ಮಲ್ಯ ಸಾಲ ಪ್ರಕರಣ ಬ್ಯಾಂಕ್‌ಗಳಿಗೆ ಹಲವು ಪಾಠ ಮದ್ಯದ ದೊರೆ ವಿಜಯ್‌ ಮಲ್ಯ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಪಡೆದ ಕೋಟ್ಯಂತರ ಸಾಲ ಮರುಪಾವತಿಸುವ ನೈತಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಿಬಿಐ ಮೂಗಿನಡಿಯೇ ದೇಶ ತೊರೆದಿರುವುದು ವ್ಯವಸ್ಥೆಯ ಒಟ್ಟಾರೆ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಮಲ್ಯ ಅವರು ದೇಶ ತೊರೆಯದಂತೆ ನಿರ್ಬಂಧಿಸಲು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸಿಬಿಐ, ‘ಲುಕ್‌ಔಟ್‌ ನೋಟಿಸ್‌’ ಹೊರಡಿಸಿತ್ತು. ಹೀಗಿದ್ದೂ ಅವರು ಸುಲಭವಾಗಿ ವಿದೇಶಕ್ಕೆ ಹಾರಿದ್ದಾರೆ ಎನ್ನುವುದು ವ್ಯವಸ್ಥೆಯ ದೋಷ. ಮಲ್ಯ ಬಂಧನಕ್ಕೆ ಕೋರಿ ಸಾಲ ವಸೂಲಿ ನ್ಯಾಯಮಂಡಳಿಗೆ ಎಸ್‌ಬಿಐ ಮನವಿ ಸಲ್ಲಿಸಿದ ದಿನವೇ ಅವರು ದೇಶ ತೊರೆದಿದ್ದಾರೆ ಎಂಬುದು ವಿಪರ್ಯಾಸ. ಬ್ಯಾಂಕ್‌ಗಳ ವಿಳಂಬ ಧೋರಣೆ, ಕೋರ್ಟ್‌ಗಳು ಸಕಾಲದಲ್ಲಿ ಸೂಕ್ತ ಆದೇಶ ನೀಡದಿರುವುದು ಮತ್ತು ತನಿಖಾ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿ ಕೈಕಟ್ಟಿ ಕುಳಿತಿದ್ದೇ ಈ ಬೆಳವಣಿಗೆಗಳಿಗೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಪ್ರವರ್ತಕರಾಗಿರುವ ಮಲ್ಯ ಅವರು ಬ್ಯಾಂಕ್‌ಗಳಿಗೆ ₹ 9,000 ಕೋಟಿಗಳಷ್ಟು ಸಾಲ ಮರುಪಾವತಿಸಬೇಕಾಗಿರುವುದು ಸಣ್ಣ ಮೊತ್ತವೇನಲ್ಲ. ಆಡಂಬರದ ಜೀವನಶೈಲಿಯ ಮಲ್ಯ ಅವರು ರಾಜ್ಯಸಭೆಯ ಸದಸ್ಯರಾಗಿದ್ದರೂ ನೆಲದ ಕಾನೂನಿಗೆ ಗೌರವ ಕೊಡದ ರೀತಿಯಲ್ಲಿ ನಡೆದುಕೊಂಡಿರುವುದು ಖಂಡನಾರ್ಹ. ಮಲ್ಯ ಅವರ ಈ ಪ್ರಕರಣವು ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಹುಳುಕುಗಳಿಗೂ ಸಾಕ್ಷಿಯಾಗಿದೆ. ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ನ (ಯುಎಸ್‌ಎಲ್‌) ಅಧ್ಯಕ್ಷ ಹುದ್ದೆ ತೊರೆಯುವಾಗ, ಇನ್ನು ಮುಂದೆ ತಾವು ಇಂಗ್ಲೆಂಡ್‌ನಲ್ಲಿ ನೆಲೆಸುವುದಾಗಿ ಮಲ್ಯ ಘೋಷಣೆ ಮಾಡಿದ ಕೂಡಲೇ ಅವರು ಯಾವುದೇ ಕ್ಷಣದಲ್ಲಿ ದೇಶ ತೊರೆಯುವ ಸಾಧ್ಯತೆ ಕಂಡುಬಂದಿತ್ತು. 17 ಬ್ಯಾಂಕ್‌ಗಳ ಒಕ್ಕೂಟದ ನೇತೃತ್ವ ವಹಿಸಿರುವ ಎಸ್‌ಬಿಐ, ಸಕಾಲಕ್ಕೆ ಇದನ್ನು ಗ್ರಹಿಸದೆ ಅವರ ಬಂಧನಕ್ಕೆ ಆಗ್ರಹಿಸಿ ಸಾಲ ವಸೂಲಿ ನ್ಯಾಯಮಂಡಳಿಗೆ ಮೊರೆ ಹೋಗುವಷ್ಟರಲ್ಲಿ ವಿಳಂಬವಾಗಿತ್ತು. ಹೀಗಾಗಿ ಮಲ್ಯ ಪಲಾಯನದ ಹಾದಿ ಸುಗಮವಾಗಿತ್ತು. ಮಲ್ಯ ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯಲು ವೈಯಕ್ತಿಕ ಜಾಮೀನು ನೀಡಿದ್ದಾರೆ. ವಿದೇಶಗಳಲ್ಲಿ ಸಾಕಷ್ಟು ಸಂಪತ್ತು