ವಿತ್ತೀಯ ಶಿಸ್ತಿನ ಜಾಣ ನಡೆ ಗ್ರಾಮೀಣ ಆರ್ಥಿಕತೆಗೆ ಆದ್ಯತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಈ ಬಾರಿ ಮಂಡಿಸಿದ ಮೂರನೇ ಬಜೆಟ್‌ನಲ್ಲಿ ಭಿನ್ನ ಹಾದಿ ತುಳಿದಿದ್ದಾರೆ. ರಾಜಕೀಯವಾಗಿ ಸರಿಯಾದ ದಿಕ್ಕಿನಲ್ಲಿ ಸಾಗಿದ ಸೂಚನೆ ಇಲ್ಲಿದೆ. ದೇಶಿ ಬೇಡಿಕೆ ಹೆಚ್ಚಳದ ಮೂಲಕ ಬೆಳವಣಿಗೆ ಸಾಧಿಸುವಂತಹ ದೂರದರ್ಶಿತ್ವದ ನಿಲುವು ಇಲ್ಲಿ ಪ್ರಕಟವಾಗಿದೆ. ಜಾಗತಿಕವಾಗಿ ಆರ್ಥಿಕತೆ ಬೆಳವಣಿಗೆ ಮಂದಗತಿಯಲ್ಲಿದ್ದರೂ ಭಾರತದ ಆರ್ಥಿಕತೆ ಕುಸಿತ ಕಂಡಿಲ್ಲ. ಈ ಮಂಕಾದ ಸ್ಥಿತಿಯಲ್ಲೂ ಭಾರತ ಉಜ್ವಲವಾಗಿಯೇ ಹೊಳೆಯುತ್ತಿದ್ದು ಕಷ್ಟಗಳು ಅವಕಾಶಗಳಾಗಿ ಬದಲಾಗಿವೆ ಎಂಬಂತಹ ಆಶಾದಾಯಕ ನುಡಿಗಳೊಂದಿಗೆ ಅರುಣ್ ಜೇಟ್ಲಿ ಬಜೆಟ್ ಭಾಷಣ ಶುರು ಮಾಡಿದ್ದಾರೆ. ವಿತ್ತೀಯ ಕೊರತೆಗೆ ಬದ್ಧವಾಗಿರುವುದರ ಜತೆಗೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿರುವುದು ಈ ಬಜೆಟ್ ನ ವೈಶಿಷ್ಟ್ಯ. ಈ ಸ್ಥಿತ್ಯಂತರ ಸಾಮಾಜಿಕ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವ ಯತ್ನ ಎನ್ನಬಹುದು.ಈ ಬಜೆಟ್ ಗೆ ಆಧಾರವಾದ ಒಂಬತ್ತು ಸ್ತಂಭಗಳನ್ನು ಜೇಟ್ಲಿ ಅವರು ಪಟ್ಟಿ ಮಾಡಿರುವುದು ವಿಶೇಷ. ನರೇಂದ್ರ ಮೋದಿ ನೇತೃತ್ವದ ಸರ್ಕಾರ, ‘ಸೂಟ್ ಬೂಟ್ ಸರ್ಕಾರ’ ಎಂಬಂತಹ ಹಣೆಪಟ್ಟಿ ಕಳಚಿಕೊಳ್ಳಲು ಇರಿಸಿದಂತಹ ಸರಿಯಾದ ಹೆಜ್ಜೆ. ಸಾಮಾಜಿಕ ವಲಯಕ್ಕೆ ಒತ್ತು ಕೊಡುವುದರ ಜತೆಗೆ ಆದಾಯ ತೆರಿಗೆ ಪಾವತಿದಾರರು ಮತ್ತು ಹೂಡಿಕೆದಾರರನ್ನು ತಕ್ಕಮಟ್ಟಿಗೆ ಸಂತೃಪ್ತಗೊಳಿಸುವ ಯತ್ನವೂ ಇಲ್ಲಿದೆ. ಕುಸಿದಿರುವ ಗ್ರಾಮೀಣ ಬೇಡಿಕೆ, ಸ್ಥಗಿತಗೊಂಡ ಖಾಸಗಿ ಹೂಡಿಕೆ ಮತ್ತು ಬ್ಯಾಂಕಿಂಗ್‌ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಬಜೆಟ್‌ನಲ್ಲಿ ಕೈಗೊಂಡಿರುವ ರಚನಾತ್ಮಕ ಕ್ರಮಗಳು ಸದೃಢ ಆರ್ಥಿಕತೆಗೆ ಭದ್ರ ಬುನಾದಿ ಹಾಕಲಿವೆ ಎಂದು ಆಶಿಸಬಹುದು. ‘ನರೇಗಾ’ ಯೋಜನೆಯ ಪ್ರಯೋಜನದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದ ಎನ್‌ಡಿಎ ಸರ್ಕಾರ, ಈಗ ₹ 38.500 ಕೋಟಿ ನಿಗದಿ ಮಾಡಿರುವುದು, ಕೃಷಿ ಸಾಲದ ಗುರಿಯನ್ನು ₹ 9 ಲಕ್ಷ ಕೋಟಿಗೆ ಹೆಚ್ಚಿಸಿರುವುದು ಗ್ರಾಮೀಣ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಯತ್ನ ಎಂದೂ ವ್ಯಾಖ್ಯಾನಿಸಬಹುದು. ಏಕೆಂದರೆ ಐದು ರಾಜ್ಯಗಳಲ್ಲಿ ಚುನಾವಣೆಗಳು ಸನಿಹದಲ್ಲೇ ಇವೆ. ಮುಂದಿನ ಐದು ವರ್ಷಗಳಲ್ಲಿ ರೈತರ ವರಮಾನ ದ್ವಿಗುಣಗೊಳಿಸುವ ಕುರಿತು ಪ್ರಧಾನಿ ಮಾತನಾಡಿದ್ದಾರೆ. ಈ ಗುರಿಯನ್ನು ಜೇಟ್ಲಿಯವರೂ ಪ್ರಕಟಿಸಿದ್ದಾರೆ. ಮೂಲ ಸೌಕರ್ಯ, ಪಶುಸಂಗೋಪನೆ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸುವ ಮೂಲಕ ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಅನುವು ಮಾಡಿಕೊಡಲಾಗಿದೆ. ಇದು ಗ್ರಾಮೀಣ ಪ್ರದೇಶದ ಆದಾಯದ ಮೂಲಗಳನ್ನೂ ಹೆಚ್ಚಿಸಲಿದೆ. ಯೋಜನೆ ಹಾಗೂ ಯೋಜನೇತರ ಬಜೆಟ್ ಎಂಬ ಪರಿಕಲ್ಪನೆಗೆ ಅಂತ್ಯ ಹಾಡಿರುವುದು ದೊಡ್ಡ ಹೆಜ್ಜೆ. ಮೂಲಸೌಕರ್ಯ ರಂಗಗಳಲ್ಲಿ ಸರ್ಕಾರದ ವೆಚ್ಚವನ್ನು ಶೇ 22.5ರಷ್ಟು ಹೆಚ್ಚಿಸಿ, ಕಾರ್ಪೊರೇಟ್‌ ಹೂಡಿಕೆ ಚೇತರಿಸಿಕೊಳ್ಳಲು ನೆರವು ನೀಡಿರುವುದರಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಸ್ಟಾರ್ಟ್‌ಅಪ್‌ ಇಂಡಿಯಾ ಮತ್ತು ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಿ ಉದ್ಯೋಗ ಅವಕಾಶ ಹೆಚ್ಚಳಕ್ಕೆ ಆದ್ಯತೆ ನೀಡಿರುವುದು, ತೆರಿಗೆ ವ್ಯವಸ್ಥೆ ಸರಳೀಕರಣ ಮಾಡಿ ಉದ್ದಿಮೆ ವಹಿವಾಟಿಗೆ ಸುಲಲಿತ ವಾತಾವರಣ ಕಲ್ಪಿಸಿಕೊಟ್ಟಿರುವುದು ಸರಿಯಾಗಿದೆ ಆದರೆ ಭವಿಷ್ಯ ನಿಧಿಯ ಹಣ ಮರಳಿ ಪಡೆಯುವಾಗ ಶೇ 60ರಷ್ಟು ಮೊತ್ತದ ಮೇಲೆ ತೆರಿಗೆ ವಿಧಿಸುವ ಜೇಟ್ಲಿ ಅವರ ಆಲೋಚನೆ ನಿವೃತ್ತರಿಗೆ ಮಾರಕವಾಗಿ ಪರಿಣಮಿಸಲಿದೆ. ತಂಬಾಕು ಉತ್ಪನ್ನ, ಹೊಸ ಕಾರು ಖರೀದಿ ಮತ್ತು ದೊಡ್ಡ ಮೊತ್ತದ ಲಾಭಾಂಶದ ಮೇಲೆ ತೆರಿಗೆ ವಿಧಿಸಿರುವುದು ದೇಶದಲ್ಲಿ ಹೆಚ್ಚುತ್ತಿರುವ ಮಧ್ಯಮ ವರ್ಗದ ಪಾಲಿಗೆ ಕಹಿ ಗುಳಿಗೆಯಾಗಿದೆ. ಕಾರ್ಪೊರೇಟ್‌ ತೆರಿಗೆ ಸರಳೀಕರಣಗೊಳಿಸಿರುವುದು, ಉದ್ದಿಮೆ ವಹಿವಾಟು ಆರಂಭಿಸಲು ಪೂರಕ ವಾತಾವರಣ ಕಲ್ಪಿಸಲು ನೆರವಾಗಲಿದೆ. ತಯಾರಿಕಾ ವಲಯ ಮತ್ತು ಮೂಲ ಸೌಕರ್ಯ ರಂಗಗಳಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲೂ ಸರ್ಕಾರ ತನ್ನ ಬದ್ಧತೆ ಪ್ರಕಟಿಸಿದೆ. ಮೂಲ ಸೌಕರ್ಯ ವಲಯಕ್ಕೆ ₹ 2.21 ಲಕ್ಷ ಕೋಟಿ ವೆಚ್ಚ, 7ನೆ ವೇತನ ಆಯೋಗ ಮತ್ತು ‘ಒಂದು ಶ್ರೇಣಿ, ಒಂದು ಪಿಂಚಣಿ’ ಜಾರಿಗೆ ₹ 1.10 ಲಕ್ಷ ಕೋಟಿ ವೆಚ್ಚ ಸೇರಿದಂತೆ 2016–17ನೇ ಹಣಕಾಸು ವರ್ಷದಲ್ಲಿ ವೆಚ್ಚದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಹೀಗಿದ್ದೂ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.5ಕ್ಕೆ ನಿಗದಿಪಡಿಸುವ ಮಹತ್ವಾಕಾಂಕ್ಷೆಯ ಗುರಿಗೆ ಬದ್ಧವಾಗಿರುವುದು, ಸರ್ಕಾರವು ವಿತ್ತೀಯ ಶಿಸ್ತಿಗೆ ಅಂಟಿಕೊಂಡಿರುವ ಜಾಣ ನಡೆಯಾಗಿದೆ. ದೇಶಿ ಅರ್ಥ ವ್ಯವಸ್ಥೆಯ ಭವಿಷ್ಯ ಬದಲಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಎನ್ ಡಿ ಎ ಸರ್ಕಾರಕ್ಕೆ, ಮಂದಗತಿಯ ಜಾಗತಿಕ ಆರ್ಥಿಕತೆ ಮತ್ತು ಸುಧಾರಣಾ ಕ್ರಮಗಳಿಗೆ ಸಂಸತ್ತಿನಲ್ಲಿ ಅಡಚಣೆಗಳು ಎದುರಾಗಿರುವ ಸವಾಲಿನ ಸಂದರ್ಭ ಇದು. ಈ ಸಂದರ್ಭದಲ್ಲಿ ಜನಸಾಮಾನ್ಯರನ್ನು ಒಲಿಸಿಕೊಳ್ಳುವಂತಹ ಜೇಟ್ಲಿ ಯವರ ಯತ್ನ ಎದ್ದುಕಾಣಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.