರತ್ವವಲ್ಲ. ಕಳೆದ ಒಂದು ವರ್ಷದಲ್ಲಿ ಎರಡೂ ಪಕ್ಷಗಳ ಅಂತರ ಮತ್ತಷ್ಟು ಹೆಚ್ಚಾಗಿದೆ ಎಂಬಂತಹ ವಾಸ್ತವಿಕತೆಯೂ ಕಣ್ಣೆದುರಿಗಿದ್ದೇ ಇದೆ. ರಾಜ್ಯದೊಳಗಿನ ಉಗ್ರರ ಉಪಟಳವೂ ತೀವ್ರವಾಗಿದೆ. ಹಾಗೆಯೇ ರಾಜ್ಯದಲ್ಲಿ ರಾಜಕೀಯ ಪರಿಸರ ಇನ್ನಷ್ಟು ಹದಗೆಟ್ಟಿದೆ. ಇಂತಹ ಸನ್ನಿವೇಶದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಿಸುವುದು ಹೊಸ ಸರ್ಕಾರದ ಪ್ರಮುಖ ಹೊಣೆಗಾರಿಕೆ. ಆದರೆ ಹದಗೆಡುತ್ತಿರುವ ರಾಜಕೀಯ ವಾತಾವರಣದಲ್ಲಿ ಈ ಹೊಣೆಗಾರಿಕೆಯನ್ನು ಹೊಸ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದೇ ದೊಡ್ಡ ಸವಾಲು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.