ಪರಮಾಣು ಭಯೋತ್ಪಾದನೆ ಭೀತಿ: ನಿರ್ಲಕ್ಷ್ಯ ಸಲ್ಲದು ಪರಮಾಣು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಜಾಗತಿಕ ದೃಷ್ಟಿಕೋನ ಇರುವುದು ಅಗತ್ಯ. ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾದ ಪರಮಾಣು ಭದ್ರತಾ ಶೃಂಗಸಭೆಯಲ್ಲಿ (ಎನ್‌ಎಸ್‌ಎಸ್) ಪರಮಾಣು ಭಯೋತ್ಪಾದನೆ ಬೆದರಿಕೆಯ ವಿಚಾರ ಚರ್ಚೆಯ ಕೇಂದ್ರಬಿಂದುವಾಗಿತ್ತು. ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪುಗಳು ಅಣ್ವಸ್ತ್ರಗಳನ್ನು ಪಡೆದುಕೊಂಡು ಬಳಸಬಹುದಾದ ಸಾಧ್ಯತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಈ ಸಭೆಯಲ್ಲಿ ಜಗತ್ತಿನ ಗಮನ ಸೆಳೆದರು. ಬೆಲ್ಜಿಯಂ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಈ ವಿಚಾರ ಹೆಚ್ಚಿನ ತುರ್ತನ್ನು ಗಳಿಸಿಕೊಂಡಿದೆ. ಬೆಲ್ಜಿಯಂನ ಪರಮಾಣು ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆಸಲು ಐಎಸ್ ಭಯೋತ್ಪಾದಕರು ಯೋಜಿಸುತ್ತಿದ್ದರು ಎಂಬುದು ತನಿಖೆಗಳಲ್ಲಿ ಬಯಲಾಗಿದೆ. ಪರಮಾಣು ಭಯೋತ್ಪಾದಕತೆ ಭೀತಿಗೆ ಸದ್ಯದ ಸಂದರ್ಭದಲ್ಲಿ ಜಾಗತಿಕ ಪ್ರಸ್ತುತತೆ ಇದೆ. ಆದರೆ ಭಾರತದಂತಹ ರಾಷ್ಟ್ರಕ್ಕೆ ಇದು ಇನ್ನೂ ಮುಖ್ಯವಾದದ್ದು. ಏಕೆಂದರೆ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯ ಭೀತಿಯನ್ನು ಭಾರತ ಅನುಭವಿಸುತ್ತಲೇ ಇದೆ. ಭಾರತ ವಿರೋಧಿ ಭಯೋತ್ಪಾದನಾ ಗುಂಪುಗಳನ್ನು ಅಣ್ವಸ್ತ್ರ ರಾಷ್ಟ್ರವಾದ ಪಾಕಿಸ್ತಾನ ಬೆಂಬಲಿಸುವಂತಹ ಸಮಸ್ಯೆ ಭಾರತಕ್ಕೆ ಗಂಭೀರವಾದದ್ದು ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನ, ಭಾರತ ವಿರೋಧಿ ಭಯೋತ್ಪಾದನಾ ಗುಂಪುಗಳೊಂದಿಗೆ ನಿಕಟ ಸಂಬಂಧ ಪೋಷಿಸಿಕೊಂಡು ಬಂದಿರುವುದು ಭಾರತದ ಸಂದರ್ಭದಲ್ಲಿ ಆತಂಕಕಾರಿ ಸಂಗತಿ. ಇದರಿಂದಾಗಿ ಭಯೋತ್ಪಾದನಾ ಗುಂಪುಗಳಿಗೆ ಅಣ್ವಸ್ತ್ರ ಲಭ್ಯತೆ ಸಾಧ್ಯವಾಗಬಹುದೆಂಬ ಭೀತಿ ಇದ್ದೇ ಇರುತ್ತದೆ. ಪರಮಾಣು ಭದ್ರತಾ ಶೃಂಗಸಭೆಯಲ್ಲಿ, ಪರಮಾಣು ಭಯೋತ್ಪಾದನೆ ಸಮಸ್ಯೆಯನ್ನು ಒಬಾಮ ಅವರು ಒತ್ತಿಹೇಳಿದ್ದು ಸರಿಯಾಗಿಯೇ ಇತ್ತು. ಆದರೆ ಅವರು ಸರ್ಕಾರಿ ಪ್ರಾಯೋಜಿತ ಪರಮಾಣು ಭಯೋತ್ಪಾದನೆ ಬಗ್ಗೆ ಮಾತನಾಡಲು ವಿಫಲರಾದರು. ಹೀಗಿದ್ದೂ ಈ ಸಮಸ್ಯೆಯನ್ನು ಕಡೆಗಣಿಸುವ ಹಾಗಿಲ್ಲ ಎಂಬುದನ್ನು ವಿಶ್ವ ಸಮುದಾಯ ಗಮನಿಸಬೇಕು. ಇದನ್ನು ಗಮನಕ್ಕೆ ತಂದುಕೊಳ್ಳದಿದ್ದಲ್ಲಿ ಪರಮಾಣು ಭಯೋತ್ಪಾದನೆ ನಿರ್ವಹಣೆ ರೀತಿಯೇ ದೋಷಪೂರಿತವಾದುದಾಗುತ್ತದೆ. ಪರಮಾಣು ಭದ್ರತೆ ಹಾಗೂ ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಂಬಂಧಿಸಿದಂತೆ ಭಾರತದ ಹಲವು ಉಪಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ ಶೃಂಗಸಭೆಯಲ್ಲಿ ಪ್ರಕಟಿಸಿದ್ದು ಮುಖ್ಯ ಹೆಜ್ಜೆ. ಪರಮಾಣು ಭಯೋತ್ಪಾದನೆ ನಿಗ್ರಹಕ್ಕಾಗಿ ಪರಮಾಣು ವಸ್ತು ಅಕ್ರಮ ಸಾಗಣೆ ತಡೆ, ತಂತ್ರಜ್ಞಾನ ಬಳಕೆಯಂತಹ ಹಲವು ಕ್ರಮಗಳನ್ನೂ ಪ್ರಧಾನಿ ಪ್ರಕಟಿಸಿದರು. ಪರಮಾಣು ಭದ್ರತೆಗಾಗಿ ಬಲವಾದ ಸಾಂಸ್ಥಿಕ ಚೌಕಟ್ಟು, ಸ್ವತಂತ್ರ ನಿಯಂತ್ರಣಾ ವ್ಯವಸ್ಥೆ ಹಾಗೂ ತರಬೇತಿ ಹೊಂದಿದ ವಿಶೇಷ ಮಾನವ ಸಂಪನ್ಮೂಲ ಬಳಕೆ ಬಗ್ಗೆಯೂ ಈ ಶೃಂಗಸಭೆಯಲ್ಲಿ ಪ್ರಧಾನಿ ಗಮನ ಸೆಳೆದರು. ಈ ಕ್ರಮಗಳು ಭಾರತದ ಪರಮಾಣು ವಸ್ತು ಹಾಗೂ ಅಸ್ತ್ರಗಳಿಗೆ ಸಂಬಂಧಿಸಿದಂತೆ ಭದ್ರತೆ ನೀಡುತ್ತವೆ. ಅಷ್ಟೇ ಅಲ್ಲ, ಜವಾಬ್ದಾರಿಯುಳ್ಳ ಪರಮಾಣು ಶಕ್ತ ರಾಷ್ಟ್ರ ಎಂಬಂತಹ ಪ್ರತಿಷ್ಠೆಯನ್ನೂ ಭಾರತಕ್ಕೆ ತಂದುಕೊಡಲಿದೆ ಎಂಬುದು ಮುಖ್ಯ. ದಶಕಗಳ ಕಾಲದಿಂದಲೂ ಪರಮಾಣು ಅಸ್ತ್ರ ಮುಕ್ತ ವಿಶ್ವಕ್ಕಾಗಿ ಕರೆ ನೀಡುವ ಜಾಗತಿಕ ಪ್ರಚಾರಾಂದೋಲನದ ಮುಂಚೂಣಿಯಲ್ಲಿದೆ ಭಾರತ. ಈಗ ವಿಶೇಷವಾಗಿ ಪರಮಾಣು ಭಯೋತ್ಪಾದನೆಗೆ ಸಂಬಂಧಿಸಿದಂತೆ ಪರಮಾಣು ಭದ್ರತಾ ಪ್ರಶ್ನೆಯ ಕುರಿತಂತೆ ನಾಯಕತ್ವವನ್ನು ವಹಿಸಿಕೊಳ್ಳಲು ಭಾರತ ಮುಂದಾಗಬೇಕು. ಪರಮಾಣು ಭದ್ರತಾ ನಿಧಿಗೆ 20 ಲಕ್ಷ ಡಾಲರ್ (ಸುಮಾರು ₹ 13.20 ಕೋಟಿ) ಭಾರತ ಕೊಡುಗೆ ನೀಡಿರುವುದು ಸರಿಯಾದುದು. ಹಾಗೆಯೇ ಪರಮಾಣು ಭದ್ರತೆ ಬಲಗೊಳಿಸಲು ವಿಶ್ವಸಂಸ್ಥೆ ಹಾಗೂ ಅಂತರರಾಷ್ಟ್ರೀಯ ಪರಮಾಣು ಇಂಧನ ಸಮಿತಿಗಳ (ಐಎಇಎ) ಜಂಟಿ ಕಾರ್ಯವ್ಯವಸ್ಥೆಗಳಲ್ಲಿ ಪಾಲ್ಗೊಳ್ಳಲು ಮುಂದಾಗಿರುವುದೂ ಸರಿಯಾದ ಹೆಜ್ಜೆ. ಪರಮಾಣು ಭಯೋತ್ಪಾದನೆ ಬಗ್ಗೆ ವಿಶ್ವದ ಗಮನ ಸದಾ ಇರುವಂತೆ ಭಾರತ ಕ್ರಮಗಳನ್ನು ಕೈಗೊಳ್ಳಬೇಕು. ಸಾಮಾನ್ಯವಾಗಿ, ಯುರೋಪ್ ಹಾಗೂ ಉತ್ತರ ಅಮೆರಿಕಗಳಿಗೆ ಬೆದರಿಕೆ ಒಡ್ಡುವ ಪರಮಾಣು ಭಯೋತ್ಪಾದನೆ ಬಗ್ಗೆ ಮಾತ್ರ ಪಾಶ್ಚಿಮಾತ್ಯ ರಾಷ್ಟ್ರಗಳು ಗಮನ ಕೇಂದ್ರೀಕರಿಸುತ್ತವೆ. ದಕ್ಷಿಣ ಏಷ್ಯಾ ಮೇಲಿನ ಬೆದರಿಕೆಯ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದಿಲ್ಲ. ಆದರೆ ಇದು ಸರಿಯಾದ ದೃಷ್ಟಿಕೋನವಲ್ಲ. ಪರಮಾಣು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬರೀ ಪ್ರಾದೇಶಿಕ ದೃಷ್ಟಿಕೋನ ಸಲ್ಲದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.