ಹುಲಿ ಸಂತತಿ ಹೆಚ್ಚಳ ಕಾರಿಡಾರ್‌ ಬಲವರ್ಧನೆ ಅಗತ್ಯ ಹುಲಿ ಸಂತತಿ ಹೆಚ್ಚುತ್ತಿದ್ದರೂ ಕಾಡಿನ ವಿಸ್ತೀರ್ಣ ಹೆಚ್ಚಾಗುತ್ತಿಲ್ಲ. ಅಕ್ಕಪಕ್ಕದ ಕಾಡಿಗೆ ವಲಸೆ ಹೋಗಲು ಹುಲಿ ಕಾರಿಡಾರ್‌ ವಿಸ್ತೀರ್ಣ ಕ್ಷೀಣಿಸುತ್ತಿದೆ. ಇದನ್ನು ಬಲಪಡಿಸುವ ಅಗತ್ಯ ಇದೆ ವಿನಾಶದ ಅಂಚಿನಲ್ಲಿರುವ ಪಟ್ಟಿಗೆ ಸೇರಿರುವ ಹುಲಿಗಳ ಸಂಖ್ಯೆ ಏರಿದೆ ಎನ್ನುವ ಶುಭ ಸುದ್ದಿ ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ ಹಾಗೂ ರಾಷ್ಟ್ರೀಯ ಹುಲಿ ಸಮೀಕ್ಷೆಯ ಆಧಾರದ ಅಂಕಿಅಂಶದಿಂದ ಬಹಿರಂಗವಾಗಿದೆ. ಇದರ ಪ್ರಕಾರ ವಿಶ್ವದ ನಾನಾ ಭಾಗದ ಅಭಯಾರಣ್ಯಗಳಲ್ಲಿ 3,890 ಹುಲಿಗಳಿವೆ. ವಿಶ್ವದಲ್ಲಿ 3,200 ಹುಲಿಗಳಿದ್ದವು ಎನ್ನುವ ಅಂಶ 2010ರಲ್ಲಿ ಮಾಸ್ಕೊದಲ್ಲಿ ನಡೆದ ವರ್ಲ್ಡ್‌ವೈಡ್‌ ಫಂಡ್‌ ಫಾರ್‌ ನೇಚರ್‌ ಸಭೆಯಲ್ಲಿ ಬಹಿರಂಗವಾಗಿತ್ತು. ಈ ಸಂಖ್ಯೆಯನ್ನು 2020ರ ವೇಳೆಗೆ ದುಪ್ಪಟ್ಟು ಮಾಡುವ ಕಠಿಣ ಗುರಿಯನ್ನು ಇರಿಸಿಕೊಳ್ಳಲಾಗಿತ್ತು. ಅದೀಗ ಫಲ ನೀಡಲಾರಂಭಿಸಿದೆ. ಹುಲಿಗಳ ಸಂಖ್ಯೆಯಲ್ಲಿ ಭಾರತದ ಪಾಲು ಶೇ 70ಕ್ಕಿಂತ ಹೆಚ್ಚಿದೆ ಎನ್ನುವುದು ಹೆಮ್ಮೆಪಡುವ ವಿಚಾರ. 2015ರ ಜನವರಿಯಲ್ಲಿ ಪ್ರಕಟವಾಗಿದ್ದ ಗಣತಿಯ ವರದಿ ಪ್ರಕಾರ ಭಾರತದಲ್ಲಿ ಹುಲಿಗಳ ಸಂಖ್ಯೆ 2,226 ರಷ್ಟಿತ್ತು. 2010ರ ಗಣತಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಶೇ 30ರಷ್ಟು ಹೆಚ್ಚಳವಾಗಿತ್ತು. ಭಾರತದಲ್ಲಿ ಹುಲಿ ಸಂತತಿ ಗಣನೀಯವಾಗಿ ಏರಿಕೆ ಕಾಣಲು ಕಾರಣ ವ್ಯಾಘ್ರ ಸಂರಕ್ಷಣೆ. ಕಾಡು ಮತ್ತು ಹುಲಿ ಸಂರಕ್ಷಣೆಗೆ ಆಯಾ ರಾಜ್ಯಗಳ ಅರಣ್ಯ ಇಲಾಖೆಗಳು ಪಣತೊಟ್ಟಿವೆ. ಆಹಾರ ಸರಪಳಿಯಲ್ಲಿ ಮೇಲಿನ ಸ್ಥಾನದಲ್ಲಿರುವ ಹುಲಿ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದರೆ ಬಲಿ ಪ್ರಾಣಿಗಳ ಸಂಖ್ಯೆಯೂ ಆರೋಗ್ಯಕರ ಸ್ಥಿತಿಯಲ್ಲಿದೆ ಎಂದೇ ಅರ್ಥ. ಭಾರತದ ಜೊತೆಯಲ್ಲಿ ರಷ್ಯಾ, ನೇಪಾಳ ಮತ್ತು ಭೂತಾನ್‌ನಲ್ಲೂ ಪಟ್ಟೆ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಪರಿಸರದ ಆರೋಗ್ಯದ ದೃಷ್ಟಿಯಲ್ಲೂ ಶುಭ ಸಂಗತಿ. ಆದರೂ, 2000– 2014ರೊಳಗೆ ವಿಶ್ವದಾದ್ಯಂತ 1,590 ಹುಲಿ ಚರ್ಮವನ್ನು ಜಪ್ತಿ ಮಾಡಲಾಗಿದೆ ಎನ್ನುವುದು ಆತಂಕ ತರುವ ಸಂಗತಿ. ಕಾಂಬೋಡಿಯಾದ ಕಾಡಿನಲ್ಲಿ ಹುಲಿ ಸಂತತಿಯೇ ಇಲ್ಲ ಎಂದು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ ಘೋಷಿಸಿದೆ. ಆದರೆ ಇದನ್ನು ಅಲ್ಲಿಯ ಅಧಿಕಾರಿಗಳು ಅಲ್ಲಗಳೆದು 20 ಹುಲಿ ಕಾಡಿನಲ್ಲಿವೆ ಎಂದಿದ್ದಾರೆ. ಮ್ಯಾನ್ಮಾರ್‌, ಚೀನಾ, ವಿಯೆಟ್ನಾಂದಲ್ಲಿ ಹುಲಿಗಳ ಸಂಖ್ಯೆ ಕುಸಿದಿದೆ. ಹುಲಿ ರಕ್ಷಣೆಗೆ ಹಲವು ಕಾಯ್ದೆಗಳಿದ್ದರೂ ಭಾರತದಲ್ಲಿ ಹುಲಿಗಳೇನೂ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ. ಕಳ್ಳಬೇಟೆ ಇಂದಿಗೂ ನಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ 26 ಹುಲಿಗಳ ಹತ್ಯೆ ನಡೆದಿದೆ. ಚಾಮರಾಜನಗರದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಅರಣ್ಯದಲ್ಲಿ ಮೂರು ತಿಂಗಳ ಹಿಂದೆ ಮರಿ ಹುಲಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಸುಪಾರಿ ಹತ್ಯೆಯ ಹಿಂದೆ ವನ್ಯಜೀವಿ ಸಂರಕ್ಷಣಾ ಸಂಘಟನೆಯ ಸದಸ್ಯರೊಬ್ಬರ ಕುಮ್ಮಕ್ಕು ಸಹ ಇತ್ತು ಎನ್ನುವ ಅಂಶ ಬಹಿರಂಗವಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯ ಬಂಧನ ಇನ್ನೂ ಸಾಧ್ಯವಾಗಿಲ್ಲ. ಕಾಡಿನಿಂದ ಹೊರಬಂದು ಟೀ ತೋಟದಲ್ಲಿ ಸೇರಿಕೊಂಡು ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿದ್ದ ಹುಲಿಯನ್ನು ಊಟಿ ಬಳಿ ಅರಣ್ಯ ಸಿಬ್ಬಂದಿಯೇ ಗುಂಡಿಕ್ಕಿ ಸಾಯಿಸಿದ್ದರು. ಇದೇ ರೀತಿ ಬಂಡೀಪುರದ ಅಂಚಿನಲ್ಲಿ ಗ್ರಾಮಸ್ಥರಿಗೆ ತಲೆನೋವಾಗಿದ್ದ ಹುಲಿಯನ್ನು ಅರಣ್ಯ ಸಿಬ್ಬಂದಿಯೇ ಗುಂಡಿಟ್ಟು ಹತ್ಯೆ ಮಾಡಿದ್ದರು. ಪ್ರದೇಶ ಪ್ರಾಬಲ್ಯ ಸಾಧಿಸುವ ಹೊಡೆದಾಟದಲ್ಲಿ ಹಲವು ಹುಲಿಗಳು ಸತ್ತಿವೆ. ಇದು ನಿಸರ್ಗ ಕ್ರಿಯೆ ಎನ್ನಬಹುದು. ಹುಲಿ ಸಂತತಿ ಹೆಚ್ಚುತ್ತಿದ್ದರೂ ಕಾಡಿನ ವಿಸ್ತೀರ್ಣ ಹೆಚ್ಚಾಗುತ್ತಿಲ್ಲ. ಅಕ್ಕಪಕ್ಕದ ಕಾಡಿಗೆ ವಲಸೆ ಹೋಗಲು ಹುಲಿ ಕಾರಿಡಾರ್‌ ವಿಸ್ತೀರ್ಣ ಕ್ಷೀಣಿಸುತ್ತಿದೆ. ಇದನ್ನು ಬಲಪಡಿಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಇದಕ್ಕಾಗಿ ಕೇಂದ್ರ ಅರಣ್ಯ ಸಚಿವಾಲಯ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸಗಡ; ಕರ್ನಾಟಕ, ತಮಿಳುನಾಡು ಮತ್ತು ಕೇರಳ ಹಾಗೂ ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲಿ ಹುಲಿ ಕಾರಿಡಾರ್‌ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಇದು ಆದಷ್ಟು ಬೇಗ ಕಾರ್ಯಗತವಾಗಬೇಕು. ನವದೆಹಲಿಯಲ್ಲಿ ನಡೆದ ಹುಲಿ ಸಂರಕ್ಷಣೆ ಕುರಿತ ಏಷ್ಯಾ ಖಂಡದ ಸಚಿವರ ಸಭೆಯಲ್ಲಿ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ವ್ಯಾಘ್ರನ ರಕ್ಷಣೆಗೆ ಭಾರತದ ಬದ್ಧತೆ ಪ್ರಕಟಿಸುತ್ತಾ ಸಂತತಿ ರಕ್ಷಣೆಗೆ ಉಳಿದ ರಾಷ್ಟ್ರಗಳಿಗೆ ನೆರವನ್ನು ಘೋಷಿಸಿದ್ದಾರೆ. ಇದರೊಂದಿಗೆ ಕಾಂಬೋಡಿಯಾ, ಭಾರತದಿಂದ ಹುಲಿಗಳನ್ನು ಪಡೆಯಲು ಆಸಕ್ತಿ ತೋರಿಸಿದೆ. ಇದೊಂದು ಹೊಸ ಪ್ರಯತ್ನ. ಆದರೆ ಆ ದೇಶದ ವಾತಾವರಣಕ್ಕೆ ಭಾರತದ ಹುಲಿ ಹೊಂದಿಕೊಳ್ಳುವುದೇ? ಅಲ್ಲಿಯ ಕಾನೂನು, ಸಂರಕ್ಷಣೆಗೆ ಪೂರಕವಾಗಿದೆಯೇ? ಎನ್ನುವ ವಿಚಾರದಲ್ಲಿ ಚರ್ಚೆ ನಡೆದು ಸಹಮತ ರೂಪುಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.