ಸಮತೋಲನದ ಯತ್ನ ಎಚ್ಚರಿಕೆಯ ನಡೆ ಸಂಕಷ್ಟದ ಸ್ಥಿತಿಯಲ್ಲಿಯೂ ವಿತ್ತೀಯ ಶಿಸ್ತು ಮತ್ತು ವರಮಾನ ವೃದ್ಧಿಯತ್ತ ಗಮನ ಹರಿಸಿರುವುದು ಮುಖ್ಯ. ರಾಜ್ಯದ ಆರ್ಥಿಕ ವೃದ್ಧಿ ದರ ಕುಂಠಿತಗೊಂಡಿರುವ ಕುರಿತಾದ ಕಾಳಜಿಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016–17ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ರಾಜಧಾನಿ ಬೆಂಗಳೂರು ನಗರದ ಬೆಳವಣಿಗೆಗೆ ಹೆಚ್ಚಿನ ಒತ್ತು ಕೊಡುವ ಮೂಲಕ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳ ಮಧ್ಯೆ ಸಮತೋಲನ ಸಾಧಿಸಲು ಯತ್ನಿಸಿರುವುದು ಈ ಬಜೆಟ್‌ನಲ್ಲಿ ಎದ್ದು ಕಾಣುವ ಅಂಶ. ಸಂಕಷ್ಟದ ಪರಿಸ್ಥಿತಿಯಲ್ಲಿಯೂ ವಿತ್ತೀಯ ಶಿಸ್ತು ಮತ್ತು ವರಮಾನ ವೃದ್ಧಿಯತ್ತ ಗಮನ ಹರಿಸಿರುವುದು ಮುಖ್ಯವಾದದ್ದು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ (2015–16) ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು (ಜಿಎಸ್‌ಡಿಪಿ) ಶೇ 7.8ರಿಂದ ಶೇ 6.2ಕ್ಕೆ ಮತ್ತು ಕೃಷಿ ಬೆಳವಣಿಗೆ ಶೇ 4.7ಕ್ಕೆ ಇಳಿದಿರುವುದು ರಾಜ್ಯದ ಆರ್ಥಿಕ ಸಂಕಷ್ಟಕ್ಕೆ ಕನ್ನಡಿ ಹಿಡಿಯುತ್ತದೆ. ರಾಜ್ಯದ ಆರ್ಥಿಕ ವೃದ್ಧಿದರ ಕುಸಿತಕ್ಕೆ ಕೃಷಿಕ್ಷೇತ್ರದ ಬೆಳವಣಿಗೆ ಕುಂಠಿತವಾಗಿರುವುದು ಮುಖ್ಯ ಕಾರಣ ಎಂಬುದನ್ನು ಮುಖ್ಯಮಂತ್ರಿಯವರು ಬಜೆಟ್ ಭಾಷಣದ ಆರಂಭದಲ್ಲೇ ಪ್ರಸ್ತಾಪ ಮಾಡಿದ್ದಾರೆ. ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರ ಪರಿಸ್ಥಿತಿಯಿಂದಾಗಿ ಆಹಾರ ಧಾನ್ಯ ಉತ್ಪಾದನೆಯೂ ಕುಸಿದಿದೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ ಸರ್ವರಿಗೂ ಒಪ್ಪಿತವಾಗುವಂತಹ ಬಜೆಟ್‌ ಮಂಡಿಸುವಂತಹ ಕಸರತ್ತಿನಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದಾರೆ. ಕೃಷಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕೈಗಾರಿಕೆ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ವಿದ್ಯುತ್‌ ವಲಯಗಳಿಗೆ ಬಜೆಟ್‌ನಲ್ಲಿ ಸಾಕಷ್ಟು ಆದ್ಯತೆ ನೀಡಲಾಗಿದೆ. ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣದ ಗುರಿಯೂ ಈಡೇರಿಲ್ಲ. ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಸಮಾಜದ ಎಲ್ಲ ವರ್ಗದವರನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ಇಲ್ಲಿದೆ. ಸಿದ್ದರಾಮಯ್ಯನವರು ಮಂಡಿಸಿರುವ 11ನೇ ಬಜೆಟ್ ಇದು. ಮುಖ್ಯಮಂತ್ರಿಯಾಗಿ ಮಂಡಿಸಿರುವ ನಾಲ್ಕನೇ ಬಜೆಟ್. ಹೀಗಾಗಿ ಅಪಾರ ಅನುಭವದ ಹಿನ್ನೆಲೆ ಇದ್ದರೂ ಹೆಚ್ಚಿನ ಹೊಸತೇನೂ ಈ ಬಾರಿಯ ಬಜೆಟ್‌ನಲ್ಲಿ ಇಲ್ಲ. ಅಚ್ಚರಿ ಹುಟ್ಟಿಸುವಂತಹ ಘೋಷಣೆಗಳಂತೂ ಇಲ್ಲ. ‘ಭಾಗ್ಯ’ ಯೋಜನೆಗಳಿಗೆ ಪ್ರಸಿದ್ಧರಾಗಿರುವ ಸಿದ್ದರಾಮಯ್ಯ ಈ ಬಾರಿ ಹೊಸ ‘ಭಾಗ್ಯ’ಗಳನ್ನು ಘೋಷಿಸಿಲ್ಲ. ಆದರೆ ತೆರಿಗೆ ಹೊರೆ ಹೆಚ್ಚಿಸಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳವು ಸರಕು ಮತ್ತು ಸೇವೆಗಳ ದರ ಹೆಚ್ಚಳಕ್ಕೆ ಕಾರಣವಾಗಲಿದೆ. ಇದು ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳಿಗೆ ಸಂಪನ್ಮೂಲ ಹೊಂದಿಸಲು ವಿವಿಧ ತೆರಿಗೆಗಳ ಮೂಲಕ ₹ 7,658 ಕೋಟಿ ಸಂಗ್ರಹಿಸುವ ಗುರಿಯಿಂದಾಗಿ ತೆರಿಗೆ ಹೊರೆ ಹೆಚ್ಚಲಿದೆ. ಈ ವರ್ಷ ಚುನಾವಣೆಗಳು ಇಲ್ಲದಿರುವುದು ಮತ್ತು ಮುಂದಿನ ವರ್ಷ ‘ಚುನಾವಣೆ ಬಜೆಟ್‌’ ಮಂಡಿಸುವ ಅನಿವಾರ್ಯ ಎದುರಿಸಲಿರುವ ಸಿದ್ದರಾಮಯ್ಯ, ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಜಾಣತನ ಮೆರೆದಿದ್ದಾರೆ. ಹಾಗೆಯೇ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಅಡಿಯಲ್ಲಿ ಹಲವಾರು ಪರಿಹಾರ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಅನೇಕ ಸರಕುಗಳ ಮೇಲಿನ ತೆರಿಗೆಯನ್ನು ಶೇ 14.5 ರಿಂದ ಶೇ 5.5ಕ್ಕೆ ಇಳಿಸಿ ಜನಸಾಮಾನ್ಯರ ಮೇಲಿನ ಹೊರೆ ಕಡಿಮೆ ಮಾಡಿದ್ದಾರೆ. ಇದು ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗದ ಜನರ ಜೀವನಮಟ್ಟ ಸುಧಾರಣೆಗೆ ನೆರವಾಗುವಂತಹದ್ದು. ವೆಚ್ಚದ ಬಾಬತ್ತುಗಳಿಗೆ ನೀಡುವ ಮಹತ್ವವನ್ನು ತೆರಿಗೆ ವರಮಾನ ಹೆಚ್ಚಿಸುವುದಕ್ಕೆ ನೀಡುತ್ತಿಲ್ಲ, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚಿನ ಗಮನ ನೀಡುತ್ತಿಲ್ಲ ಎನ್ನುವ ಟೀಕೆಗಳಿಗೆ ಈ ಮೂಲಕ ಮುಖ್ಯಮಂತ್ರಿ ಸ್ಪಂದಿಸಿದಂತಿದೆ. ಕೈಗಾರಿಕೆ, ಮೂಲಸೌಕರ್ಯ ಹಾಗೂ ನಗರಾಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಿದ್ದು ಉದ್ಯಮಿಗಳನ್ನು ಸೆಳೆಯುವ ಯತ್ನ ಇಲ್ಲಿದೆ. ಸ್ಟಾರ್ಟ್ ಅಪ್‌ಗಳ ಬೆಳವಣಿಗೆಗಳ ಉತ್ತೇಜನಕ್ಕೆ ಸಿದ್ದರಾಮಯ್ಯನವರು ಅನೇಕ ನೇರ ಹಾಗೂ ಪರೋಕ್ಷ ಉಪಕ್ರಮಗಳ ಪ್ರಸ್ತಾವ ಮುಂದಿಟ್ಟಿದ್ದಾರೆ. ದೇಶದ ಐ.