ಕೊನೆಗೂ ಆಧಾರ್‌ಗೆ ಕಾನೂನಿನ ಆಸರೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಆಧಾರ್’ ಯೋಜನೆಗೆ ಶಾಸನಬದ್ಧ ಸ್ಥಾನಮಾನ ದೊರೆಯುವ ಕಾಲ ಇನ್ನೇನು ದೂರ ಇಲ್ಲ. ಇದಕ್ಕೆ ಸಂಬಂಧಪಟ್ಟ ಮಸೂದೆಯೊಂದನ್ನು ಲೋಕಸಭೆ ಧ್ವನಿಮತದಿಂದ ಅಂಗೀಕರಿಸಿದೆ. ಇದನ್ನು ಹಣಕಾಸು ಮಸೂದೆಯ ರೂಪದಲ್ಲಿ ಮಂಡಿಸಿದ ಕಾರಣ ರಾಜ್ಯಸಭೆಯಲ್ಲಿ ಸೋಲಿಸುವ ಅಥವಾ ವಿಳಂಬ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ ಮಸೂದೆ ಕಾನೂನು ಆಗುವುದು ನಿಶ್ಚಿತ. ಇದರೊಂದಿಗೆ ಆಧಾರ್‌ನ ಅತಂತ್ರ ಸ್ಥಿತಿ ಕೊನೆಗೊಳ್ಳಲಿದೆ. ಆದರೆ ಮಸೂದೆಯನ್ನು ಕಾಂಗ್ರೆಸ್ ಸೇರಿ ವಿವಿಧ ವಿರೋಧ ಪಕ್ಷಗಳು ವಿರೋಧಿಸಿವೆ. ಆಡಳಿತ ಪಕ್ಷ ಧ್ವನಿಮತದಿಂದ ಸದನದ ಒಪ್ಪಿಗೆ ಪಡೆದುಕೊಂಡಿದೆ. ವಾಸ್ತವವಾಗಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2009ರಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿತ್ತು. ಆಗ ಪ್ರತಿಪಕ್ಷ ಸಾಲಿನಲ್ಲಿದ್ದ ಬಿಜೆಪಿ ಇದನ್ನು ಬಲವಾಗಿ ವಿರೋಧಿಸಿತ್ತು. ಎರಡೂ ಪಕ್ಷಗಳು ಇದನ್ನು ಚುನಾವಣೆಯಲ್ಲೂ ಬಳಸಿಕೊಂಡಿದ್ದವು. ಈಗ ಇವುಗಳ ಧ್ವನಿ, ಧೋರಣೆ ಅದಲುಬದಲಾಗಿದೆ. ಆಧಾರ್‌ಗಾಗಿ ಸಂಗ್ರಹಿಸುವ ಜೈವಿಕ ಮಾಹಿತಿಗಳು ಅಂದರೆ ಕಣ್ಣುಪಾಪೆ ಮತ್ತು ಬೆರಳಚ್ಚಿನ ಗುರುತುಗಳನ್ನು ಅನಧಿಕೃತ ವ್ಯಕ್ತಿ, ಸಂಸ್ಥೆಗಳು ದುರುಪಯೋಗ ಮಾಡಿಕೊಳ್ಳುವ ಅಪಾಯ ಇದೆ ಎಂಬುದು ವಿವಾದಕ್ಕೆ ಮುಖ್ಯ ಕಾರಣ. ಅಂಥದಕ್ಕೆ ಅವಕಾಶ ಇಲ್ಲ ಎಂದು ಈಗೇನೋ ಸರ್ಕಾರ ಭರವಸೆ ಕೊಟ್ಟಿದೆ. ಮಾಹಿತಿ ಸೋರಿಕೆ ಮಾಡಿದರೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ನಿಯಮ ಮಸೂದೆಯಲ್ಲಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಏನಾದರೂ ಲೋಪದೋಷಗಳಿದ್ದರೆ ಸರಿಪಡಿಸಬೇಕು. ತಂತ್ರಜ್ಞಾನ ಆಧಾರಿತ ಬೆರಳಚ್ಚು ಮಾಹಿತಿ ಸಂಗ್ರಹ ನಮ್ಮಲ್ಲಿ ಹೊಸದೇನಲ್ಲ. ಭೂಮಿ ನೋಂದಣಿ ಕಾಲಕ್ಕೆ ಬಳಕೆಯಾಗುತ್ತಿದೆ. ಅಮೆರಿಕ ಸೇರಿ ಕೆಲ ದೇಶಗಳು ವೀಸಾ ನೀಡಲು ಜೈವಿಕ ಮಾಹಿತಿ ಸಂಗ್ರಹಿಸುತ್ತಿರುವುದು ನಡೆದೇ ಇದೆ. ತಂತ್ರಜ್ಞಾನದ ಸೌಲಭ್ಯಗಳು ಅನೇಕ ಬಾರಿ ಎರಡು ಅಲುಗಿನ ಕತ್ತಿಯಂತೆ. ಹೀಗಾಗಿ ನಿರ್ವಹಣೆ ಸಮರ್ಪಕವಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆಧಾರ್ ಯೋಜನೆಗೆ 2009ರಿಂದ 2015ರ ಡಿಸೆಂಬರ್ ಅಂತ್ಯದವರೆಗೆ ₹ 7,253 ಕೋಟಿ ಖರ್ಚಾಗಿದೆ. ಮಕ್ಕಳು