ಬಡ್ಡಿ ದರಗಳ ಕಡಿತ ಆರ್‌ಬಿಐ ನಡೆ ಸಕಾಲಿಕ ಅಲ್ಪಾವಧಿ ಬಡ್ಡಿ ದರ ಕಡಿತದ ಲಾಭವನ್ನು ಪೂರ್ಣ ಪ್ರಮಾಣದಲ್ಲಿ ಸಾಲಗಾರರಿಗೆ ವರ್ಗಾಯಿಸುವ ಹೊಣೆ ಈಗ ವಾಣಿಜ್ಯ ಬ್ಯಾಂಕ್‌ಗಳ ಮೇಲೆ ಇದೆ. ಭಾರತೀಯ ರಿಸರ್ವ್‌ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ಕಡಿತಗೊಳಿಸಿರುವುದು ಸಕಾಲಿವಾಗಿದೆ. ಈ ನಿರ್ಧಾರ ಆರ್ಥಿಕತೆಗೆ ನಿರೀಕ್ಷಿತ ಉತ್ತೇಜನ ನೀಡಲಿದೆ. ಇದರಿಂದ ಗೃಹ, ವಾಹನ ಮತ್ತು ಕೈಗಾರಿಕಾ ಉದ್ದೇಶದ ಸಾಲಗಳು ಅಗ್ಗವಾಗಲಿವೆ. ಕೈಗಾರಿಕಾ ಬೆಳವಣಿಗೆಗೆ ಇನ್ನಷ್ಟು ವೇಗ ನೀಡಲು ದರ ಕಡಿತದ ವಿಷಯದಲ್ಲಿ ಆರ್‌ಬಿಐ ಆಕ್ರಮಣಕಾರಿ ಧೋರಣೆ ತಳೆಯಬೇಕಾಗಿತ್ತು ಎಂದರೂ ಸದ್ಯಕ್ಕಂತೂ ಇದು ಸರಿಯಾದ ನಿರ್ಧಾರವಾಗಿದೆ. ಹಣದುಬ್ಬರವು ನಿಯಂತ್ರಣದಲ್ಲಿ ಇರುವ, ಸಣ್ಣ ಉಳಿತಾಯ ಬಡ್ಡಿ ದರಗಳು ಕಡಿಮೆಯಾಗಿರುವ, ಕೇಂದ್ರ ಸರ್ಕಾರವು ವಿತ್ತೀಯ ಶಿಸ್ತಿಗೆ ಬದ್ಧತೆ ಪ್ರಕಟಿಸಿರುವ ಸಂದರ್ಭದಲ್ಲಿ ಆರ್‌ಬಿಐ ಬಡ್ಡಿ ದರ ಕಡಿತ ಮಾಡುವ ಅನಿವಾರ್ಯ ಉದ್ಭವಿಸಿತ್ತು. ಈ ನಿರ್ಧಾರವು ದೇಶಿ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವುದರ ಜತೆಗೆ, ಬಡ್ಡಿ ದರ ಕಡಿತಗೊಳಿಸಲು ವಾಣಿಜ್ಯ ಬ್ಯಾಂಕ್‌ಗಳಿಗೆ ಬೆಂಬಲವನ್ನೂ ನೀಡಲಿದೆ. ಕೇಂದ್ರೀಯ ಬ್ಯಾಂಕ್‌ ತನ್ನ ಪಾಲಿನ ಕರ್ತವ್ಯವನ್ನು ಪೂರ್ಣಗೊಳಿಸಿದೆ. ಕಳೆದ ವರ್ಷದಿಂದೀಚೆಗೆ ಆರ್‌ಬಿಐ ಶೇ 1.25ರವರೆಗೆ ಬಡ್ಡಿ ದರ ಕಡಿತ ಮಾಡಿದ್ದರೂ, ವಾಣಿಜ್ಯ ಬ್ಯಾಂಕ್‌ಗಳು ತಮ್ಮದೇ ಆದ ಇತಿಮಿತಿಗಳಿಂದ ಅದರಲ್ಲಿ ಕೇವಲ ಶೇ 60ರಷ್ಟನ್ನು ಮಾತ್ರ ಸಾಲಗಾರರಿಗೆ ವರ್ಗಾಯಿಸಿದ್ದವು. ನೀತಿ ನಿರೂಪಣಾ ಬಡ್ಡಿ ದರಗಳಿಗೆ ಅನುಗುಣವಾಗಿ ವಾಣಿಜ್ಯ ಬ್ಯಾಂಕ್‌ಗಳೂ ಬಡ್ಡಿ ದರ ಕಡಿತದ ಪೂರ್ಣ ಲಾಭವನ್ನು ಸಾಲಗಾರರಿಗೆ ವರ್ಗಾಯಿಸಲು ಇದ್ದ ಅನೇಕ ಅಡಚಣೆಗಳನ್ನು ಆರ್‌ಬಿಐ ಈಗ ದೂರ ಮಾಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಖಾಸಗಿ ವಲಯದ ಬಂಡವಾಳ ಹೂಡಿಕೆ ಹಾಗೂ ಗ್ರಾಮೀಣ ಪ್ರದೇಶದ ಬೇಡಿಕೆ ಉತ್ತೇಜನದ ಅಗತ್ಯ ಒಂದೆಡೆ ಇದ್ದರೆ, ಮತ್ತೊಂದೆಡೆ ಚಿಲ್ಲರೆ ಹಣದುಬ್ಬರವೂ ನಿಯಂತ್ರಣದಲ್ಲಿ ಇರುವುದು ಬಡ್ಡಿ ದರ ಕಡಿತಗೊಳಿಸಲು ಪೂರಕ ವಾತಾವರಣ ಸೃಷ್ಟಿಯಾದಂತಾಗಿತ್ತು. ದೇಶಿ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಮತ್ತು ನೇರ ಬಂಡವಾಳ ಹೂಡಿಕೆ ಪ್ರಮಾಣವೂ ಚೇತರಿಸಿಕೊಂಡಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಕೂಡ ಬಡ್ಡಿ ದರ ಹೆಚ್ಚಳದ ನಿರ್ಧಾರದಿಂದ ಹಿಂದೆ ಸರಿದಿರುವುದು ಆರ್‌ಬಿಐನ ಕೆಲಸ ಸುಲಭಗೊಳಿಸಿತು. ಆರ್‌ಬಿಐ ಇನ್ನು ಮುಂದೆ ಬಡ್ಡಿ ದರ ಕಡಿತಕ್ಕಿಂತ ಆರ್ಥಿಕತೆಯಲ್ಲಿ ನಗದುತನದ ಲಭ್ಯತೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಲಿರುವುದು ಮಹತ್ವದ ಬೆಳವಣಿಗೆಯಾಗಿದೆ. ಬ್ಯಾಂಕ್‌ಗಳ ಮುಕ್ತ ಮಾರುಕಟ್ಟೆ ಸಾಲ ಎತ್ತುವಳಿ ಮತ್ತು ದೀರ್ಘಾವಧಿ ಸಾಲಪತ್ರಗಳ ಖರೀದಿ ಸುಲಭಗೊಳಿಸಿರುವುದು ಸರಿಯಾದ ನಿಲುವಾಗಿದೆ. ದೇಶಿ ಆರ್ಥಿಕತೆಗೆ ಉತ್ತೇಜನ ನೀಡಲು ಇನ್ನಷ್ಟು ಬಡ್ಡಿ ದರ ಕಡಿತಗೊಳಿಸಲು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಅವಕಾಶ ಇದ್ದೇ ಇದೆ. ಆದರೆ ವಾಣಿಜ್ಯ ಬ್ಯಾಂಕ್‌ಗಳು ಬಡ್ಡಿ ದರ ಕಡಿತ ಮಾಡುವಂತೆ ಮಾಡಲು ಈಗಲೂ ಕೆಲ ಅಡೆತಡೆಗಳನ್ನು ಆರ್‌ಬಿಐ ಎದುರಿಸಬೇಕಾಗಿದೆ. ನಗದುತನ ಕಡಿಮೆಯಾಗಿರುವುದರಿಂದ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರಗಳಿಗೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಗದುತನದ ಕೊರತೆ ದೂರ ಮಾಡುವುದಾಗಿ ಆರ್‌ಬಿಐ ಭರವಸೆ ನೀಡಿದೆ. ಜಾಗತಿಕ ಅರ್ಥ ವ್ಯವಸ್ಥೆಯಲ್ಲಿನ ನಾಜೂಕಿನ ಪರಿಸ್ಥಿತಿ ಮತ್ತು ಬ್ಯಾಂಕ್‌ ಠೇವಣಿದಾರರ ಕಡಿಮೆ ಬಡ್ಡಿ ದರದ ಆತಂಕಗಳನ್ನೂ ಸರ್ಕಾರ ಮತ್ತು ಆರ್‌ಬಿಐ ನಿರ್ಲಕ್ಷಿಸಬಾರದಷ್ಟೆ. ಬ್ಯಾಂಕ್‌ಗಳ ಠೇವಣಿ ಬೆಳವಣಿಗೆ ದರವು 50 ವರ್ಷಗಳಲ್ಲಿಯೇ ಕಡಿಮೆಯಾಗಿರುವುದು ಆತಂಕ ಮೂಡಿಸಿದೆ. ಇದು ಬ್ಯಾಂಕ್‌ಗಳ ಸಾಲ ನೀಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಾಗಿದೆ. ಠೇವಣಿದಾರರನ್ನು ಬ್ಯಾಂಕ್‌ನತ್ತ ಮರಳಿ ಕರೆತರುವ ಪ್ರಯತ್ನಗಳನ್ನೂ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಆದ್ಯತೆ ಮೇರೆಗೆ ಕೈಗೊಳ್ಳಬೇಕಾಗಿದೆ. ಬಡ್ಡಿ ದರ ಕಡಿತದ ಲಾಭವು ಸಣ್ಣ ಕೈಗಾರಿಕಾ ಘಟಕಗಳಿಗೆ ಗರಿಷ್ಠ ಪ್ರಮಾಣದಲ್ಲಿ ದೊರೆಯುವಂತೆ ಮಾಡಲು ವಿಶೇಷ ಪ್ರಯತ್ನ ಮಾಡಬೇಕಾಗಿದೆ. ಇದಕ್ಕಾಗಿ ಸ್ಥಳೀಯ ಶಾಖೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕಾಗಿದೆ. ಬಡ್ಡಿ ದರ ಕಡಿತಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ಆರ್‌ಬಿಐ ಸಹಯೋಗದಲ್ಲಿ ಸೂಕ್ತ ವಿತ್ತೀಯ ಮತ್ತು ಹಣಕಾಸು ಕ್ರಮಗಳನ್ನು ಕೈಗೊಳ್ಳುವ ಭರವಸೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ದೇಶಿ ಅರ್ಥ ವ್ಯವಸ್ಥೆಗೆ ನಿರೀಕ್ಷಿತ ಉತ್ತೇಜನ ದೊರೆತೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.