ರೈಲ್ವೆ ಕೊಳಕು: ಪ್ರಯಾಣಿಕರ ಆರೋಗ್ಯದ ಜತೆ ಚೆಲ್ಲಾಟ ಬೇಡ ರೈಲ್ವೆಯ ಪ್ರಥಮದರ್ಜೆ ಬೋಗಿ ಪ್ರಯಾಣಿಕರಿಗೆ ಒದಗಿಸುವ ಹೊದಿಕೆಗಳು (ಬ್ಲ್ಯಾಂಕೆಟ್‌) ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ ಎನ್ನುವುದು ಆಘಾತಕಾರಿ ಸಂಗತಿ. ಬೆಡ್‌ಶೀಟ್ಸ್‌ ಮತ್ತು ತಲೆದಿಂಬು ಹೊದಿಕೆಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ ಒದಗಿಸುತ್ತಿದ್ದರೆ, ಬ್ಲ್ಯಾಂಕೆಟ್‌ಗಳನ್ನು ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ ಎಂದು ರೈಲ್ವೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಅವರೇ, ರಾಜ್ಯಸಭೆಯಲ್ಲಿ ಒಪ್ಪಿಕೊಂಡಿರುವುದು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ. ದುಬಾರಿ ಬೆಲೆ ತೆತ್ತು ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವವರಿಗೆ ಕೊಳೆಯಾದ, ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದ ಹೊದಿಕೆಗಳನ್ನು ಒದಗಿಸುತ್ತಿರುವುದು ಅನಾರೋಗ್ಯಕರ ಪ್ರವೃತ್ತಿಯಾಗಿದೆ. ಚರ್ಮದ ಕಾಯಿಲೆ ಸೇರಿದಂತೆ ಹಲವಾರು ರೋಗ ರುಜಿನಗಳನ್ನು ಇನ್ನೊಬ್ಬರಿಗೆ ದಾಟಿಸುವ ಕೆಟ್ಟ ಪದ್ಧತಿಯೂ ಹೌದು. ಒಟ್ಟಾರೆ ಪ್ರಯಾಣಿಕರ ಆರೋಗ್ಯವೇ ಇಲ್ಲಿ ಗಂಡಾಂತರಕ್ಕೆ ಒಳಪಟ್ಟಿರುತ್ತದೆ. ಬೆವರು ವಾಸನೆಯ, ತೊಳೆಯದ, ಸೂಕ್ಷ್ಮ ಕ್ರಿಮಿಕೀಟಗಳಿರುವ ಹೊದಿಕೆಗಳನ್ನು ಬಳಸುವುದರಿಂದ ರೈಲ್ವೆ ಪ್ರಯಾಣ ಅಸಹನೀಯವಷ್ಟೇ ಅಲ್ಲ, ಅನಾರೋಗ್ಯಕರವೂ ಆಗಿರುವುದು ಒಪ್ಪತಕ್ಕ ಸಂಗತಿಯಲ್ಲ. ಯಾಂತ್ರೀಕೃತ ಲಾಂಡ್ರಿಗಳ ಸಂಖ್ಯೆ ಕಡಿಮೆ ಇರುವುದೇ ಇದಕ್ಕೆ ಕಾರಣ ಎಂದು ಸಚಿವರು ನೀಡಿರುವ ಸಬೂಬು ಸಮರ್ಥನೀಯ ಎನಿಸದು. ನೆಪಗಳ ಮೊರೆ ಹೋಗುವುದಕ್ಕಿಂತ ಕಾರ್ಯದಕ್ಷತೆಯ ವೈಫಲ್ಯಗಳನ್ನು ಒಪ್ಪಿಕೊಳ್ಳಬೇಕಷ್ಟೆ. ಯಾಂತ್ರೀಕೃತ ಲಾಂಡ್ರಿಗಳ ಸಂಖ್ಯೆಯನ್ನು (41) ಎರಡು