ಔಷಧಗಳ ನಿಷೇಧ ಸಮರ್ಪಕ ಜಾರಿಯಾಗಲಿ ಸಾರ್ವಜನಿಕ ಆರೋಗ್ಯದ ಕಾಳಜಿಯನ್ನು ನಿರ್ಲಕ್ಷಿಸುವುದು ಸಲ್ಲದು. ಕೆಮ್ಮಿನ ಔಷಧ, ಆ್ಯಂಟಿಬಯೊಟಿಕ್‌ಗಳು ಸೇರಿದಂತೆ ನಿಗದಿತ ಮಿಶ್ರಣದ (ಫಿಕ್ಸೆಡ್ ಡೋಸ್ ಕಾಂಬಿನೇಷನ್– ಎಫ್‌ಡಿಸಿ) 344 ಔಷಧಗಳನ್ನು ಆರೋಗ್ಯ ಸಚಿವಾಲಯ ನಿಷೇಧಿಸಿದೆ. ಮಾರ್ಚ್‌ 10ರಿಂದಲೇ ಈ ನಿಷೇಧ ಜಾರಿಗೆ ಬಂದಿದೆ. ಕೆಮ್ಮು, ನೆಗಡಿಯಂತಹ ಸಣ್ಣಪುಟ್ಟ ಕಾಯಿಲೆಗಳು ಅಥವಾ ಸೋಂಕುಗಳಿಗೆ ಸ್ವಯಂ ಔಷಧದ ರೀತಿ, ಅಂಗಡಿಗಳಲ್ಲಿ ಲಭ್ಯವಿರುವ ಔಷಧಗಳನ್ನು ಜನರು ಬಳಸುವ ಬಗ್ಗೆ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಪ್ರಶ್ನೆಗಳನ್ನು ಎತ್ತುತ್ತಲೇ ಬಂದಿದ್ದರು. ಕಡೆಗೂ 1940ರ ಔಷಧ ಹಾಗೂ ಸೌಂದರ್ಯವರ್ಧಕಗಳ ಕಾಯ್ದೆ ಅಡಿ ತನ್ನ ಅಧಿಕಾರ ಬಳಸಿ ಎಫ್‌ಡಿಸಿ ತಯಾರಿಕೆ, ಮಾರಾಟ ಹಾಗೂ ವಿತರಣೆಗೆ ಸರ್ಕಾರ ನಿಷೇಧ ಹೇರಿದೆ. ಇದರ ಅನ್ವಯ, 344ಕ್ಕೂ ಹೆಚ್ಚು ಔಷಧ ಕಂಪೆನಿಗಳಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಜನರ ಆರೋಗ್ಯದ ಮೇಲೆ ಈ ಔಷಧಗಳು ಗಂಭೀರ ಪರಿಣಾಮ ಬೀರುತ್ತವೆ ಎಂಬುದು ಈ ನಿಷೇಧಕ್ಕೆ ಕಾರಣ. ಇವುಗಳಿಗೆ ಪರ್ಯಾಯವಾದ ಔಷಧಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ ಎಂಬ ಸ್ಪಷ್ಟನೆಯನ್ನೂ ಸಚಿವಾಲಯ ನೀಡಿದೆ. ಆದರೆ ಆರೋಗ್ಯಕ್ಕೆ ಮಾರಕವಾದ ಔಷಧಗಳು ಸಾರ್ವಜನಿಕ ಮಾರಾಟಕ್ಕೆ ಅಂಗೀಕಾರ ಪಡೆದದ್ದಾದರೂ ಹೇಗೆ? ಅಂಗೀಕಾರ ಪಡೆದಿರದಿದ್ದರೆ ಈ ಔಷಧಗಳು ಅಂಗಡಿಗಳಲ್ಲಿ ಲಭ್ಯವಿದ್ದದ್ದಾದರೂ ಹೇಗೆ ಎಂಬುದು ಈಗಲೂ ಪ್ರಶ್ನೆಯೆ. ‌ಎಫ್‌ಡಿಸಿ ಎಂಬುದು ನಿಗದಿತ ಅನುಪಾತದಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚಿನ ಔಷಧಗಳ ಮಿಶ್ರಣ. 2014ರಲ್ಲಿ ಭಾರತದಲ್ಲಿ ಮಾರಾಟವಾದ ಔಷಧಗಳಲ್ಲಿ ಬಹುತೇಕ ಅರ್ಧದಷ್ಟು ಎಫ್‌ಡಿಸಿಗಳಾಗಿದ್ದವು ಎಂಬಂತಹ ಆತಂಕಕಾರಿ ಮಾಹಿತಿಯನ್ನೂ ಅಧ್ಯಯನಗಳು ಬಯಲುಗೊಳಿಸಿವೆ. ಎಫ್‌ಡಿಸಿಗಳು ದೇಶದಲ್ಲಿ ಈ ಮಟ್ಟಿಗಿನ ಜನಪ್ರಿಯತೆ ಗಳಿಸಲು ಅವು ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿ ಎಂಬುದು ಮುಖ್ಯ ಕಾರಣ. ವಾಸ್ತವವಾಗಿ ಕ್ಷಯ, ಏಡ್ಸ್‌ನಂತಹ ಗಂಭೀರ ಕಾಯಿಲೆಗಳ ನಿರ್ವಹಣೆಯಲ್ಲಿ ಎಫ್‌ಡಿಸಿಗಳು ಪರಿಣಾಮಕಾರಿ ಎಂಬುದನ್ನು ಕಂಡುಕೊಳ್ಳಲಾಗಿತ್ತು. ಆದರೆ ಕೆಮ್ಮಿನ ಸಿರಪ್‌ಗಳು, ನೋವು ನಿವಾರಕಗಳು, ಶೀತ, ಜ್ವರ, ಉರಿಯೂತ ಅಥವಾ ಸೋಂಕುಗಳ ಔಷಧಗಳಿಗೆ ಭಾರತದಲ್ಲಿ ಭಾರಿ ಮಾರುಕಟ್ಟೆ ಇರುವುದನ್ನು ಕಂಡುಕೊಂಡ ಔಷಧ ಕಂಪೆನಿಗಳು, ಎಫ್‌ಡಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಭಾರತದಲ್ಲಿ ಮಾರಾಟವಾಗುವ ಬಹುತೇಕ ಎಫ್‌ಡಿಸಿಗಳಿಗೆ ಅಂಗೀಕಾರ ಇಲ್ಲ. ಎಂದರೆ, ಇದು ನಮ್ಮಲ್ಲಿನ ನಿಯಂತ್ರಕ ವ್ಯವಸ್ಥೆ ಎಷ್ಟೊಂದು ದುರ್ಬಲವಾಗಿದೆ ಎಂಬುದರ ದ್ಯೋತಕ. ಇದಕ್ಕೆ ಪುಷ್ಟಿ ನೀಡುವಂತೆ ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್ (ಪಿಎಲ್‌ಓಎಸ್) ಪತ್ರಿಕೆಯಲ್ಲಿ ಕಳೆದ ಮೇ ತಿಂಗಳಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಶೇ 70ರಷ್ಟು ನೋವು ನಿವಾರಕಗಳ ಮಾರಾಟಕ್ಕೆ ಕೇಂದ್ರ ಸರ್ಕಾರದ ಅನುಮೋದನೆಯೇ ಇಲ್ಲ. ಕೇಂದ್ರ ಹಾಗೂ ರಾಜ್ಯಗಳ ಮಟ್ಟದ ನಿಯಂತ್ರಕ ವ್ಯವಸ್ಥೆಯಲ್ಲಿ ಸಮನ್ವಯದ ಕೊರತೆಯೂ ಇದಕ್ಕೆ ಮುಖ್ಯ ಕಾರಣ. ಎಫ್‌ಡಿಸಿಗಳ ಮೇಲಿನ ಈಗಿನ ನಿಷೇಧ ಇದೇ ಮೊದಲಲ್ಲ ಎಂಬುದು ನಮಗೆ ನೆನಪಿರಬೇಕು. ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದೆ ಮಾರುಕಟ್ಟೆಯಲ್ಲಿರುವ 294 ಎಫ್‌ಡಿಸಿಗಳನ್ನು ಹಿಂತೆಗೆದುಕೊಳ್ಳಲು 2007ರಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ ಈ ಆದೇಶದ ವಿರುದ್ಧ ಔಷಧ ಕಂಪೆನಿಗಳು ಹಾಗೂ ಉದ್ಯಮ ಸಂಸ್ಥೆಗಳು ಕಾನೂನಿನ ಮೊರೆ ಹೋಗಿದ್ದವು. ಈಗಲೂ ಪಿ ಅಂಡ್ ಜಿ, ಫಿಜರ್ ಹಾಗೂ ಅಬ್ಬಾಟ್ ಕಂಪೆನಿಗಳು ಕ್ರಮವಾಗಿ ವಿಕ್ಸ್ ಆ್ಯಕ್ಷನ್ 500 ಎಕ್ಸ್‌ಟ್ರಾ ಗುಳಿಗೆ, ಕೋರೆಕ್ಸ್ ಹಾಗೂ ಫೆನ್ಸಿಡಿಲ್ ಸಿರಪ್‌ಗಳ ಮಾರಾಟ ನಿಷೇಧಕ್ಕೆ ತಡೆಯಾಜ್ಞೆ ಪಡೆದುಕೊಂಡಿವೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ () ಎಂಬುದು ಇದ್ದರೂ, ಅಂಗೀಕೃತವಲ್ಲದ ಅನೇಕ ಎಫ್‌ಡಿಸಿಗಳು ಮಾರುಕಟ್ಟೆ ಪ್ರವೇಶಿಸಬಹುದು ಎಂಬಂತಹದ್ದು ನಮ್ಮ ಔಷಧ ಸಂಸ್ಥೆಗಳ ಮೇಲಿನ ಜಾಗೃತ ವ್ಯವಸ್ಥೆ ಹೇಗಿದೆ ಎಂಬುದನ್ನು ಚೆನ್ನಾಗಿಯೇ ವಿವರಿಸುತ್ತದೆ. ಹಾಗೆಯೇ ಈ ಎಫ್‌ಡಿಸಿಗಳು ಜನರ ಆರೋಗ್ಯದ ಮೇಲೆ ದೀರ್ಘಾವಧಿಯಲ್ಲಿ ಬೀರಬಹುದಾದ ಪ್ರತಿಕೂಲಾತ್ಮಕ ಪರಿಣಾಮಗಳನ್ನು ವರದಿ ಮಾಡಬಲ್ಲ ಅಧಿಕೃತ ವ್ಯವಸ್ಥೆಗಳೂ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಈ ಔಷಧಗಳ ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದುದು ಸರ್ಕಾರದ ಕರ್ತವ್ಯ. ಸಾರ್ವಜನಿಕ ಆರೋಗ್ಯದ ಕಾಳಜಿಯನ್ನು ನಿರ್ಲಕ್ಷಿಸುವುದು ಸಲ್ಲದು. ಈ ಸಂಬಂಧದಲ್ಲಿ ಸಿಡಿಎಸ್‌ಸಿಓ ಹಾಗೂ ಅದರ ರಾಜ್ಯ ಘಟಕಗಳು ತಕ್ಷಣ ಕಾರ್ಯ ಪ್ರವೃತ್ತವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.