ಕಟ್ಟಡ ನಿರ್ಮಾಣ ತ್ಯಾಜ್ಯ ಸದ್ಬಳಕೆಯಾಗಲಿ ಮಹಾನಗರಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ಹಳೆ ಕಟ್ಟಡಗಳನ್ನು ಉರುಳಿಸಿದ ಸಂದರ್ಭಗಳಲ್ಲಿ ಉಳಿಯುವ ತ್ಯಾಜ್ಯ ಸರಕನ್ನು ಎಲ್ಲೆಂದರಲ್ಲಿ ಬಿಸಾಡುವ ಅನಾಗರಿಕ ಸ್ವೇಚ್ಛಾಚಾರದ ಪ್ರವೃತ್ತಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಕಟ್ಟಡ ನಿರ್ಮಾಣ ಚಟುವಟಿಕೆಯ ತ್ಯಾಜ್ಯ ನಿರ್ವಹಿಸಲು ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಕಠಿಣ ನಿಯಮಾವಳಿಗಳನ್ನು ರೂಪಿಸಿರುವುದು ಮಾಲಿನ್ಯ ತಡೆಗಟ್ಟುವ ಪ್ರಯತ್ನಗಳಿಗೆ ಹೊಸ ಆಯುಧ ಕೊಟ್ಟಂತಾಗಿದೆ. ಎಲ್ಲ ಪಟ್ಟಣ ಮತ್ತು ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಎಲ್ಲೆಂದರಲ್ಲಿ, ಖಾಲಿ ಜಾಗ ಕಂಡಲ್ಲಿ ರಾತ್ರೋರಾತ್ರಿ ತಂದು ಸುರಿಯಲಾಗುತ್ತಿದೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನಗರಗಳ ಸೌಂದರ್ಯಕ್ಕೂ ಕುಂದು ತರುತ್ತಿದೆ. ಜೊತೆಗೆ ನಗರಗಳಲ್ಲಿ ಮಳೆ ನೀರು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿ ಹಲವಾರು ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ನಗರಗಳಲ್ಲಿ ಉತ್ಪತ್ತಿಯಾಗುವ ಇತರ ತ್ಯಾಜ್ಯಗಳ ಜತೆಗೆ ಕಟ್ಟಡ ತ್ಯಾಜ್ಯವೂ ಸೇರಿಕೊಂಡು ನಗರವಾಸಿಗಳ ಬದುಕು ಅಸಹನೀಯಗೊಂಡಿರುವುದೂ ಸುಳ್ಳಲ್ಲ. ಕಟ್ಟಡ ನಿರ್ಮಾಣ ತ್ಯಾಜ್ಯದ ಹಾವಳಿಗೆ ಕಡಿವಾಣ ಹಾಕಲು ಇದುವರೆಗೂ ಯಾವುದೇ ಕಾನೂನು ಕಟ್ಟಲೆ ಇಲ್ಲದಿರುವುದೂ ಸೋಜಿಗದ ಸಂಗತಿ. ಎಲ್ಲರೂ ಅದೊಂದು ಅನಿವಾರ್ಯ ಅನಿಷ್ಟ ಎಂಬಂತೆ ಅದಕ್ಕೆ ಹೊಂದಿಕೊಂಡಿದ್ದರು. ಈ ತ್ಯಾಜ್ಯದ ಹಲವಾರು ಅಪಾಯಗಳ ಬಗ್ಗೆ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು, ಅದರ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಪರಿಸರ ಸಚಿವಾಲಯವು ಈ ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ನಿಯಮಗಳನ್ನು ರೂಪಿಸಿ, ಅವುಗಳ ಕಟ್ಟುನಿಟ್ಟಿನ ಜಾರಿಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ. ವಾರಸುದಾರರೇ ಇಲ್ಲದ ಇಂತಹ ತ್ಯಾಜ್ಯದ ನಿರ್ವಹಣೆಯನ್ನು ಕಟ್ಟಡ ನಿರ್ಮಾಣ ಸಂಸ್ಥೆಗಳ ತಲೆಗೆ ಕಟ್ಟಿರುವುದು ಸರಿಯಾದ ನಿರ್ಧಾರವಾಗಿದೆ. ರಿಯಲ್‌ ಎಸ್ಟೇಟ್ ಚಟುವಟಿಕೆ ತೀವ್ರಗೊಂಡಂತೆ, ದೇಶದಲ್ಲಿ ಪ್ರತಿ ವರ್ಷ 53 ಕೋಟಿ ಟನ್‌ಗಳಷ್ಟು ಇಂತಹ ತ್ಯಾಜ್ಯ ನಿರ್ಮಾಣವಾಗುತ್ತಿದೆ. ಮಹಾನಗರಗಳಲ್ಲಿನ ವಾಯು ಮಾಲಿನ್ಯಕ್ಕೆ ಶೇ 20ರಷ್ಟು ಕೊಡುಗೆಯನ್ನೂ ಇದು ನೀಡುತ್ತಿದೆ. ಇದುವರೆಗೂ ಇದರ ನಿರ್ವಹಣೆಗೆ ಸೂಕ್ತ ನಿಯಮ ರೂಪಿಸದಿರುವುದು ವ್ಯವಸ್ಥೆಯ ವೈಫಲ್ಯವೇ ಸರಿ. ಯಾರಿಗೂ ಬೇಡವಾದ ತ್ಯಾಜ್ಯ ನಿರ್ವಹಣೆಗೆ ಯಾವುದೇ ಕಾಯ್ದೆ ಜಾರಿಯಲ್ಲಿ ಇಲ್ಲದಿರುವುದರಿಂದ ರಸ್ತೆ ಬದಿ, ಖಾಲಿ ನಿವೇಶನ, ಚರಂಡಿ, ನದಿ, ಕಾಲುವೆ ಮತ್ತು ಅರಣ್ಯ ಪ್ರದೇಶದಲ್ಲಿ ಬೇಕಾಬಿಟ್ಟಿಯಾಗಿ ಸುರಿಯಲಾಗುತ್ತಿದೆ. ಇಂತಹ ತ್ಯಾಜ್ಯವನ್ನು ಸಿಕ್ಕ ಸಿಕ್ಕ ಕಡೆಗಳಲ್ಲಿ ಸುರಿಯುವುದರಿಂದ ಮಾಲಿನ್ಯ ಮಟ್ಟ ಹೆಚ್ಚುತ್ತಿದೆ. ವಾತಾವರಣದಲ್ಲಿ ದೂಳಿನ ಪ್ರಮಾಣ ಹೆಚ್ಚಳಗೊಂಡು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನಿರ್ಮಾಣ ಯೋಜನೆಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಪಡೆಯುವ ಸಂದರ್ಭದಲ್ಲಿಯೇ ತ್ಯಾಜ್ಯ ನಿರ್ವಹಿಸುವ ವರದಿ ನೀಡುವುದನ್ನು ಕಟ್ಟಡ ನಿರ್ಮಾಣಗಾರರಿಗೆ ಕಡ್ಡಾಯ ಮಾಡಿರುವುದು ಮತ್ತು ಸ್ಥಳೀಯ ಪೌರ ಸಂಸ್ಥೆಗಳೂ ತ್ಯಾಜ್ಯ ನಿರ್ವಹಣೆಯ ಘಟಕಗಳನ್ನು ಕಾಲಮಿತಿಯೊಳಗೆ ಸ್ಥಾಪಿಸಬೇಕು ಎನ್ನುವ ನಿಯಮಗಳು ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ನೀಡಲಿವೆ. ನಗರಗಳ ಜನಸಂಖ್ಯೆ ಆಧರಿಸಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಸೂಚಿಸಿರುವುದು ಸಕಾರಾತ್ಮಕ ಪರಿಣಾಮ ಬೀರಲಿದೆ. ಕಟ್ಟಡ ನಿರ್ಮಾಣಗಾರರು ತಮ್ಮ ಯೋಜನಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ನಿರ್ವಹಿಸಲು ಸಮಗ್ರ ಯೋಜನೆ ರೂಪಿಸಿ ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತರಬೇಕಾಗಿದೆ. ಹೊಸ ನಿಯಮವು ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಪೌರ ಸಂಸ್ಥೆಗಳ ಕರ್ತವ್ಯಗಳನ್ನು ಸ್ಪಷ್ಟಪಡಿಸಿರುವುದರಿಂದ ಯಾರೊಬ್ಬರೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಪ್ರತಿಯೊಂದು ತ್ಯಾಜ್ಯವನ್ನು ದೂರದ ಪ್ರದೇಶಕ್ಕೆ ಸಾಗಿಸದೆ ಒಂದೆಡೆ ಸಂಗ್ರಹಿಸಿ, ಅಧಿಕೃತ ಸಂಸ್ಕರಣಾ ಘಟಕಗಳ ವಶಕ್ಕೆ ಒಪ್ಪಿಸುವುದು ಉದ್ದೇಶಿತ ಪರಿಣಾಮ ಬೀರಲಿದೆ. ಹಳೆ ಕಟ್ಟಡಗಳನ್ನು ಕೆಡವಿ ಹಾಕುವುದು ಮತ್ತು ಹೊಸ ಕಟ್ಟಡಗಳ ನಿರ್ಮಾಣ ವೇಳೆ ಉಳಿಯುವ ತ್ಯಾಜ್ಯದಿಂದ ನಿರ್ಮಿಸಿದ ಸಾಮಗ್ರಿಗಳನ್ನು ಸ್ಥಳೀಯ ಸಂಸ್ಥೆಗಳು ಖರೀದಿಸುವುದನ್ನು ಕಡ್ಡಾಯ ಮಾಡಿರುವುದೂ ಸರಿಯಾದ ತೀರ್ಮಾನವಾಗಿದೆ. ತ್ಯಾಜ್ಯದ ಸರಕಿನಿಂದ ತಯಾರಿಸಿದ ಪಾದಚಾರಿ ಮಾರ್ಗದ ಹಾಸುಗಲ್ಲು, ಚರಂಡಿ ಮುಚ್ಚುವ ಕಲ್ಲುಗಳನ್ನು ಪೌರ ಸಂಸ್ಥೆಗಳು ಬಳಸುವುದರಿಂದ ವಿಲೇವಾರಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಇದೊಂದು ಉತ್ತಮ ಆರಂಭವಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶ ಇರುವುದರಿಂದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯಾರೊಬ್ಬರೂ ಮನಸ್ಸು ಮಾಡಲಿಕ್ಕಿಲ್ಲ ಎಂದೂ ಆಶಿಸಬಹುದು. ಇದು ಬರೀ ಸರ್ಕಾರ, ಕಟ್ಟಡ ನಿರ್ಮಾಣಗಾರರ ಹೊಣೆಗಾರಿಕೆಯಲ್ಲ. ಸ್ಥಳೀಯ ಪೌರ ಸಂಸ್ಥೆಗಳು, ನಾಗರಿಕರೂ ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಕಾರ್ಯಪ್ರವೃತ್ತರಾದರೆ ಮಾತ್ರ ನಗರೀಕರಣ ತಂದೊಡ್ಡಿರುವ ಹೊಸ ತ್ಯಾಜ್ಯದ ಸಮಸ್ಯೆ ದೂರವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.