ರೈತರ ಬೇಡಿಕೆ ನ್ಯಾಯೋಚಿತ ಸ್ಪಂದಿಸುವ ಕಾಳಜಿ ಇರಲಿ ರಾಜ್ಯದ ರೈತರು ಈಗ ಮತ್ತೆ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಬೇಕು, ತಮ್ಮ ಜಮೀನುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ, ಹಸಿರು ಸೇನೆ ಮತ್ತು ರೈತಸಂಘದ ನೇತೃತ್ವದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಈ ರೈತರು ಗುರುವಾರ ಬೆಂಗಳೂರಿನಲ್ಲಿ ಭಾರಿ ಚಳವಳಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರಿಗೂ- ಪ್ರತಿಭಟನಾಕಾರರಿಗೂ ಅನೇಕ ಕಡೆ ತಿಕ್ಕಾಟಗಳು ನಡೆದಿವೆ. ಬಿಎಂಟಿಸಿ ಬಸ್‌ಗಳು ಜಖಂಗೊಂಡಿವೆ. ಪೊಲೀಸರು ಲಾಠಿ ಬೀಸಿದ್ದಾರೆ. ಅನೇಕ ರೈತರು ಗಾಯಗೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಅರ್ಧ ಬೆಂಗಳೂರಿನ ಜನಜೀವನವೇ ಥರಗುಟ್ಟಿದೆ. ರಸ್ತೆಗಳಲ್ಲಿ ಕಿಲೋಮೀಟರ್ ಉದ್ದಕ್ಕೂ ಸಂಚಾರ ದಟ್ಟಣೆಯಿಂದ ನಾಗರಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಸ್ವಲ್ಪ ಜಾಗರೂಕತೆ ವಹಿಸಿದ್ದರೆ ಇದನ್ನೆಲ್ಲ ತಪ್ಪಿಸಲು ಸಾಧ್ಯವಿತ್ತು. ಏಕೆಂದರೆ ‘ಪ್ರತಿಭಟನೆ ನಡೆಸುತ್ತೇವೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ರೈತರು ಮೊದಲೇ ಎಚ್ಚರಿಕೆ ಕೊಟ್ಟಿದ್ದರು. ಅಲ್ಲದೆ ಅಧಿವೇಶನ ನಡೆಯುವಾಗ ಜನಪ್ರತಿನಿಧಿಗಳ ಗಮನ ಸೆಳೆದರೆ ತಮ್ಮ ಬೇಡಿಕೆ ಈಡೇರಬಹುದು ಎಂಬ ಆಸೆ ಎಲ್ಲರಂತೆ ರೈತರಿಗೂ ಇತ್ತು. ಅದಕ್ಕಾಗಿಯೇ ಈ ಸಮಯವನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಆದರೆ ಇಲ್ಲಿ ಸರ್ಕಾರ ಎಡವಿದಂತೆ ಕಾಣುತ್ತದೆ. ಸಾಕಷ್ಟು ಮೊದಲು ರೈತರ ಪ್ರತಿನಿಧಿಗಳ ಜತೆ ಮಾತನಾಡುವ, ಅವರ ಅಹವಾಲಿಗೆ ಸ್ಪಂದಿಸುವ ಪ್ರಯತ್ನ ನಡೆಸಲಿಲ್ಲ. ಆ ಭಾಗದ ಚುನಾಯಿತ ಪ್ರತಿನಿಧಿಗಳೂ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮುಖ್ಯಮಂತ್ರಿಯಾದಿಯಾಗಿ ಮಂತ್ರಿ ಮಹೋದಯರಿಗೆ ಇದಕ್ಕಿಂತ ತುರ್ತು ಕೆಲಸ ಏನಿತ್ತೋ ಗೊತ್ತಿಲ್ಲ. ವಿರೋಧ ಪಕ್ಷಗಳೂ ಅದಕ್ಕೆ ಮಹತ್ವ ಕೊಡಲಿಲ್ಲ. ಸದನದಲ್ಲಿ ಅದರ ಬಗ್ಗೆ ಹೆಚ್ಚು ಪ್ರಸ್ತಾಪವೂ ಆಗಲಿಲ್ಲ. ಒಂದು ವೇಳೆ ಮೊದಲೇ ಮಾತುಕತೆ ಮಾಡಿ ಮನವೊಲಿಸಿದ್ದರೆ ಚಳವಳಿ ಇಷ್ಟೊಂದು ತೀವ್ರ ಸ್ವರೂಪ ಪಡೆಯುತ್ತಿರಲಿಲ್ಲ. ಐದಾರು ನೂರು ಟ್ರ್ಯಾಕ್ಟರ್‌ಗಳ ಸಮೇತ ರೈತರು ನೂರಾರು ಕಿ.