ತಪ್ಪಿಸಬಹುದಾಗಿದ್ದ ದುರಂತ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ರಾಷ್ಟ್ರದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಹೊರಬಿದ್ದಂತಹ ಸುದ್ದಿ ಆಘಾತಕಾರಿ. ಕೇರಳದ ಕೊಲ್ಲಂ ಜಿಲ್ಲೆಯ ಪರವೂರಿನ ಪುಟ್ಟಿಂಗಲ್ ದೇವಾಲಯದಲ್ಲಿ ಧಾರ್ಮಿಕ ಆಚರಣೆ ವೇಳೆ ಸಂಭವಿಸಿದ ಅಗ್ನಿ ಅನಾಹುತದ ವಿವರಗಳು ಮನ ಕಲಕುವಂತಹವು. ಈ ದುರಂತದಲ್ಲಿ 105ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಡಳಿತ ಯಂತ್ರ ದಕ್ಷವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ತಪ್ಪಿಸಬಹುದಾಗಿದ್ದ ಅವಘಡ ಇದು ಎಂಬುದು ಈ ದುರಂತದ ಕರಾಳತೆಯನ್ನು ತೀವ್ರಗೊಳಿಸುತ್ತದೆ. ಭಕ್ತಿಯ ಪರವಶತೆಯಲ್ಲಿ ಸಾವಿರಾರು ಜನ ಜಮಾಯಿಸುವ ಧಾರ್ಮಿಕ ಸ್ಥಳಗಳು ಸಾಮೂಹಿಕ ಸಾವುಗಳ ರುದ್ರಭೂಮಿಯಾಗಿ ಪರಿಣಮಿಸುವುದು ವಿಪರ್ಯಾಸ. ಜನದಟ್ಟಣೆಯಾಗುವಂತಹ ಸ್ಥಳಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಅನುಸರಿಸದಿರುವುದು ಇಂತಹ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ರಾಷ್ಟ್ರದ ಹಲವು ದೇವಾಲಯಗಳ ಧಾರ್ಮಿಕ ಸಮಾರಂಭಗಳಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಗಳ ಸಂಖ್ಯೆಯೇನೂ ಕಡಿಮೆ ಇಲ್ಲ ಎಂಬುದನ್ನು ಗಮನಿಸಿದಲ್ಲಿ ವ್ಯವಸ್ಥೆಯ ನಿಷ್ಕ್ರಿಯತೆ ಕಣ್ಣಿಗೆ ರಾಚುತ್ತದೆ. ಕೇರಳದ ಈ ಪ್ರಮುಖ ಅಗ್ನಿ ಅವಘಡದ ಬಗ್ಗೆ ಪ್ರಧಾನಿಯವರೂ ತಕ್ಷಣವೇ ಸ್ಪಂದಿಸಬೇಕಾದ ಅನಿವಾರ್ಯತೆ ಒದಗಿತು ಎಂಬುದೂ ಗಮನಾರ್ಹ. ಈ ಭಾರಿ ದುರಂತಕ್ಕೆ ಪಟಾಕಿ ಹಾಗೂ ಬಾಣಬಿರುಸಿನ ಪ್ರದರ್ಶನ ಕಾರಣವೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರತಿವರ್ಷ ‘ವಿಷು’ ಆಚರಣೆ ವೇಳೆ, ಪುಟ್ಟಿಂಗಲ್ ದೇವಾಲಯದಲ್ಲಿ ಬಾಣಬಿರುಸುಗಳ ಪ್ರದರ್ಶನವನ್ನು ಸಂಪ್ರದಾಯವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಆಗಸದಲ್ಲಿ ನಡೆಯುವ ಈ ಮಿಂಚಿನ ಮಾಯೆಯ ದೃಶ್ಯವೈಭವ ಕಣ್ತುಂಬಿಕೊಳ್ಳಲು ಸಾವಿರಾರು ಜನ ಬರುತ್ತಾರೆ. ಆದರೆ ಇಂತಹ ಬಾಣಬಿರುಸುಗಳ ಪ್ರದರ್ಶನ ನಿಯಂತ್ರಿತ ರೀತಿಯಲ್ಲಿ ನಡೆಯಬೇಕು. ಇಂತಹ ಪ್ರದರ್ಶನಕ್ಕೆ ಅಗತ್ಯವಾಗಿ ಬೇಕಾದ ವಿಶಾಲ ಬಯಲು ಪ್ರದೇಶವೇ ಇಲ್ಲಿಲ್ಲ ಎಂಬುದು ಮೊದಲ ದೋಷ. ಜೊತೆಗೆ ಅಕ್ಕಪಕ್ಕದಲ್ಲಿ ಕಟ್ಟಡಗಳೂ ಇವೆ. ಹೀಗಾಗಿ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಇಂತಹ ಪ್ರದರ್ಶನಕ್ಕೆ ಅವಕಾಶ ನೀಡಬಾರದೆಂದು ಕೊಲ್ಲಂ ಜಿಲ್ಲಾಧಿಕಾರಿಗೆ ಹಿರಿಯ ಮಹಿಳೆಯೊಬ್ಬರು ದೂರು ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ವರ್ಷ ಮಾತ್ರವಲ್ಲ ಹಿಂದಿನ ಕೆಲವು ವರ್ಷ ಗಳಿಂದಲೂ ಈ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. ಹೀಗಾಗಿ ಅಪಾಯದ ಮುನ್ಸೂಚನೆಯನ್ನು ಗ್ರಹಿಸಿ ಜಿಲ್ಲಾಡಳಿತವೂ ಬಾಣಬಿರುಸುಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿತ್ತು ಎಂಬುದು ದಾಖಲೆಗಳಿಂದ ವ್ಯಕ್ತ. ಹೀಗಿದ್ದೂ ನಿಯಮಗಳನ್ನು, ನಿಷೇಧಗಳನ್ನು ಮುರಿಯುವ ಧಾರ್ಮಿಕ ಲಾಬಿಗಳ ವಿರುದ್ಧ ಸರ್ಕಾರ ಕ್ರಮ ಏಕೆ ಜರುಗಿಸಲಿಲ್ಲ? ಈ ವಿಚಾರದಲ್ಲಿ ಸರ್ಕಾರ ಹಿಂದೇಟು ಹಾಕಿತೆ ಎಂಬುದು ಪ್ರಶ್ನೆ. ಬಾಣಬಿರುಸುಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿದ್ದರೂ ಈ ಪ್ರದರ್ಶನ ವನ್ನು ದೇವಾಲಯ ನಡೆಸಿದ್ದು ಹೇಗೆ? ಇದು ನಡೆಯದಂತೆ ಜಿಲ್ಲಾಡಳಿತ ಏಕೆ ಎಚ್ಚರ ವಹಿಸಲಿಲ್ಲ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಪಟಾಕಿಗಳನ್ನು ಸಂಗ್ರಹಿಸಿಡಲಾಗಿದ್ದ ಷೆಡ್ ಮೇಲೆ ಬಾಣಬಿರುಸುಗಳ ಪ್ರದರ್ಶನದ ವೇಳೆ ಬಿದ್ದ ಕಿಡಿ ಭಾರಿ ಸ್ಫೋಟಕ್ಕೆ ಕಾರಣವಾಯಿತು ಎಂಬುದನ್ನು ಗಮನಿಸಿದಲ್ಲಿ ನಿರ್ಲಕ್ಷ್ಯದ ಪರಮಾವಧಿಯನ್ನು ಗುರುತಿಸಬಹುದು. ಸುರಕ್ಷತೆಯ ನಿಯಮಗಳು ಕಿಂಚಿತ್ತೂ ಪಾಲನೆಯಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಈ ವಿಚಾರದಲ್ಲಿ ದೇವಾಲಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಅಕ್ಷಮ್ಯ. ಘಟನೆಯ ಬಗ್ಗೆ ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಮುಂದಿನ ತಿಂಗಳು ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಕೀಯ ಆರೋಪ, ಪ್ರತ್ಯಾರೋಪಗಳಿಂದ ಈ ಘಟನೆಗೆ ರಾಜಕೀಯ ಬೆರೆಸಬಾರದು. ಘಟನೆಯ ಹೊಣೆಯನ್ನು ರಾಜ್ಯ ಸರ್ಕಾರ ಹೊರಬೇಕು. ಕಳೆದ ವಾರವಷ್ಟೇ ಕೋಲ್ಕತ್ತದಲ್ಲಿ ಫ್ಳೈಓವರ್ ಕುಸಿದು ಅಮಾಯಕ ಜನರು ಸತ್ತಿದ್ದು ಸಾರ್ವಜನಿಕರ ಸ್ಮೃತಿಯಲ್ಲಿ ಇನ್ನೂ ಹಸಿಯಾಗಿದೆ. ಈಗ ಈ ದುರಂತ. ಭಾರತದಲ್ಲಿ ಮನುಷ್ಯರ ಜೀವ ಇಷ್ಟೊಂದು ಅಗ್ಗವೆ ಎಂಬಂತಾಗಬಾರದು. ಸುಟ್ಟ ಗಾಯಗಳಿಂದ ನರಳುತ್ತಿರುವ ಜನರನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು ಪರಿಣತ ವೈದ್ಯರಿಂದ ಚಿಕಿತ್ಸೆ ಲಭ್ಯವಾಗಬೇಕಾಗಿದೆ. ಕೊಲ್ಲಂಗೆ ಭೇಟಿ ನೀಡಿದ ಪ್ರಧಾನಿಯವರು ತಮ್ಮೊಂದಿಗೆ ವೈದ್ಯರ ತಂಡವೊಂದನ್ನೂ ಕರೆದೊಯ್ದಿದ್ದಾರೆ. ಪರಿಹಾರ ಕಾರ್ಯಾಚರಣೆಗಳಿಗೆ ಯಾವುದೇ ಕೊರತೆಯಾಗದಂತೆ ಕಾರ್ಯನಿರ್ವಹಿಸಬೇಕಾಗಿರುವುದು ರಾಜ್ಯ ಸರ್ಕಾರಕ್ಕೆ ಈಗ ದೊಡ್ಡ ಸವಾಲು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.