ಉದ್ಯಮಶೀಲತೆಗೆ ಉತ್ತೇಜನ ಭರವಸೆಯ ಹೊಸ ಹೆಜ್ಜೆ ಪರಿಶಿಷ್ಟರು ಮತ್ತು ಮಹಿಳೆಯರಲ್ಲಿ ಉದ್ಯಮಶೀಲತೆ ರೂಢಿಸಲು ಯತ್ನಿಸುವ ‘ಸ್ಟ್ಯಾಂಡ್‌ಅಪ್‌ ಇಂಡಿಯಾ’ ಯೋಜನೆ ಯಶಸ್ಸಿಗೆ ಸರ್ಕಾರ, ಬ್ಯಾಂಕ್ ಹಾಗೂ ಫಲಾನುಭವಿಗಳು ಬದ್ಧತೆ ಪ್ರದರ್ಶಿಸಬೇಕು. ಪರಿಶಿಷ್ಟರು ಮತ್ತು ಮಹಿಳೆಯರು ಹೊಸ ಉದ್ಯಮ ಆರಂಭಿಸಲು ಸುಲಭ ರೂಪದಲ್ಲಿ ಬ್ಯಾಂಕ್‌ ಸಾಲ ಒದಗಿಸುವ ‘ಸ್ಟ್ಯಾಂಡ್‌ಅಪ್‌ ಇಂಡಿಯಾ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವುದು, ದೇಶಿ ಉದ್ಯಮ ಲೋಕದಲ್ಲಿ ಹೊಸ ಶಕೆಗೆ ಮುನ್ನುಡಿ ಬರೆಯಲಿದೆ. ಅವಕಾಶ ವಂಚಿತರೂ ಉದ್ಯಮಶೀಲತೆ ರೂಢಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಲು ಈ ಯೋಜನೆ ನೆರವಾಗಲಿದೆ. ದೇಶದಲ್ಲಿ ಉದ್ಯಮಿಗಳ ಹೊಸ ತಲೆಮಾರು ಸೃಷ್ಟಿಸುವ ನಿಟ್ಟಿನಲ್ಲಿ ಇದನ್ನು ಮಹತ್ವದ ಹೆಜ್ಜೆ ಎಂದು ಪರಿಗಣಿಸಬಹುದು. ಉದ್ದಿಮೆ ಆರಂಭಿಸಲು ಬ್ಯಾಂಕ್‌ಗಳಿಂದ ಹಣಕಾಸಿನ ನೆರವು ಪಡೆಯುವುದು, ಸಂಪನ್ಮೂಲ ಸಂಗ್ರಹಿಸುವುದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಅಷ್ಟು ಸುಲಭದ ಮಾತಲ್ಲ. ಇಂತಹ ಅಡಚಣೆಗಳನ್ನು ದೂರವಾಗಿಸುವ ನಿಟ್ಟಿನಲ್ಲಿ ಇದು ಒಳ್ಳೆಯದು. ಈ ಯೋಜನೆ ಅನ್ವಯ ₹ 10 ಲಕ್ಷದಿಂದ ಗರಿಷ್ಠ ₹ 1 ಕೋಟಿವರೆಗೆ ಸಾಲ ಸೌಲಭ್ಯ ಲಭ್ಯವಾಗಲಿದೆ. ಯಾವುದೇ ಜಾಮೀನು ಭದ್ರತೆ ಅಥವಾ ಹೆಚ್ಚು ನಿಬಂಧನೆಗಳಿಲ್ಲದೆ ಸುಲಭವಾಗಿ ದೊರೆಯುವ ಈ ಸಾಲವು ಈ ವರ್ಗದ ಜನರ ಬದುಕಲ್ಲಿ ಖಂಡಿತವಾಗಿಯೂ ಅತಿದೊಡ್ಡ ಬದಲಾವಣೆ ತರಲಿದೆ. ವಾಣಿಜ್ಯ ಬ್ಯಾಂಕ್‌ಗಳು ದೇಶದಾದ್ಯಂತ ಹೊಂದಿರುವ 1.25 ಲಕ್ಷ ಶಾಖೆಗಳು ಪ್ರತಿವರ್ಷ ಕನಿಷ್ಠ ಎರಡು ಇಂತಹ ಸ್ವಾವಲಂಬನೆಯ ಸಾಲಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇದು ಸರ್ಕಾರದ ಉದ್ದೇಶ ಸಾಧನೆಯ ನಿಟ್ಟಿನಲ್ಲಿ ನಿರೀಕ್ಷಿತ ಫಲಿತಾಂಶ ಬೀರಲಿದೆ ಎಂದು ಆಶಿಸಬಹುದು. ಉದ್ಯೋಗದ ಹುಡುಕಾಟದಲ್ಲಿ ಇರುವವರನ್ನು ಉದ್ಯೋಗ ಸೃಷ್ಟಿಸುವವರನ್ನಾಗಿ ಈ ಯೋಜನೆ ಪರಿವರ್ತಿಸಲಿದೆ ಎನ್ನಬಹುದು. ಕೃಷಿಯೇತರ ವಲಯದಲ್ಲಿ ಹೊಸ ಉದ್ಯಮ ಆರಂಭಿಸಲು ಅಥವಾ ಈಗಾಗಲೇ ಕೈಗೆತ್ತಿಕೊಂಡಿದ್ದ ಉದ್ಯಮ ಬಲಪಡಿಸಲು ಈ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಜಾಮೀನುರಹಿತವಾಗಿ ಒದಗಿಸುವ ಸಾಲಕ್ಕೆ ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪೆನಿ ಮೂಲಕ ಸಾಲ ಖಾತರಿ ವ್ಯವಸ್ಥೆ ರೂಪಿಸಿರುವುದು ಬ್ಯಾಂಕ್‌ಗಳ ಆತಂಕ ದೂರ ಮಾಡಲಿದೆ. ಅವಕಾಶ ವಂಚಿತ, ತುಳಿತಕ್ಕೆ ಒಳಗಾದವರ ಒಳಿತಿಗಾಗಿ ಮೀಸಲಾತಿಯೂ ಸೇರಿದಂತೆ ಹಲವಾರು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಇವುಗಳಿಂದ ಆದಿವಾಸಿಗಳು ಮತ್ತು ಮಹಿಳೆಯರಿಗೆ ಅನೇಕ ಪ್ರಯೋಜನಗಳೂ ಲಭಿಸಿವೆ. ಆದರೆ, ಉದ್ಯಮ ರಂಗದಲ್ಲಿ ಇವುಗಳ ಪ್ರಭಾವ ಸೀಮಿತವಾಗಿದೆ. ಮಹಿಳೆಯರಲ್ಲಿ ಉದ್ಯಮಶೀಲತೆ ರೂಢಿಸುವಲ್ಲಿ ಭಾರತ ಹಿಂದೆ ಬಿದ್ದಿರುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಇನ್ನು ಪರಿಶಿಷ್ಟ ಉದ್ಯಮಿಗಳ ಸಂಖ್ಯೆಯೂ ಹೆಚ್ಚೇನಿಲ್ಲ. ಹೀಗಾಗಿ ಇನ್ನು ಮುಂದೆ ಈ ವಲಯದ ಉದ್ಯಮ ಆಕಾಂಕ್ಷಿಗಳಿಗೆ, ತಮ್ಮ ಉದ್ಯಮಶೀಲತೆಗೆ ಅಗತ್ಯವಾದ ಸಂಪನ್ಮೂಲ ಕೊರತೆ ಎದುರಾಗಲಾರದು. ಉದ್ಯಮ ಆರಂಭಿಸಿ ಬೆಳೆಸುವ ನಿಟ್ಟಿನಲ್ಲಿ ಅನುಭವ ಕೊರತೆ ಎದುರಿಸುತ್ತಿರುವ ಈ ವರ್ಗಗಳಿಗೆ ಅಗತ್ಯವಾದ ತರಬೇತಿ, ಮಾರ್ಗದರ್ಶನ, ಸಲಹೆ, ಉತ್ತೇಜನ ನೀಡುವುದನ್ನೂ ಈ ಕಾರ್ಯಕ್ರಮ ಒಳಗೊಂಡಿರುವುದು ಒಳ್ಳೆಯ ಆಲೋಚನೆಯಾಗಿದೆ. ಯೋಜನೆಯು 2.50 ಲಕ್ಷದಷ್ಟು ಜನರಿಗೆ ಪ್ರಯೋಜನ ಒದಗಿಸಲಿದೆ. ಕನಿಷ್ಠ ₹ 50 ಸಾವಿರ ಕೋಟಿಗಳಷ್ಟು ನೆರವನ್ನು ಬ್ಯಾಂಕ್‌ಗಳು ಮಂಜೂರು ಮಾಡಲಿವೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ, ಬ್ಯಾಂಕ್‌ಗಳು ಸಾಕಷ್ಟು ಕಾಳಜಿ ವಹಿಸಬೇಕಾಗಿದೆ. ಫಲಾನುಭವಿಗಳ ಸಹಕಾರವೂ ಮುಖ್ಯವಾಗಿರಲಿದೆ. ಹಲವು ರಾಜ್ಯಗಳಲ್ಲಿ ಈಗ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶವೂ ಇಲ್ಲ ಎನ್ನಲಾಗದು. ಹೀಗಿದ್ದೂ ಅರ್ಥ ವ್ಯವಸ್ಥೆಗೆ ಈ ಯೋಜನೆಯಿಂದ ಪ್ರಯೋಜನ ದೊರೆಯುವುದನ್ನು ಅಲ್ಲಗಳೆಯಲಿಕ್ಕಾಗದು. ಈ ಯೋಜನೆಯು ದೇಶದ ಕೈಗಾರಿಕಾ ರಂಗದ ಚಿತ್ರಣ ಬದಲಿಸಲು, ಪರಿಶಿಷ್ಟರು ಮತ್ತು ಮಹಿಳೆಯರನ್ನು ನಿಜವಾದ ಅರ್ಥದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ನೆರವಾಗಲಿದೆ. ಕಾರ್ಯಕ್ರಮದ ಉದ್ದೇಶ ಸಫಲವಾಗಲು ಸಾಲಪಡೆಯುವ ಫಲಾನುಭವಿಗಳ ಶ್ರದ್ಧೆ, ಬದ್ಧತೆಗಳೂ ಮುಖ್ಯ ವಾಗಿರುತ್ತವೆ. ಸುಲಭವಾಗಿ ಸಿಗುವ ಸಾಲವನ್ನು ಅನುತ್ಪಾದಕ ಉದ್ದೇಶಗಳಿಗೆ ವೆಚ್ಚ ಮಾಡದೆ ಉದ್ಯಮ ಸ್ಥಾಪನೆ, ನಿರ್ವಹಣೆಗೆ ಸದ್ಬಳಕೆ ಮಾಡಿ, ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಮಾತ್ರ ಯೋಜನೆಯು ಸಾಫಲ್ಯ ಕಂಡೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.