ಸಮಾನತೆಯ ಹಾದಿಯತ್ತ ತ್ವರಿತ ಹೆಜ್ಜೆ ಇಡಿ ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಇಂದು (ಮಾರ್ಚ್ 8) ಆಚರಿಸುತ್ತಿದ್ದೇವೆ. ವಿಶ್ವದಾದ್ಯಂತ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆಗಳನ್ನು ಸ್ಮರಿಸುವ ದಿನ ಇದು. ಹೋರಾಟದ ಕಥನಗಳಿಂದ ಹೊಸ ಪ್ರೇರಣೆಗಳನ್ನು ಪಡೆಯುತ್ತಾ ವಿಮೋಚನೆಯನ್ನು ಸಂಭ್ರಮಿಸುವ ದಿನ. 1911ರಲ್ಲಿ ಜರ್ಮನಿ ಮುಂತಾದೆಡೆ ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಿದ ನಂತರದ ಈ 115 ವರ್ಷಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ಮಹಿಳೆಯ ಗೋಚರತೆ ಹೆಚ್ಚಾಗಿದೆ. ವಿಶ್ವದಾದ್ಯಂತ ಮಹಿಳೆಯರ ಬದುಕಿನಲ್ಲಿ ಗಣನೀಯ ಸುಧಾರಣೆಗಳಾಗಿವೆ ಎಂಬುದನ್ನು ಅಲ್ಲಗಳೆಯಲಾಗದು. ಹೀಗಿದ್ದೂ ಮಹಿಳೆ ಎಂಬ ಜೈವಿಕ ಕಾರಣಕ್ಕಾಗಿಯೇ ಮಹಿಳೆ ಅನುಭವಿಸುತ್ತಿರುವ ಪೂರ್ವಗ್ರಹಗಳು ಹಾಗೂ ಹಿಂಸಾಚಾರ ಪ್ರಕರಣಗಳು ಜಗತ್ತಿನಲ್ಲಿ ಹೆಚ್ಚುತ್ತಲೇ ಇವೆ ಎಂಬುದು ವಿಪರ್ಯಾಸ. ಮೂವರು ಮಹಿಳೆಯರಲ್ಲಿ ಒಬ್ಬಳು ಹಿಂಸೆಗೆ ಒಳಗಾಗಿರುತ್ತಾಳೆ ಎಂದು ಅಂಕಿಅಂಶಗಳು ಹೇಳುತ್ತವೆ. ಈ ಹಿಂಸೆಗೆ ಕಾರಣ ಹೆಣ್ಣಿನ ವಿರುದ್ಧದ ತಾರತಮ್ಯದ ದೃಷ್ಟಿ. ಹೀಗಾಗಿಯೇ ಈ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗಾಗಿ ವಿಶ್ವಸಂಸ್ಥೆಯ ಘೋಷವಾಕ್ಯ ‘ಸಮಾನತೆಗಾಗಿ ಪ್ರತಿಜ್ಞೆ’. ಯಾಕಾಗಿ ಈ ಪ್ರತಿಜ್ಞೆ? ಜಗತ್ತಿನ ಹಲವೆಡೆ ಲಿಂಗ ಸಮಾನತೆಯ ಪ್ರಗತಿ ಮಂದಗತಿಯದಾಗಿದೆ ಎಂಬುದನ್ನು ನಾವು ಅರಿಯಬೇಕಾಗಿದೆ. ಹೀಗಾಗಿ ಜಾಗತಿಕವಾಗಿ ಲಿಂಗ ಸಮಾನತೆ ಸಾಧನೆಗೆ 2095ರವರೆಗೂ ಕಾಯಬೇಕಾಗುತ್ತದೆ ಎಂದು ವಿಶ್ವ ಆರ್ಥಿಕ ವೇದಿಕೆ 2014ರಲ್ಲಿ ಭವಿಷ್ಯ ನುಡಿದಿತ್ತು. ಆದರೆ, ಈಗಾಗಲೇ ಮಂದಗತಿಯಲ್ಲಿರುವ ಪ್ರಗತಿಯ ವೇಗ ಇನ್ನಷ್ಟು ಕುಸಿದಿರುವುದರಿಂದ ಲಿಂಗ ಅಸಮಾನತೆ 2133ರವರೆಗೂ ಮುಂದುವರಿಯುತ್ತದೆ ಎಂದು ನಂತರ 2015ರಲ್ಲಿ ಅಂದಾಜು ಮಾಡಲಾಗಿದೆ. ಹೀಗಾಗಿ ಲಿಂಗ ಸಮಾನತೆಯ ಗುರಿ ಸಾಧನೆಯನ್ನು ತ್ವರಿತಗೊಳಿಸಲು ಕರೆ ನೀಡಲಾಗಿದೆ. ಇದಕ್ಕಾಗಿ ಸಮಾನತೆ ಸಾಧನೆಗೆ ಪೂರಕವಾಗುವಂತಹ ನಿರ್ದಿಷ್ಟ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬೇಕಾದುದು ಅಗತ್ಯ. ಮಹತ್ವಾಕಾಂಕ್ಷೆಯ ಕನಸು ಈಡೇರಿಸಿಕೊಳ್ಳಲು ಹೆಣ್ಣುಮಕ್ಕಳಿಗೆ ನೆರವು ನೀಡುವಂತಹ ಯೋಜನೆಗಳು ರೂಪುಗೊಳ್ಳಬೇಕು. ದುಡಿಯುವ ಸ್ಥಳಗಳಲ್ಲಿ ಲಿಂಗತ್ವ ಪೂರ್ವಗ್ರಹಗಳು ಅಂತ್ಯವಾಗಬೇಕು. ಉನ್ನತ ನಾಯಕತ್ವದಲ್ಲಿ ಲಿಂಗ ಸಮತೋಲನ ಇರಬೇಕು. ಒಟ್ಟಾರೆ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಬೇಕಾದುದು ಮುಖ್ಯ. ಮಹಿಳೆಯ ಏಳಿಗೆ ಎಂದರೆ ಸಮಾಜದ ಎಲ್ಲರ ಏಳಿಗೆ ಎಂಬುದನ್ನು ನಾವು ಅರಿಯಬೇಕು. ಆದರೆ ಭಾರತದಲ್ಲಿ ಹೆಣ್ಣು ಗರ್ಭದಲ್ಲಿರುವಾಗಲೇ ತಾರತಮ್ಯ ಆರಂಭವಾಗುತ್ತದೆ. 