ಕಠಿಣ ಕ್ರಮ ಕೈಗೊಳ್ಳಿ ಪರೀಕ್ಷಾ ವ್ಯವಸ್ಥೆ ಸುಧಾರಿಸಿ ಕರ್ನಾಟಕದ ಪದವಿ ಪೂರ್ವ ಶಿಕ್ಷಣದ (ಪಿಯುಸಿ) ಇತಿಹಾಸದಲ್ಲಿ ಕಪ್ಪು ಅಧ್ಯಾಯವೊಂದು ಸೃಷ್ಟಿಯಾಗಿದೆ. ಕೇವಲ ಹತ್ತು ದಿನದ ಹಿಂದೆ ಪಿಯುಸಿ ಎರಡನೇ ವರ್ಷದ ರಸಾಯನ ವಿಜ್ಞಾನ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಮರು ಪರೀಕ್ಷೆ ನಡೆಯಬೇಕಾದ ದಿನವೇ ಮತ್ತೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆಯನ್ನು ಇನ್ನೂ ಹನ್ನೆರಡು ದಿನಗಳ ಕಾಲ ಮುಂದೂಡಲಾಗಿದೆ. ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷ್ಯ ಒದಗಿಸುತ್ತಿರುವಂತೆಯೇ ಹಳೆಯ ಮಾದರಿಯ ಪರೀಕ್ಷಾ ಮಾದರಿಗಳ ಪ್ರಸ್ತುತತೆಯನ್ನೂ ಇದು ಪ್ರಶ್ನಿಸುತ್ತಿದೆ. ಪರೀಕ್ಷಾ ವಿಭಾಗದ ಎಲ್ಲಾ ನಲವತ್ತು ಮಂದಿ ಸಿಬ್ಬಂದಿಯನ್ನೂ ಅಮಾನತುಗೊಳಿಸುವ ಮೂಲಕ ಸರ್ಕಾರ ತನ್ನ ಇರುವಿಕೆಯನ್ನು ಸಾಬೀತು ಮಾಡಲು ಪ್ರಯತ್ನಿಸಿದೆ. ಈ ಕ್ರಮದ ಹಿಂದೆ ತಪ್ಪಿತಸ್ಥರನ್ನು ಶಿಕ್ಷಿಸುವ ಉದ್ದೇಶಕ್ಕಿಂತ ಹೆಚ್ಚಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಕುರ್ಚಿಯನ್ನು ಕಾಪಾಡುವ ಪ್ರಯತ್ನಗಳಿರುವಂತೆ ಕಾಣಿಸುತ್ತದೆ. ನೈತಿಕ ಪ್ರಜ್ಞೆ ಇರುವ ಯಾವ ಮಂತ್ರಿಯೂ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ನಂತರವೂ ಕುರ್ಚಿಗೆ ಅಂಟಿಕೊಂಡಿರುತ್ತಿರಲಿಲ್ಲ. ಆದರೆ ವರ್ತಮಾನದ ರಾಜಕಾರಣಕ್ಕೆ ಅಂಥ ನೈತಿಕ ಪ್ರಜ್ಞೆಗಳ್ಯಾವುವೂ ಇಲ್ಲದೇ ಇರುವುದರಿಂದ ಇನ್ನು ಮುಂದೆ ಎಚ್ಚರ ವಹಿಸುವ ಭರವಸೆಯೊಂದಿಗೆ ಅವರು ಮುಂದುವರಿಯುತ್ತಿದ್ದಾರೆ. ಪಕ್ಷ ರಾಜಕಾರಣಕ್ಕೆ ಸಹಜವಾಗಿರುವ ಪದಪುಂಜಗಳೊಂದಿಗೆ ಶಿಕ್ಷಣ ಸಚಿವರನ್ನು ರಕ್ಷಿಸುವ ಮಾತುಗಳು ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಮಂತ್ರಿಗಳ ಬಾಯಿಂದಲೂ ಹೊರಬೀಳುತ್ತಿದೆ. ಈ ‘ರಕ್ಷಣಾ’ ಕಾರ್ಯಾಚರಣೆಯಲ್ಲಿ ಕಾಣೆಯಾಗಿರುವುದು ವಿದ್ಯಾರ್ಥಿಗಳ ಹಿತ. ಕಳೆದ ಎರಡೂವರೆ ದಶಕಗಳಲ್ಲಿ ಪದವಿ ಪೂರ್ವ ಶಿಕ್ಷಣದ ವಿಜ್ಞಾನ ವಿಭಾಗಕ್ಕೆ ಇನ್ನಿಲ್ಲದ ಮಹತ್ವ ದೊರೆತಿದೆ. ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಸೇರುವುದಕ್ಕೆ ಅಗತ್ಯವಾಗಿರುವ ಈ ಹಂತವನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ವಹಿಸುತ್ತಿರುವ ವಿಧಾನ ಮಾತ್ರ ಭಾರತದ ಉಳಿದೆಲ್ಲಾ ಪದವಿ ಪೂರ್ವ ಶಿಕ್ಷಣ ಮಂಡಳಿಗಳಿಗಿಂತ ಕೆಟ್ಟದಾಗಿದೆ ಎಂಬುದು ಸುಸ್ಪಷ್ಟ. ಐಐಟಿ, ಎನ್ಐಟಿ ಸೇರಿದಂತೆ ರಾಷ್ಟ್ರಮಟ್ಟದ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪಠ್ಯ ಕ್ರಮದಲ್ಲಿ ಕಲಿತವರ ಸಂಖ್ಯೆ ನಗಣ್ಯ ಎನ್ನುವಷ್ಟು ಕಡಿಮೆ ಇರುವುದೇ ಇದಕ್ಕೆ ದೊಡ್ಡ ಸಾಕ್ಷಿ. ಪ್ರಶ್ನೆ ಪತ್ರಿಕೆ ಸೋರಿಕೆಯೂ ಸೇರಿದಂತೆ ಪದವಿ ಪೂರ್ವ ಶಿಕ್ಷಣ ಮಂಡಳಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡುವ ಎಲ್ಲಾ ಬೆಳವಣಿಗೆಗಳು ಒಂದು ನಿರ್ದಿಷ್ಟ ಮಾದರಿಯಲ್ಲಿ ಸಂಭವಿಸುತ್ತವೆ. ನಾಲ್ಕು ವರ್ಷಗಳ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ದಕ್ಷತೆಗೆ ಹೆಸರು ಮಾಡಿದ್ದ ಅಧಿಕಾರಿಯೊಬ್ಬರು ನಿರ್ದೇಶಕರಾಗಿದ್ದರು. ಮಂಡಳಿಯ ಗೋಜಲುಗಳನ್ನು ಬಿಡಿಸುವುದಕ್ಕೆ ಯಾವ ಹಿರಿಯ ಅಧಿಕಾರಿ ಪ್ರಯತ್ನಿಸಿದರೂ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವಂಥ ಯಾವುದಾದರೊಂದು ಬೆಳವಣಿಗೆ ಇಲ್ಲಿ ನಡೆಯುತ್ತದೆ. ಕಳೆದ ಕೆಲವೇ ತಿಂಗಳುಗಳ ಅವಧಿಯಲ್ಲಿ ಇಲ್ಲಿ ಮೂವರು ನಿರ್ದೇಶಕರು ಬದಲಾಗಿದ್ದಾರೆ. ಪರೀಕ್ಷೆ ನಡೆಯುವುದಕ್ಕೆ ಒಂದು ತಿಂಗಳಿರುವಾಗ ಇಲ್ಲಿಗೆ ಹೊಸ ಅಧಿಕಾರಿ ನಿರ್ದೇಶಕ ಹುದ್ದೆಗೆ ಬಂದಿದ್ದಾರೆ. ಅವರು ಮಂಡಳಿಯ ಕಾರ್ಯನಿರ್ವಹಣೆಯನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈಗ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಬಯಲಾಗಿದೆ. ಅಂದರೆ ಮಂಡಳಿಯ ಒಳಗಿನ ಕೆಲವು ಶಕ್ತಿಗಳು ಉದ್ದೇಶ ಪೂರ್ವಕವಾಗಿ ಈ ಕೃತ್ಯವೆಸಗುತ್ತಿವೆ ಎಂಬುದು ಸ್ಪಷ್ಟ. 2012ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣದ ನಂತರ ಇದು ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯವಿರುವ ಯಾವ ಕ್ರಮವನ್ನೂ ಸರ್ಕಾರ ಕೈಗೊಂಡಿರಲಿಲ್ಲ ಎಂಬುದನ್ನು ಈಗಿನ ಸೋರಿಕೆಗಳು ಹೇಳುತ್ತಿವೆ. ಇನ್ನು ಮುಂದೆ ಇಂಥದ್ದು ಸಂಭವಿಸದಂತೆ ನೋಡಿಕೊಳ್ಳುವುದಕ್ಕೆ ಕೇವಲ ಪರೀಕ್ಷಾ ಮಂಡಳಿಯೊಳಗಿನ ಆಡಳಿತವನ್ನು ಬಿಗಿಗೊಳಿಸುವ ಕ್ರಮಗಳಷ್ಟೇ ಸಾಕಾಗುವುದಿಲ್ಲ. ತಕ್ಷಣವೇ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಜೊತೆಗೆ ಒಟ್ಟಾರೆ ಪರೀಕ್ಷಾ ವ್ಯವಸ್ಥೆಯ ಸುಧಾರಣೆಯತ್ತಲೂ ದೃಷ್ಟಿ ಹರಿಸಬೇಕು. ಸಂವಹನ ತಂತ್ರಜ್ಞಾನ ಕ್ಷಣಾರ್ಧದಲ್ಲಿ ವಿಶ್ವದ ಮೂಲೆ ಮೂಲೆಗಳನ್ನು ತಲುಪುವ ಸಾಧ್ಯತೆ ಇರುವ ಈ ದಿನಗಳಲ್ಲಿ ಹಳೆಯ ಮಾದರಿಯ ‘ರಹಸ್ಯ’ವನ್ನು ಆಧಾರವಾಗಿಟ್ಟುಕೊಂಡ ಪರೀಕ್ಷಾ ಮಾದರಿಯನ್ನೇ ಪುನರ್ ವಿಮರ್ಶಿಸುವ ಅಗತ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.