ಕಡಿವಾಣ ಬೇಕಿರುವುದು ಸರ್ಕಾರದ ಧೋರಣೆಗೆ ಸರ್ಕಾರಕ್ಕೆ, ಅದರ ಅಧೀನದ ಸಾರಿಗೆ ಇಲಾಖೆಗೆ ಮಾಡಲು ಬೇರೆ ಕೆಲಸ ಬೇಕಾದಷ್ಟಿದೆ. ಆದರೆ ಅದನ್ನು ಬಿಟ್ಟು, ನಗರ ಪ್ರದೇಶಗಳ ನಾಗರಿಕರಿಗೆ ತುಂಬ ಉಪಯುಕ್ತವಾದ ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಕಡಿವಾಣ ಹಾಕಲು ಹೊರಟಿವೆ. ಕುಂಟು ನೆಪ ಹೇಳಿ ಜನಸ್ನೇಹಿ ಸೇವೆಯೊಂದರ ಕತ್ತು ಹಿಸುಕಲು ಮುಂದಾಗಿವೆ. ಇದು, ಎಲ್ಲವೂ ತನ್ನ ನಿಯಂತ್ರಣದಲ್ಲಿಯೇ ಇರಬೇಕು ಎನ್ನುವ ಓಬೀರಾಯನ ಕಾಲದ ಮನಸ್ಥಿತಿಯಿಂದ ನಮ್ಮ ಸರ್ಕಾರಿ ವ್ಯವಸ್ಥೆ ಹೊರಬಂದಿಲ್ಲ ಎನ್ನುವುದರ ಸಂಕೇತ. ಆಧುನಿಕ ಬದುಕಿನ ಅಗತ್ಯ ಮತ್ತು ಬೇಡಿಕೆಗಳನ್ನು ಕಡೆಗಣಿಸುವ ಪ್ರತಿಗಾಮಿ ನಡವಳಿಕೆ. ಏಕೆಂದರೆ ಆ್ಯಪ್‌ ಟ್ಯಾಕ್ಸಿ ಸೇವೆ ಬಂದ ಮೇಲೆ ನಗರದ ವ್ಯಾಪ್ತಿಯಲ್ಲಿ ಸಂಚರಿಸುವವರಿಗೆ ತುಂಬ ಅನುಕೂಲವಾಗಿದೆ. ಕರೆದಲ್ಲಿ ಬರದೆ ಸಾಮಾನ್ಯ ಜನರನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ಆಟೊಗಳನ್ನೂ ಆ್ಯಪ್‌ ಮೂಲಕ ಬುಕ್‌ ಮಾಡಬಹುದು. ಬೆಂಗಳೂರಲ್ಲಿ ಈಗ ಬೈಕ್ ಸೇವೆ ಕೂಡ ಆರಂಭವಾಗಿದೆ. ಇವುಗಳಿಂದ ನಗರ ಸಾರಿಗೆಯ ಚಹರೆಯೇ ಬದಲಾಗುತ್ತಿದೆ. ಸಮೂಹ ಸಾರಿಗೆ ಮೇಲೆ ನಮ್ಮ ನಗರಗಳ ಭವಿಷ್ಯ ಅವಲಂಬಿಸಿದೆ. ಅದಕ್ಕೆ ಬೆಂಬಲ ಎನ್ನುವಂತೆ ಮೇಲ್ವರ್ಗ ಮಾತ್ರವಲ್ಲ ಮಧ್ಯಮ ವರ್ಗದವರು, ಶ್ರೀಸಾಮಾನ್ಯರು ಕೂಡ ಬಗೆಬಗೆಯ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಹಿಂಜರಿಕೆ ಇಲ್ಲದೆ ಬಳಸುವಂತಾಗಿದೆ. ಜಿಪಿಎಸ್‌ ಈ ಎಲ್ಲ ಆ್ಯಪ್‌ ಆಧಾರಿತ ಟ್ಯಾಕ್ಸಿ, ಆಟೊ ಅಥವಾ ಬೈಕ್‌ಗಳ ಜೀವಾಳ. ಅದಿಲ್ಲದೆ ಇವುಗಳ ಸೇವೆಯೇ ನಡೆಯುವುದಿಲ್ಲ. ಜಿಪಿಎಸ್ ಇರುವ ಕಾರಣ ಮಹಿಳೆಯರು ಅವೇಳೆಯಲ್ಲಿ ಕೂಡ ಸುರಕ್ಷಿತವಾಗಿ ಪ್ರಯಾಣಿಸಬಹುದು. ಇವು