ಎನ್‌ಕೌಂಟರ್ ಹತ್ಯೆ ರಾಜಕೀಯಕರಣ ಬೇಡ 2004ರಲ್ಲಿ ಗುಜರಾತ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದಳೆನ್ನಲಾದ ಇಶ್ರತ್ ಜಹಾಂ ಪ್ರಕರಣಕ್ಕೆ ಮತ್ತಷ್ಟು ತಿರುವುಗಳು ಲಭಿಸಿವೆ. ಆರೋಪ ಪ್ರತ್ಯಾರೋಪಗಳ ವರ್ತುಲದಲ್ಲಿ ಈ ಪ್ರಕರಣ ಮತ್ತೊಮ್ಮೆ ಸಿಕ್ಕಿಹಾಕಿಕೊಂಡಿದೆ. ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಹಾಗೂ ಅವರಿಗೆ ಆಗ ಸಹೋದ್ಯೋಗಿಯಾಗಿದ್ದ ಆರ್.ವಿ.ಎಸ್. ಮಣಿ ಅವರು ಬಹಿರಂಗಪಡಿಸಿರುವ ವಿಚಾರಗಳು ಇದಕ್ಕೆ ಕಾರಣ. ಹಾಗೆಯೇ ಈ ಪ್ರಕರಣದಲ್ಲಿ ಗುಜರಾತ್‌ನ ನರೇಂದ್ರ ಮೋದಿ ಅವರನ್ನು ಸಿಕ್ಕಿಹಾಕಿಸಲು ತಮಗೆ ಪ್ರಲೋಭನೆ ಒಡ್ಡಲಾಗಿತ್ತು ಎಂದು ಗುಪ್ತಚರ ದಳದ ನಿವೃತ್ತ ಹೆಚ್ಚುವರಿ ನಿರ್ದೇಶಕ ರಾಜೀಂದರ್ ಕುಮಾರ್ ಅವರು ಕಳೆದ ತಿಂಗಳು ಹೇಳಿದ್ದೂ ಚರ್ಚೆ ಹುಟ್ಟುಹಾಕಿತ್ತು. ನಂತರ ಮುಂಬೈ ದಾಳಿ ಸಂಬಂಧ ತಪ್ಪೊಪ್ಪಿಗೆ ಹೇಳಿಕೆಯನ್ನು ಅಮೆರಿಕದ ಜೈಲಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನೀಡುತ್ತಿದ್ದ ಡೇವಿಡ್ ಹೆಡ್ಲಿ ಕೂಡ ಇಶ್ರತ್ ಜಹಾಂ, ಎಲ್ಇಟಿಯ ಆತ್ಮಹತ್ಯಾ ಬಾಂಬರ್ ಎಂಬಂತಹ ಹೇಳಿಕೆ ನೀಡಿದ್ದ. ಈಗ, 2009ರಲ್ಲಿ ಗುಜರಾತ್ ಹೈಕೋರ್ಟ್‌ಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಲ್ಲಿಸಿದ್ದ ಎರಡನೇ ಅಫಿಡವಿಟ್‌ನಲ್ಲಿ ಲಷ್ಕರ್–ಎ–ತಯಬಾ ಜೊತೆಗೆ ಇಶ್ರತ್ ಜಹಾಂಗಿದ್ದ ಸಂಪರ್ಕಗಳ ಆರೋಪಗಳನ್ನು ಕಿತ್ತುಹಾಕಲಾಗಿತ್ತು ಎಂದು ಪಿಳ್ಳೈ ಹಾಗೂ ಮಣಿ ಹೇಳುತ್ತಿದ್ದಾರೆ. ಈ ಬದಲಾವಣೆ ನಿರ್ಧಾರವನ್ನು ಉನ್ನತ ರಾಜಕೀಯ ಮಟ್ಟದಲ್ಲಿ ಕೈಗೊಳ್ಳಲಾಗಿತ್ತು ಎಂದಿದ್ದಾರೆ ಪಿಳ್ಳೈ. ಇದರಲ್ಲಿ ಆಗಿನ ಗೃಹ ಸಚಿವ ಪಿ. ಚಿದಂಬರಂ, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ ಎಂಬಂತಹ ಆರೋಪಗಳನ್ನು ಬಿಜೆಪಿಯೂ ಮಾಡಿದೆ. ಅಫಿಡವಿಟ್‌ನಲ್ಲಿ ಬದಲಾವಣೆ ಮಾಡಿದ್ದುದನ್ನು ಕಾಂಗ್ರೆಸ್ ನಾಯಕ ಚಿದಂಬರಂ ಅವರೂ ಒಪ್ಪಿಕೊಳ್ಳುತ್ತಾರೆ. ಆದರೆ ಇಂತಹ ಬದಲಾವಣೆ ಏಕೆ ಮಾಡಲಾಯಿತು ಎಂಬ ಪ್ರಶ್ನೆ ಸೃಷ್ಟಿಯಾಗುತ್ತದೆ. ಇದಕ್ಕೆ, ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಆ ರಾಜ್ಯದ ಆಗಿನ ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಆರೋಪ ಹೊರಿಸುವ ಪ್ರಯತ್ನ ನಡೆದಿತ್ತು ಎಂಬುದು ಬಿಜೆಪಿ ವಾದ. ಇದು ತರ್ಕಬದ್ಧವೂ ಹೌದು. ಏಕೆಂದರೆ 2002ರ ಗೋಧ್ರಾ ಹಿಂಸಾಚಾರಗಳ ನಂತರ ಮೋದಿಯವರ ಪ್ರತಿಷ್ಠೆಗೆ ಧಕ್ಕೆ ತರಲು ಕಾಂಗ್ರೆಸ್ ಮಾರ್ಗಗಳನ್ನು ಹುಡುಕುತ್ತಿತ್ತು ಎಂಬಂತಹ ವಾದ ಸರಿ. ಜೊತೆಗೆ ರಾಜಕಾರಣಿಗಳು ಇಂತಹ ನಡೆಗಳನ್ನು ಯಾವುದೇ ಅಳುಕಿಲ್ಲದೆ ಅನುಸರಿಸುತ್ತಾರೆ ಎಂಬುದೂ ನಿಜ. ಆದರೆ ಶಂಕಿತ ವ್ಯಕ್ತಿಗಳ ಜೊತೆಗಿದ್ದ ಇಶ್ರತ್‌ಳನ್ನು ಗುಂಡಿಟ್ಟು ಕೊಲ್ಲುವುದು ಎಷ್ಟು ಸರಿ? ಇಶ್ರತ್ ಜಹಾಂ ಇತರ ಮೂವರು ಪುರುಷರೊಂದಿಗೆ ಗುಜರಾತ್ ಪೊಲೀಸರೊಂದಿಗೆ 2004ರ ಜೂನ್ ತಿಂಗಳಲ್ಲಿ ನಡೆದ ‘ಎನ್‌ಕೌಂಟರ್’ನಲ್ಲಿ ಹತ್ಯೆಯಾಗಿದ್ದಳು ಎಂಬುದು ಪೊಲೀಸ್ ವರದಿ. ಈ ಬಗ್ಗೆ ಮ್ಯಾಜಿಸ್ಟೇರಿಯಲ್ ತನಿಖೆ, ವಿಶೇಷ ತನಿಖಾ ತಂಡ (ಎಸ್ಐಟಿ) ಹಾಗೂ ಸಿಬಿಐ ತನಿಖೆಗಳೆಲ್ಲಾ ನಡೆದಿದ್ದು ಇದು ನಕಲಿ ಎನ್‌ಕೌಂಟರ್ ಎಂದು ತನಿಖಾ ವರದಿಗಳು ಹೇಳಿವೆ. ಈ ಪ್ರಕರಣ ನಡೆದ ಒಂದು ದಶಕದ ನಂತರ 2013ರ ಜುಲೈನಲ್ಲಿ 7 ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ. ನಂತರ 2014ರ ಫೆಬ್ರುವರಿಯಲ್ಲಿ ಸಲ್ಲಿಸಲಾದ ಪೂರಕ ಆರೋಪಪಟ್ಟಿಯಲ್ಲಿ ನಾಲ್ವರು ಗುಪ್ತಚರ ಅಧಿಕಾರಿಗಳ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿದೆ. