ಆರ್ಥಿಕ ಪ್ರಗತಿ ಪಥದ ಕಠಿಣ ಸವಾಲು ದೇಶದ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಭರವಸೆದಾಯಕ ಹುಮ್ಮಸ್ಸಿನ ಚಿತ್ರಣ ನೀಡಿರುವ ಆರ್ಥಿಕ ಸಮೀಕ್ಷೆಯು ಮುಂದಿನ (2016–17) ವರ್ಷ ಎದುರಾಗಲಿರುವ ಕೆಲ ಸವಾಲುಗಳನ್ನೂ ಪಟ್ಟಿ ಮಾಡಿದೆ. ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಸಿದ್ಧಪಡಿಸುವಂತಹ ಈ ಸಮೀಕ್ಷೆಯಲ್ಲಿ ಭರವಸೆದಾಯಕವಾದ ಚಿತ್ರಣವನ್ನು ಕಟ್ಟಿಕೊಡುವಂತಹ ಪ್ರವೃತ್ತಿ ಮಾಮೂಲು. ಆದರೆ ಈ ಬಾರಿ ದೇಶಿ ಅರ್ಥ ವ್ಯವಸ್ಥೆ ಎದುರಿಸುತ್ತಿರುವ ಕ್ಲಿಷ್ಟ ಸಮಸ್ಯೆಗಳನ್ನು ಸಮರ್ಪಕವಾಗಿ ಗುರುತಿಸಿ, ಅಗತ್ಯ ಪರಿಹಾರೋಪಾಯಗಳನ್ನು ಈ ಸಮೀಕ್ಷೆ ತಿಳಿಸಿದೆ ಎಂಬುದು ಮುಖ್ಯ. ವಿಶ್ವದಾದ್ಯಂತ ಮಂಕು ಕವಿದ ಆರ್ಥಿಕ ಪರಿಸ್ಥಿತಿ ಇರುವಾಗ, ಆರೋಗ್ಯಕರ ವೃದ್ಧಿ ದರದ ಮೂಲಕ ಭಾರತದ ಆರ್ಥಿಕತೆಯು ಬಹುತೇಕ ಸುರಕ್ಷಿತವಾಗಿರುವುದನ್ನು ಈ ಸಮೀಕ್ಷೆಯು ದೃಢಪಡಿಸಿದೆ. ಮುಂಗಾರು ಮಳೆ, ತೈಲ ಬೆಲೆ ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಸಾಮಾನ್ಯವಾಗಿ ರಾಷ್ಟ್ರದ ಆರ್ಥಿಕ ಭವಿಷ್ಯಕ್ಕೆ ಮೂಲ ನೆಲೆ. ತೈಲ ಬೆಲೆ ಇಳಿಕೆಯು ಹಲವು ವಲಯಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸರ್ಕಾರಕ್ಕೆ ಈಗಾಗಲೇ ನೆರವಾಗಿದೆ. ಆದರೆ ಸರ್ಕಾರಿ ಕ್ಷೇತ್ರದ ಬ್ಯಾಂಕಿಂಗ್ ಹಾಗೂ ಕಾರ್ಪೊರೇಟ್ ವಲಯದಲ್ಲಿ ಕುಸಿಯುತ್ತಿರುವ ಹಣಕಾಸು ಸ್ಥಿತಿಗತಿಯನ್ನೂ ಈ ಸಮೀಕ್ಷೆ ಗುರುತಿಸಿದೆ. ಹಾಗೆಯೇ ಮಳೆಯಾಶ್ರಿತ ಕೃಷಿ ಕ್ಷೇತ್ರದ ಬಿಕ್ಕಟ್ಟನ್ನೂ ಬಿಚ್ಚಿಡಲಾಗಿದೆ. ಈ ಸಮೀಕ್ಷೆ ಕೇಂದ್ರ ಬಜೆಟ್‌ಗೆ ದಿಕ್ಸೂಚಿಯಾಗಬಹುದಾದಲ್ಲಿ, ಕೃಷಿ ಬಿಕ್ಕಟ್ಟನ್ನು ತಗ್ಗಿಸುವಂತಹ ಹಣಕಾಸು ಕ್ರಮಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ಪ್ರಕಟಿಸುವರೆ ಎಂಬುದನ್ನು ನೋಡಬೇಕಿದೆ. ಕೃಷಿ ವಲಯದ ಪರಿವರ್ತನೆಯ ಅಗತ್ಯತೆಯನ್ನು ಸಮೀಕ್ಷೆ ಎತ್ತಿ ಹಿಡಿದಿದೆ. ರೈತರಿಗೆ ಸುಸ್ಥಿರವಾದ ಜೀವನೋಪಾಯ ಹಾಗೂ ರಾಷ್ಟ್ರದ ಆಹಾರ ಭದ್ರತೆಗೂ ಇದು ಅಗತ್ಯ ಎಂಬುದನ್ನು ಅಲ್ಲಗಳೆಯಲಾಗದು. ರಾಷ್ಟ್ರದಲ್ಲಿ ಶೇಕಡ 33.9ರಷ್ಟು ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದೆ. ಈ ಪರಿಸ್ಥಿತಿ ಬದಲಾಯಿಸಲು ಕೃಷಿ ಮೂಲಸೌಕರ್ಯಗಳ ವೃದ್ಧಿಗೆ ಹೆಚ್ಚಿನ ಸಂಪನ್ಮೂಲ ವ್ಯಯಿಸುವುದು ಅತ್ಯಗತ್ಯ. ಕೃಷಿ ಕ್ಷೇತ್ರದ ಅಸ್ಥಿರತೆಗೆ ಕಡಿವಾಣ ಹಾಕಬೇಕಾದ ಮಹತ್ವದ ಬಗ್ಗೆ ಈ ಸಮೀಕ್ಷೆ ಗಮನಸೆಳೆದಿದೆ ಎಂಬುದು ಮುಖ್ಯ ಸಂಗತಿ. ಉಳ್ಳವರ ಪಾಲಾಗುತ್ತಿರುವ ಸಬ್ಸಿಡಿ ಕಡಿತ ಮಾಡುವ, ಆದಾಯ ತೆರಿಗೆ ವ್ಯಾಪ್ತಿ ಹಿಗ್ಗಿಸುವ, ತೆರಿಗೆ ವಿನಾಯಿತಿ ಮಿತಿಗೆ ಕಡಿವಾಣ ಹಾಕುವ ಮತ್ತು ಆಸ್ತಿ ತೆರಿಗೆ ಹೆಚ್ಚಿಸಲು ನೀಡಿರುವಂತಹ ಸಲಹೆಗಳೂ ಮುಖ್ಯವಾದವು. ಹಾಗೆಯೇ, ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಸಂಖ್ಯೆಯನ್ನು ವರ್ಷವೊಂದಕ್ಕೆ 12 ರಿಂದ 10ಕ್ಕೆ ಇಳಿಸುವುದೂ ಸೇರಿದಂತೆ, ಉಳಿತಾಯ ಯೋಜನೆಗಳ ಬಡ್ಡಿ ಲಾಭಕ್ಕೆ ಕಡಿವಾಣ ಮತ್ತು ಆದಾಯ ತೆರಿಗೆ ಸುಧಾರಣಾ ಕ್ರಮಗಳಿಗೂ ಸಲಹೆ ನೀಡಲಾಗಿದೆ. ಒಟ್ಟು ಆಂತರಿಕ ಉತ್ಪನ್ನಕ್ಕೆ ತೆರಿಗೆ ಕೊಡುಗೆ ತುಂಬ ಕಡಿಮೆ ಇರುವುದರಿಂದ ತೆರಿಗೆ ವ್ಯಾಪ್ತಿ ಹಿಗ್ಗಿಸುವುದು ಸರಿಯಾದ ಕ್ರಮ ಎಂಬಂತಹ ಕಾರಣಗಳನ್ನು ನೀಡಲಾಗಿದೆ. ಅಗ್ಗದ ಕಚ್ಚಾ ತೈಲ ಬೆಲೆಯಿಂದಾಗಿ ಇಂಧನ ಸಬ್ಸಿಡಿ ಹೊರೆ ಗಣನೀಯವಾಗಿ ಕಡಿಮೆಯಾಗಿ, ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಲಿದ್ದರೂ, ಜಾಗತಿಕ ಬೇಡಿಕೆ ಕುಸಿದಿರುವುದು, ಚೀನಾ ಆರ್ಥಿಕತೆಯ ಅನಿಶ್ಚಿತತೆಯ ಕಾರಣಕ್ಕೆ ರಫ್ತು ಕುಸಿತ, ವಿದೇಶಿ ಬಂಡವಾಳ ಹರಿವಿನಲ್ಲಿನ ಇಳಿಕೆಯಿಂದಾಗಿ ಉದ್ಯೋಗ ಸೃಷ್ಟಿ ಪ್ರಮಾಣ ಕಡಿಮೆಯಾಗಿರುವುದು ಕಳವಳಕಾರಿ ವಿದ್ಯಮಾನವಾಗಿದೆ. ಖಾಸಗಿ ಬಂಡವಾಳದ ಹೂಡಿಕೆ ಪ್ರಮಾಣ ಕುಸಿದಿರುವುದು ಆರ್ಥಿಕತೆಯ ಪ್ರಗತಿಗೆ ಅಡ್ಡಿಯಾಗಿರಲಿದೆ ಎಂಬುದನ್ನೂ ಸಮೀಕ್ಷೆ ಪಟ್ಟಿ ಮಾಡಿದೆ. ವಿತ್ತೀಯ ಶಿಸ್ತು ಕಾಯ್ದುಕೊಳ್ಳುವುದರ ಜತೆಗೆ, ಗ್ರಾಮೀಣ ಬೇಡಿಕೆ ಹೆಚ್ಚಿಸಿ, ಬ್ಯಾಂಕ್‌ಗಳ ಮೇಲಿನ ಒತ್ತಡ ತಗ್ಗಿಸಿ, ಸರ್ಕಾರಿ ವೆಚ್ಚ ಹೆಚ್ಚಿಸುವುದರ ಮೂಲಕ ಆರ್ಥಿಕ ಬೆಳವಣಿಗೆ ತ್ವರಿತಗೊಳಿಸುವ ಕಠಿಣ ಸವಾಲು ಈಗ ಸರ್ಕಾರದ ಮುಂದಿದೆ. ಖಾಸಗಿ ಉಪಭೋಗ ಮತ್ತು ಸರ್ಕಾರಿ ಬಂಡವಾಳ ಹೂಡಿಕೆಯು ಬೆಳವಣಿಗೆಗೆ ನೆರವಾಗಲಿರುವುದರಿಂದ ಸರ್ಕಾರದ ವೆಚ್ಚ ಹೆಚ್ಚಲಿದೆ. ವಾಡಿಕೆಯ ಮುಂಗಾರು ಮತ್ತು ಕೇಂದ್ರ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿಯ ಜಾರಿಯಿಂದಾಗಿ ಬೇಡಿಕೆ ಹೆಚ್ಚಳಗೊಂಡು ಬೆಳವಣಿಗೆಗೆ ಉತ್ತೇಜನ ದೊರೆಯುವ ನಿರೀಕ್ಷೆ ಇದೆ ಎಂಬಂತಹ ಇಂಗಿತವೂ ಆರ್ಥಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಮಾರುಕಟ್ಟೆ ಪ್ರಧಾನ ಆರ್ಥಿಕತೆಯಲ್ಲಿ ಸರ್ಕಾರ ಮತ್ತು ಖಾಸಗಿ ವಲಯಗಳು ಮಹತ್ವದ ಪಾತ್ರ ನಿರ್ವಹಿಸುವ ಅಗತ್ಯವಿದೆ. ಹೀಗಾಗಿ, ಕಾರ್ಪೊರೇಟ್‌ ಹೂಡಿಕೆಯ ಹಾದಿಯಲ್ಲಿನ ಅಡೆತಡೆಗಳನ್ನು ನಿವಾರಿಸುವೆಡೆ ಗಮನ ನೀಡಬೇಕು. ವಿತ್ತೀಯ ಕೊರತೆ ಹೆಚ್ಚಿಸುವ ಅಥವಾ ವಿತ್ತೀಯ ಶಿಸ್ತು ಪಾಲಿಸುವ ಬಗ್ಗೆ ಸ್ಪಷ್ಟ ಧೋರಣೆ ಈ ವರದಿಯಲ್ಲಿ ವ್ಯಕ್ತವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಉತ್ತೇಜಿಸಲು, ಸುಲಲಿತವಾಗಿ ಉದ್ದಿಮೆ ವಹಿವಾಟು ಆರಂಭಿಸಲು ಪೂರಕ ಪರಿಸರ ಕಲ್ಪಿಸುವುದಕ್ಕಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಂತಹ ದಿಟ್ಟ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯವನ್ನೂ ಸಮೀಕ್ಷೆ ಮನದಟ್ಟು ಮಾಡಿದೆ. ಜಾಗತಿಕ ಆರ್ಥಿಕತೆಯಲ್ಲಿ ಸೃಷ್ಟಿಯಾಗಿರುವ ತಲ್ಲಣಗಳ ಮಧ್ಯೆಯೂ ದೇಶಿ ಅರ್ಥ ವ್ಯವಸ್ಥೆಯು ‘ಸ್ಥಿರತೆಯ ಸ್ವರ್ಗ’ವಾಗಿದೆ ಎಂಬುದು ಸರಿಯಾದುದೇ. ಆದರೆ ಈ ಖ್ಯಾತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಈಗ ಸರ್ಕಾರದ ಮೇಲೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.