ಸೇರಿದಂತೆ 128 ಕೋಟಿ ಜನರ ಪೈಕಿ 98.5 ಕೋಟಿ ಜನರಿಗೆ ಇದೇ ಫೆಬ್ರುವರಿ ಅಂತ್ಯದವರೆಗೆ ಆಧಾರ್ ಸಂಖ್ಯೆ ವಿತರಿಸಲಾಗಿದೆ. ಇಷ್ಟೆಲ್ಲ ಖರ್ಚು ಮಾಡಿ, ಅಪಾರ ಜನಸಂಖ್ಯೆಗೆ ಕಾರ್ಡುಗಳನ್ನು ಹಂಚಿದ ನಂತರ ಈಗ ಹಿಂದಕ್ಕೆ ಹೆಜ್ಜೆ ಇಡುವುದು ಕಷ್ಟ. ಈ ಕಾರ್ಡ್‌ನ ಮಹತ್ವ ಮನಗಂಡೇ ಇದನ್ನು ಅನೇಕ ಸರ್ಕಾರಿ ಯೋಜನೆಗಳಲ್ಲಿ ಬಳಸಲಾಗುತ್ತಿದೆ. ವಿವಿಧ ಯೋಜನೆಗಳಿಗಾಗಿ ನೋಂದಾವಣೆ, ಲಾಭ ಪಡೆಯಲು ಪದೇ ಪದೇ ಮಾಹಿತಿ ಮತ್ತು ದಾಖಲಾತಿ ಸಲ್ಲಿಸಬೇಕಾದ ಸಮಸ್ಯೆಯನ್ನು ‘ಆಧಾರ್’ ಪೂರ್ಣವಾಗಿ ನಿವಾರಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಬ್ಸಿಡಿಗಳ ದುರುಪಯೋಗ ಮತ್ತು ಸೋರಿಕೆಯನ್ನು ತಪ್ಪಿಸಿದೆ. ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೇ ವರ್ಗಾಯಿಸುತ್ತಿರುವ ಕಾರಣ ಕೇಂದ್ರದ ಬೊಕ್ಕಸಕ್ಕೆ ಇದೊಂದೇ ಬಾಬ್ತಿನಲ್ಲಿ ವರ್ಷಕ್ಕೆ ₹ 15 ಸಾವಿರ ಕೋಟಿಯಷ್ಟು ಉಳಿತಾಯವಾಗುತ್ತಿದೆ. ಮೂರು ರಾಜ್ಯಗಳು ವಿವಿಧ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದು ತಲಾ ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಉಳಿಸುತ್ತಿವೆ. ಇನ್ನಷ್ಟು ಕಾರ್ಯಕ್ರಮಗಳಿಗೆ ವಿಸ್ತರಿಸಿದರೆ ಸಹಸ್ರಾರು ಕೋಟಿ ರೂಪಾಯಿ ಸೋರಿಕೆ ತಡೆಗಟ್ಟಲು ಸಾಧ್ಯ. ಆದರೆ ಆಧಾರ್‌ಗೆ ಕಾಯ್ದೆ ಬಲ ಇಲ್ಲದ ಕಾರಣ ಇದರ ಬಳಕೆಯನ್ನು ಸಾರ್ವತ್ರಿಕಗೊಳಿಸಲು ಸಾಧ್ಯವಾಗಿರಲಿಲ್ಲ. ‘ಆಧಾರ್’ ವ್ಯಕ್ತಿಯ ಖಾಸಗಿ ಹಕ್ಕಿನ ಉಲ್ಲಂಘನೆ ಎಂದು ದೂರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ಇನ್ನೂ ಮುಗಿದಿಲ್ಲ. ‘ಕೆಲವೇ ಕೆಲವು ಆಯ್ದ ಯೋಜನೆಗಳಿಗೆ ಮಾತ್ರ ಆಧಾರ್ ಬಳಸಬಹುದು; ಇದನ್ನು ಬಿಟ್ಟು ಬೇರೆ ವಿಷಯಗಳಲ್ಲಿ ಕಡ್ಡಾಯ ಮಾಡುವಂತಿಲ್ಲ’ ಎಂದು ಕೋರ್ಟ್ ಸಹ ಸೂಚಿಸಿದೆ. ‘ಆಧಾರ್ ಯೋಜನೆ ಜಾರಿಗೆ ಬಂದದ್ದು ಕೇಂದ್ರ ಸರ್ಕಾರದ ಆದೇಶದಿಂದ; ಅದಕ್ಕೆ ಯಾವುದೇ ಕಾಯ್ದೆಬದ್ಧ ಸ್ಥಾನಮಾನ ಇಲ್ಲ’ ಎಂದು ಅದು ಅನೇಕ ಸಂದರ್ಭಗಳಲ್ಲಿ ಹೇಳಿ ಲೋಪದೋಷಗಳನ್ನು ಎತ್ತಿ ತೋರಿಸಿತ್ತು. ಈಗ ಈ ಅಡೆತಡೆ, ಅನಿಶ್ಚಯ ಸ್ಥಿತಿ ನಿವಾರಣೆಯಾಗಲಿದೆ. ತಪ್ಪುಗಳು ಕಂಡುಬಂದಾಗ ಸರಿಪಡಿಸಿಕೊಳ್ಳಲು ಸರ್ಕಾರ ಕೂಡ ಹಿಂಜರಿಯಬಾರದು. ಆಧಾರ್‌ನ ದುರ್ಬಳಕೆ ಆಗದಂತೆ ಕಟ್ಟೆಚ್ಚರ ವಹಿಸಬೇಕು. ಇದನ್ನು ಯಾರೂ ಪ್ರತಿಷ್ಠೆ ಮಾಡಿಕೊಳ್ಳಬೇಕಾಗಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.