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ಮಾತ್ರ ಇನ್ನೂ ಆರಂಭವಾಗಿಲ್ಲ. ಈ ಮಧ್ಯೆ ಇಶ್ರತ್ ಸಂಪರ್ಕಗಳ ಬಗ್ಗೆ ರಾಜಕೀಯ ಪಕ್ಷಗಳು ಇನ್ನಿಲ್ಲದಂತೆ ಚರ್ಚೆಗಳನ್ನು ನಡೆಸುತ್ತಲೇ ಇವೆ. ಆಕೆ ಭಯೋತ್ಪಾದಕಿ ಎಂದು ಗುಜರಾತ್ ಪೊಲೀಸರೂ ವಾದಿಸಿದ್ದಾರೆ. ಈ ಭಯೋತ್ಪಾದಕರು ಮೋದಿಯವರ ಹತ್ಯೆ ಯೋಜನೆಯ ಭಾಗವಾಗಿದ್ದರು ಎಂಬಂತಹ ಗುಪ್ತಚರದಳದ ಮಾಹಿತಿಯೂ ಮುಖ್ಯವಾದದ್ದು. ಇಂತಹ ಸಂದರ್ಭದಲ್ಲಿ ಇಶ್ರತ್ ಹಾಗೂ ಸಹಚರರನ್ನು ಗುಂಡಿಟ್ಟು ಕೊಲ್ಲುವುದಕ್ಕಿಂತ ಜೀವಂತ ಸೆರೆ ಹಿಡಿದಿದ್ದರೆ. ಈ ಮಾಹಿತಿಯನ್ನು ಪರಿಣಾಮಕಾರಿಯಾಗಿ ಸಾಬೀತುಪಡಿಸಬಹುದಿತ್ತಲ್ಲವೆ ಎಂಬುದು ಮುಖ್ಯವಾದದ್ದು. ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ, ಮಾವೊವಾದಿಗಳು, ಪ್ರತ್ಯೇಕತಾವಾದಿಗಳಂತಹ ಬಂಡುಕೋರರನ್ನು ಕಾನೂನು ಪ್ರಕ್ರಿಯೆಗೊಳಪಡಿಸದೆ ಹತ್ಯೆ ಮಾಡುವ ಪರಂಪರೆ ಇದೆ. ಆದರೆ ಯಾರೇ ಆಗಲಿ ಈ ನೆಲದ ಕಾನೂನಿನ ಪ್ರಕ್ರಿಯೆಗೊಳಪಡಬೇಕಾದುದು ಅಗತ್ಯ ಎಂಬುದನ್ನು ಮರೆಯಲಾಗದು. ಈ ಪ್ರಕರಣದ ಬಗ್ಗೆ ಯುಪಿಎ ಸರ್ಕಾರದ ನಿಲುವಿಗೆ ರಾಜಕೀಯ ಪರಿಗಣನೆಗಳಿದ್ದಿರಬಹುದು. ಆದರೆ ಈ ಪ್ರಕರಣದ ಕಾನೂನಾತ್ಮಕ ಅಂಶಗಳ ಮೇಲೆ ಇದು ಯಾವುದೇ ಪರಿಣಾಮ ಬೀರಬಾರದು. ಪೊಲೀಸ್ ವಶದಲ್ಲಿದ್ದ ಇಶ್ರತ್‌ಳನ್ನು ಅಕಾರಣವಾಗಿ ಕೊಲ್ಲಲಾಯಿತೆ? ಇಶ್ರತ್‌ಳನ್ನು ಗುಂಡಿಟ್ಟು ಸಾಯಿಸಲು ಪೊಲೀಸರಿಗೆ ಸಾಕಷ್ಟು ಪ್ರಚೋದನೆ ಇತ್ತೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.