ಮೀ. ದೂರದಿಂದ ಪ್ರತಿಭಟನೆ ನಡೆಸಲು ಬರಬೇಕು ಎಂದರೆ, 3 ಹಂತದ ಪೊಲೀಸ್ ಕಾವಲನ್ನು ಭೇದಿಸಿ ನಗರದ ಒಳಗೆ ನುಗ್ಗಬೇಕು ಎಂದರೆ ಅವರೆಷ್ಟು ರೋಸಿಹೋಗಿರಬಹುದು? ಪೊಲೀಸ್ ಅಧಿಕಾರಿಗಳು ತಮ್ಮ ಹಂತದಲ್ಲಿ ಚಳವಳಿಕಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೂ ಕೆಲವು ಮಿತಿಗಳಿವೆ. ಇಲ್ಲಿ ಅವರಿಗಿಂತ ಜನಪ್ರತಿನಿಧಿಗಳೇ ಹೆಚ್ಚು ಸಕ್ರಿಯವಾಗಿ ಸ್ಪಂದಿಸಿದ್ದರೆ ಪರಿಸ್ಥಿತಿ ಇಷ್ಟೊಂದು ಕೈಮೀರುತ್ತಿರಲಿಲ್ಲ. ಆದರೆ ಅವರು ಯಾರೂ ಸ್ಥಳಕ್ಕೆ ಹೋಗಲೇ ಇಲ್ಲ. ಅದರ ಕಹಿಫಲವನ್ನು ಸಾಮಾನ್ಯ ಜನ ಅನುಭವಿಸುವಂತಾಯಿತು. ರೈತರ ಆತಂಕದಲ್ಲೂ ಅರ್ಥ ಇದೆ. ಹಾಲು ಮತ್ತು ರೇಷ್ಮೆಗೆ ಹೆಸರಾಗಿದ್ದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಈಗ ನೀರಿನ ತೀವ್ರ ಅಭಾವದಿಂದ ಬಳಲುತ್ತಿವೆ. ನೀರಾವರಿ ವಿಷಯ ಹಾಗಿರಲಿ, ಎಷ್ಟೋ ಕಡೆ ಕುಡಿಯುವ ನೀರಿಗೂ ತತ್ವಾರ. ಇದನ್ನು ಪರಿಹರಿಸುವುದಕ್ಕೋಸ್ಕರ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ ಅದರಿಂದ ನೇತ್ರಾವತಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ ಎಂಬುದು ದಕ್ಷಿಣ ಕನ್ನಡದ ಜನರ ಆಕ್ಷೇಪ. ಅದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಒಂದೇ ರಾಜ್ಯದ ಎರಡು ಭಾಗದ ಜನರ ನಡುವಿನ ಅಪನಂಬಿಕೆ ನಿವಾರಿಸಲು ನಮ್ಮ ಜನಪ್ರತಿನಿಧಿಗಳಿಗೆ ಆಗುತ್ತಿಲ್ಲ. ಚಳವಳಿಗಳ ಉದ್ದೇಶ ತಮ್ಮ ಬೇಡಿಕೆಗಳ ಬಗ್ಗೆ ಆಡಳಿತದ ಗಮನ ಸೆಳೆಯುವುದಾಗಿರಬೇಕೆ ಹೊರತು ಗಲಾಟೆ ಮಾಡುವುದಲ್ಲ. ರೈತ ಚಳವಳಿಕಾರರ ಬೇಡಿಕೆ ಸಂಪೂರ್ಣ ನ್ಯಾಯಯುತ. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಚಳವಳಿ ಹೆಸರಿನಲ್ಲಿ ಸಂಚಾರಕ್ಕೆ ತಡೆ ಒಡ್ಡುವುದು ಎಳ್ಳಷ್ಟೂ ಸರಿಯಲ್ಲ. ಅಮಾಯಕ ನಾಗರಿಕರು ಏನು ತಪ್ಪು ಮಾಡಿದ್ದಾರೆ? ಟ್ರಾಫಿಕ್ ಜಾಮ್‌ಗಳಲ್ಲಿ ರೈತರಲ್ಲದವರು ಮಾತ್ರ ಅಲ್ಲ, ರೈತರು, ಅವರ ಕುಟುಂಬ ವರ್ಗದವರು, ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳು ಕೂಡ ಕಷ್ಟ ಪಡಬೇಕಾಗುತ್ತದೆ. ಯಾರಿಗೋ ಬಿಸಿ ಮುಟ್ಟಿಸಲು ಹೋಗಿ ಇನ್ಯಾರಿಗೋ ತೊಂದರೆ ಮಾಡುವುದು ಯಾವ ನ್ಯಾಯ? ಗುರುವಾರ ಕಬ್ಬು ಬೆಳೆಗಾರರೂ ಬೆಂಗಳೂರಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಅವರದ್ದು ಶಾಂತಿಯುತವಾಗಿತ್ತು. ಆ ರೀತಿ ಇದ್ದರೆ ಯಾರೂ ತಕರಾರು ಮಾಡುವುದಿಲ್ಲ. ಇನ್ನು, ಇಂಥ ಚಳವಳಿಗಳ ವಿಷಯದಲ್ಲಿ ಪೊಲೀಸರು ಕೂಡ ಹೆಚ್ಚಿನ ಸೂಕ್ಷ್ಮತೆ, ಜಾಣ್ಮೆ, ತಾಳ್ಮೆ ಪ್ರದರ್ಶಿಸಬೇಕು. ಲಾಠಿ ಇರುವುದೇ ಬೀಸುವುದಕ್ಕಾಗಿ ಎಂಬ ಧೋರಣೆ ಇರಬಾರದು. ಬೇರೆ ಚಳವಳಿಗಳಿಗೂ ರೈತರ ಹೋರಾಟಕ್ಕೂ ವ್ಯತ್ಯಾಸ ಇದೆ. ಅದರ ಬಗ್ಗೆ ಪರಿಜ್ಞಾನ, ಸಂವೇದನೆ ಬೆಳೆಸಿಕೊಂಡು ನಾಜೂಕಾಗಿ ನಿಭಾಯಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.