ವರ್ಷಗಳಲ್ಲಿ 66ಕ್ಕೆ ಏರಿಸಲು ರೈಲ್ವೆ ನಿರ್ಧರಿಸಿದೆ. ಆಗಲೂ ಶೇ 85ರಷ್ಟು ಪ್ರಯಾಣಿಕರು ಮಾತ್ರ ಪ್ರತಿದಿನ ಸ್ವಚ್ಛಗೊಳಿಸಿದ ಬ್ಲ್ಯಾಂಕೆಟ್‌ಗಳನ್ನು ಪಡೆಯಲು ಸಾಧ್ಯ. ಇಂತಹ ಕೊಳಕು ಹೊದಿಕೆಗಳನ್ನು ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಯಾವುದೇ ಕಾರಣಕ್ಕೂ ಪೂರೈಸಬಾರದು. ಸ್ವಚ್ಛ ಹೊದಿಕೆಗಳನ್ನು ಪೂರೈಸಲಿಕ್ಕಾಗದಿದ್ದರೆ ಅಸಹಾಯಕ ಪ್ರಯಾಣಿಕರಿಗೆ ರೋಗ ರುಜಿನಗಳನ್ನು ದಾಟಿಸುವ ಇಂತಹ ಸೇವೆಯನ್ನೇ ರದ್ದುಪಡಿಸುವುದು ಒಳಿತು. ಪ್ರಯಾಣಿಕರು ಈ ಮೊದಲಿನಂತೆ ತಮ್ಮದೇ ಆದ ಹಾಸಿಗೆ ಹೊದಿಕೆ ತರುವ ಸಲಹೆ ಒಳ್ಳೆಯದು ಎಂದರೂ, ಅದು ಪ್ರಯಾಣಿಕರ ಲಗೇಜ್‌ಗೆ ಹೊಸ ಭಾರ ಸೇರ್ಪಡೆ ಮಾಡಿದಂತಾಗುವುದು. ಜತೆಗೆ ರೈಲ್ವೆಯು ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಅವಕಾಶ ಮಾಡಿಕೊಟ್ಟಂತೆಯೂ ಆಗಲಿದೆ. ಸ್ವಚ್ಛವಲ್ಲದ ಹೊದಿಕೆಗಳನ್ನು ಪೂರೈಸುವ ಪದ್ಧತಿಯನ್ನು ಭಾರತೀಯ ರೈಲ್ವೆ ತಕ್ಷಣದಿಂದಲೇ ನಿಲ್ಲಿಸಲು ಕಾರ್ಯಪ್ರವೃತ್ತ ಆಗಬೇಕಾಗಿದೆ. ಕೊಳಕುತನ, ದುರ್ವಾಸನೆ ಎಲ್ಲ ರೈಲು ಪ್ರಯಾಣಿಕರು ಎದುರಿಸುವ ಸಮಸ್ಯೆಯಾಗಿದೆ. ಬೋಗಿಗಳಲ್ಲಿ ತಿಗಣೆ ಮತ್ತಿತರ ಕ್ರಿಮಿಕೀಟಗಳಲ್ಲದೆ ಇಲಿಗಳ ಕಾಟವೂ ರೈಲ್ವೆ ಪಯಣವನ್ನು ಅಸಹನೀಯಗೊಳಿಸಿರುವ ನಿದರ್ಶನಗಳಿವೆ. ಪ್ರತಿದಿನ ಲಕ್ಷಾಂತರ ಸಂಖ್ಯೆಯ ಪ್ರಯಾಣಿಕರನ್ನು ನಿರ್ವಹಿಸುವ ರೈಲ್ವೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಭಾರಿ ಸವಾಲಿನ ಕೆಲಸ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ವಚ್ಛತೆ ಕಾಯ್ದುಕೊಳ್ಳಲು ಸಂಪನ್ಮೂಲಗಳ ಕೊರತೆ ಏನೂ ಇಲ್ಲ. ಇಚ್ಛಾಶಕ್ತಿಯ ಕೊರತೆ ಇರುವುದು ಮಾತ್ರ ಸುಳ್ಳಲ್ಲ. ರೈಲ್ವೆ ನಿಲ್ದಾಣ ಮತ್ತು ಬೋಗಿಗಳಲ್ಲಿನ ಶೌಚಾಲಯಗಳು ಕೊಳಕುತನ ಮತ್ತು ದುರ್ವಾಸನೆಗೆ ಕುಖ್ಯಾತಿ ಗಳಿಸಿವೆ. ರೈಲುಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ವಿಷಯದಲ್ಲಿ ಭಾರತೀಯ ರೈಲ್ವೆ ಉದ್ದಕ್ಕೂ ಉದಾಸೀನ ಧೋರಣೆ ತಳೆಯುತ್ತಲೇ ಬಂದಿದೆ. ಕೆಲವೇ ಕೆಲ ಮಾರ್ಗಗಳಲ್ಲಿನ ರೈಲುಗಳಲ್ಲಿ ನೈರ್ಮಲ್ಯ ಕಾಪಾಡಿಕೊಂಡಿರುವುದನ್ನು ಹೊರತುಪಡಿಸಿದರೆ, ಎಲ್ಲೆಡೆ ಕೊಳಕುತನವೇ ಕಣ್ಣಿಗೆ ರಾಚುತ್ತದೆ. ರೈಲ್ವೆಯ ಈ ಕೊಳಕುತನ ದೂರ ಮಾಡಲು ಸ್ವಚ್ಛತಾ ಕ್ರಮಗಳ ಉದ್ದೇಶದ ವೆಚ್ಚವನ್ನು ಈ ಸಾಲಿನ ಬಜೆಟ್‌ನಲ್ಲಿ ಶೇ 40ರಷ್ಟು ಹೆಚ್ಚಿಸಿರುವುದು ಸ್ವಾಗತಾರ್ಹ. ಈ ಮೊತ್ತದ ಸದ್ಬಳಕೆಯಾಗಬೇಕಷ್ಟೆ. ಬೋಗಿಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರು– ಆಹಾರ, ಶುಭ್ರಗೊಳಿಸಿದ ಹೊದಿಕೆಗಳನ್ನು ಒದಗಿಸುವುದು ರೈಲ್ವೆಯ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ರೈಲ್ವೆ ಪ್ರಯಾಣವನ್ನು ದುರ್ವಾಸನೆ, ಕಸ ಮುಕ್ತಗೊಳಿಸುವ ವಿಷಯದಲ್ಲಿ ಪ್ರಯಾಣಿಕರ ಪಾಲೂ ಇದೆ. ತಿಂಡಿ – ತಿನಿಸು, ಪಾನೀಯಗಳ ಲೋಟಗಳನ್ನು ಬೋಗಿಗಳಲ್ಲೆ ಬಿಸಾಕುವ ಪ್ರವೃತ್ತಿಗೆ ಪ್ರಯಾಣಿಕರು ಕಡಿವಾಣ ಹಾಕಿದರೆ ಪರಿಸ್ಥಿತಿ ಸುಧಾರಿಸಲಿದೆ. ಸ್ವಚ್ಛತೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಿರುವ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ರೈಲ್ವೆ ನಿಲ್ದಾಣ ಮತ್ತು ಬೋಗಿಗಳಲ್ಲಿ ಜೈವಿಕ ಶೌಚಾಲಯಗಳ ನಿರ್ಮಾಣ, ಕಸ ವಿಂಗಡಣೆ, ಪುನರ್ಬಳಕೆ ಕೇಂದ್ರಗಳ ಸ್ಥಾಪನೆ ಮತ್ತು ದೂರ ಪ್ರಯಾಣದ ರೈಲುಗಳಲ್ಲಿ ಬೋಗಿಗಳ ಸ್ವಚ್ಛತೆ ಕಾಪಾಡಿಕೊಳ್ಳಲು ಗ್ರಾಹಕರು ಎಸ್‌ಎಂಎಸ್‌ ಮತ್ತು ಮೊಬೈಲ್‌ ಆ್ಯಪ್‌ ಮೂಲಕ ಗಮನ ಸೆಳೆಯುವ ಸೇವೆ ಆರಂಭಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಸಚಿವರ ಈ ಎಲ್ಲ ಭರವಸೆಗಳು ರಚನಾತ್ಮಕವಾಗಿ ಕಾರ್ಯರೂಪಕ್ಕೆ ಬಂದರೆ ರೈಲ್ವೆ ಪಯಣ ಹಿತಕರವಾಗುವುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.