ವಿದೇಶದಲ್ಲಿ ಹಣ ಹೂಡಿಕೆ ತನಿಖೆ ನಡೆದು ಸತ್ಯ ಹೊರಬರಲಿ ‘ಪನಾಮಾ ಪೇಪರ್ಸ್ ’ ಸೋರಿಕೆ ವಿಶ್ವದಾದ್ಯಂತ ಪರಿಣಾಮ ಬೀರುವಂತಹದ್ದು. ದೇಶ ಮತ್ತು ಕಾಲದ ಗಡಿಯನ್ನೂ ದಾಟಿ ಬೆಳೆದ ತಾಂತ್ರಿಕತೆ ಮತ್ತು ಮಾಹಿತಿ ತಂತ್ರಜ್ಞಾನದಿಂದ ಸಾಧ್ಯವಾದಂತಹ ಮಹತ್ತರ ಬೆಳವಣಿಗೆ ಇದು. ಕಪ್ಪುಹಣವನ್ನು ಭಾರತಕ್ಕೆ ಮರಳಿ ತರಬೇಕು ಎನ್ನುವ ಒತ್ತಾಯದ ನಡುವೆಯೇ ಈಗ ದೇಶದ 500ಕ್ಕೂ ಹೆಚ್ಚು ಜನರ ರಹಸ್ಯ ವಿದೇಶಿ ವಹಿವಾಟುಗಳು ಆಕಸ್ಮಿಕ ಎಂಬಂತೆ ಬಹಿರಂಗಗೊಂಡಿವೆ. ಪನಾಮಾ ದೇಶದ ಕಾನೂನು ಸಲಹಾ ಸಂಸ್ಥೆ ಮೊಸಾಕ್ ಫೊನ್ಸೆಕಾದ 40 ವರ್ಷಗಳ ವಹಿವಾಟಿನ 1.15 ಕೋಟಿ ದಾಖಲೆಗಳು ಸೋರಿಕೆಯಾಗಿವೆ. ಅದು ನಮ್ಮ ದೇಶ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ನಮ್ಮಲ್ಲಿ ಅನೇಕ ತಾರೆಯರು, ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ವಿದೇಶದಲ್ಲಿ ಕಂಪೆನಿ ಸ್ಥಾಪಿಸಿ ಹಣ ಹೂಡಿಕೆ ಮಾಡಿದ್ದಾರೆ ಎಂಬ ದೂರು ಹೊಸದೇನಲ್ಲ. ಅದರಲ್ಲಿ ಬಹುಪಾಲು ಹಣ ತೆರಿಗೆ ತಪ್ಪಿಸಿದ್ದು ಅಥವಾ ವಂಚಿಸಿ ವಿದೇಶಕ್ಕೆ ಸಾಗಿಸಿದ್ದು ಎಂಬ ಆರೋಪವಂತೂ ಆಗಾಗ ಕೇಳಿ ಬರುತ್ತಲೇ ಇತ್ತು. ಆಗೊಮ್ಮೆ ಈಗೊಮ್ಮೆ ಕೆಲ ಹೆಸರುಗಳು ನಾನಾ ಮೂಲಗಳಿಂದ ಬಯಲಾಗುತ್ತಿದ್ದವು. ಆದರೆ ಈ ಬಾರಿ ಬಹಿರಂಗಗೊಂಡಿರುವ ಹೆಸರುಗಳು ಜಾಗತಿಕ ಪರಿಣಾಮ ಬೀರುವಂತಹದ್ದು. ಈ ಪಟ್ಟಿಯಲ್ಲಿ ಅನೇಕ ವಿದೇಶಿ ಗಣ್ಯರ ಹೆಸರುಗಳಿವೆ. ರಷ್ಯಾ, ಚೀನಾ, ಪಾಕಿಸ್ತಾನ ಮತ್ತಿತರ ದೇಶಗಳ ಆಡಳಿತ ಸೂತ್ರ ಹಿಡಿದಿದ್ದವರ ಹೆಸರುಗಳಿವೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಐಸ್‌ಲೆಂಡ್ ಪ್ರಧಾನಿ ಸಿಗ್ಮಂಡುರ್ ಡೇವಿಡ್ ಗನ್‌ಲಾಗ್ಸನ್‌ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪಟ್ಟಿಯಲ್ಲಿ ನಮ್ಮ ದೇಶದ ಪ್ರಮುಖ ರಾಜಕಾರಣಿಗಳ ಹೆಸರು ಇಲ್ಲದೇ ಹೋದರೂ ಬಾಲಿವುಡ್‌ ಚಿತ್ರ ತಾರೆಗಳಾದ ಅಮಿತಾಭ್‌ ಬಚ್ಚನ್‌, ಅವರ ಸೊಸೆ ಐಶ್ವರ್ಯಾ ರೈ, ನಮ್ಮ ರಾಜ್ಯದ ಉದ್ಯಮಿ ರಾಜೇಂದ್ರ ಪಾಟೀಲ ಮುಂತಾದವರ ಹೆಸರುಗಳಿವೆ. ವಿದೇಶದಲ್ಲಿ ಯಾರಾದರೂ ಹಣ ಹೂಡಿದರೆ, ಕಂಪೆನಿ ಸ್ಥಾಪಿಸಿದರೆ ಅದೆಲ್ಲವೂ ಅಕ್ರಮ ಎಂದು ಏಕಾಏಕಿ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಕಾನೂನುಬದ್ಧವಾಗಿ, ನಿಯಮಾವಳಿಗಳನ್ನು ಅನುಸರಿಸಿ ಇಂಥ ವಹಿವಾಟು ನಡೆಸುವುದು ತಪ್ಪೂ ಅಲ್ಲ. ಆದರೆ ತೆರಿಗೆ ಮತ್ತಿತರ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮತ್ತು ಬೇನಾಮಿಯಾಗಿ ವ್ಯವಹಾರ ನಡೆಸಿದರೆ, ಇಲ್ಲಿಯ ಹಣವನ್ನು ಗುಟ್ಟಾಗಿ ಹೊರ ದೇಶಕ್ಕೆ ಸಾಗಿಸಿದರೆ ಅದು ಅಪರಾಧ. ಅಕ್ರಮ ಮತ್ತು ಸಕ್ರಮ ವ್ಯವಹಾರಕ್ಕೆ ಸಾಕಷ್ಟು ವ್ಯತ್ಯಾಸವಿದೆ. ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಕೂಡ ಇದನ್ನೇ ಉಲ್ಲೇಖಿಸಿದ್ದಾರೆ. ಈ ಹೆಸರುಗಳು ಸೋರಿಕೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ಇದರ ಬಗ್ಗೆ ತನಿಖೆ ನಡೆಸಲು ವಿವಿಧ ಜಾರಿ ಮತ್ತು ಮೇಲ್ವಿಚಾರಣಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ತಂಡಕ್ಕೆ ಸೂಚಿಸಿದೆ. ಇದರ ಜತೆಗೆ, ಕಪ್ಪುಹಣದ ಬಗ್ಗೆ ತನಿಖೆಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೂಡ ‘ಪನಾಮಾ ಪೇಪರ್ಸ್’ ಎಂದೇ ಹೆಸರಾದ ಈ ದಾಖಲೆಗಳನ್ನು ಅಧ್ಯಯನ ಮಾಡುವಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ, ಜಾರಿ ನಿರ್ದೇಶನಾಲಯ ಮತ್ತು ಕಂದಾಯ ಬೇಹುಗಾರಿಕೆ ದಳಕ್ಕೆ ಸೂಚಿಸಿದೆ. ಒಟ್ಟಾರೆಯಾಗಿ ಸತ್ಯ ಏನು ಎನ್ನುವುದು ಬಯಲಿಗೆ ಬರಬೇಕು. ಈ ತನಿಖೆಗಳೆಲ್ಲ ಪಾರದರ್ಶಕವಾಗಿ ಇರಬೇಕು ಮತ್ತು ಪ್ರಾಮಾಣಿಕವಾಗಿ ನಡೆಯಬೇಕು. ಪನಾಮಾ, ಬಹಾಮಾಸ್‌, ಬ್ರಿಟಿಷ್‌ ವರ್ಜಿನ್‌ ಐಲೆಂಡ್‌ ಮುಂತಾದವು ಸಣ್ಣ ದೇಶಗಳಾದರೂ ತೆರಿಗೆ ವಂಚಕರ ಸ್ವರ್ಗ ಎಂದೇ ಹೆಸರಾಗಿವೆ. ವಿಶ್ವದ ವಿವಿಧ ದೇಶಗಳ ತೆರಿಗೆ ವಂಚಕರು ತಮ್ಮ ಹಣ ಹೂಡಲು ಈ ದೇಶಗಳನ್ನು ಮತ್ತು ಅಲ್ಲಿನ ಅನುಕೂಲತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಈ ಸಲದ ಮಾಹಿತಿ ಸೋರಿಕೆ ಹೆಚ್ಚು ಕುತೂಹಲ ಕೆರಳಿಸಿದೆ ಮತ್ತು ವಿಶ್ವದೆಲ್ಲೆಡೆ ದೂರಗಾಮಿ ಪರಿಣಾಮ ಬೀರಲಿದೆ. ಸುಮಾರು 4 ದಶಕಗಳಿಂದಲೂ ರಹಸ್ಯವಾಗಿದ್ದ ಮಾಹಿತಿಗಳನ್ನು ಅಜ್ಞಾತ ಮೂಲವೊಂದರಿಂದ ಪಡೆದ ಜರ್ಮನಿಯ ಪತ್ರಿಕೆ ಸ್ಯುಡೆಟ್ಶೆ ಜೈಟಂಗ್‌ ಅದನ್ನು ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದ ಮೂಲಕ ವಿಶ್ವದ ವಿವಿಧ ಮಾಧ್ಯಮಗಳೊಂದಿಗೆ ಹಂಚಿಕೊಂಡು ಒಳ್ಳೆಯ ಕೆಲಸವನ್ನೇ ಮಾಡಿದೆ. 1.15 ಕೋಟಿ ದಾಖಲೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಅಧ್ಯಯನ ಮಾಡಿ ಸಾರವನ್ನು ಹೆಕ್ಕಿ ತೆಗೆದು ಅಲ್ಲೋಲಕಲ್ಲೋಲ ಸೃಷ್ಟಿಸಿದ ಒಕ್ಕೂಟದ ಪತ್ರಕರ್ತರ ಶ್ರಮ ಕೂಡ ಪ್ರಶಂಸೆಗೆ ಅರ್ಹವಾದದ್ದು. ಮನುಕುಲಕ್ಕೆ ಇದು, ದೇಶ ಮತ್ತು ಕಾಲದ ಗಡಿಯನ್ನೂ ದಾಟಿ ಬೆಳೆದ ತಾಂತ್ರಿಕತೆ ಮತ್ತು ಮಾಹಿತಿ ತಂತ್ರಜ್ಞಾನ ಕೊಟ್ಟ ಅದ್ಭುತವಾದ ಕೊಡುಗೆ. ಏಕೆಂದರೆ ತಂತ್ರಜ್ಞಾನ ಇಲ್ಲದೇ ಹೋಗಿದ್ದರೆ ಈ ಮಾಹಿತಿಗಳು ಬಯಲಿಗೇ ಬರುತ್ತಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.