ರಿಯಲ್‌ ಎಸ್ಟೇಟ್‌ ವಹಿವಾಟು ಪಾರದರ್ಶಕತೆಗೆ ಸಹಕಾರಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಮಸೂದೆಗೆ ಕೊನೆಗೂ ಸಂಸತ್ತಿನ ಅನುಮೋದನೆ ಸಿಕ್ಕಿದೆ. ತಲೆಮೇಲೊಂದು ಸ್ವಂತ ಸೂರು ಬೇಕು ಎಂದು ಕನಸು ಕಾಣುತ್ತಿರುವ ದೊಡ್ಡ ಸಂಖ್ಯೆಯ ಜನರ ಪಾಲಿಗೆ ಇದು ಚೇತೋಹಾರಿ ಸಂಗತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಸಹಾಯಕ ಗ್ರಾಹಕರು ಇದ್ದಬದ್ದ ಹಣ ಕೊಟ್ಟು ರಿಯಲ್ ಎಸ್ಟೇಟ್ ಕುಳಗಳ ಕೈಯಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸುವ ದಿಸೆಯಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ತರುವ ಅತಿ ದೊಡ್ಡ ಸುಧಾರಣಾ ಕ್ರಮ. ಇದರಿಂದ ಈ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೂ ಉತ್ತೇಜನ ಸಿಗಲಿದೆ. ಖರೀದಿದಾರರು ಮತ್ತು ಡೆವಲಪರ್‌ಗಳ ಮಧ್ಯೆ ನಡೆಯುವ ವ್ಯವಹಾರಕ್ಕೆ ಕಾನೂನಿನ ಬಲ, ಸ್ಪಷ್ಟತೆ ದೊರೆಯಲಿದೆ. ‘ಈ ಕಾನೂನು ಜಾರಿಗೆ ತರುವ ಸಂದರ್ಭದಲ್ಲಿ ಗ್ರಾಹಕ ಮತ್ತು ಡೆವಲಪರ್ (ಬಿಲ್ಡರ್) ಇಬ್ಬರಿಗೂ ಸಮಾನ ಅವಕಾಶ ಸಿಗಬೇಕು, ಬರೀ ಗ್ರಾಹಕರ ಪರವಾಗಿದ್ದರೆ ಅದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು’ ಎನ್ನುವುದು ರಿಯಲ್ ಎಸ್ಟೇಟ್ ವಲಯದ ಆತಂಕ. ಕಾನೂನು ಜಾರಿ ಹಂತದಲ್ಲಿ ಇವುಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ಏಕೆಂದರೆ ಡೆವಲಪರ್‌ಗಳು ಮತ್ತು ಗ್ರಾಹಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ವಲಯ ಬೆಳೆಯಲು ಇಬ್ಬರೂ ಬೇಕು. ಆದರೆ ಗ್ರಾಹಕರು ಇದ್ದರೆ ಮಾತ್ರ ರಿಯಲ್‌ ಎಸ್ಟೇಟ್‌ಗೆ ಬೇಡಿಕೆ ಎನ್ನುವುದನ್ನು ಡೆವಲಪರ್‌ಗಳು ಅರ್ಥಮಾಡಿಕೊಳ್ಳಬೇಕು. ದೇಶದ ಆರ್ಥಿಕತೆ ಬೆಳವಣಿಗೆ, ಉದ್ಯೋಗ ಸೃಷ್ಟಿಯಲ್ಲಿ ನಿರ್ಮಾಣ ಕ್ಷೇತ್ರ ಅತಿ ದೊಡ್ಡ ಪಾತ್ರ ವಹಿಸುತ್ತಿದೆ. ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವ ಅದರ ಶಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಆದರೆ ಭೂಗತ ಅಪರಾಧ ಲೋಕ ಮತ್ತು ರಿಯಲ್‌ ಎಸ್ಟೇಟ್‌ ಮಧ್ಯೆ ಅಪವಿತ್ರ ಮೈತ್ರಿಯ ಅನೇಕ ನಿದರ್ಶನಗಳಿವೆ. ಅದರಿಂದ ಸಾಕಷ್ಟು ಅನಾಹುತಗಳೂ ಆಗಿವೆ. ಹಾಗಾಗಿ ಕಾನೂನು ಕಟ್ಟಳೆಗಳು ಮತ್ತು ನಿಯಂತ್ರಣ, ನಿಗಾ ವ್ಯವಸ್ಥೆಯಡಿ ರಿಯಲ್ ಎಸ್ಟೇಟ್ ವಲಯವನ್ನು ತರುವ ಕೆಲಸ ಬಹಳ ಹಿಂದೆಯೇ ಆಗಬೇಕಾಗಿತ್ತು. ತಡವಾಗಿಯಾದರೂ ಆಯಿತು ಎಂಬುದು ಸ್ವಾಗತಾರ್ಹ. ವಸತಿ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವಲಯ ಇತ್ತೀಚಿನ ವರ್ಷಗಳಲ್ಲಿ ಅಗಾಧವಾಗಿ ಬೆಳೆದಿದೆ. ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ಸ್ವತಂತ್ರ ಸಾಲು ಮನೆಗಳು ಜನಪ್ರಿಯವಾಗಿವೆ. ಭೂಮಿಯ ಬೆಲೆ ಗಗನಕ್ಕೆ ಏರಿರುವ ಕಾರಣ ಸ್ವಂತ ನಿವೇಶನ ಖರೀದಿಸಿ ಮನೆ ಕಟ್ಟುವುದು ಸಾಧ್ಯವೇ ಇಲ್ಲ ಎನ್ನುತ್ತಿದ್ದವರಿಗೆ ಇವು ವರವಾಗಿ ಬಂದಿವೆ. ಆದರೆ ಸಹಸ್ರಾರು ಕೋಟಿ ರೂಪಾಯಿ ವಹಿವಾಟಿನ ಇಂಥದೊಂದು ಪ್ರಮುಖ ಕ್ಷೇತ್ರದಲ್ಲಿ ಯಾವುದೇ ಪಾರದರ್ಶಕತೆ ಇರಲಿಲ್ಲ. ಡೆವಲಪರ್‌ಗಳ ಕೈಮೇಲಾಗಿತ್ತು. ಅವರಿಗೆ ಯಾವುದೇ ಉತ್ತರದಾಯಿತ್ವ ಇರಲಿಲ್ಲ. ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಕಾನೂನು ಈ ಲೋಪದೋಷಗಳನ್ನು, ಕೊರತೆಗಳನ್ನು ಸರಿಪಡಿಸುವ, ಶೋಷಕರಿಗೆ ಲಗಾಮು ಹಾಕುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಮನೆ ಖರೀದಿದಾರರಿಂದ ಹಣ ಸಂಗ್ರಹಿಸಿ ಅದನ್ನು ಬೇರೆ ಯೋಜನೆಗಳಲ್ಲಿ ವಿನಿಯೋಗಿಸಿ ಸತಾಯಿಸುವ, ವಿಳಂಬ ಮಾಡುವ ಡೆವಲಪರ್‌ಗಳು ಇನ್ನು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದುವರೆಗೆ ಒಂದು ನಿರ್ದಿಷ್ಟ ಕಾನೂನು ಇಲ್ಲದ ಕಾರಣ ಡೆವಲಪರ್‌ಗಳು ಆಡಿದ್ದೇ ಆಟ ಎನ್ನುವಂತಾಗಿತ್ತು. ಅವೆಲ್ಲಕ್ಕೂ ಇನ್ನು ಕಡಿವಾಣ ಬೀಳಲಿದೆ. ತಪ್ಪು ಮಾಡಿದವರು ದಂಡ, ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಣ ಕೊಡುವ ಗ್ರಾಹಕರಿಗೂ ಸಾಕಷ್ಟು ರಕ್ಷಣೆ ಸಿಗಲಿದೆ. ಬೆಲೆ ಸ್ಥಿರತೆಗೂ ಸಹಕಾರಿಯಾಗಲಿದೆ. ದೂರಸಂಪರ್ಕ, ವಿಮೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಇರುವಂತೆ ನಿಯಂತ್ರಣ ಪ್ರಾಧಿಕಾರಗಳು ಈ ಕ್ಷೇತ್ರದಲ್ಲೂ ಅಸ್ತಿತ್ವಕ್ಕೆ ಬರಲಿವೆ. ಇದರ ಇನ್ನೊಂದು ವಿಶೇಷ ಎಂದರೆ, ಪ್ರತಿಯೊಂದು ರಾಜ್ಯಕ್ಕೂ ಒಂದೊಂದು ಪ್ರಾಧಿಕಾರ. ಇದು ನಿಜವಾಗಿಯೂ ದೂರದೃಷ್ಟಿಯಿಂದ ಕೂಡಿದ್ದು. ಶ್ರೀಸಾಮಾನ್ಯ ಗ್ರಾಹಕ ನ್ಯಾಯ ಪಡೆಯಲು ಅಲೆದಾಡುವ ಕಷ್ಟವನ್ನು ಇದು ಕಡಿಮೆ ಮಾಡುತ್ತದೆ. ಹೊಸ ಕಾನೂನಿನ ಪರಿಣಾಮವಾಗಿ ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ಗಂಭೀರವಾಗಿ ಪರಿಗಣಿಸುವವರು ಮಾತ್ರ ಈ ಕ್ಷೇತ್ರಕ್ಕೆ ಬರಲು ಉತ್ತೇಜನ ದೊರೆಯುತ್ತದೆ. ನಾಯಿಕೊಡೆಗಳಂತೆ ಅಸಂಘಟಿತವಾಗಿ ಬೆಳೆಯುವುದನ್ನು ತಡೆಯುತ್ತದೆ. ಇದು ಈ ಕಾಲದ ಬದುಕಿನ ಅವಶ್ಯಕತೆಯೂ ಹೌದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.