‘ಶಕ್ತಿಮಾನ್’ ಮೇಲಿನ ಕ್ರೌರ್ಯ ನಾಚಿಕೆಗೇಡು ಸರ್ಕಾರದ ವಿರುದ್ಧದ ಪ್ರತಿಭಟನಾ ಪ್ರದರ್ಶನವನ್ನು ಇಷ್ಟೊಂದು ಅಮಾನವೀಯ ಮಟ್ಟಕ್ಕೆ ಒಯ್ದಿದ್ದು ಅಕ್ಷಮ್ಯ. ಉತ್ತರಾಖಂಡ ಸರ್ಕಾರದ ವಿರುದ್ಧ ರಾಜಧಾನಿ ಡೆಹ್ರಾಡೂನ್‌ನಲ್ಲಿ ಕಳೆದ ಸೋಮವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ‘ಶಕ್ತಿಮಾನ್‌’ ಎಂಬ 13 ವರ್ಷದ ಕುದುರೆ ಕಾಲಿಗೆ ಗಾಯವಾಗಿ ಕೆಳಗುರುಳಿತು. ಇದಕ್ಕೆ ಕಾರಣ ಕುದುರೆಯ ಮೇಲೆ ನಡೆದ ಹಲ್ಲೆ. ಮೂಕಪ್ರಾಣಿಯ ಮೇಲೆ ನಡೆದ ಈ ಆಘಾತಕಾರಿ ಹಲ್ಲೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕುದುರೆಯ ಕಾಲು ಮುರಿದು ರಕ್ತ ಹರಿದದ್ದನ್ನು ಕಂಡು ಜನ ತಳಮಳಿಸಿದ್ದಾರೆ. ಅದೂ ಈ ಹಿಂಸಾತ್ಮಕ ದೃಶ್ಯ ಕಂಡುಬಂದಿದ್ದು ಶಾಂತಿಯುತ ಪ್ರತಿಭಟನೆ ಎನ್ನಲಾದ ಕಾರ್ಯಕ್ರಮದಲ್ಲಿ ಎನ್ನುವುದು ವಿಪರ್ಯಾಸ. ಈ ಬಗೆಯ ಹಿಂಸಾತ್ಮಕ ಘಟನೆಗೆ ಯಾರನ್ನು ಹೊಣೆ ಮಾಡಬೇಕು ಎಂಬಂತಹ ಜನರ ಪ್ರಶ್ನೆ ಸಹಜವಾದುದು. ಈಗ ಬಿಜೆಪಿ ಶಾಸಕ ಗಣೇಶ್ ಜೋಷಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರು ‘ಶಕ್ತಿಮಾನ್’ನತ್ತ ಲಾಠಿಯನ್ನು ಝಳಪಿಸುತ್ತಿರುವ ವಿಡಿಯೊ ದೃಶ್ಯಗಳು ಬಹಿರಂಗವಾಗಿವೆ. ಆದರೆ ವಿಡಿಯೊ ದೃಶ್ಯಗಳನ್ನು ಮಾಧ್ಯಮಗಳು ತಿರುಚಿವೆ ಎಂದು ಶಾಸಕರು ಆರೋಪಿಸಿದ್ದಾರೆ. ‘ಪ್ರತಿಭಟನಾಕಾರರ ಮೇಲೆ ಕುದುರೆಯಿಂದ ಹಲ್ಲೆ ತಪ್ಪಿಸುವುದಕ್ಕಾಗಿ ನೆಲವನ್ನು ಬಡಿಯುತ್ತಿದ್ದೆ , ಕುದುರೆಯನ್ನಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರೆಂದೂ ಗಣೇಶ್ ಜೋಷಿ ಆಪಾದಿಸಿದ್ದಾರೆ. ಹೀಗಾಗಿ ಈ ಘಟನೆ ಆಡಳಿತಾರೂಢ ಕಾಂಗ್ರೆಸ್‌ ಮತ್ತು ವಿರೋಧಪಕ್ಷ ಬಿಜೆಪಿ ನಡುವಣ ವಾಗ್ವಾದಕ್ಕೆ ಕಾರಣವಾಗಿದೆ. ಕುದುರೆಗೆ ಹೊಡೆಯುತ್ತಿರುವ ವಿಡಿಯೊ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮೂಕಪ್ರಾಣಿ ಮೇಲೆ ನಡೆದ ಹಲ್ಲೆ ವಿರುದ್ಧ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ವಿರುದ್ಧದ ಪ್ರತಿಭಟನಾ ಪ್ರದರ್ಶನವನ್ನು ಇಷ್ಟೊಂದು ಅಮಾನವೀಯ ಮಟ್ಟಕ್ಕೆ ಒಯ್ದಿದ್ದು ಅಕ್ಷಮ್ಯ. ಪ್ರಾಣಿಗಳಿಗೆ ಕ್ರೌರ್ಯ ತಡೆ 1960ರ ಕಾಯಿದೆ ಅನ್ವಯ, ಐಪಿಸಿ 429 ಹಾಗೂ 188 ಸೆಕ್ಷನ್‌ಗಳಡಿ ಈಗ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಈ ಸೂಕ್ಷ್ಮ ಪ್ರಾಣಿ ಮೇಲೆ ನಡೆದಿರುವ ಹಲ್ಲೆ ಅದರ ಜೀವಮಾನವಿಡೀ ಪರಿಣಾಮ ಬೀರುವಂತಹದ್ದು. ಈಗ ಕುದುರೆಗೆ ಕೃತಕ ಕಾಲನ್ನೇನೊ ಜೋಡಿಸಲಾಗಿದೆ. ಆದರೆ ಎಷ್ಟರವರೆಗೆ ಇದು ಪರಿಣಾಮಕಾರಿ ಎಂಬುದನ್ನು ಕಾದು ನೋಡಬೇಕು. ಏಕೆಂದರೆ ಕುದುರೆಗಳು ನಿಂತುಕೊಂಡೇ ನಿದ್ದೆ ಮಾಡುವ ಜಾಯಮಾನದವು. ಈಗ ಈ ಕಾಲುಮುರಿತದಿಂದಾಗಿ ಶಕ್ತಿಮಾನ್ ಮತ್ತೆ ಆರಾಮವಾಗಿ ವಿಶ್ರಾಂತಿ ತೆಗೆದುಕೊಳ್ಳುವುದು ಅಸಾಧ್ಯ ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಾಗೆಯೇ, ರಾಜಕೀಯ ಸಮಾವೇಶಗಳಲ್ಲಿ ಪ್ರಾಣಿಗಳ ಬಳಕೆಯ ಔಚಿತ್ಯದ ಪ್ರಶ್ನೆಯನ್ನೂ ಎತ್ತಲಾಗುತ್ತಿದೆ. ಏಕೆಂದರೆ ಇಂತಹ ರಾಜಕೀಯ ಸಮಾವೇಶಗಳಲ್ಲಿ ವಿರೋಧಿ ಬೆಂಬಲಿಗರ ಆಕ್ರೋಶಕ್ಕೆ ಪ್ರಾಣಿಗಳು ಗುರಿಯಾಗುವ ಅಪಾಯ ಇರುತ್ತದೆ ಎಂದು ವಾದಿಸಲಾಗುತ್ತಿದೆ. ಹೀಗಾಗಿಯೇ 2012ರಲ್ಲಿ ಪೀಟಾ ಮನವಿಯ ಮೇರೆಗೆ, ರಾಜಕೀಯ ರ್‍ಯಾಲಿಗಳು ಹಾಗೂ ಪ್ರಚಾರಾಂದೋಲನಗಳಲ್ಲಿ ಪ್ರಾಣಿಗಳ ಬಳಕೆ ನಿಷೇಧಿಸಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಸುತ್ತೋಲೆಯನ್ನು ಚುನಾವಣಾ ಆಯೋಗ ಹೊರಡಿಸಿತ್ತು ಎಂಬುದನ್ನೂ ಇಲ್ಲಿ ಸ್ಮರಿಸಬಹುದು. ಬಿಳಿ ಹೆಣ್ಣುಕುದುರೆ ‘ಶಕ್ತಿಮಾನ್’, ಉತ್ತರಾಖಂಡದ ಅಶ್ವಾರೋಹಿ ಪೊಲೀಸರ ಘಟಕಕ್ಕೆ ಸೇರಿದ್ದು. 