ಚುಟುಕು ಕ್ರಿಕೆಟ್‌ನಲ್ಲಿ ವಿಂಡೀಸ್‌ ಆಟಗಾರರ ಅನನ್ಯ ಸಾಧನೆ ವಿಂಡೀಸ್‌ ತಂಡ ಎಲ್ಲ ಕಷ್ಟಕೋಟಲೆಗಳ ನಡುವೆಯೂ ಇದೀಗ ಆಗಸದೆತ್ತರ ಎದ್ದು ನಿಂತಿದೆ. ವೆಸ್ಟ್‌ ಇಂಡೀಸ್‌ ಆಟಗಾರರು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅದ್ವಿತೀಯ ಎನಿಸಿದ್ದಾರೆ. ಚುಟುಕು ಕ್ರಿಕೆಟ್‌ನ ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲಿಯೂ ಇದೀಗ ವಿಶ್ವ ಟೂರ್ನಿಗಳಲ್ಲಿ ಗೆದ್ದು ಜಗಮನ್ನಣೆ ಪಡೆದಿದ್ದಾರೆ. ಇದೇ ವರ್ಷ ಬಾಂಗ್ಲಾದೇಶದಲ್ಲಿ ನಡೆದಿದ್ದ 19 ವರ್ಷದೊಳಗಿನ ಪುರುಷರ ವಿಭಾಗದ ವಿಶ್ವಕಪ್‌ನಲ್ಲಿಯೂ ವೆಸ್ಟ್‌ ಇಂಡೀಸ್‌ ಪ್ರಶಸ್ತಿ ಎತ್ತಿಕೊಂಡಿತ್ತು. ಕ್ರಿಕೆಟ್‌ ಲೋಕದಲ್ಲಿ ಈ ಮೂರೂ ಪ್ರಶಸ್ತಿಗಳನ್ನು ಏಕಕಾಲದಲ್ಲಿ ಗೆದ್ದಿರುವುದೊಂದು ದಾಖಲೆಯೇ ಹೌದು. ಕೆರಿಬಿಯನ್‌ ಕಡಲಿನಲ್ಲಿ ಎದ್ದು ನಿಂತಿರುವ ನೂರಾರು ದ್ವೀಪ ರಾಷ್ಟ್ರಗಳಲ್ಲಿ ಶತಮಾನದ ಹಿಂದಿನಿಂದಲೂ ಕ್ರಿಕೆಟ್‌ ಚಿರಪರಿಚಿತ. ಯುರೋಪ್‌ನ ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳ ಸಾವಿರಾರು ಮಂದಿ ಎರಡು ಶತಮಾನಗಳ ಹಿಂದೆಯೇ ಆಗ ನಿರ್ಜನವಾಗಿದ್ದ ಈ ದ್ವೀಪಗಳಲ್ಲಿ ನೆಲೆಸಿ ಕಬ್ಬು, ಹತ್ತಿ ಪ್ಲಾಂಟೇಷನ್‌ ಆರಂಭಿಸಿದ್ದರು. ಅಲ್ಲಿ ದುಡಿಯಲು ಬಿಳಿಯ ಮಾಲೀಕರು ಆಫ್ರಿಕಾ ಖಂಡದಿಂದ ಸಹಸ್ರಾರು ಕರಿಯರನ್ನು ಹಡಗುಗಳಲ್ಲಿ ತುಂಬಿಸಿಕೊಂಡು ಹೋದರು. ಕರಿಯರು ಶತಮಾನದ ಕಾಲ ಅಲ್ಲಿ ಎರೆಹುಳುಗಳಂತೆ ದುಡಿದರು. ಬಹುತೇಕ ದ್ವೀಪಗಳು ಇಂಗ್ಲೆಂಡ್‌ನ ವಸಾಹತುಗಳಾಗಿದ್ದವು. ಬ್ರಿಟಿಷರ ಮಕ್ಕಳು ಕ್ರಿಕೆಟ್‌ ಆಡುತ್ತಿದ್ದುದನ್ನು ಕರಿಯರ ಮಕ್ಕಳು ದೂರದಿಂದಲೇ ನೋಡುತ್ತಿದ್ದರು. ತಮ್ಮ ಕೇರಿಗಳಲ್ಲಿಯೂ ಆ ಮಕ್ಕಳು ಕ್ರಿಕೆಟ್‌ ಆಡತೊಡಗಿದರು. ಈ ಆಟದಲ್ಲಿ ನಿಷ್ಣಾತರಾದರು. ನಂತರದ ದಿನಗಳಲ್ಲಿ ಸಾಮ್ರಾಜ್ಯಶಾಹಿ ಆಡಳಿತದಿಂದ ಮುಕ್ತಿ ಪಡೆದ ಆ ದ್ವೀಪಗಳಲ್ಲಿ ಬಹುತೇಕ ಕಪ್ಪು ಜನರದೇ ಆಡಳಿತ ಬಂದಿತು. ಆದರೆ ಅದಾಗಲೇ ಅಲ್ಲಿ ಕ್ರಿಕೆಟ್‌ ಎನ್ನುವುದು ಸಂಸ್ಕೃತಿಯ ಸ್ವರೂಪ ಪಡೆದುಕೊಂಡಿತ್ತು. ಆ ದ್ವೀಪಗಳಲ್ಲಿ ಕ್ರಿಕೆಟ್‌ ಅದೆಷ್ಟು ಜನಪ್ರಿಯವಾಗಿತ್ತೆಂದರೆ 1890ರಷ್ಟು ಹಿಂದೆಯೇ ಇಂಗ್ಲೆಂಡ್‌ ತಂಡ ಅಲ್ಲಿಗೆ ಬಂದು ಸ್ಥಳೀಯರ ತಂಡಗಳ ಜತೆಗೆ ಆಡಿ ಹೋಗಿತ್ತು. 