ಕಠಿಣ ಶಿಕ್ಷೆ ನೀಡಿ ಮಾದರಿ ಸೃಷ್ಟಿಸಿ ಸರ್ಕಾರಿ ಪದವಿ ಕಾಲೇಜುಗಳ 2,160 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ. ಆದರೆ ಪ್ರಶ್ನೆಗಳ ಆಯ್ಕೆ ಮತ್ತು ಭಾಷಾಂತರದಲ್ಲಿ ಎಡವಟ್ಟಾಗಿದೆ ಎಂಬ ದೂರು ಕೇಳಿಬಂದಿದ್ದು ಇದಕ್ಕೆ ಪರೀಕ್ಷಾ ಪ್ರಾಧಿಕಾರ ಉದ್ಧಟತನದ ಮತ್ತು ಅಸಂಬದ್ಧ ಉತ್ತರವನ್ನು ನೀಡಿದೆ. ಇತಿಹಾಸ ಮತ್ತು ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಗಳಲ್ಲಿ ಬಹುತೇಕ ಪ್ರಶ್ನೆಗಳನ್ನು ವಿವಿಧ ವೆಬ್‌ಸೈಟ್‌ಗಳಿಂದ ಅನಾಮತ್ತಾಗಿ ಎತ್ತಲಾಗಿದೆ. ಯಾವ ಯಾವ ವೆಬ್‌ಸೈಟ್‌ಗಳಿಂದ ಪ್ರಶ್ನೆಗಳನ್ನು ಎತ್ತಲಾಗಿದೆ ಎಂಬುದನ್ನೂ ಅಭ್ಯರ್ಥಿಗಳು ಬಹಿರಂಗ ಮಾಡಿದ್ದಾರೆ. ಆದರೆ ಈ ಬಗ್ಗೆ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿ ‘ಬೇರೆ ಬೇರೆ ವಿಶ್ವವಿದ್ಯಾಲಯಗಳು ಪ್ರಶ್ನೆಗಳ ಬ್ಯಾಂಕ್‌ ಪ್ರಕಟಿಸಿವೆ. ಅವು ಇಂಟರ್‌ನೆಟ್‌ನಲ್ಲಿ ಲಭ್ಯ ಇವೆ. ಅಲ್ಲಿಂದ ಪ್ರಶ್ನೆಗಳನ್ನು ತೆಗೆದುಕೊಳ್ಳಬಾರದು ಎಂಬ ಕಾನೂನು ಇಲ್ಲ’ ಎಂದು ಹೇಳಿದೆ. ಇದು ಅತ್ಯಂತ ಬೇಜವಾಬ್ದಾರಿಯ ಉತ್ತರ. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವುದನ್ನು ಪರೀಕ್ಷಾ ಪ್ರಾಧಿಕಾರ ಇಷ್ಟೊಂದು ಲಘುವಾಗಿ ಪರಿಗಣಿಸಬಾರದು. ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವುದಕ್ಕೂ ನಮ್ಮಲ್ಲಿ ದಾರಿದ್ರ್ಯ ಬಂದಿದೆ ಎಂದರೆ ಅದು ನಾಚಿಕೆಗೇಡಿನ ವಿಷಯ. ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾದ ಅಧ್ಯಾಪಕರನ್ನು ಆಯ್ಕೆ ಮಾಡಲು ಸಂತೆಗೆ ಮೂರು ಮೊಳ ನೇಯ್ದಂತೆ ಬೇಕಾಬಿಟ್ಟಿಯಾಗಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರುವುದು ಬೇಜವಾಬ್ದಾರಿಯ ಪರಮಾವಧಿ. ಇದಕ್ಕಿಂತ ಮುಖ್ಯವಾಗಿ ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ನಂತರ ಅದನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಭಾಷಾಂತರ ಅತ್ಯಂತ ಕೆಟ್ಟದಾಗಿದೆ. ಪರೀಕ್ಷಾ ಪ್ರಾಧಿಕಾರ ಒಟ್ಟಿಗೇ ಎರಡು ತಪ್ಪುಗಳನ್ನು ಮಾಡಿದೆ ಹಾಗೂ ಆ ತಪ್ಪನ್ನು ಸಮರ್ಥಿಸಿಕೊಳ್ಳುವುದರ ಮೂಲಕ ಇನ್ನೊಂದು ತಪ್ಪನ್ನು ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಹೇಳುತ್ತಿದ್ದರೂ ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲಿ ಸಿದ್ಧಪಡಿಸದೇ ಇರುವುದು ಮೊದಲ ತಪ್ಪು. ನಂತರ ಅದನ್ನು ಭಾಷಾಂತರಿಸುವಾಗ ಬೇಕಾಬಿಟ್ಟಿಯಾಗಿ ಭಾಷಾಂತರಿಸಿದ್ದು ಇನ್ನೊಂದು ತಪ್ಪು. ‘ಪ್ರಶ್ನೆಗಳನ್ನು ಭಾಷಾಂತರಿಸುವಾಗ ತಪ್ಪುಗಳಾಗಿರಬಹುದು. ಅಭ್ಯರ್ಥಿಗಳು ಇಂಗ್ಲಿಷ್‌ ಪ್ರಶ್ನೆಗಳನ್ನೇ ಪರಿಗಣಿಸಬೇಕು’ ಎಂದು ಪ್ರಶ್ನೆ ಪತ್ರಿಕೆಗಳಲ್ಲಿಯೇ ಹೇಳಿರುವುದು ಹಾಸ್ಯಾಸ್ಪದವಷ್ಟೇ ಅಲ್ಲ ಕನ್ನಡ ನಾಡಿನ ಜನರಿಗೆ ಮಾಡಿದ ಘೋರ ಅವಮಾನ. ಇತಿಹಾಸ ಮತ್ತು ಸಾಮಾನ್ಯ ಜ್ಞಾನದ ಪ್ರಶ್ನೆ ಪತ್ರಿಕೆಗಳನ್ನೂ ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ಅವುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬೌದ್ಧಿಕ ಬಡತನ ಎಂದೇ ಬಣ್ಣಿಸಬಹುದು. ಪದವಿ ಕಾಲೇಜುಗಳ ಅಧ್ಯಾಪಕರ ಸ್ಪರ್ಧಾತ್ಮಕ ಪರೀಕ್ಷೆಗೆ ವಿದೇಶಿಗರೋ ಅಥವಾ ಹೊರ ನಾಡಿನವರೋ ಹಾಜರಾಗುವುದಿಲ್ಲ. ಇದನ್ನು ಪರೀಕ್ಷಾ ಪ್ರಾಧಿಕಾರ ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ಕಾಲೇಜು ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿತ್ತು. ಅಲ್ಲಿ ಅಕ್ರಮ, ಅವಾಂತರಗಳು ನಡೆದವು ಎಂದು ಈ ಬಾರಿ ನೇಮಕಾತಿ ಪ್ರಕ್ರಿಯೆ ಜವಾಬ್ದಾರಿಯನ್ನು ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಆದರೆ ಪರೀಕ್ಷಾ ಪ್ರಾಧಿಕಾರವೂ ಲೋಕಸೇವಾ ಆಯೋಗದ ಚಾಳಿಯನ್ನೇ ಮುಂದುವರಿಸಿದೆ. ಇದರಿಂದ ಅಧ್ಯಾಪಕರಾಗುವ ಕನಸು ಹೊತ್ತ ಅಭ್ಯರ್ಥಿಗಳಿಗೆ ಭ್ರಮನಿರಸನವಾಗಿದೆ. ವೆಬ್‌ಸೈಟ್‌ಗಳಿಂದ ಪ್ರಶ್ನೆಗಳನ್ನು ಎತ್ತಿದ್ದರಿಂದ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗೂ ಎದ್ದಿದೆ. ನಕಲಿ ಪಿಎಚ್‌.ಡಿ.ಗಳನ್ನೂ ಪರಿಗಣಿಸಲಾಗಿದೆ ಎಂಬ ದೂರೂ ಇದೆ. ಈ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಕರ್ನಾಟಕದಲ್ಲಿ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕನ್ನಡದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು. ನಂತರ ಅಗತ್ಯವಾದರೆ ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಬಹುದು. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ಅಸಂಬದ್ಧ ಕಾರಣ ನೀಡುವುದನ್ನು ಪರೀಕ್ಷಾ ಪ್ರಾಧಿಕಾರ ನಿಲ್ಲಿಸಬೇಕು. ಪ್ರಶ್ನೆಗಳ ಆಯ್ಕೆ ಮತ್ತು ಭಾಷಾಂತರ ಮಾಡುವಲ್ಲಿ ಎಡವಿದ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಆ ಮೂಲಕ ಪರೀಕ್ಷಾ ಪ್ರಾಧಿಕಾರ ಮಾದರಿಯಾಗಬೇಕು. ಉನ್ನತ ಶಿಕ್ಷಣ ಖಾತೆ ಸಚಿವರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.