ಚಿನ್ನಾಭರಣ ವರ್ತಕರ ಮುಷ್ಕರ ಸರ್ವಸಮ್ಮತ ಸೂತ್ರ ಅಗತ್ಯ ಚಿನ್ನಾಭರಣಗಳ ಮೇಲೆ ಶೇ 1ರಷ್ಟು ಎಕ್ಸೈಸ್‌ ಸುಂಕ ವಿಧಿಸುವ ಕೇಂದ್ರ ಸರ್ಕಾರದ ಬಜೆಟ್‌ ಪ್ರಸ್ತಾವ ವಿರೋಧಿಸಿ ಚಿನ್ನಾಭರಣ ವರ್ತಕರು ದೇಶದಾದ್ಯಂತ ನಡೆಸುತ್ತಿರುವ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದೆ. ಚಿನ್ನಾಭರಣ ತಯಾರಿಸುವ ಕುಶಲಕರ್ಮಿಗಳೂ ಸೇರಿದಂತೆ ಅಂದಾಜು 25 ರಿಂದ 30 ಲಕ್ಷದಷ್ಟು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕಲ್ಪಿಸಿರುವ ಚಿನ್ನಾಭರಣ ತಯಾರಿಕೆ ಮತ್ತು ಮಾರಾಟ ಉದ್ದಿಮೆಯು ಎಕ್ಸೈಸ್‌ ಸುಂಕ ವಿಧಿಸುವ ಪ್ರಸ್ತಾವವನ್ನು ಬಲವಾಗಿ ವಿರೋಧಿಸುತ್ತಿದೆ. ಚಿನ್ನಾಭರಣ ವರ್ತಕರು ಬಾಗಿಲು ಹಾಕಿದ್ದರಿಂದ ದೇಶಿ ಚಿನಿವಾರ ಪೇಟೆಯಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟಿಗೆ ಧಕ್ಕೆಯಾಗಿದೆ. ರಾಜ್ಯದಲ್ಲಿ ₹ 18 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ. ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಚಿನ್ನಾಭರಣಗಳು ದೊರೆಯದೆ ಗ್ರಾಹಕರೂ ತೊಂದರೆಗೆ ಒಳಗಾಗಿದ್ದಾರೆ. ಎಕ್ಸೈಸ್‌ ಸುಂಕ ವಿಧಿಸುವ ಪ್ರಸ್ತಾವ ಹಿಂದೆ ತೆಗೆದುಕೊಳ್ಳುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ವರ್ತಕರು ಹಟ ಹಿಡಿದಿದ್ದಾರೆ. ‘₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಸುವ ಗ್ರಾಹಕರು ಕಡ್ಡಾಯವಾಗಿ ಪ್ಯಾನ್‌ ಕಾರ್ಡ್‌ ಸಂಖ್ಯೆ ನಮೂದಿಸಬೇಕೆಂಬ ನಿಯಮ ಅಸಮಂಜಸ. ಬಹುಸಂಖ್ಯಾತ ಜನರು ಪ್ಯಾನ್‌ ಕಾರ್ಡ್‌ ಹೊಂದಿಲ್ಲದಿರುವಾಗ ಈ ನಿಯಮ ಸಣ್ಣ ಮತ್ತು ದೊಡ್ಡ ವರ್ತಕರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎನ್ನುವುದು ಚಿನ್ನಾಭರಣ ವರ್ತಕರ ದೂರು. ಆದರೆ ಇದಕ್ಕೆ ಪರಿಹಾರ ಸೂತ್ರವಾಗಿ ಸರಳ ಸ್ವರೂಪದ ಸ್ವಯಂ ಘೋಷಿತ ಅರ್ಜಿ ನಮೂನೆ ಭರ್ತಿ ಮಾಡುವ ಸೌಲಭ್ಯವನ್ನು ಸರ್ಕಾರ ಒದಗಿಸಿದ್ದರೂ ವರ್ತಕರ ಆತಂಕ ದೂರವಾಗಿಲ್ಲ. ದೇಶದಲ್ಲಿ ಶೇ 75ರಷ್ಟು ಚಿನ್ನಾಭರಣ ವಹಿವಾಟು ಅಸಂಘಟಿತ ವಲಯದ ವ್ಯಾಪ್ತಿಗೆ ಬರುವುದರಿಂದ ಪ್ಯಾನ್‌ ಕಡ್ಡಾಯ ಮತ್ತು ಇತರ ತೆರಿಗೆ ನಿಯಮಗಳನ್ನು ಗ್ರಾಮೀಣ ಪ್ರದೇಶದ ಸಣ್ಣ– ಪುಟ್ಟ ವರ್ತಕರು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುವುದು ಕಷ್ಟವಾಗಲಿದೆ ಎನ್ನುವುದು ವರ್ತಕರ ವಾದ. ಆದರೆ, ಕಪ್ಪು ಹಣದ ಚಲಾವಣೆಗೆ ಕಡಿವಾಣ ಹಾಕುವುದಕ್ಕಾಗಿ ಪ್ಯಾನ್‌ ಕಾರ್ಡ್‌ ಬಳಕೆ ಅನಿವಾರ್ಯ ಎಂಬುದನ್ನು ವರ್ತಕರು