2012 ರ ಜಾನುವಾರು ಗಣತಿಯ ಪ್ರಕಾರ ರಾಷ್ಟ್ರದಲ್ಲಿರುವ 6.25 ಲಕ್ಷ ಕುದುರೆಗಳ ಪೈಕಿ ಇದೂ ಒಂದು. 1992ರಲ್ಲಿ ಇದ್ದ 8.17 ಲಕ್ಷ ಕುದುರೆಗಳಿಗೆ ಹೋಲಿಸಿದಲ್ಲಿ ಈ 20 ವರ್ಷಗಳಲ್ಲಿ ಇಂತಹ ಕುದುರೆಗಳು ಶೇ 24ರಷ್ಟು ಕಡಿಮೆಯಾಗಿವೆ. ಕುದುರೆಗಳ ಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೂ ಇದು ದ್ಯೋತಕ. 1000ಕ್ಕಿಂತ ಕಡಿಮೆ ಸಂಖ್ಯೆಯ ಕುದುರೆಗಳನ್ನು ಕರ್ನಾಟಕವೂ ಸೇರಿದಂತೆ ರಾಷ್ಟ್ರದ 16 ರಾಜ್ಯಗಳ ಪೊಲೀಸ್ ಅಶ್ವಾರೋಹಿ ಘಟಕಗಳಲ್ಲಿ ನಿಯೋಜಿಸಲಾಗಿದೆ. ಈ ಆಧುನಿಕ ಕಾಲದಲ್ಲೂ ರಾಷ್ಟ್ರದ ಹಲವು ಪೊಲೀಸ್ ಪಡೆಗಳು ಕುದುರೆ ಬಳಕೆಯನ್ನು ಸಕ್ರಿಯವಾಗಿಯೇ ಮುಂದುವರಿಸಿವೆ. ಕುದುರೆಗಳು ಆಲಂಕಾರಿಕ ಸರ್ಕಾರಿ ಆಚರಣೆಗಳಿಗಷ್ಟೇ ಸೀಮಿತವಾಗದೆ ಈ ಗುಂಪು ನಿಯಂತ್ರಣದಂತಹ ಕಾರ್ಯಾಚರಣೆಗಳಿಗೂ ಬಳಕೆಯಾಗುತ್ತಿವೆ. ಉತ್ತರಾಖಂಡದಂತಹ ಗುಡ್ಡಗಾಡಿನ ರಾಜ್ಯದಲ್ಲಿ ಅಶ್ವ ಘಟಕಗಳು ಮುಖ್ಯ. ಏಕೆಂದರೆ ಗುಡ್ಡಗಾಡಿನ ಪ್ರದೇಶಗಳಲ್ಲಿ ವಾಹನಗಳು ಹೋಗದ ಜಾಗಗಳಲ್ಲೂ ಪ್ರಾಣಿಗಳು ಆರಾಮಾಗಿ ಸಾಗಬಲ್ಲವು ಎಂಬುದು ಇದಕ್ಕೆ ಮುಖ್ಯ ಕಾರಣ. ಆದರೆ ಈಗಿನ ತಂತ್ರಜ್ಞಾನ ಯುಗದಲ್ಲೂ ಗುಂಪು ನಿಯಂತ್ರಣಕ್ಕೆ ಕುದುರೆಗಳು ಅಗತ್ಯವೇ ಎಂಬುದು ಚರ್ಚಾರ್ಹ. ಇದೇನೇ ಇರಲಿ ಶಕ್ತಿಮಾನ್ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಲಿ. ಶಕ್ತಿಮಾನ್‌ಗೆ ಕಿರುಕುಳ ನೀಡಿದ ಎಲ್ಲರಿಗೂ ಶಿಕ್ಷೆ ಆಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.