ಭಾರಿ ಸದ್ದಿನ ಪಟಾಕಿ ನಿಷೇಧ ಸುರಕ್ಷತೆಗೆ ಆದ್ಯತೆ ಇರಲಿ ಪಟಾಕಿಗಳ ತಯಾರಿಕಾ ಹಂತದಿಂದಲೇ ಸುರಕ್ಷತೆ ಶುರುವಾಗಬೇಕು. ದಾಸ್ತಾನು ಮತ್ತು ಸಿಡಿಸುವಾಗ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೇರಳದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಭಾರಿ ಸದ್ದಿನ ಪಟಾಕಿಗಳನ್ನು ಇನ್ನುಮುಂದೆ ಸಿಡಿಸದಂತೆ ಹೈಕೋರ್ಟ್ ನಿಷೇಧ ಹೇರಿದೆ. ಪುಟ್ಟಿಂಗಲ್ ದೇವಿ ದೇವಾಲಯದ ದುರಂತದಲ್ಲಿ 115ಕ್ಕೂ ಹೆಚ್ಚುಮಂದಿ ಪ್ರಾಣ ಕಳೆದುಕೊಂಡ ನಂತರ ಹೈಕೋರ್ಟ್ ನಿಂದ ಈ ಮಹತ್ವದ ಆದೇಶ ಹೊರಬಿದ್ದಿರುವುದು ಮುಖ್ಯ ಬೆಳವಣಿಗೆ. ಭಾರಿ ಸದ್ದು ಮಾಡುವ ಪಟಾಕಿಗಳನ್ನು ಸಿಡಿಸುವುದು ಹಾಗೂ ಬಾಣ ಬಿರುಸುಗಳ ಪ್ರದರ್ಶನದಿಂದಾಗಿ ಜನರು ಪ್ರಾಣ ಕಳೆದುಕೊಳ್ಳುವುದು ಅಥವಾ ಗಾಯಗೊಳ್ಳುವುದು ಹೊಸ ಸಂಗತಿ ಏನಲ್ಲ. ಶಬರಿಮಲೆ ದೇವಾಲಯದ ಉತ್ಸವದಲ್ಲಿ 1952ರಲ್ಲೇ ಪಟಾಕಿ ಸಿಡಿತದಿಂದಾಗಿ 68 ಜನರು ಸಾವಿಗೀಡಾಗಿದ್ದುದು ಇಂತಹ ಮೊದಲ ಪ್ರಕರಣವಾಗಿ ದಾಖಲಾಗಿದೆ. ಕಳೆದ ಎರಡು ದಶಕಗಳಲ್ಲಿ ಕೇರಳ ರಾಜ್ಯವೊಂದರಲ್ಲೇ ಪಟಾಕಿಗೆ ಸಂಬಂಧಿಸಿದ ಕನಿಷ್ಠ 750 ಅವಘಡಗಳು ವರದಿಯಾಗಿವೆ . ಜೊತೆಗೆ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರೆ ಈ ಸಮಸ್ಯೆಯ ತೀವ್ರತೆ ಅರಿವಾಗುತ್ತದೆ. ಇಂತಹ ದುರಂತಗಳಾದಾಗ ಪಟಾಕಿ ನಿಷೇಧ ವಿಚಾರದ ಚರ್ಚೆ ಮುನ್ನೆಲೆಗೆ ಬರುತ್ತದೆ. ಈಗಲೂ ಪಟಾಕಿಗಳನ್ನು ಸಾರಾಸಗಟಾಗಿ ನಿಷೇಧಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ 1200ಕ್ಕೂ ಹೆಚ್ಚು ದೇವಸ್ಥಾನಗಳ ಉಸ್ತುವಾರಿ ಹೊತ್ತ ತಿರುವಾಂಕೂರು ದೇವಸ್ವಂ ಮಂಡಳಿ ಮಾತ್ರ, ಪಟಾಕಿ ಪ್ರದರ್ಶನ ನಿಲ್ಲಿಸಲು ಸಾಧ್ಯವೇ ಇಲ್ಲ ಎಂಬಂತಹ ನಿಲುವನ್ನೇ ತಳೆದಿದೆ. ಹೀಗಿದ್ದೂ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅದು ವಾಗ್ದಾನ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈ ಸಲ ಕರಗದಲ್ಲಿ ಪಟಾಕಿ ಹಾರಿಸದಿರಲು ಉತ್ಸವ ಸಮಿತಿ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಏಕೆಂದರೆ ಬಯಲಿನಲ್ಲಿ ಪಟಾಕಿ ಹಾರಿಸುವುದಕ್ಕೂ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಪಟಾಕಿಗಳನ್ನು ಹಾರಿಸುವುದಕ್ಕೂ ಬಹಳಷ್ಟು ಅಂತರ ಇದೆ. ಕರಗ ಉತ್ಸವವಂತೂ ಜನದಟ್ಟಣೆ ಇರುವ ಪ್ರದೇಶಗಳಲ್ಲೇ ಹಾದುಹೋಗುತ್ತದೆ. ಹೀಗಾಗಿ ಕರಗ ಉತ್ಸವ ಸಮಿತಿ ನಿರ್ಧಾರ ಸಮಂಜಸವಾದದ್ದು. ಪಟಾಕಿ ವಿಚಾರದಲ್ಲಿ ಸುರಕ್ಷತೆಗೆ ಗಮನ ಹರಿಸದಿದ್ದಲ್ಲಿ ಅನಾಹುತಕ್ಕೆ ಹಾದಿ ಮಾಡಿಕೊಟ್ಟಂತೆ ಎಂಬುದು ಪದೇಪದೇ ವ್ಯಕ್ತವಾಗುತ್ತಲೇ ಇದೆ. ಪಟಾಕಿ ಮತ್ತಿತರ ಸುಡುಮುದ್ದುಗಳ ಸಂಗ್ರಹ ಹಾಗೂ ಬಳಕೆ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳೇನೊ ಇವೆ. ಆದರೆ ಇವು ಸಮರ್ಪಕವಾಗಿ ಅನುಷ್ಠಾನವಾಗುವುದಿಲ್ಲ ಎಂಬುದೇ ಸಮಸ್ಯೆ. ಸುರಕ್ಷತೆಯ ವಿಚಾರ, ಪಟಾಕಿಗಳ ತಯಾರಿಕಾ ಹಂತದಿಂದಲೇ ಶುರುವಾಗಬೇಕು. ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ವಿವಿಧ ಕಡೆ ಪಟಾಕಿ ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಮಕ್ಕಳು. ವೈವಿಧ್ಯಮಯ ಬಣ್ಣಗಳ ಚಿತ್ತಾವಳಿ, ಮೈನವಿರೇಳಿಸುವಂಥ ಶಬ್ದಗಳಿಂದ ಮನಸ್ಸಿಗೆ ಖುಷಿ ಕೊಡುವ ಪಟಾಕಿಗಳ ತಯಾರಿಕೆ ಈ ಮಕ್ಕಳ ಬಾಲ್ಯದ ಸಂತಸವನ್ನು, ಆರೋಗ್ಯವನ್ನು ಕಸಿದುಕೊಳ್ಳುತ್ತಿದೆ ಎಂಬುದು ವಿಪರ್ಯಾಸ. ಆದರೆ ಅದೇನೂ ನಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ನಾವಿದ್ದೇವೆ. 2012ರಲ್ಲಿ ಶಿವಕಾಶಿಯ ಪಟಾಕಿ ಘಟಕದಲ್ಲಿ ನಡೆದ ಅಪಘಾತದಲ್ಲಿ 40 ಮಂದಿ ಜೀವಕಳೆದುಕೊಂಡಿದ್ದರು. ಪಟಾಕಿ ನಿಷೇಧದ ಬಗ್ಗೆ ಸರ್ವಸಮ್ಮತ ನಿರ್ಧಾರ ಕಷ್ಟ ಎಂಬುದು ವಾಸ್ತವಿಕವಾದದ್ದು. 2014ರಲ್ಲಿ ಪಟಾಕಿ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು, 2015ರ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ನ ಆಗಿನ ಮುಖ್ಯ ನ್ಯಾಯಮೂರ್ತಿ ಎಚ್. ಎಲ್. ದತ್ತು ಅವರು ಇಂತಹ ನಿಷೇಧದಿಂದ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಹೇಳಿದ್ದರು. ಇಂತಹ ಸಂದರ್ಭದಲ್ಲಿ ಕನಿಷ್ಠ ಪಟಾಕಿಯಿಂದಾಗುವ ಶಬ್ದ ಮಾಲಿನ್ಯ , ಪರಿಸರ ಮಾಲಿನ್ಯ ಹಾಗೂ ಅಪಘಾತಗಳ ಬಗ್ಗೆ ಅರಿವು ಮೂಡಬೇಕಾದುದು ಅವಶ್ಯ. ಇತ್ತೀಚಿನ ವರ್ಷಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರಾಂದೋಲನಗಳೂ ನಡೆದಿವೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಭಾರಿ ಸದ್ದಿನ, ಸ್ಫೋಟಕ ಪಟಾಕಿಗಳನ್ನು ಬಳಸದಿರುವ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಇಂತಹ ಸ್ಪೋಟಕ ಪಟಾಕಿಗಳಿಗೆ ಪರ್ಯಾಯಗಳನ್ನು ಶೋಧಿಸುವುದೂ ಅಗತ್ಯ. ಪುಟ್ಟಿಂಗಲ್ ದೇವಿ ದೇವಾಲಯದಲ್ಲಾದ ಮಾನವ ನಿರ್ಮಿತ ದುರಂತಗಳನ್ನು ತಪ್ಪಿಸಲು ಇಂತಹ ಕ್ರಮಗಳು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.