ಮರೆಯಬಾರದು. ಶೇ 1ರಷ್ಟು ಸುಂಕ ವಿಧಿಸುವ ಪ್ರಸ್ತಾವ ಹಿಂದೆ ಪಡೆಯುವುದಿಲ್ಲ ಎಂಬಂತಹ ದೃಢ ನಿಲುವು ತಳೆದಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ಇದು ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ತಳಕು ಹಾಕಿಕೊಂಡಿದೆ ಎಂದೂ ಹೇಳಿದ್ದಾರೆ. ಆದರೆ ಈ ಸುಂಕದ ಬಗ್ಗೆ ವರ್ತಕರು ವ್ಯಕ್ತಪಡಿಸುತ್ತಿರುವ ಆತಂಕದಲ್ಲಿ ಹುರುಳಿದೆ. ಈ ವ್ಯವಸ್ಥೆ ‘ಇನ್ಸ್‌ಪೆಕ್ಟರ್ ರಾಜ್’ಗೆ ದಾರಿ ಮಾಡಿ ಪ್ರಾಮಾಣಿಕರೂ ಕಿರುಕುಳಕ್ಕೆ ಒಳಗಾಗುವ ಸ್ಥಿತಿ ಉಂಟಾಗಬಹುದು ಎಂಬ ಆತಂಕ ವರ್ತಕರಲ್ಲಿರುವುದು ಸಹಜ. ಆದರೆ ವಾರ್ಷಿಕ ₹ 12 ಕೋಟಿಗಳಷ್ಟು ವಹಿವಾಟು ನಡೆಸಿದವರಿಗೆ ಮಾತ್ರ ಈ ಸುಂಕ ಅನ್ವಯವಾಗಲಿದೆ ಎಂದು ಸರ್ಕಾರ ಈಗ ಹೇಳಿದೆ. ಅಲ್ಲದೆ ನಂತರದ ವರ್ಷದಲ್ಲಿ ₹ 12 ಕೋಟಿಗಿಂತ ಕಡಿಮೆ ವಹಿವಾಟು ನಡೆಸುವವರಿಗೆ ಮುಂದಿನ ಹಣಕಾಸು ವರ್ಷದಲ್ಲಿ ₹ 6 ಕೋಟಿಗಳವರೆಗೆ ವಿನಾಯ್ತಿ ಇರಲಿದೆ. ವರ್ತಕರಿಗಾಗಿ ಒಡವೆ ತಯಾರಿಸುವ ಅಕ್ಕಸಾಲಿಗರು ಅಥವಾ ಕುಶಲಕರ್ಮಿಗಳು ಕೇಂದ್ರೀಯ ಎಕ್ಸೈಸ್‌ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿಲ್ಲ ಅಥವಾ ತೆರಿಗೆ ಪಾವತಿಸಬೇಕಾಗಿಲ್ಲ. ವರ್ತಕರು ತೆರಿಗೆ ಪಾವತಿಸುವ ಪ್ರಕ್ರಿಯೆ ಸರಳವಾಗಿದೆ. ಇನ್‌ಸ್ಪೆಕ್ಟರ್‌ಗಳ ಭೇಟಿಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ಕೇಂದ್ರೀಯ ಅಬಕಾರಿ ಸುಂಕದ ಮುಖ್ಯ ಕಮಿಷನರ್‌ ಈಗ ಹೇಳಿರುವುದು ವರ್ತಕರಿಗೆ ಸಮಾಧಾನ ತಂದಂತೆ ಕಾಣುತ್ತಿಲ್ಲ. ಚಿನ್ನಾಭರಣ ವಹಿವಾಟು, ಲೆಕ್ಕಕ್ಕೆ ಸಿಗದ ಸಂಪತ್ತಿನ (ಕಪ್ಪು ಹಣ) ಚಲಾವಣೆಗೆ ಕೊಡುಗೆ ನೀಡುತ್ತಿರುವುದರಿಂದ ಮತ್ತು ತೆರಿಗೆ ವ್ಯಾಪ್ತಿ ಹಿಗ್ಗಿಸುವ ಉದ್ದೇಶಕ್ಕೆ ಎಕ್ಸೈಸ್‌ ಸುಂಕ ಹೇರಲಾಗುತ್ತಿದೆ ಎಂದು ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಸುಂಕಗಳ ಕೇಂದ್ರೀಯ ಮಂಡಳಿ ಸ್ಪಷ್ಟಪಡಿಸಿದೆ. ತನ್ನ ಉದ್ದೇಶಗಳ ಬಗ್ಗೆ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಇನ್ನಷ್ಟು ಮನವರಿಕೆ ಮಾಡಿಕೊಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಹೊಸ ಸುಂಕ ಗ್ರಾಹಕರಿಗೆ ವರ್ಗಾವಣೆಯಾಗದಂತೆ ಎಚ್ಚರಿಕೆ ವಹಿಸುವುದೂ ಅವಶ್ಯ. ಯಾವುದೇ ಕಾರಣಕ್ಕೂ ಹಳೆಯ ‘ಇನ್‌ಸ್ಪೆಕ್ಟರ್‌ ರಾಜ್‌’ ವ್ಯವಸ್ಥೆ ಜಾರಿಗೆ ಬರದಂತೆ ನೋಡಿಕೊಳ್ಳಬೇಕು. ಸರ್ಕಾರ ಮತ್ತು ವರ್ತಕರು, ಸರ್ವಸಮ್ಮತವಾದ ಪರಿಹಾರ ಸೂತ್ರವೊಂದಕ್ಕೆ ಬದ್ಧವಾಗುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.