ಮಕ್ಕಳ ಭವಿಷ್ಯದ ಜತೆ ಚೆಲ್ಲಾಟಕ್ಕೆ ಕಠಿಣ ಶಿಕ್ಷೆ ಕೊಡಿ ದ್ವಿತೀಯ ಪಿಯುಸಿ ರಸಾಯನ ವಿಜ್ಞಾನದ ಪ್ರಶ್ನೆಪತ್ರಿಕೆಗಳು ಪರೀಕ್ಷೆಗೆ ಮೊದಲೇ ಬಹಿರಂಗಗೊಂಡಿವೆ. ಇದಕ್ಕಾಗಿ ಪರೀಕ್ಷೆಯ ನಿರ್ವಹಣೆ ಹೊಣೆ ಹೊತ್ತ ಪದವಿಪೂರ್ವ ಶಿಕ್ಷಣ ಇಲಾಖೆ ನಾಚಿಕೆಪಟ್ಟುಕೊಳ್ಳಬೇಕು. ಈಗೇನೋ ಇಡೀ ಪರೀಕ್ಷೆಯನ್ನೇ ರದ್ದು ಮಾಡಲು ಅದು ತೀರ್ಮಾನಿಸಿದೆ. ಆದರೆ ಅದರ ಕರ್ತವ್ಯಲೋಪ ಮತ್ತು ಹೊಣೆಗೇಡಿತನದಿಂದಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾದ 2.20ಲಕ್ಷ ಮಕ್ಕಳ ಆತಂಕಕ್ಕೆ, ಅವರು ಅನುಭವಿಸಬೇಕಾದ ಮಾನಸಿಕ ಯಾತನೆಗೆ ಪರಿಹಾರ ಎಲ್ಲಿದೆ? ಅವರು ಹಾಕಿದ್ದ ಶ್ರಮಕ್ಕೆ ಬೆಲೆ ಕಟ್ಟಿಕೊಡುವವರು ಯಾರು? ಯಾರದೋ ತಪ್ಪಿಗೆ ಈ ಮಕ್ಕಳು ಶಿಕ್ಷೆ ಅನುಭವಿಸುವಂತೆ ಮಾಡುವುದು ಎಷ್ಟರಮಟ್ಟಿಗೆ ಸರಿ? ಇದು ಒತ್ತಡದ ಯುಗ. ಒಂದು ಸಲ ಪರೀಕ್ಷೆ ಮುಗಿದರೆ ಸಾಕು ಎನ್ನುವ ಕಾಲ. ಹೀಗಿರುವಾಗ ಅವರು ಮತ್ತೊಮ್ಮೆ ಸಿದ್ಧರಾಗಬೇಕು. ಈಗಂತೂ ಪರೀಕ್ಷೆ ಎಂದರೆ ಮಕ್ಕಳಿಗಷ್ಟೇ ಸೀಮಿತವಾಗಿಲ್ಲ. ಅವರ ತಂದೆ ತಾಯಿಗಳೂ ಪರೋಕ್ಷವಾಗಿ ಪರೀಕ್ಷೆ ಎದುರಿಸುವ ಸ್ಥಿತಿಯಿದೆ. ಇವರೆಲ್ಲ ಪಿಯು ಇಲಾಖೆಗೆ ಹಿಡಿಶಾಪ ಹಾಕದೇ ಇರುತ್ತಾರೆಯೇ? ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕಾಗಿ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆ ನಡೆಸಲು ತೀರ್ಮಾನಿಸಲಾಯಿತು ಎಂದು ಪಿಯು ಇಲಾಖೆ ನಿರ್ದೇಶಕಿ ಹೇಳಿದ್ದಾರೆ. ‘ಮರು ಪರೀಕ್ಷೆ’ ಎಂಬ ಎರಡು ಶಬ್ದಗಳ ಒಂದು ಆದೇಶ ಹೊರಡಿಸಿದರೆ ಅಧಿಕಾರಿಗಳ ಕೆಲಸ ಮುಗಿಯಿತು. ಏಕೆಂದರೆ ಅವರೇನೂ ಪರೀಕ್ಷೆ ಬರೆಯಬೇಕಾಗಿಲ್ಲವಲ್ಲ. ಯಾರೋ ಕೆಲವರ ತಪ್ಪಿಗೆ ಇಡೀ ವಿದ್ಯಾರ್ಥಿ ಸಮುದಾಯ ಶಿಕ್ಷೆ ಅನುಭವಿಸಬೇಕು. ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಪ್ರಶ್ನೆಪತ್ರಿಕೆ ಸೋರಿಕೆಯ ಪಿಡುಗು ಆಗಾಗ ತಲೆಯೆತ್ತಲು ಕಾರಣ. ನಾಲ್ಕು ವರ್ಷಗಳ ಹಿಂದೆಯೂ ಪಿಯು ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆಗಲೂ ಒಂದಿಷ್ಟು ಜನರನ್ನು ಅಮಾನತಿನಲ್ಲಿ ಇಟ್ಟು ತನಿಖೆಗೆ ಆದೇಶಿಸಲಾಗಿತ್ತು. ಮುಂದೆ ಪರೀಕ್ಷೆಗಳೂ ಮುಗಿದವು, ಪೋಷಕರು ಮತ್ತು ಇಲಾಖೆಯವರು ಸೋರಿಕೆ ವಿಚಾರವನ್ನು ಮರೆತುಬಿಟ್ಟರು. ಇದನ್ನೆಲ್ಲ ನೋಡಿದರೆ ನಾವ್ಯಾರೂ ತಪ್ಪಿನಿಂದ ಪಾಠ ಕಲಿಯುವವರು ಅಲ್ಲ ಎಂದಾಯಿತು. ಆಗಿನ ತನಿಖಾ ವರದಿಯನ್ನು ಆಧರಿಸಿ ಒಂದಿಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾಗಿತ್ತು. ಅಂತಹ ಯಾವ ಪ್ರಯತ್ನಗಳೂ ನಡೆದಂತೆ ಕಾಣುತ್ತಿಲ್ಲ. ಪ್ರತಿ ಸಲ ಸೋರಿಕೆಯಾದಾಗಲೂ ಒಂದಿಷ್ಟು ಹೇಳಿಕೆ ಕೊಡುವುದು, ಒಬ್ಬಿಬ್ಬರನ್ನು ಅಮಾನತು ಮಾಡುವುದು ನಡೆಯುತ್ತದೆ. ಅಮಾನತಾದವರು ಸ್ವಲ್ಪ ದಿನದಲ್ಲೇ ಸದ್ದುಗದ್ದಲವಿಲ್ಲದೆ ಮತ್ತೆ ಕೆಲಸಕ್ಕೆ ವಾಪಸಾಗುತ್ತಾರೆ. ಅಷ್ಟು ಹೊತ್ತಿಗೆ ಜನ ಕೂಡ ಇದನ್ನೆಲ್ಲ ಮರೆತುಬಿಡುತ್ತಾರೆ. ಈ ಸಲವೂ ಐವರನ್ನು ಅಮಾನತಿನಲ್ಲಿ ಇಡಲಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ‘ಅಮಾನತು ಎನ್ನುವುದು ಶಿಕ್ಷೆಯೇ ಅಲ್ಲ; ಅದೊಂದು ರೀತಿ ಸಂಬಳ ಸಹಿತ ರಜೆ’. ಏಕೆಂದರೆ ಅಮಾನತಾದವರಿಗೆ ಕೆಲಸ ಮಾಡದೇ ಶೇ 75ರಷ್ಟು ಪಗಾರ ಸಿಗುತ್ತದೆ. 6 ತಿಂಗಳಲ್ಲಿ ತನಿಖೆ ಮುಗಿಸಿ ಆರೋಪಪಟ್ಟಿ ಸಿದ್ಧಪಡಿಸದಿದ್ದರೆ ಹಳೆಯ ಬಾಕಿ ಸಮೇತ ವೇತನ ಮರುಪಾವತಿ ಆಗುತ್ತದೆ. ಕಠಿಣ ಕ್ರಮಗಳ ಭಯ ಇಲ್ಲದಿರುವುದರಿಂದ ತಪ್ಪಿತಸ್ಥರು ಪಾರಾಗುತ್ತಾರೆ. ಅಮಾಯಕ ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಯಾವುದೋ ಒಂದು ಹಂತದಲ್ಲಿ ಆಗುವಂಥದ್ದಲ್ಲ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು, ಮುದ್ರಣ ಮಾಡುವವರು, ಸಾಗಿಸುವವರು, ಸುಪರ್ದಿಯಲ್ಲಿ ಇಟ್ಟುಕೊಳ್ಳುವವರು, ಪರೀಕ್ಷಾ ಕೇಂದ್ರದ ಸಿಬ್ಬಂದಿ ಸೇರಿದಂತೆ ನಾನಾ ಹಂತದವರು ಭಾಗಿಯಾದ ನಿದರ್ಶನಗಳು ನಮ್ಮ ಮುಂದಿವೆ. ಮನೆಪಾಠ ನಡೆಸುವವರ ಕರಾಮತ್ತುಗಳು