ಟಿ, ಹಾಗೂ ಸ್ಟಾರ್ಟ್‌ಅಪ್‌ ರಾಜಧಾನಿ ಖ್ಯಾತಿಯ ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಟ್ಟು, ₹ 5 ಸಾವಿರ ಕೋಟಿ ನಿಗದಿ ಮಾಡಿರುವುದರಿಂದ ‘ಬೆಂಗಳೂರು ಬ್ರ್ಯಾಂಡ್‌’ನ ವರ್ಚಸ್ಸಿಗೆ ಇನ್ನಷ್ಟು ಮೆರುಗು ಮೂಡಲಿದೆ. ಕಳೆದ ವರ್ಷ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದ ಸಿದ್ದರಾಮಯ್ಯನವರು ಬೆಂಗಳೂರಿಗರ ಮನ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಸುವ್ಯಕ್ತ. ಹಾಗೆಯೇ ಮಹಿಳಾ ಉದ್ಯಮಶೀಲತೆ ಪ್ರೋತ್ಸಾಹಿಸಲು ರಾಜ್ಯದ ಅನೇಕ ಕಡೆ ಮಹಿಳಾ ಪಾರ್ಕ್‌ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವ ಪ್ರಸ್ತಾವವನ್ನೂ ಮುಂದಿಟ್ಟಿದ್ದಾರೆ. ಮದ್ಯ ಸೇವನೆಯ ಕೆಡುಕಗಳ ಕುರಿತು ‘ಜವಾಬ್ದಾರಿಯುತ ಮದ್ಯ ಸೇವನೆ’ ಪರಿಕಲ್ಪನೆ ಬಗ್ಗೆ ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹವಾಗಿದೆ. ರೈತಾಪಿ ವರ್ಗದ ಅಹವಾಲು ಆಲಿಸಲು ರಾಜ್ಯ ಕೃಷಿ ಮತ್ತು ರೈತರ ಸಮಿತಿ ರಚನೆ, ಕೈಗಾರಿಕಾ ರಂಗದ ಎಸ್‌ಇಜೆಡ್ ಮಾದರಿಯಲ್ಲಿ ವಿಶೇಷ ಕೃಷಿ ವಲಯ ರಚನೆ, ಸುವರ್ಣ ಕೃಷಿ ಗ್ರಾಮ ಕಾರ್ಯಕ್ರಮ, ತೋಟದ ಬೆಳೆಗಾರರಿಗೆ ಕೃಷಿ ವರಮಾನ ತೆರಿಗೆ ರದ್ದತಿಯಂತಹ ಕ್ರಮಗಳು ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಕೃಷಿ ವಲಯದಲ್ಲಿ ಚೇತರಿಕೆ ಕಾಣಲು ನೆರವಾಗಬಹುದು. ಬಜೆಟ್‌ ಗಾತ್ರವು ಹಿಂದಿನ ವರ್ಷದ ₹ 1.40 ಲಕ್ಷ ಕೋಟಿಗಳಿಂದ ₹ 1.63 ಲಕ್ಷ ಕೋಟಿಗೆ (ಎಂದರೆ ಸುಮಾರು ₹ 23 ಸಾವಿರ ಕೋಟಿ) ಏರಿಕೆಯಾಗಿದೆ. ಯೋಜನಾ ವೆಚ್ಚ ಶೇ 17.6ರಷ್ಟು ಹೆಚ್ಚಳಗೊಂಡು ₹ 85 ಸಾವಿರ ಕೋಟಿಗೆ ನಿಗದಿಯಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಆದರೆ, ವಿತ್ತೀಯ ಕೊರತೆ ₹ 25 ಸಾವಿರ ಕೋಟಿಗೆ ತಲುಪಿರುವುದು ಮತ್ತು ಸರ್ಕಾರದ ಒಟ್ಟು ಸಾಲದ ಪ್ರಮಾಣ ₹ 2.8 ಲಕ್ಷ ಕೋಟಿಗೆ ತಲುಪಿ, ಬಜೆಟ್‌ ಗಾತ್ರಕ್ಕಿಂತ ಸಾಲದ ಪ್ರಮಾಣವೇ ಹೆಚ್ಚಿಗೆ ಇರುವುದು ಕಳವಳಕಾರಿ ಸಂಗತಿ. ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಹಲವಾರು ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬರದೆ ಘೋಷಣೆಗಳಿಗಷ್ಟೇ ಸೀಮಿತವಾಗಿರುವ ಕಹಿ ವಾಸ್ತವವೂ ನಮ್ಮೆದುರಿಗಿದೆ. ಹೀಗಾಗಿ ಮುಂದಿನ ಹಣಕಾಸು ವರ್ಷದಲ್ಲಿಯೂ ಈ ಪ್ರವೃತ್ತಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದೂ ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.