ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ: ಮಹತ್ವದ ನಿರ್ಧಾರ ಎನ್‌ಇಇಟಿಯು ಹೆಚ್ಚು ಪಾರದರ್ಶಕ ಆಗಿರುವುದರ ಜತೆಗೆ, ವೈದ್ಯಕೀಯ ಕೋರ್ಸ್‌ಗೆ ಸೇರಲು ಬಯಸುವ ಅರ್ಹರು ಸುಲಭವಾಗಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಿದೆ. ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರದಾದ್ಯಂತ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾವ ರದ್ದುಪಡಿಸಿದ್ದ ತನ್ನದೇ ಆದ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್‌ ವಾಪಸ್‌ ಪಡೆದಿರುವುದು ಮಹತ್ವದ ನಿರ್ಧಾರವಾಗಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಪ್ರಸ್ತಾವವನ್ನು ರದ್ದುಪಡಿಸುವ ಆದೇಶ ನೀಡುವ ಮೊದಲು ಈ ಕುರಿತ ಎಲ್ಲ ಆಯಾಮಗಳನ್ನು ಪರಿಗಣಿಸಿರಲಿಲ್ಲ. ಸುಪ್ರೀಂ ಕೋರ್ಟ್‌ನ ಈ ಮರು ಚಿಂತನೆಯು ವೈದ್ಯಕೀಯ ಶಿಕ್ಷಣದಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರದ ಕೊಳೆ ನಿವಾರಿಸುವ ನಿಟ್ಟಿನಲ್ಲಿ ದೂರಗಾಮಿ ಪರಿಣಾಮ ಬೀರಲಿದೆ. ಶೈಕ್ಷಣಿಕವಾಗಿ ಅನರ್ಹರಾದವರೂ ಹಣ ಬಲದಿಂದ ಸೀಟು ಗಿಟ್ಟಿಸಿ, ವೈದ್ಯಲೋಕದ ನೈತಿಕತೆಗೆ ಧಕ್ಕೆ ತರುವುದಕ್ಕೆ ಕಡಿವಾಣ ಬೀಳಲು ಇಂತಹ ಮರುಚಿಂತನೆಯಿಂದ ನೆರವಾಗಬಹುದು. 2010ರಲ್ಲಿಯೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಹಾದಿ ಸುಗಮ ಮಾಡಿಕೊಟ್ಟಿತ್ತು. ಆದರೆ, ಇದರ ವಿರುದ್ಧ ಕೆಲ ರಾಜ್ಯ ಸರ್ಕಾರಗಳು, ಖಾಸಗಿ ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳು ಕೋರ್ಟ್‌ ಮೆಟ್ಟಿಲು ಏರಿದ್ದರಿಂದ ಈ ಕುರಿತ ತೀರ್ಮಾನ ನನೆಗುದಿಗೆ ಸಿಲುಕಿತು. ದೇಶದಾದ್ಯಂತ ನಡೆಸುವ ಏಕರೂಪದ ಸಾಮಾನ್ಯ ಪರೀಕ್ಷೆಯ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು 2013ರಲ್ಲಿ ರದ್ದುಪಡಿಸಿದ್ದರಿಂದ ಖಾಸಗಿ ಆಡಳಿತ ಮಂಡಳಿಗಳು ಮೇಲುಗೈ ಸಾಧಿಸಿದ್ದವು. ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಅಲ್ತಮಸ್‌ ಕಬೀರ್‌ ನೇತೃತ್ವದ ಮೂವರು ಸದಸ್ಯರ ಪೀಠವು ಬಹುಮತದ ತೀರ್ಪು ನೀಡಿ ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಸ್ತಾವವನ್ನು ರದ್ದುಪಡಿಸಿತ್ತು. ಅದೂ ಅಲ್ಲದೆ ಅಲ್ತಮಸ್ ಕಬೀರ್‌ ಅವರ ಸೇವಾವಧಿಯ ಕೊನೆಯ ದಿನ ಈ ತೀರ್ಪು ನೀಡಲಾಗಿತ್ತು ಎಂಬುದೂ ವಿಶೇಷ. ಈ ತೀರ್ಪಿನಿಂದಾಗಿ ಖಾಸಗಿ ಕಾಲೇಜುಗಳು ಮತ್ತೆ ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ದೊರೆಯಿತು. ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳನ್ನು ಎಸಗಲು ಮತ್ತು ದೇಣಿಗೆ ನೀಡಿ ಅನರ್ಹರು ಪ್ರವೇಶ ಗಿಟ್ಟಿಸಲು ರತ್ನಗಂಬಳಿ ಹಾಸಿಕೊಟ್ಟಂತಾಗಿತ್ತು. ವಿದ್ಯಾರ್ಥಿಗಳು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಪರೀಕ್ಷೆಗಳಿಗೆ ಹಾಜರಾಗುವ ಅನನುಕೂಲವೂ ಈ ವ್ಯವಸ್ಥೆಯಲ್ಲಿದೆ. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ತನ್ನ ತೀರ್ಪು ಪ್ರಕಟಿಸುವ ಮುನ್ನ ಯಾವುದೇ ಚರ್ಚೆ ನಡೆಸಿರಲಿಲ್ಲ ಎಂದು ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಎ.ಆರ್‌. ದವೆ ಅವರು ಬಹಿರಂಗಪಡಿಸಿದ್ದರು. ಇದು, ನಮ್ಮ ನ್ಯಾಯಾಂಗ ವ್ಯವಸ್ಥೆಯ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತದೆ. ಆದರೆ, ರಾಷ್ಟ್ರದಾದ್ಯಂತ ಏಕರೂಪದ ಪ್ರವೇಶ ಪರೀಕ್ಷೆಯು ಸರ್ಕಾರದ ಹಸ್ತಕ್ಷೇಪ ಇಲ್ಲದೆ ಕಾಲೇಜು ಸ್ಥಾಪಿಸುವ ಮತ್ತು ನಿರ್ವಹಿಸುವ ತಮ್ಮ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ಉಂಟುಮಾಡುವಂತಹುದು ಎಂಬುದು ಖಾಸಗಿ ಮತ್ತು ಅಲ್‍ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ವಾದ. ಇದರಿಂದ ತಮ್ಮ ಹಕ್ಕು ಉಲ್ಲಂಘನೆಯಾಗಲಿದೆ ಎಂದು ಕೆಲ ರಾಜ್ಯ ಸರ್ಕಾರಗಳೂ ಪ್ರತಿಪಾದಿಸಿದ್ದವು. 2013ರ ತೀರ್ಪು ಈ ವಾದವನ್ನು ಪುಷ್ಟೀಕರಿಸಿತ್ತು. ಇದಕ್ಕೆ ವಿರುದ್ಧವಾದ ವಾದಸರಣಿ ಸಾಕಷ್ಟು ಸಮರ್ಥವಾಗಿದ್ದರೂ ಪೀಠವು ಅದಕ್ಕೆ ಕಿವಿಗೊಟ್ಟಿರಲಿಲ್ಲ ಎನ್ನುವುದು ಸಹಜ ನ್ಯಾಯ ಪಾಲನೆಯಾಗಿಲ್ಲದಿರುವುದಕ್ಕೆ ನಿದರ್ಶನವಾಗಿತ್ತು. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನೆರವಿನ ಮೂಲಕ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ನಿಲುವಿಗೆ ಬದ್ಧವಾಗಿರುವ ಕೇಂದ್ರ ಸರ್ಕಾರ, ಈ ತೀರ್ಪನ್ನು ಪರಾಮರ್ಶಿಸಲು ಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಕೇಂದ್ರದ ನಿಲುವಿಗೆ ಈಗ ಮಾನ್ಯತೆ ಸಿಕ್ಕಿರುವುದು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಹೊಸ ಭರವಸೆ ಮೂಡಿಸಿದೆ. ಈಗ ನ್ಯಾಯಮೂರ್ತಿ ದವೆ ಅವರ ನೇತೃತ್ವದಲ್ಲಿನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ಹಿಂದಿನ ತೀರ್ಪನ್ನು ಬಹುಮತದಿಂದ ರದ್ದುಪಡಿಸಿದೆ. ಇದು ವೈದ್ಯಕೀಯ ಶಿಕ್ಷಣದ ಪ್ರವೇಶ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ನೆರವಾಗಲಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಆಧರಿಸಿ ಪ್ರವೇಶ ನೀಡುವ ಪ್ರಸ್ತಾವವು ರಾಜ್ಯಗಳು ಮತ್ತು ಖಾಸಗಿ ಒಡೆತನದ ಕಾಲೇಜುಗಳು ತಮ್ಮದೇ ಆದ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವುದನ್ನು ನಿರ್ಬಂಧಿಸಿತ್ತು. ಎನ್‌ಇಇಟಿಯು ಹೆಚ್ಚು ಪಾರದರ್ಶಕವಾಗಿರುವುದರ ಜತೆಗೆ, ವೈದ್ಯಕೀಯ ಕೋರ್ಸ್‌ಗೆ ಸೇರಲು ಬಯಸುವ ಅರ್ಹರು ಸುಲಭವಾಗಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸುವಂತಹದ್ದು. ಸೂಕ್ತ ಪ್ರವೇಶ ನೀತಿ, ವಿದ್ಯಾರ್ಥಿಗಳ ಹಿತಾಸಕ್ತಿ, ಆಡಳಿತ ವರ್ಗಗಳ ಹಕ್ಕುಗಳು ಹಾಗೂ ಸರ್ಕಾರದ ಹೊಣೆಗಾರಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದು ನೆನಪಿರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.