2011ರ ಜನಗಣತಿಯ ಪ್ರಕಾರ, 0-6 ವಯೋಮಾನದ 1,000 ಗಂಡುಮಕ್ಕಳಿಗೆ ಹೆಣ್ಣುಮಕ್ಕಳ ಸಂಖ್ಯೆ 918ಕ್ಕೆ ಕುಸಿದಿದೆ. 2001ರಲ್ಲಿದ್ದ ಹೆಣ್ಣುಮಕ್ಕಳ ಸಂಖ್ಯೆ 927. ಗರ್ಭಪೂರ್ವ ಹಾಗೂ ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯಿದೆ ಕಳೆದ 22 ವರ್ಷಗಳಿಂದ ಜಾರಿಯಲ್ಲಿದ್ದರೂ ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖವಾಗುತ್ತಲೇ ಸಾಗಿರುವುದು ಆತಂಕಕಾರಿ. ಹಾಗೆಯೇ ಬಾಲ್ಯವಿವಾಹ, ದೇವದಾಸಿ ಪದ್ಧತಿ, ಹೆಣ್ಣುಮಕ್ಕಳ ಅಕ್ರಮ ಸಾಗಣೆ, ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ವರದಕ್ಷಿಣೆ ಇತ್ಯಾದಿ ಸಮಸ್ಯೆಗಳು ಪರಿಹಾರವಾಗಿಲ್ಲ. ಈ ಪಿಡುಗುಗಳ ವಿರುದ್ಧ ಕಾನೂನುಗಳಿವೆ. ಶಾಸನಾತ್ಮಕ ಹಕ್ಕುಗಳಲ್ಲಿ ಮಹಿಳೆಗೆ ಹೆಚ್ಚಿನ ಸಮಾನತೆಯೂ ಇದೆ. ಹೀಗಿದ್ದೂ ಆರೋಗ್ಯ ಪಾಲನೆ ಹಾಗೂ ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳಲ್ಲೂ ತಾರತಮ್ಯದ ಸಂಸ್ಕೃತಿ ಹಾಸುಹೊಕ್ಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಅಸುರಕ್ಷತೆಯ ಭೀತಿ ಹೆಚ್ಚಾಗುತ್ತಿರುವುದು ಆತಂಕಕಾರಿ. ಸುರಕ್ಷತೆಯ ತಾಣಗಳಾಗಬೇಕಿದ್ದ ಮನೆ, ಶಾಲೆಗಳಲ್ಲೂ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಹೀಗಾಗಿ ಪ್ರಗತಿಯ ದಿಕ್ಕು ‘ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ’ ಎಂಬಂತಾಗಿರುವುದು ಶೋಚನೀಯ. ಸಮಾನತೆ ಸಾಧನೆಯ ಹಾದಿ ಇನ್ನೂ ದೂರ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಇಂತಹ ಕಥನಗಳ ನಡುವೆಯೂ ಈ ವರ್ಷ ನವದೆಹಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ಪೂರ್ಣ ಮಹಿಳಾ ಸಿಬ್ಬಂದಿ ಒಳಗೊಂಡ 17 ಗಂಟೆ ಕಾಲದ ದೀರ್ಘಾವಧಿ ಪಯಣದ ವಿಮಾನ ಸಂಚಾರವನ್ನು ಏರ್ ಇಂಡಿಯಾ ಕೈಗೊಂಡಿದ್ದು ಹೊಸ ಭರವಸೆಯ ಕಿರಣ. ಹಾಗೆಯೇ ಭಾರತದ ಸಶಸ್ತ್ರ ಪಡೆಗಳಲ್ಲಿ ರಣರಂಗದ ಕಾದಾಡುವ ಘಟಕಗಳಿಗೂ (ಕಾಂಬ್ಯಾಟ್) ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ವಿಚಾರವನ್ನು ಇತ್ತೀಚೆಗೆ ಪ್ರಕಟಿಸಲಾಗಿರುವುದು ನಾರಿಶಕ್ತಿಯ ಅನಾವರಣಕ್ಕೆ ಮತ್ತೊಂದು ಮೆಟ್ಟಿಲು. ಈ ಎಲ್ಲಾ ವೈರುಧ್ಯಗಳ ಕಥನಗಳ ನಡುವೆ ಈ ಬಾರಿಯ ಅಂತರರಾಷ್ಟ್ರೀಯ ಮಹಿಳಾ ದಿನದಂದು ಸಮಾನತೆಯ ಸಾಧನೆಗೆ ಪಣ ತೊಡೋಣ. ಸುಸ್ಥಿರ ಅಭಿವೃದ್ಧಿ ಸಾಧನೆ ಆಗಬೇಕಾದರೆ ಲಿಂಗ ಸಮಾನತೆ ಸಾಧ್ಯವಾಗಬೇಕು ಎಂಬುದನ್ನು ಮರೆಯದಿರೋಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.