ಎಲ್ಲಿ, ಯಾವ ಮಾರ್ಗದಲ್ಲಿ ಸಾಗುತ್ತಿವೆ ಎಂಬುದನ್ನು ಪ್ರಯಾಣಿಕರ ಹಿತೈಷಿಗಳು ತಮ್ಮ ಮೊಬೈಲ್‌ನಲ್ಲಿಯೇ ತಿಳಿಯಬಹುದು. ಹೋಗಬೇಕಾದ ಸ್ಥಳಕ್ಕೆ ಎಷ್ಟು ದೂರ, ಬಾಡಿಗೆ ಎಷ್ಟಾಗಬಹುದು ಎಂಬುದನ್ನು ಅರಿಯಬಹುದು. ನಗದು ಬದಲು ಮೊಬೈಲ್‌, ಇ ಕಾಮರ್ಸ್‌ ಮೂಲಕವೇ ಬಾಡಿಗೆ ಪಾವತಿಸಬಹುದು. ಇದರಲ್ಲಿ ಯಾವ ಮುಚ್ಚುಮರೆ ಇಲ್ಲ. ಎಲ್ಲವೂ ಪಾರದರ್ಶಕ. ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಇಂಥ ಟ್ಯಾಕ್ಸಿ ಸಂಸ್ಥೆಗಳು ಹೆಚ್ಚಿನ ದರ (ಪೀಕ್ ಅವರ್ ಚಾರ್ಜ್) ವಸೂಲು ಮಾಡುತ್ತವೆ ಎಂಬ ದೂರು ಇದೆ. ಆದರೆ ಟ್ಯಾಕ್ಸಿ ಬುಕ್ ಮಾಡುವಾಗಲೇ ಆ ಬಗ್ಗೆ ಸಂದೇಶ ಬಂದಿರುತ್ತದೆ. ಬಳಸಬೇಕೋ ಬೇಡವೋ ಎಂದು ತೀರ್ಮಾನಿಸುವ ಹಕ್ಕು ಬಳಕೆದಾರರಿಗೆ ಇದೆ. ಅಲ್ಲದೆ ಸರ್ಕಾರಿ ಒಡೆತನದ ಸಾರಿಗೆ ಸಂಸ್ಥೆಗಳೇ ವಾರಾಂತ್ಯಕ್ಕೆ ದುಬಾರಿ ದರ, ಉಳಿದ ದಿನ ಒಂದು ದರ ನಿಗದಿಪಡಿಸುವಾಗ ಈ ಟ್ಯಾಕ್ಸಿಗಳನ್ನು ಮಾತ್ರ ಅಪರಾಧಿ ಎಂದು ಕಾಣುವುದು ಏಕೆ? ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ನಿಯಂತ್ರಿಸಲು ಸಾರಿಗೆ ಇಲಾಖೆ ಕೊಡುತ್ತಿರುವ ಕಾರಣಗಳಂತೂ ಹಾಸ್ಯಾಸ್ಪದ. ‘ಯಾವುದೇ ನಿಯಮ ಪಾಲನೆಗೆ ಒಲ್ಲದ ಈ ಕಂಪೆನಿಗಳು ಲಾಭದ ಮೇಲಷ್ಟೇ ಕಣ್ಣಿಟ್ಟಿವೆ. ಮನ ಬಂದಂತೆ ಸಂಚರಿಸುತ್ತಿವೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆ ಜತೆಗೆ ಕಾನೂನುಗಳ ವ್ಯಾಪ್ತಿಯ ಒಳಗೆ ಅವನ್ನು ತರುವ ಅಗತ್ಯವಿದೆ’ ಎಂಬುದು ಅಧಿಕಾರಿಗಳ ವಾದ. ಇದು ಎಷ್ಟು ಪೊಳ್ಳು ಎನ್ನುವುದು ಮೇಲ್ನೋಟಕ್ಕೇ ಅರ್ಥವಾಗುತ್ತದೆ. ದೆಹಲಿಯಲ್ಲಿ ಕಳೆದ ವರ್ಷ ಉಬರ್ ಚಾಲಕನಿಂದ ಅತ್ಯಾಚಾರ ನಡೆದಿತ್ತು; ಅದಕ್ಕಾಗಿ ಕೇಂದ್ರದ ಸೂಚನೆಯಂತೆ ನಿಯಮ ರೂಪಿಸಲಾಗಿದೆ ಎಂದು ಸರ್ಕಾರ ಸಮಜಾಯಿಷಿ ಕೊಡುತ್ತಿದೆ. ಅಂಥ ನಿರ್ದಿಷ್ಟ ಪ್ರಕರಣಗಳಿದ್ದರೆ ಸೂಕ್ತ ಕ್ರಮ ಜರುಗಿಸಲು ಈಗಿರುವ ಕಾನೂನಿನಲ್ಲೇ ಸಾಕಷ್ಟು ಅವಕಾಶಗಳಿವೆ. ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿಲ್ಲ. ಆದರೆ ಅಸಂಘಟಿತ ಕ್ಷೇತ್ರದ ಟ್ಯಾಕ್ಸಿ, ಟೆಂಪೊ, ಬಸ್‌ಗಳಿಗಿಂತ ಆ್ಯಪ್‌ ಆಧಾರಿತ ಸೇವೆಗಳಲ್ಲಿ ಸುರಕ್ಷತೆಯ ಅಂಶ ಹೆಚ್ಚೇ ಇದೆ. ಅದನ್ನು ಒಪ್ಪಲು ಸರ್ಕಾರ ತಯಾರಿಲ್ಲ. ಆಗಾಗ ಇಂಥ ಟ್ಯಾಕ್ಸಿ ಸೇವೆಗಳಿಗೆ ಬೆದರಿಕೆ ಹಾಕುವುದು ನೋಡಿದರೆ ಇದರ ಹಿಂದೆ ಬೇರೆಯೇ ಏನೋ ಉದ್ದೇಶವಿದೆ ಎಂಬ ಅನುಮಾನ ಬರುವುದು ಸಹಜ. ಇಂಟರ್‌ನೆಟ್‌, ಮೊಬೈಲ್, ತಂತ್ರಜ್ಞಾನ ಆಧಾರಿತ ಸೇವೆಗಳು ವಿಶ್ವದೆಲ್ಲೆಡೆ ಜನಪ್ರಿಯವಾಗುತ್ತಿವೆ. ಭವಿಷ್ಯದ ಸಾರಿಗೆಯಾಗಿ ಅನಿವಾರ್ಯವೂ ಆಗಿದೆ. ಇದರಿಂದ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗುತ್ತದೆ, ಪಾರ್ಕಿಂಗ್ ಸ್ಥಳಗಳಲ್ಲಿ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಅನೇಕ ಮಂದಿಗೆ ಪೂರ್ಣಾವಧಿ ಹಾಗೂ ಅರೆಕಾಲಿಕ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಹೀಗಿರುವಾಗ ಇದಕ್ಕೆ ಉತ್ತೇಜನ ಕೊಡುವ ಬದಲು ಅಡ್ಡಗಾಲು ಹಾಕುವುದು ಜನ ವಿರೋಧಿ, ತಂತ್ರಜ್ಞಾನ ವಿರೋಧಿ, ಪ್ರಗತಿ ವಿರೋಧಿ. ಒಂದು ಕಡೆ ಕೈಗಾರಿಕೆಗಳನ್ನು, ನವೋದ್ಯಮಗಳನ್ನು ಆಹ್ವಾನಿಸುತ್ತ ಇನ್ನೊಂದು ಕಡೆ ಅಂಥ ಪ್ರಯತ್ನಗಳ ಕತ್ತು ಹಿಸುಕುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ನಿಯಂತ್ರಣದ ಹೆಸರಲ್ಲಿ ತೊಂದರೆ ಕೊಡುವುದನ್ನು ಯಾರೂ ಒಪ್ಪುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡಷ್ಟು ಸರ್ಕಾರಕ್ಕೇ ಕ್ಷೇಮ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.