ಉಳಿತಾಯ ಯೋಜನೆಗಳ ಬಡ್ಡಿ ಕಡಿತ: ಅಪ್ರಿಯ ನಡೆ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿಮೆ ಮಾಡಬೇಕೆಂಬ ಆರ್‌ಬಿಐ ಮತ್ತು ವಾಣಿಜ್ಯ ಬ್ಯಾಂಕ್‌ಗಳ ತೀವ್ರ ಒತ್ತಡಕ್ಕೆ ಸರ್ಕಾರ ಮಣಿದಿರುವುದು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದೆ. ಅಂಚೆ ಕಚೇರಿಯ ಸಣ್ಣ ಮತ್ತು ದೀರ್ಘಾವಧಿ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ದಾಕ್ಷಿಣ್ಯ ನಿರ್ಧಾರವು ಗೃಹಿಣಿಯರು, ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಆಘಾತಕಾರಿಯಾಗಿದೆ. ಬಡ್ಡಿ ದರ ಕಡಿತದಿಂದ, ಹಣ ಹೂಡಿದವರಿಗೆ ತೀವ್ರ ನಿರಾಶೆಯಾಗುವುದರ ಜತೆಗೆ ಆರ್ಥಿಕ ಸಂಕಷ್ಟವನ್ನೂ ತಂದೊಡ್ಡಲಿದ್ದು, ತಪ್ಪು ಸಂದೇಶವನ್ನೂ ರವಾನಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಕಟ್ಟಾ ಬೆಂಬಲಿಗರೆಂದು ಗುರುತಿಸಿರುವ ಮತದಾರರ ಮೇಲೆ ತನ್ನ ಆರ್ಥಿಕ ಕಾರ್ಯಸೂಚಿಯನ್ನು ಹೇರಲು ಮುಂದಾಗಿರುವುದು ಮಧ್ಯಮ ವರ್ಗದವರನ್ನು ಚಕಿತಗೊಳಿಸಿದೆ. ಅಪಾರ ಪ್ರಮಾಣದ ವಸೂಲಾಗದ ಸಾಲದ ಹೊರೆಯ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಿಶ್ವಾಸಾರ್ಹತೆಗೆ ಎರವಾಗುತ್ತಿರುವ ಸದ್ಯದ ಸಂದರ್ಭದಲ್ಲಿ, ಸುರಕ್ಷತೆ ಮತ್ತು ಭರವಸೆಯ ಬಡ್ಡಿ ಆದಾಯ ನೀಡುತ್ತಿದ್ದ ಈ ಉಳಿತಾಯ ಯೋಜನೆಗಳ ಮೇಲೆ ಜನಸಾಮಾನ್ಯರು ಇಟ್ಟಿದ್ದ ನಂಬಿಕೆಗೆ ಸರ್ಕಾರದ ಈ ನಡೆ ಧಕ್ಕೆ ಉಂಟು ಮಾಡಿದೆ. ಈ ನಿರ್ಧಾರವು ಜನರ ಉಳಿತಾಯ ಪ್ರವೃತ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಜನರ ದೀರ್ಘಾವಧಿ ಉಳಿತಾಯ ಯೋಜನೆಗಳನ್ನೂ ತಲೆಕೆಳಗು ಮಾಡಲಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌), ಕಿಸಾನ್‌ ವಿಕಾಸ ಪತ್ರ (ಕೆವಿಪಿ), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ಹಿರಿಯ ನಾಗರಿಕರ ಠೇವಣಿ, ಹೆಣ್ಣು ಮಕ್ಕಳ ಉಳಿತಾಯ ಯೋಜನೆ ‘ಸುಕನ್ಯಾ ಸಮೃದ್ಧಿ’ ಮತ್ತು ಅಂಚೆ ಕಚೇರಿಯ ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ಕಡಿತಗೊಳಿಸಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ‘ಸುಕನ್ಯಾ ಸಮೃದ್ಧಿ’ ಮತ್ತು ಹಿರಿಯ ನಾಗರಿಕರ ಯೋಜನೆಗಳಿಗೆ ಬಡ್ಡಿ ಕಡಿತದಿಂದ ವಿನಾಯ್ತಿ ನೀಡುವ ಬಗ್ಗೆ ಸುಳಿವು ನೀಡಿದ್ದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ಈಗ ತಮ್ಮ ರಾಗ ಬದಲಿಸಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿರುವುದು ಜಾಣ ನಡೆಯಲ್ಲ. ಶ್ಯಾಮಲಾ ಗೋಪಿನಾಥ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವ ಮುನ್ನ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನೂ ನೆನಪಿಸಿಕೊಳ್ಳಬೇಕಾಗಿತ್ತು. ಬಡ್ಡಿ ದರಗಳನ್ನು ಶೇ 0.4 ರಿಂದ ಶೇ 1.30ರವರೆಗೆ ಗರಿಷ್ಠ ಮಟ್ಟದಲ್ಲಿ ಕಡಿತಗೊಳಿಸಿರುವುದು ಮಧ್ಯಮ ವರ್ಗದ ಜನರಲ್ಲಿ ಸಹಜವಾಗಿಯೇ ತೀವ್ರ ಅಸಮಾಧಾನ ಮೂಡಿಸಿದೆ. ಜನರ ಉಳಿತಾಯ ಪ್ರವೃತ್ತಿಗೆ ಆಘಾತ ನೀಡಬಾರದು ಎನ್ನುವ ಕಾರಣಕ್ಕೆ, ವಾರ್ಷಿಕ ಬಡ್ಡಿ ದರಗಳನ್ನು ಶೇ 1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿತ ಮಾಡಬಾರದು ಎನ್ನುವ ಶಿಫಾರಸಿಗೂ ಸರ್ಕಾರದ ಈ ನಿಲುವು ವ್ಯತಿರಿಕ್ತವಾಗಿದೆ. ಇದಕ್ಕೆ ಸರ್ಕಾರ ಸೂಕ್ತ ವಿವರಣೆ ನೀಡಬೇಕಾಗಿದೆ. ಏಪ್ರಿಲ್‌ 1ರಿಂದ ಜಾರಿಗೆ ಬರಲಿರುವ ಈ ಕಡಿತಗೊಂಡ ಬಡ್ಡಿ ದರಗಳು ಮೂರು ತಿಂಗಳಿಗೊಮ್ಮೆ ಪರಿಷ್ಕರಣೆಗೊಳ್ಳಲಿವೆ ಎಂದು ಸರ್ಕಾರ ಹೇಳಿರುವುದು ಜನರಲ್ಲಿ ವಿಶ್ವಾಸ ಮೂಡಿಸುವುದಿಲ್ಲ. ಇಂತಹ ಯೋಜನೆಗಳ ಬಡ್ಡಿ ದರಗಳನ್ನು ವಾರ್ಷಿಕ ನೆಲೆಯಲ್ಲಿ ಬದಲಿಸುವ ಬದಲಿಗೆ ತ್ರೈಮಾಸಿಕ ಆಧಾರದ ಮೇಲೆ ಬದಲಿಸುವುದೂ ಸರಿಯಾದ ನಿಲುವಲ್ಲ. ಹಿಂದೊಮ್ಮೆ ಜನರಲ್ಲಿ ಉಳಿತಾಯ ಪ್ರವೃತ್ತಿ ಉತ್ತೇಜಿಸಲು ಗರಿಷ್ಠ ಬಡ್ಡಿ ದರದ ಆಮಿಷ ಒಡ್ಡಿದ್ದ ಸರ್ಕಾರ ಈಗ ತದ್ವಿರುದ್ಧ ನಿಲುವು ತಳೆದಿರುವುದು ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿಯಾಗಿದೆ. ಒಂದು ವೇಳೆ ಸರ್ಕಾರ ತನ್ನ ನಿಲುವಿಗೆ ದೃಢವಾಗಿ ಅಂಟಿಕೊಂಡರೆ ಜನರು ತಮ್ಮ ಉಳಿತಾಯದ ಹಣವನ್ನು ಬಾಂಡ್‌, ಷೇರು, ಮ್ಯುಚುವಲ್‌ ಫಂಡ್ಸ್‌ ಮತ್ತಿತರ ಯೋಜನೆಗಳಲ್ಲಿ ತೊಡಗಿಸುವುದು ಅನಿವಾರ್ಯವಾಗಲಿದೆ. ಜನರ ‘ಹಣಕಾಸು ಸಾಕ್ಷರತೆ’ ಮಟ್ಟ ಕಡಿಮೆ ಇರುವಾಗ ಸರ್ಕಾರ ಮತ್ತು ಆರ್ಥಿಕ ತಜ್ಞರ ನಿರೀಕ್ಷೆಯಂತೆ ಜನರು ವೈವಿಧ್ಯಮಯ ಹೊಸ ಹೂಡಿಕೆಗಳತ್ತ ಮನಸ್ಸು ಮಾಡುವ ಸಾಧ್ಯತೆ ಕಡಿಮೆ ಇದೆ. ಇದು ಅರ್ಥ ವ್ಯವಸ್ಥೆಗೆ ಬೇಕಾದ ಉಳಿತಾಯದ ಹಣ ಸಂಗ್ರಹಣೆ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಲಿದೆ. ಹಣದುಬ್ಬರ ಕಡಿಮೆಯಾಗಿ, ಬ್ಯಾಂಕ್‌ ಬಡ್ಡಿ ದರಗಳು ಇಳಿಯುವ ಸಾಧ್ಯತೆಯು ದೇಶಿ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವ ಹೊಸ್ತಿಲಲ್ಲಿ, ಸಣ್ಣ ಉಳಿತಾಯ ಯೋಜನೆಗಳು ದೀರ್ಘಕಾಲದವರೆಗೆ ಗರಿಷ್ಠ ಬಡ್ಡಿಯ ಪ್ರಯೋಜನ ಪಡೆಯುವುದು ಸರಿಯಲ್ಲ ಎನ್ನುವ ಅಭಿಪ್ರಾಯವೂ ಇದೆ. ಆರ್ಥಿಕ ಮಾನದಂಡದ ಪ್ರಕಾರ ಇದು ಸರಿ ಎಂದರೂ, ಆ ನಿಯಮವನ್ನು ದೇಶಿ ಅರ್ಥ ವ್ಯವಸ್ಥೆಗೆ ಅನ್ವಯಿಸುವುದು ಅಷ್ಟು ಸೂಕ್ತವಾಗಿ ಕಾಣಿಸದು. ಕೇಂದ್ರ ಸರ್ಕಾರವು ಮುಂದಿನ ತ್ರೈಮಾಸಿಕದಲ್ಲಿ ಬಡ್ಡಿ ದರ ಪರಿಷ್ಕರಿಸುವಾಗ ಸಣ್ಣ ಉಳಿತಾಯಗಾರರ ಆತಂಕವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಿದರೆ ಮಾತ್ರ ಜನರಲ್ಲಿ ಉಳಿತಾಯ ಪ್ರವೃತ್ತಿ ಹೆಚ್ಚೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.