ಹೊಂದಿರುವ ಅವರಿಂದ ಸಾಲದ ಪ್ರತಿಯೊಂದು ಪೈಸೆಯನ್ನು ವಸೂಲಿ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ತಮ್ಮ ಈ ಕಾರ್ಪೊರೇಟ್‌ ಸಾಲವನ್ನು ಮಲ್ಯ ಅವರು ಉದ್ದಿಮೆಯ ವೈಫಲ್ಯ ಎಂದು ಬಿಂಬಿಸಲು ಹವಣಿಸುತ್ತಿರುವುದೂ ಸರಿಯಲ್ಲ. ಅನೇಕ ಹೊಸ ವಿಮಾನ ಯಾನ ಸಂಸ್ಥೆಗಳು ಲಾಭದಲ್ಲಿ ನಡೆಯುತ್ತಿರುವುದೇ ಇದಕ್ಕೆ ನಿದರ್ಶನ. ದುಂದುವೆಚ್ಚ, ಅಹಂಕಾರ, ಹಣ ದುರ್ಬಳಕೆ, ವಿಮಾನ ಯಾನ ಸೇವೆಯನ್ನು ಸಮರ್ಥವಾಗಿ ನಿಭಾಯಿಸದಿರುವುದು ಕಿಂಗ್‌ಫಿಷರ್‌ ಏರ್‌ಲೈನ್ಸ್‌ ನಷ್ಟಕ್ಕೆ ಗುರಿಯಾಗಲು ಕಾರಣಗಳಾಗಿವೆ. ಇದಕ್ಕೆ ಉದ್ಯಮವನ್ನೇ ಹೊಣೆ ಮಾಡುವುದು ಸರಿಯಲ್ಲ. ಬ್ಯಾಂಕ್‌ಗಳು ನೀಡಿರುವ ಸಾಲದ ಒಂದೊಂದು ನಯೆಪೈಸೆಯನ್ನೂ ವಸೂಲಿ ಮಾಡಲಾಗುವುದು ಎಂದು ಹಣಕಾಸು ಸಚಿವರು ನೀಡಿರುವ ಹೇಳಿಕೆ ಬರೀ ವೀರಾವೇಶದ ಮಾತಾಗಬಾರದು. ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸುವ ಇರಾದೆ ಇದ್ದರೆ ಮಲ್ಯ ಅವರು ಸ್ವದೇಶಕ್ಕೆ ಮರಳಿ ಬಂದು ವಿಚಾರಣೆ ಎದುರಿಸಲೇಬೇಕು. ಬೃಹತ್‌ ಉದ್ದಿಮೆದಾರರಿಗೆ ನೀಡುವ ಸಾಲದ ವಿಷಯದಲ್ಲಿ ವ್ಯಾಪಕ ಸುಧಾರಣೆಗಳನ್ನು ಜಾರಿಗೆ ತರಬೇಕಿರುವ ತುರ್ತು ಅನಿವಾರ್ಯ ಎದುರಾಗಿರುವುದನ್ನು ಈ ಪ್ರಕರಣ ಮನದಟ್ಟು ಮಾಡಿಕೊಟ್ಟಿದೆ. ಸಕಾಲದಲ್ಲಿ ಮರು ಪಾವತಿ ಮಾಡದ ಸಾಲಗಾರರ ಆಸ್ತಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಮಾಡಿಕೊಡುವ ದಿವಾಳಿ ನೀತಿ ಸಂಹಿತೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಬೇಕಾಗಿದೆ. ಬೃಹತ್‌ ಉದ್ದಿಮೆಗಳಿಗೆ ಬ್ಯಾಂಕ್‌ಗಳು ಸಾಲ ನೀಡುವ ವ್ಯವಸ್ಥೆಗೆ ಇತಿಶ್ರೀ ಹಾಡಿ, ವಿದೇಶಗಳಲ್ಲಿ ಇರುವಂತೆ ಬಾಂಡ್‌ ಮಾರುಕಟ್ಟೆಯಿಂದ ಸಾಲ ಎತ್ತುವ ವ್ಯವಸ್ಥೆ ಜಾರಿಗೆ ತರಲು ಇದು ಸಕಾಲವಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆಗೆ ಸಮಗ್ರ ಚಿಕಿತ್ಸೆ ಮಾಡುವ ಅಗತ್ಯವೂ ಎದುರಾಗಿದೆ. ಮಲ್ಯ ಅವರೊಬ್ಬರೇ ಕಾರ್ಪೊರೇಟ್‌ ಸಾಲದ ಸುಸ್ತಿದಾರರಾಗಿಲ್ಲ. ಇಂತಹ ಅನೇಕ ‘ಹೆಗ್ಗಣ’ಗಳು ಇವೆ. ಮಲ್ಯ ಅವರು ಈಗ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಗೆ ಅವರೊಬ್ಬರೇ ಕಾರಣವಲ್ಲ. ವೃತ್ತಿಪರತೆಯಿಂದ ವರ್ತಿಸದ ಬ್ಯಾಂಕ್‌ಗಳ ಬೇಜವಾಬ್ದಾರಿಯೂ ಕಾರಣವಾಗಿದೆ. ಮಲ್ಯ ಅವರಂತಹ ಸುಸ್ತಿದಾರರಿಂದ ಬರಬೇಕಾದ ಸಾಲವನ್ನೆಲ್ಲ ವಸೂಲಿ ಮಾಡಿದರೆ ಮಾತ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಶ್ವಾಸಾರ್ಹತೆ ಉಳಿದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.