ಬರ ಪರಿಹಾರ ಕ್ರಮಗಳಿಗೆ ಸಮಗ್ರ ದೃಷ್ಟಿಕೋನ ಬೇಕು ನೀರಿನ ಸಂರಕ್ಷಣೆ ಹಾಗೂ ಅದರ ಸದ್ಬಳಕೆಗೆ ಮೂಲಸೌಕರ್ಯಗಳು ಸೃಷ್ಟಿಯಾಗಬೇಕಾದದ್ದು ಅಗತ್ಯ. ತಾಪಮಾನದ ತೀವ್ರ ಏರಿಕೆಯನ್ನು ರಾಷ್ಟ್ರ ಅನುಭವಿಸುತ್ತಿದೆ. ನೆರೆಯ ತೆಲಂಗಾಣದಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಬಿಸಿಲಿನ ತೀವ್ರತೆಯಿಂದ 66 ಜನರು ಸತ್ತಿದ್ದಾರೆ ಎಂದು ವರದಿಯಾಗಿದೆ. ಕುಡಿಯುವ ನೀರಿನ ಸಂಕಷ್ಟ ತೀವ್ರವಾಗಿದೆ. ಜಾನುವಾರುಗಳು, ವನ್ಯ ಮೃಗಗಳೂ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಸಮಸ್ಯೆ ತೀವ್ರವಾಗಿದೆ. ರಾಷ್ಟ್ರದ ಕೃಷಿ ಆರ್ಥಿಕತೆ ಹಾಗೂ ಗ್ರಾಮೀಣ ಬದುಕು ದಿಕ್ಕೆಟ್ಟಿದೆ. ಇಂತಹ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ರಾಜ್ಯಗಳಿಗೆ ಸಮರ್ಪಕ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ಸರಿಯಾಗಿಯೇ ಇದೆ. ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಂಡ್, ಬಿಹಾರ, ಹರಿಯಾಣ ಹಾಗೂ ಛತ್ತೀಸಗಡ ರಾಜ್ಯಗಳನ್ನು ಬರಪೀಡಿತ ಪ್ರದೇಶಗಳಾಗಿ ‘ಸ್ವರಾಜ್ ಅಭಿಯಾನ್’ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪಟ್ಟಿ ಮಾಡಲಾಗಿದೆ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ‘ನರೇಗಾ’ ಅಡಿಯಲ್ಲಿ ಜನರಿಗೆ ಕೆಲಸ ನೀಡುವುದೂ ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸರಾಸರಿ ಕೆಲಸದ ದಿನಗಳ ಪ್ರಮಾಣ ತಗ್ಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ತೋರಿರುವ ಕಾಳಜಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ‘ಪರಿಹಾರವನ್ನು ಈಗಲೇ ನೀಡಬೇಕೆ ಹೊರತು ಒಂದು ವರ್ಷದ ನಂತರವಲ್ಲ’ ಎಂದು ಕೋರ್ಟ್ ಟೀಕಿಸಿರುವುದು ಸರಿಯಾದದ್ದೇ. ‘ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿದೆ. ಕುಡಿಯುವ ನೀರು ಸೇರಿದಂತೆ ಏನೂ ಇಲ್ಲ. ಕೇಂದ್ರ ಸರ್ಕಾರ ಪರಿಹಾರವನ್ನು ಸಕಾಲದಲ್ಲಿ ಒದಗಿಸುವುದು ಅಗತ್ಯ’ ಎಂಬಂತಹ ಸುಪ್ರೀಂಕೋರ್ಟ್ ಸಲಹೆ ಸಕಾಲಿಕ. ಎರಡು ವರ್ಷಗಳ ಸತತ ಬರದ ನಂತರ ಬದುಕಿಗಾಗಿ ಹೋರಾಡುತ್ತಿರುವ ಕಾರ್ಮಿಕರಿಗೆ ಸಕಾಲದಲ್ಲಿ ವೇತನವೂ ದೊರೆಯದಿದ್ದಲ್ಲಿ ಸರ್ಕಾರಗಳ ಇಂತಹ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳೇ ಅರ್ಥಹೀನವಾಗುತ್ತವೆ. ಹೀಗಾಗಿ ಆಡಳಿತ ಯಂತ್ರವನ್ನು ಆವರಿಸಿಕೊಂಡಿರುವ ನಿಷ್ಕ್ರಿಯತೆ ತೊಲಗಬೇಕಿದೆ. ಈ ಬೆಳವಣಿಗೆಗಳ ನಂತರ ಈಗ, ನರೇಗಾದ ಬಾಕಿ ಕೂಲಿ ಪಾವತಿಗೆ 7,983 ಕೋಟಿ ರೂಪಾಯಿಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಕೋರ್ಟ್‌ಗೆ ಹೇಳಿಕೆ ನೀಡಿದೆ. ಮಹಾರಾಷ್ಟ್ರದ ಲಾತೂರ್‌ನಲ್ಲಂತೂ ನೀರಿನ ಸಮಸ್ಯೆ ಈ ವರ್ಷ ತೀವ್ರವಾಗಿದೆ. ನೀರಿಗಾಗಿ ಜನರ ನಡುವಿನ ಜಗಳ ತಪ್ಪಿಸಲು ಲಾತೂರ್‌ನಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಬೇಕಾದಂತಹ ಸನ್ನಿವೇಶ ಎದುರಾದದ್ದು ವಿಪರ್ಯಾಸ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಕ್ರೀಡಾಂಗಣಗಳಲ್ಲಿ ಪಿಚ್ ಹಾಗೂ ಮೈದಾನದ ನಿರ್ವಹಣೆಗೆ ಲಕ್ಷಾಂತರ ಲೀಟರ್ ನೀರು ವ್ಯಯಿಸುತ್ತಿರುವ ವಿಚಾರವನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ‘ಇಷ್ಟೊಂದು ನೀರನ್ನು ಬಿಸಿಸಿಐ ಹಾಗೂ ಕ್ರಿಕೆಟ್ ಸಂಸ್ಥೆಗಳು ಹೇಗೆ ವ್ಯಯಿಸುತ್ತವೆ? ಜನರು ಮುಖ್ಯವೋ, ಐಪಿಎಲ್ ಪಂದ್ಯಗಳೋ’ ಎಂದು ಕೋರ್ಟ್ ಪ್ರಶ್ನಿಸಿರುವುದು ನಾಟಕೀಯವಾಗಿದೆ. ನೀರಿನ ಸಮಸ್ಯೆಯ ತೀವ್ರತೆಯ ಬಗ್ಗೆ ನ್ಯಾಯಾಲಯದಿಂದ ವ್ಯಕ್ತವಾಗಿರುವ ಈ ಕಾಳಜಿಯೇನೊ ಸರಿ. ಆದರೆ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸಿಬಿಟ್ಟರೆ ನೀರಿನ ಸಮಸ್ಯೆ ಪರಿಹಾರವಾಗಿ ಬಿಡುತ್ತದೆಯೆ? ನೀರು ಪೋಲಾಗುವುದು ಬರೀ ಕ್ರೀಡಾಂಗಣದಲ್ಲಿ ಮಾತ್ರವೇ ಏನು? ಎಂಬಂತಹ ಪ್ರಶ್ನೆಗಳೂ ಏಳುತ್ತವೆ. ಬಿಸಿಸಿಐ ಕ್ರೀಡಾ ಸಂಸ್ಥೆ, ತಿಂಗಳುಗಳ ಮುಂಚೆಯೇ ಐಪಿಎಲ್ ಬಗ್ಗೆ ಯೋಜನೆಗಳನ್ನು ರೂಪಿಸುವಾಗ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ತೀವ್ರವಾಗಿರುತ್ತದೆ ಎಂಬುದನ್ನು ಗಮನಿಸಿರಬೇಕು ಎಂದು ನಿರೀಕ್ಷಿಸುವುದು ಸಲ್ಲದು. ಸಮಸ್ಯೆಗಳಿಗೆ ಕೇವಲ ಸಾಂಕೇತಿಕವಾದಂತಹ ಪ್ರತಿಕ್ರಿಯೆಗಳು ಶಾಶ್ವತ ಪರಿಹಾರಗಳಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಬಗೆಯ ತಕ್ಷಣದ ಅತಿರಂಜಿತವಾದಂತಹ ಪ್ರತಿಕ್ರಿಯೆಗಳು ಪ್ರಚಾರದ ಸಾಧನವಾಗುತ್ತವೆ ಅಷ್ಟೆ. ಹೆಚ್ಚೆಂದರೆ ಅಗ್ಗದ ಜನಪ್ರಿಯತೆಯ ಲಾಭ ದಕ್ಕಬಹುದು. ಆದರೆ ಸಮಸ್ಯೆಯನ್ನು ಸಮಗ್ರ ದೃಷ್ಟಿಕೋನದಿಂದ ಅಭ್ಯಸಿಸಿ ಶಾಶ್ವತ ಪರಿಹಾರ ರೂಪಿಸುವುದಕ್ಕೆ ಇದರಿಂದ ಏನೇನೂ ಲಾಭವಾಗದು. ಕ್ರೀಡೆ ಎಂಬುದೂ ಸಮಾಜದಲ್ಲಿ ಅಂತರ್ಗತವಾಗಿದೆ ಎಂಬುದನ್ನು ಮರೆಯಬಾರದು. ನೀರಿನ ಸಂರಕ್ಷಣೆ ಹಾಗೂ ಅದರ ಸದ್ಬಳಕೆಗೆ ಮೂಲಸೌಕರ್ಯಗಳು ಸೃಷ್ಟಿಯಾಗಬೇಕಾದದ್ದು ಅಗತ್ಯ. ಇದಕ್ಕಾಗಿ ತಂತ್ರಜ್ಞಾನದ ಶಕ್ತಿಯನ್ನು ದುಡಿಸಿಕೊಳ್ಳಬೇಕು. ಆಧುನಿಕ ನಿರ್ವಹಣಾ ಕೌಶಲಗಳನ್ನು ಅಳವಡಿಸಿಕೊಂಡು ಬರ ಹಾಗೂ ನೀರಿನ ಸಮಸ್ಯೆಗೆ ಪರಿಹಾರ ಸೂತ್ರಗಳನ್ನು ರೂಪಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.