ಇಪಿಎಫ್‌ ತೆರಿಗೆ ಪ್ರಸ್ತಾವ ಮರು ಪರಿಶೀಲನೆಯಾಗಲಿ ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್‌) ಸದ್ಯಕ್ಕೆ ಅನ್ವಯಿಸುತ್ತಿರುವ ತೆರಿಗೆ ವಿನಾಯ್ತಿ (ಇಇಇ) ಸೌಲಭ್ಯವನ್ನು ಮೊಟಕುಗೊಳಿಸಿ, ತೆರಿಗೆ ವ್ಯಾಪ್ತಿಗೆ (ಇಇಟಿ) ತರಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇಪಿಎಫ್‌ನ ಸುಮಾರು 6 ಕೋಟಿಯಷ್ಟು ಚಂದಾದಾರರ ಮೇಲೆ ಪರಿಣಾಮ ಬೀರುವ ಈ ಪ್ರಸ್ತಾವದ ಬಗ್ಗೆ ಕಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ವಲಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿರುವುದು ಸಹಜವೇ ಆಗಿದೆ. ವರ್ಷವೊಂದರಲ್ಲಿ ಉದ್ಯೋಗಿಯ ಇಪಿಎಫ್‌ ಖಾತೆಗೆ ಮಾಲೀಕರ ಕೊಡುಗೆಯು ₹ 1.5 ಲಕ್ಷ ಮೀರಿದರೆ ಅದಕ್ಕೂ ತೆರಿಗೆ ವಿಧಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದುವರೆಗೆ ಇಂತಹ ಯಾವುದೇ ಮಿತಿ ಇರಲಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಖಾಸಗಿ ವಲಯದ ದುಡಿಯುವ ವರ್ಗಕ್ಕೆ ಮಾರಕವಾಗಿ ಪರಿಣಮಿಸಲಿರುವ ಇಂತಹ ಪ್ರಸ್ತಾವಗಳು ದುರದೃಷ್ಟಕರ. ನಿವೃತ್ತರಿಗೆ ಸಾಮಾಜಿಕ ಸುರಕ್ಷತೆಯ ಸೌಲಭ್ಯವು ನಮ್ಮ ರಾಷ್ಟ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇಂತಹ ಸಂದರ್ಭದಲ್ಲಿ ಈ ತೆರಿಗೆ ಹೇರಿಕೆಯ ಪ್ರಸ್ತಾವ ನ್ಯಾಯಯುತವಾಗಿಲ್ಲ. ಈ ಬಗ್ಗೆ ರೆವಿನ್ಯೂ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆ ನೀಡಿರುವ ವಿವರಣೆಗಳೂ ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿರುವುದರಿಂದ ವೇತನದಾರ ವರ್ಗದಲ್ಲಿ ಕಳವಳ ಇನ್ನಷ್ಟು ಹೆಚ್ಚಾಗಿದೆ. ‘ಇಪಿಎಫ್‌ ಅಸಲು ಮತ್ತು ಶೇಕಡ 40ರಷ್ಟು ಬಡ್ಡಿಗೆ ತೆರಿಗೆ ಇರುವುದಿಲ್ಲ. ಆದರೆ ಜಮೆಯಾಗುವ ಬಡ್ಡಿಯ ಶೇ 60ರಷ್ಟು ಮೊತ್ತದ ಮೇಲೆ ಮಾತ್ರ ಏಪ್ರಿಲ್‌ 1ರಿಂದ ತೆರಿಗೆ ಸಂಗ್ರಹಿಸಲಾಗುತ್ತದೆ’ ಎಂದು ರೆವಿನ್ಯೂ ಕಾರ್ಯದರ್ಶಿ ನೀಡಿರುವ ಹೇಳಿಕೆ ಮತ್ತು ಉದ್ದೇಶಿತ ತೆರಿಗೆಯು ಹೆಚ್ಚು ವೇತನ ಪಡೆಯುವವರ ಮೇಲೆ ಮಾತ್ರ ಪರಿಣಾಮ ಬೀರಲಿದೆ ಎಂದು ಹಣಕಾಸು ಇಲಾಖೆ ನೀಡಿದ ವಿವರಣೆಗಳ ನಡುವೆ ವಿರೋಧಾಭಾಸಗಳು ಕಂಡುಬರದಂತೆ ಸರ್ಕಾರ ಎಚ್ಚರ ವಹಿಸಬೇಕಾಗಿತ್ತು. ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆಯಡಿ (ಇಪಿಎಫ್‌ ಅಂಡ್‌ ಎಂಪಿ ಆ್ಯಕ್ಟ್‌), ಇಪಿಎಫ್‌ ಹಣ ಹಿಂದೆ ಪಡೆಯುವುದರ ಮೇಲೆ ತೆರಿಗೆ ವಿಧಿಸುವುದಕ್ಕೆ ಅವಕಾಶವೇ ಇಲ್ಲದಿರುವಾಗ ಸರ್ಕಾರದ ಈ ನಡೆಯಲ್ಲಿ ಹೆಚ್ಚಿನ ಸ್ಪಷ್ಟತೆ ಇಲ್ಲದಿರುವುದು ವೇದ್ಯವಾಗುತ್ತದೆ. ತೆರಿಗೆಯನ್ನು ನೀಡದೆಯೂ ಶ್ರೀಮಂತ ಉದ್ಯಮಿಗಳು, ವೃತ್ತಿಪರರು ಪಾರಾಗುವಂತಹ ಸನ್ನಿವೇಶ ಇರುವಂತಹ ಸಂದರ್ಭದಲ್ಲಿ ವೇತನ ಪಡೆಯುವ ನೌಕರರಿಂದಲೇ ಇನ್ನಷ್ಟು ಹೆಚ್ಚುವರಿ ಸಂಪನ್ಮೂಲ ಸಂಗ್ರಹಕ್ಕೆ ಯತ್ನಿಸುವುದು ಸರಿಯಲ್ಲ. ನಿವೃತ್ತಿಯ ಬದುಕಿಗೆ ಆಸರೆಯಾಗಲೆಂದು ಕಷ್ಟಪಟ್ಟು ಉಳಿಸಿರುವ ಮೊತ್ತದ ಅರ್ಧಕ್ಕಿಂತ ಹೆಚ್ಚಿನ ಮೊತ್ತಕ್ಕೆ ತೆರಿಗೆ ವಿಧಿಸಿದರೆ ಪಿಂಚಣಿದಾರರಿಗೆ ದೊಡ್ಡ ನಷ್ಟ ಉಂಟಾಗಲಿದೆ ಎಂಬುದು ಸಹಜ. ನಿವೃತ್ತಿ ನಂತರ ಮಕ್ಕಳ ಮದುವೆ, ಮನೆ ನಿರ್ಮಾಣ, ವಯೋಸಹಜ ಅನಾರೋಗ್ಯ ಮತ್ತು ದಿನನಿತ್ಯದ ಅಗತ್ಯಗಳಿಗೆ ಆಸರೆಯಾಗಿರುವ ಹಣದ ಮೇಲೆ ತೆರಿಗೆ ವಿಧಿಸಲು ಹೊರಟಿರುವುದು ಯಾವುದೇ ದೃಷ್ಟಿಕೋನದಿಂದಲೂ ಸರಿಯಲ್ಲ. ಸರ್ಕಾರಿ ವೆಚ್ಚಕ್ಕೆ ಒಂಬತ್ತು ಆದ್ಯತಾ ವಲಯಗಳನ್ನು ಸ್ಪಷ್ಟವಾಗಿ ಗುರುತಿಸಿರುವ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ವರಮಾನ ಸಂಗ್ರಹ ವಿಷಯದಲ್ಲಿ ಮಾತ್ರ ಸ್ಪಷ್ಟ ಮುನ್ನೋಟ ಹೊಂದಿಲ್ಲ. ಸಂಪನ್ಮೂಲ ಸಂಗ್ರಹಕ್ಕಾಗಿ ದುಡಿಯುವ ವರ್ಗವನ್ನು ಸುಲಭವಾಗಿ ಗುರಿ ಮಾಡಿಕೊಂಡಿರುವುದು ಸಮರ್ಥನೀಯವಾಗದು. ಬಡವರಿಗೆ ನೆರವಾಗಲು ಸಿರಿವಂತರು ಮತ್ತು ಮಧ್ಯಮ ವರ್ಗದ ಮೇಲೆ ತೆರಿಗೆ ವಿಧಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಅದರ ನಿರ್ವಹಣೆಯಲ್ಲಿ ದೋಷಗಳಿದ್ದರೆ ಸರಿಪಡಿಸಲೇಬೇಕು. ಇದೇ ಕಾರಣಕ್ಕೆ ದುಡಿಯುವ ವರ್ಗದ ಹತಾಶೆಯನ್ನೂ ಸರ್ಕಾರ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ತೆರಿಗೆ ವಿಷಯದಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಮತ್ತು ಇಪಿಎಫ್‌ಗಳ ಮಧ್ಯೆ ಸಮಾನತೆ ತರುವುದು ಸರ್ಕಾರದ ಉದ್ದೇಶವಾಗಿದ್ದರೆ, ಎನ್‌ಪಿಎಸ್‌ ಅನ್ನೂ ಮೂರೂ ಹಂತದ ತೆರಿಗೆ ವಿನಾಯ್ತಿ ವ್ಯಾಪ್ತಿಗೆ ತರಬೇಕು. ಇಪಿಎಫ್‌ನಿಂದ ಹಿಂದೆ ಪಡೆಯುವ ಶೇ 60ರಷ್ಟು ಮೊತ್ತವನ್ನು ಪಿಂಚಣಿ ಯೋಜನೆಗಳಲ್ಲೇ ಮರಳಿ ತೊಡಗಿಸಿದರೆ, ಸಂಪೂರ್ಣ ತೆರಿಗೆ ವಿನಾಯ್ತಿ ನೀಡುವುದೂ ಸರ್ಕಾರದ ಉದ್ದೇಶವಾಗಿದೆ. ಆದರೆ ಈ ಪ್ರಸ್ತಾಪವು ಉಳಿತಾಯವನ್ನು ಯಾವುದೇ ಬಗೆಯಲ್ಲಿಯೂ ಉತ್ತೇಜಿಸಲಾರದು. ಜೊತೆಗೆ ಸ್ವಯಂ ಭವಿಷ್ಯ ತೆರಿಗೆ (ವಿಪಿಎಫ್) ಯೋಜನೆಯಲ್ಲಿ ಹಣ ತೊಡಗಿಸುವ ಪ್ರವೃತ್ತಿಯನ್ನೂ ಈ ತೆರಿಗೆ ಪ್ರಸ್ತಾವ ಚಿವುಟಿಹಾಕುವಂತಹದ್ದು. ಹೀಗಾಗಿ ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಮರುಚಿಂತನೆ ನಡೆಸುವ ಬಗ್ಗೆ ಜೇಟ್ಲಿಯವರು ಭರವಸೆಯನ್ನೇನೊ ನೀಡಿದ್ದಾರೆ. ಪ್ರತಿಷ್ಠೆಗೆ ಅಂಟಿಕೊಳ್ಳದೆ ಈ ಕುರಿತ ನಿರ್ಧಾರವನ್ನು ಕೈಬಿಡುವುದೇ ಲೇಸು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.