90 ವರ್ಷಗಳ ಹಿಂದೆ ಆ ಎಲ್ಲಾ ದ್ವೀಪರಾಷ್ಟ್ರಗಳ ಕ್ರಿಕೆಟ್‌ ಚಟುವಟಿಕೆಯನ್ನು ‘ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ’ ಎಂಬ ಚಾವಣಿಯ ಅಡಿಗೆ ತರಲಾಯಿತು. ಏಕ ತಂಡವನ್ನು ಕಟ್ಟಲಾಯಿತು. 1928ರ ಸುಮಾರಿಗೆ ಈ ತಂಡ ಟೆಸ್ಟ್ ಆಡುವ ಮಾನ್ಯತೆಯನ್ನೂ ಪಡೆಯಿತು. ಅಲ್ಲಿಂದ ಈವರೆಗೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸಾಗಿ ಬಂದ ಹಾದಿ ಅನನ್ಯ. ಕ್ರಿಕೆಟ್‌ ಲೋಕದಲ್ಲಿ ವಿಂಡೀಸ್‌ ದೈತ್ಯರೆಂದೇ ಹೆಸರುವಾಸಿಯಾಗಿರುವ ಈ ಆಟಗಾರರು ಗೆಲ್ಲದ ಟ್ರೋಫಿಗಳಿಲ್ಲ. ಇದೀಗ ಭಾರತದಲ್ಲೇ ಚುಟುಕು ಕ್ರಿಕೆಟ್‌ನ ಸಾರ್ವಭೌಮರೆನಿಸಿಕೊಂಡಿದ್ದಾರೆ. ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಕೊನೆಯ ಓವರ್‌ನಲ್ಲಿ ಕಾರ್ಲೊಸ್‌ ಬ್ರಾಥ್‌ವೈಟ್‌ ಬಾರಿಸಿದ 4 ಸಿಕ್ಸರ್‌ಗಳು ‘ವಿಂಡೀಸ್‌ ಶೈಲಿ’ಯ ಜೀವಂತಿಕೆಯ ದ್ಯೋತಕದಂತಿತ್ತು. ವಿಂಡೀಸ್‌ ತಂಡ ಯಾರೊಬ್ಬರನ್ನೇ ನಂಬಿ ಕುಳಿತಂತಿರಲಿಲ್ಲ. ಕ್ರಿಸ್‌ ಗೇಲ್‌, ಮರ್ಲಾನ್‌ ಸ್ಯಾಮುಯೆಲ್ಸ್‌, ಲೆಂಡ್ಲ್‌ ಸಿಮನ್ಸ್, ಡರೆನ್‌ ಸಮಿ, ಬ್ರಾಥ್‌ವೈಟ್‌ ಒಬ್ಬರಿಗಿಂತ ಒಬ್ಬರು ಅತಿರಥ ಮಹಾರಥರು. ಮಹಿಳಾ ಕ್ರಿಕೆಟ್‌ನಲ್ಲಿ ಕೂಡಾ ಸ್ಟೆಫಾನಿ ಟೇಲರ್‌ ನೇತೃತ್ವದ ವಿಂಡೀಸ್‌ ವನಿತೆಯರು ಅಂತಿಮ ಪಂದ್ಯದಲ್ಲಿ ಮೂರು ಸಲದ ಚಾಂಪಿಯನ್ಸ್‌ ಆಸ್ಟ್ರೇಲಿಯಾವನ್ನೇ ಮಣಿಸಿದ್ದು ಕಡಿಮೆ ಸಾಧನೆ ಏನಲ್ಲ. ಕೆರಿಬಿಯನ್‌ ದ್ವೀಪ ರಾಷ್ಟ್ರಗಳಲ್ಲಿ ಫುಟ್‌ಬಾಲ್‌, ಅಥ್ಲೆಟಿಕ್ಸ್‌ ಬಲು ಜನಪ್ರಿಯ. ಇವುಗಳ ನಡುವೆಯೂ ಕ್ರಿಕೆಟ್‌ ತನ್ನ ಹೆಚ್ಚುಗಾರಿಕೆ ತೋರುತ್ತಿದೆ. ಆದರೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯಲ್ಲಿ ಎಲ್ಲವೂ ಸರಿ ಇಲ್ಲ. ತೃಪ್ತಿಕರ ಸಂಭಾವನೆ ಸಿಗುತ್ತಿಲ್ಲ ಎಂದು ಆಟಗಾರರು ಕಳೆದ ಮೂರು ವರ್ಷಗಳಿಂದ ಪ್ರತಿಭಟಿಸುತ್ತಲೇ ಇದ್ದಾರೆ. 