ಕೂಡ ಇದಕ್ಕೆ ಕಾರಣವಾಗುವ ಸಾಧ್ಯತೆ ಇಲ್ಲದಿಲ್ಲ. ಪರೀಕ್ಷಾ ಕೇಂದ್ರಗಳಿರುವ ಶಾಲೆಗಳಿಂದಲೇ ಪ್ರಶ್ನೆಪತ್ರಿಕೆಗಳನ್ನು ಕದ್ದು ಬಹಿರಂಗ ಮಾಡುವ ಜಾಲಗಳನ್ನು ಮಟ್ಟಹಾಕಲು ಜಿಲ್ಲಾ ಮತ್ತು ತಾಲ್ಲೂಕು ಖಜಾನೆಗಳಲ್ಲಿ ಇಡುವ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅದೂ ವಿಶ್ವಾಸಾರ್ಹ ಅಲ್ಲ ಎಂಬುದು ಕಳೆದ ಸಲ ಖಜಾನೆ ಸಿಬ್ಬಂದಿಯೇ ಸೋರಿಕೆಯಲ್ಲಿ ಭಾಗಿಯಾದಾಗ ಅನುಭವಕ್ಕೆ ಬಂತು. ಇಷ್ಟೆಲ್ಲ ಅನಾಹುತಗಳು ನಡೆದರೂ ಇದಕ್ಕೊಂದು ಕಾಯಂ ಪರಿಹಾರ ಕಂಡುಹಿಡಿಯುವ ಕೆಲಸ ಮಾತ್ರ ನಡೆಯುತ್ತಿಲ್ಲ. ಈಗ ಅಂತರ್ಜಾಲ, ಮೊಬೈಲ್‌, ಕಂಪ್ಯೂಟರ್‌, ಇ–ಮೇಲ್‌, ಆಡಿಯೊ– ವಿಡಿಯೊ ಹೀಗೆ ನಾನಾ ಬಗೆಯ ಆಧುನಿಕ ತಂತ್ರಜ್ಞಾನ ಲಭ್ಯ. ಹೀಗಿರುವಾಗ ಸಾಕಷ್ಟು ಮೊದಲೇ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ಜಿಲ್ಲಾ ಮತ್ತು ತಾಲ್ಲೂಕು ಖಜಾನೆಗಳಿಗೆ ಕಳಿಸುವ ಅವಶ್ಯಕತೆ ಇದೆಯೇ? ಪರೀಕ್ಷೆ ಆರಂಭಕ್ಕೆ ಕೆಲವೇ ನಿಮಿಷ ಮೊದಲು ಇ– ಮೇಲ್‌ ಮೂಲಕ ಪ್ರಶ್ನೆಪತ್ರಿಕೆಗಳನ್ನು ಆಯಾ ಕೇಂದ್ರಕ್ಕೆ ರವಾನಿಸಬಹುದು. ಪ್ರತಿಯೊಂದು ಕೇಂದ್ರದಲ್ಲಿ ಫೋಟೊ ಕಾಪಿ ಯಂತ್ರಗಳನ್ನಿಟ್ಟು ಇ– ಮೇಲ್‌ನಲ್ಲಿ ಬಂದ ಪ್ರಶ್ನೆಪತ್ರಿಕೆಗಳನ್ನು ಅಚ್ಚು ಹಾಕಿ ಪರೀಕ್ಷಾರ್ಥಿಗಳಿಗೆ ವಿತರಿಸಬಹುದು. ನ್ಯಾಯಾಲಯಗಳೇ ಈಗ ಸಾವಿರಾರು ಕಿ. ಮೀ. ದೂರದಲ್ಲಿ ಕುಳಿತ ಆರೋಪಿಯ ಪಾಟಿ ಸವಾಲಿಗೆ ವಿಡಿಯೊ ಕಾನ್ಫರೆನ್ಸ್‌ ಬಳಸುತ್ತಿವೆ. ಬ್ಯಾಂಕುಗಳು ಲಕ್ಷ ಲಕ್ಷ ಕೋಟಿಯ ವಹಿವಾಟಿಗೆ ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿವೆ. ಅಷ್ಟೇ ಏಕೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಪ್ರವೇಶ ಪ್ರಕ್ರಿಯೆಗೆ ಸಿಇಟಿ ಘಟಕ ಅತ್ಯಾಧುನಿಕ ತಾಂತ್ರಿಕತೆ ಅಳವಡಿಸಿಕೊಂಡಿದೆ. ಇವೆಲ್ಲ ನಮ್ಮ ಪರೀಕ್ಷಾ ಪದ್ಧತಿ ಸುಧಾರಣೆಗೆ ಮಾದರಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.