ಫ್ಲೈಓವರ್ ಕುಸಿತ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಇಂಥ ದುರಂತ ಸಂಭವಿಸಿದಾಗ ಯಾರು ಹೊಣೆ, ಅವರಿಗೆ ಎಂಥ ಶಿಕ್ಷೆ ಎಂಬುದರ ಬಗ್ಗೆ ಸ್ಪಷ್ಟವಾದ ನಿಯಮಗಳನ್ನು ರೂಪಿಸುವುದು ಅಗತ್ಯ. ಕೋಲ್ಕತ್ತದ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಬಿದ್ದು ಅನೇಕರನ್ನು ಬಲಿ ತೆಗೆದುಕೊಂಡಿದೆ. ಇದುವರೆಗೆ 26 ಶವಗಳು ಸಿಕ್ಕಿದ್ದು, ಇನ್ನೂ ಅನೇಕರು ಭಗ್ನಾವಶೇಷಗಳ ಕೆಳಗೆ ಸಿಕ್ಕಿ ಬಿದ್ದಿರಬಹುದು ಎಂಬ ಶಂಕೆಯಿದೆ. ಇದು ಕಾಮಗಾರಿಯ ಗುಣಮಟ್ಟಕ್ಕೆ ಹಿಡಿದ ಕನ್ನಡಿ. ನಮ್ಮಲ್ಲಿ ಯಾವುದೇ ಆಧುನಿಕ ಸಾಧನ ಸಲಕರಣೆಗಳಿಲ್ಲದ ಕಾಲದಲ್ಲಿ, ತಂತ್ರಜ್ಞಾನವೇ ಗೊತ್ತಿಲ್ಲದ ಸಮಯದಲ್ಲಿ ನೂರಾರು ವರ್ಷಗಳ ಹಿಂದೆ ಕಟ್ಟಿದ ಕಟ್ಟಡಗಳು, ಸೇತುವೆಗಳು, ಅಣೆಕಟ್ಟೆಗಳು ಇನ್ನೂ ಮಜಬೂತಾಗಿರುವುದನ್ನು ಕಂಡಿದ್ದೇವೆ. ಆದರೆ ಎಲ್ಲ ಬಗೆಯ ತಾಂತ್ರಿಕತೆ, ಆವಿಷ್ಕಾರಗಳನ್ನು ಬಳಸಿಕೊಂಡು ನಡೆಸುತ್ತಿರುವ ನಿರ್ಮಾಣಗಳು ಪೂರ್ಣಗೊಳ್ಳುವ ಮೊದಲೇ ಅಥವಾ ಕೆಲವೇ ವರ್ಷಗಳಲ್ಲಿ ನೆಲ ಕಚ್ಚುತ್ತಿರುವುದು ಸೋಜಿಗದ ಸಂಗತಿ. ಇದಕ್ಕೆ ಮುಖ್ಯವಾದ ಕಾರಣ ದುರಾಸೆ, ಕಳಪೆ ಗುಣಮಟ್ಟ, ಮಿತಿಮೀರಿದ ಭ್ರಷ್ಟಾಚಾರ. ಕೋಲ್ಕತ್ತದ ದುರಂತವನ್ನು ನೋಡಿದರೆ ಕಾಮಗಾರಿಯಲ್ಲಿ ಗುಣಮಟ್ಟವನ್ನು ಪಾಲಿಸಿದಂತೆ ಕಾಣುತ್ತಿಲ್ಲ. ಎರಡೂವರೆ ಕಿಲೋಮೀಟರ್ ಉದ್ದದ ಮೇಲ್ಸೇತುವೆಯ ಸುಮಾರು 100 ಮೀಟರ್‌ನಷ್ಟು ಭಾಗದ ಬೃಹದಾಕಾರದ ಕಬ್ಬಿಣದ ತೊಲೆಗಳು, ಕಾಂಕ್ರೀಟ್ ಸ್ಲ್ಯಾಬ್‌ಗಳು ತರಗೆಲೆಗಳಂತೆ ಉದುರಿವೆ. ಇದರಿಂದ ಜೀವಹಾನಿ ಮಾತ್ರವಲ್ಲದೆ ಆಸ್ತಿಪಾಸ್ತಿಗೂ ಬಹಳಷ್ಟು ಲುಕ್ಸಾನಾಗಿದೆ. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದೇನೋ ಮಾನವೀಯತೆ ಎನ್ನಬಹುದು. ಆದರೆ ಒಂದು ದೃಷ್ಟಿಯಲ್ಲಿ ನೋಡಿದರೆ ನಿರ್ಮಾಣ ಕಂಪೆನಿಯ, ಗುತ್ತಿಗೆದಾರರ ಲೋಪಕ್ಕೆ ಪರಿಹಾರ ಕಟ್ಟಿಕೊಡಲು ಸರ್ಕಾರಿ ಬೊಕ್ಕಸದ ಹಣ ಖರ್ಚಾಗುತ್ತಿದೆ. ಈ ಮೊತ್ತವನ್ನು ಗುತ್ತಿಗೆದಾರರಿಂದಲೇ ವಸೂಲು ಮಾಡಬೇಕು. ಗುತ್ತಿಗೆ ಷರತ್ತುಗಳಲ್ಲಿಯೇ ಈ ಅಂಶವನ್ನೂ ಸೇರಿಸಬೇಕು. ಕಳಪೆ ಕೆಲಸ ಮಾಡುವವರು ಪಾರಾಗಲು ಅವಕಾಶ ಇರಬಾರದು. ಈ ಪ್ರಕರಣದಲ್ಲಿ ‘ಫ್ಲೈ ಓವರ್ ಕುಸಿತ ದೇವರ ಆಟ’ ಎಂದು ತಮ್ಮ ಲೋಪ ಮುಚ್ಚಿಕೊಳ್ಳಲು ಯತ್ನಿಸುತ್ತಿರುವ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗಳ ವ್ಯಾಖ್ಯಾನವಂತೂ ಹೊಣೆಗೇಡಿತನದ ಪರಮಾವಧಿ. ಕಳಪೆ ಗುಣಮಟ್ಟ ಅಥವಾ ತಾಂತ್ರಿಕ ದೋಷದಿಂದ ಈ ಅನಾಹುತ ಸಂಭವಿಸಿಲ್ಲ ಎಂಬ ಅವರ ವಾದವಂತೂ, ಮಾಡಿದ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ. ಇದಕ್ಕೆಲ್ಲ ಸರ್ಕಾರ ಸೊಪ್ಪು ಹಾಕಬಾರದು. ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸಬೇಕು. ಆಗಮಾತ್ರ ಬೇರೆಯವರೂ ಬುದ್ಧಿ ಕಲಿತುಕೊಂಡಾರು. ಇಂಥ ದುರಂತ ಸಂಭವಿಸಿದಾಗ ಯಾರು ಹೊಣೆ, ಅವರಿಗೆ ಎಂಥ ಶಿಕ್ಷೆ ಎಂಬುದರ ಬಗ್ಗೆ ಸ್ಪಷ್ಟವಾದ ನಿಯಮಗಳನ್ನು ರೂಪಿಸುವುದು ಕೂಡ ಅಗತ್ಯ. ಈ ಹಿಂದೆಯೂ ದೇಶದ ವಿವಿಧ ಭಾಗಗಳಲ್ಲಿ ನಿರ್ಮಾಣ ಹಂತದ ಮತ್ತು ಬಳಕೆಯಲ್ಲಿದ್ದ ಸೇತುವೆಗಳು ಕುಸಿದು ಜೀವಹಾನಿಯಾಗಿದೆ. ಭೂಕಂಪ, ಅತಿವೃಷ್ಟಿ ಮುಂತಾದ ನೈಸರ್ಗಿಕ ವಿಕೋಪಗಳಿಂದಲೂ ದುರಂತಗಳು ಸಂಭವಿಸುತ್ತವೆ. ಆದರೆ ಇದು ಮಾನವ ನಿರ್ಮಿತ ದುರಂತ. ಇವೆರಡನ್ನೂ ಭಿನ್ನವಾಗಿಯೇ ನೋಡಬೇಕು. ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ದೃಢ ಮತ್ತು ದೀರ್ಘಾವಧಿ ಕ್ರಮದ ಅಗತ್ಯವಿದೆ. ಇನ್ನು, ಕೋಲ್ಕತ್ತದಲ್ಲಿ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲು, ಬಂಧನ ಇತ್ಯಾದಿ ಕಾನೂನು ಕ್ರಮಗಳು ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ರಾಜಕಾರಣಿಗಳಿಂದ ಪರಸ್ಪರ ಕೆಸರೆರಚಾಟವೂ ಜೋರಾಗಿದೆ. ಅಲ್ಲಿಗೆ ಭೇಟಿ ಕೊಡುವುದಕ್ಕೆ ನಮ್ಮ ರಾಜಕೀಯ ಧುರೀಣರ ಮಧ್ಯೆಯೇ ಪೈಪೋಟಿ. ಏಕೆಂದರೆ ಈಗ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇದೆ. ಸಾವಿನ ಮನೆಯಲ್ಲಿ ಮತ್ತು ನೊಂದವರ ನೋವು, ಯಾತನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಈ ಹುನ್ನಾರ ಅಮಾನವೀಯತೆಯ ಪರಮಾವಧಿ ಎಂದೇ ಹೇಳಬೇಕು. ಅಲ್ಲಿನ ಜನಕ್ಕೆ ಮೊದಲು ಬೇಕಿರುವುದು ಪರಿಹಾರ ಕಾರ್ಯ. ಜೀವ ಕಳೆದುಕೊಂಡವರ ಕುಟುಂಬಗಳಿಗೆ ಸೂಕ್ತ ಮತ್ತು ನ್ಯಾಯೋಚಿತವಾದ ಪರಿಹಾರ, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸಾ ಸೌಕರ್ಯ. ನಮ್ಮಲ್ಲೂ ಅನೇಕ ಕಡೆ ಸೇತುವೆ, ಫ್ಲೈ ಓವರ್ ಕಾಮಗಾರಿಗಳು ನಡೆಯುತ್ತಿವೆ. ಕೋಲ್ಕತ್ತ ದುರಂತದ ಹಿನ್ನೆಲೆಯಲ್ಲಿ ಈ ಕಾಮಗಾರಿಗಳ ಗುಣಮಟ್ಟವನ್ನು ತಪಾಸಣೆಗೆ ಒಳಪಡಿಸುವುದು ಒಳ್ಳೆಯದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.