2014ರಲ್ಲಿ ಭಾರತದಲ್ಲಿ ಏಕದಿನ ಸರಣಿ ಆಡಲು ಬಂದಿದ್ದ ವಿಂಡೀಸ್‌ ತಂಡ ಅದೇ ಕಾರಣಕ್ಕಾಗಿ ಅರ್ಧದಲ್ಲೇ ಪ್ರವಾಸ ಮೊಟಕುಗೊಳಿಸಿ ವಾಪಸಾಗಿತ್ತು. ನಂತರದ ದಿನಗಳಲ್ಲಿ ಐಪಿಎಲ್‌ನಲ್ಲಿ ವಿಂಡೀಸ್‌ ಆಟಗಾರರು ಕಾಣಿಸಿಕೊಳ್ಳತೊಡಗಿದರು. ಈ ಸಲದ ವಿಶ್ವಕೂಟದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರುವಾಗಲೂ ತೀವ್ರ ತೆರನಾದ ಆರ್ಥಿಕ ಸಮಸ್ಯೆ ಈ ತಂಡವನ್ನು ಕಾಡಿತ್ತು. ಎಲ್ಲಾ ಕಷ್ಟಕೋಟಲೆಗಳ ನಡುವೆಯೂ ಇದೀಗ ವಿಂಡೀಸ್‌ ತಂಡ ಆಗಸದೆತ್ತರ ಎದ್ದು ನಿಂತಿದೆ. ಇದು ಒಂದು ಪ್ರದೇಶದ ಜನಸಮೂಹದ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸುವಂತಹ ಸಾಧನೆಯಾಗಿದೆ. ಜಗತ್ತಿನ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಬಿಸಿಸಿಐ ಈ ಸಲ ಮೊದಲ ಬಾರಿಗೆ ಚುಟುಕು ಕ್ರಿಕೆಟ್‌ನ ವಿಶ್ವಕೂಟವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದೆ. ಭಾರತ ತಂಡವೂ ಈ ಕೂಟದಲ್ಲಿ ನ್ಯೂಜಿಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ಎದುರು ಸೋತಿದ್ದನ್ನು ಹೊರತುಪಡಿಸಿದರೆ ಉತ್ತಮವಾಗಿಯೇ ಆಡಿದೆ. ಸೆಮಿಫೈನಲ್‌ನಲ್ಲಿ ನಿರಾಸೆ ಕಂಡಿತು. ಮಹೇಂದ್ರ ಸಿಂಗ್‌ ದೋನಿ ಅವರು ತಂಡವನ್ನು ಸಮರ್ಥವಾಗಿಯೇ ಮುನ್ನಡೆಸಿದ್ದಾರೆ. ವಿಂಡೀಸ್‌ ಎದುರು ಉತ್ತಮ ಮೊತ್ತವನ್ನೇ ಗಳಿಸಿತ್ತು. ನಿರ್ಣಾಯಕ ಕ್ಷಣದಲ್ಲಿ ವಿಂಡೀಸ್‌ನ ಶ್ರೇಷ್ಠ ಆಟಕ್ಕೆ ದೋನಿ ಬಳಗ ಮಣಿಯಿತು. ಆಗ ಮಾಧ್ಯಮದಿಂದ ‘ಅವರು ರಾಜೀನಾಮೆ ನೀಡುತ್ತಾರಾ’ ಎಂಬ ಪ್ರಶ್ನೆ ಕೇಳಿಬಂದಿತು. ಈ ಪ್ರಶ್ನೆ ಅನಗತ್ಯವಾಗಿತ್ತು. ಭಾರತ ಹೀನಾಯವಾಗಿ ಸೋತು ಕೂಟದಿಂದ ಹೊರಬಿದ್ದಿಲ್ಲ ಎಂಬುದೂ ಗಮನಾರ್ಹ. ಈ ಹಿನ್ನಡೆಯ ನಡುವೆಯೂ ಭಾರತ ಮತ್ತೆ ಪ್ರಬಲ ಶಕ್ತಿಯಾಗಿ ಎದ್ದು ನಿಲ್ಲುವ ಸಾಧ್ಯತೆ ಇದೆ. ಭಾರತದಲ್ಲಿ ಅತ್ಯುನ್ನತ ಮಟ್ಟದ ಮೂಲ ಸೌಕರ್ಯಗಳಿವೆ ಮತ್ತು ಪ್ರತಿಭಾವಂತರ ದಂಡು ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.