ಅಮೆರಿಕದ ಜೊತೆ ರಕ್ಷಣಾ ಒಪ್ಪಂದ: ಚರ್ಚೆ ಆಗಲಿ ಭಾರತಕ್ಕೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಷ್ಟೊನ್ ಕಾರ್ಟರ್ ಅವರ ಮೂರು ದಿನಗಳ ಪ್ರವಾಸ, ರಕ್ಷಣಾ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಹೆಚ್ಚುತ್ತಿರುವ ಬಾಂಧವ್ಯಕ್ಕೆ ದ್ಯೋತಕ. ಕಳೆದ ವಾರ ಈ ಪ್ರವಾಸದ ಸಂದರ್ಭದಲ್ಲಿಯೇ ಉಭಯ ರಾಷ್ಟ್ರಗಳ ಮಿಲಿಟರಿ ನೆಲೆಗಳ ಪರಸ್ಪರ ಬಳಕೆ ಕುರಿತಂತೆ ಭಾರತ ಹಾಗೂ ಅಮೆರಿಕ ತತ್ವಶಃ ಒಪ್ಪಿಗೆ ನೀಡಿರುವುದು ಮಹತ್ವದ ಬೆಳವಣಿಗೆ. ಈ ನಿಟ್ಟಿನಲ್ಲಿ ಲಾಜಿಸ್ಟಿಕ್ಸ್ ವಿನಿಮಯ ಒಡಂಬಡಿಕೆಗೆ (ಎಲ್‌ಇ ಎಂಓಎ) ಸಹಿ ಹಾಕಲಾಗಿದೆ. ಭಾರತದ ವಿದೇಶಾಂಗ ಹಾಗೂ ರಕ್ಷಣಾ ನೀತಿಗಳಲ್ಲಿ ಈ ಒಡಂಬಡಿಕೆಯಿಂದ ದೂರಗಾಮಿ ಪರಿಣಾಮಗಳಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿ ಇದು ಮುಖ್ಯವಾದದ್ದು. ಹೀಗಾಗಿ ಈ ಒಡಂಬಡಿಕೆಯ ವಿವರಗಳು ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟು ಚರ್ಚೆಯಾಗಬೇಕಾದದ್ದು ಅಗತ್ಯ. ಮೇಲ್ನೋಟಕ್ಕೆ ಈ ಒಡಂಬಡಿಕೆ ಸರಳವಾಗಿದೆ ಎಂದು ತೋರುತ್ತದೆ. ಸೌಲಭ್ಯಗಳ ಹಂಚಿಕೆಗೆ ಸಂಬಂಧಿಸಿದ ಒಡಂಬಡಿಕೆ ಇದು. ಈ ಪ್ರಕಾರ, ಎರಡೂ ರಾಷ್ಟ್ರಗಳ ಮಿಲಿಟರಿ ವ್ಯವಸ್ಥೆಗಳು, ಪರಸ್ಪರರ ನೆಲೆ, ಸೌಕರ್ಯಗಳನ್ನು ಬಳಸಿಕೊಳ್ಳಲು ಅವಕಾಶವಿರುತ್ತದೆ. ಜಂಟಿ ಸಮರಾಭ್ಯಾಸ ಹಾಗೂ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಪರಸ್ಪರರ ಬೆಂಬಲಕ್ಕೆ ಇದರಿಂದ ಅವಕಾಶವಾಗುತ್ತದೆ. ಅಲ್ಲದೆ ವಿಮಾನ, ನೌಕೆ ದುರಸ್ತಿ, ಇಂಧನ ಮರುಪೂರೈಕೆಯಂತಹ ಉದ್ದೇಶಗಳಿಗೂ ಪರಸ್ಪರರ ಮಿಲಿಟರಿ ನೆಲೆಗಳನ್ನು ಬಳಸಿಕೊಳ್ಳಲು ಅವಕಾಶ ಇರುತ್ತದೆ. ಇಂತಹದೊಂದು ಬಾಂಧವ್ಯ, ಉಭಯ ರಾಷ್ಟ್ರಗಳ ಮಧ್ಯೆ ರಕ್ಷಣಾ ಬಾಂಧವ್ಯವನ್ನು ಉನ್ನತೀಕರಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂತಹದೊಂದು ಒಡಂಬಡಿಕೆ, ಪಾರಂಪರಿಕವಾಗಿ ಭಾರತ ಪಾಲಿಸಿಕೊಂಡುಬಂದಿರುವ ಅಲಿಪ್ತನೀತಿಗೆ ವಿರುದ್ಧವಾದದ್ದು ಎಂಬುದನ್ನೂ ಗಮನಿಸಬೇಕು. ಇದು ಭಾರತದ ಆಯಕಟ್ಟಿನ ವಿಚಾರಗಳ ಕುರಿತಾದ ಸ್ವಾಯತ್ತತೆಯನ್ನು ಕುಗ್ಗಿಸಬಹುದು ಎಂಬಂತಹ ಆತಂಕವನ್ನು ಗಂಭೀರವಾಗಿ ಪರಿಶೀಲಿಸಬೇಕು. ಒಟ್ಟಾರೆ ರಕ್ಷಣಾ ಸಾರ್ವಭೌಮತ್ವಕ್ಕೆ ಧಕ್ಕೆಯಾಗಬಾರದು ಎಂಬುದು ಮುಖ್ಯ. ರಷ್ಯಾದಂತಹ ಭಾರತದ ದೀರ್ಘಾವಧಿಯ ಮಿತ್ರ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯ ಹಾಳಾಗಬಾರದು ಎಂಬಂತಹ ಎಚ್ಚರ ಇರಬೇಕು. ಅದರಲ್ಲೂ ಚೀನಾದೊಂದಿಗೆ ಅಮೆರಿಕದ ಸಂಘರ್ಷ ಹೆಚ್ಚಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಭಾರತ ಈ ವಿಚಾರವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಆಯಕಟ್ಟಿನ ವಿಚಾರಗಳ ಕುರಿತಂತಹ ಮಹತ್ವಾಕಾಂಕ್ಷೆಗಳ ಸಾಧನೆಗೆ ಇಂತಹ ಒಡಂಬಡಿಕೆಗಳು ಭಾರತಕ್ಕೆ ಅಗತ್ಯ ಎಂದು ಈ ಒಡಂಬಡಿಕೆ ಪರ ಇರುವವರು ವಾದ ಮಾಡುತ್ತಾರೆ. ಆದರೆ ತನ್ನ ಸಾಮರ್ಥ್ಯ ಹಾಗೂ ಮಿಲಿಟರಿ ವ್ಯಾಪ್ತಿಯ ಬಗ್ಗೆ ವಾಸ್ತವವಾದಿ ದೃಷ್ಟಿಕೋನವನ್ನು ಭಾರತ ಹೊಂದಿರುವುದು ಅಗತ್ಯ. ಈ ಒಡಂಬಡಿಕೆಯಲ್ಲಿ ಪ್ರಸ್ತಾಪವಾಗಿರುವ ಅಂಶಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಷ್ಟು ಸ್ಥಿತಿಯಲ್ಲಿ ಭಾರತ ಇದೆಯೇ ಎಂಬುದು ಪ್ರಶ್ನೆ. ಭಾರತದ ಮಿಲಿಟರಿ ಕಾರ್ಯಾಚರಣೆ ಸಾಮರ್ಥ್ಯ, ಭೌಗೋಳಿಕ ನೆಲೆಯಲ್ಲಿ ಸೀಮಿತವಾದುದು. ಹೀಗಾಗಿ ಅನೇಕ ಅಮೆರಿಕನ್ ಮಿಲಿಟರಿ ನೆಲೆ ಹಾಗೂ ಸೌಕರ್ಯಗಳನ್ನು ಬಳಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗದೇ ಹೋಗಬಹುದು. ಹಾಗೆಯೇ ಅಮೆರಿಕ ತನ್ನೆಲ್ಲಾ ಮಿಲಿಟರಿ ನೆಲೆಗಳನ್ನು ಭಾರತದ ಬಳಕೆಗೆ ಬಿಟ್ಟುಕೊಡುವುದೆ? ಉದಾಹರಣೆಗೆ ಪಾಕಿಸ್ತಾನದ ಜೊತೆ ಯುದ್ಧವಾದಲ್ಲಿ ಆಗ ಭಾರತದ ನೌಕೆಗಳು ಹಾಗೂ ವಿಮಾನಗಳಿಗೆ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕ ನೆಲೆಗಳಲ್ಲಿ ಇಂಧನ ತುಂಬಿಸಿಕೊಳ್ಳಲು ಅವಕಾಶ ಇರುವುದೆ? ಎಂಬೆಲ್ಲಾ ಪ್ರಶ್ನೆಗಳೂ ಇವೆ. ಹೀಗಾಗಿ ಉದ್ದೇಶಿತ ಒಪ್ಪಂದದ ಆಂಶಗಳನ್ನು ಸರ್ಕಾರ ಸ್ಪಷ್ಟ ಪಡಿಸುವುದು ಅಗತ್ಯ. ಇಂತಹ ಒಪ್ಪಂದಗಳ ಪಠ್ಯಗಳನ್ನು ಭದ್ರತೆಯ ಕಾರಣ ನೀಡಿ ಸಾರ್ವಜನಿಕ ಅವಗಾಹನೆಗೆ ಸಾಮಾನ್ಯವಾಗಿ ತರುವುದಿಲ್ಲ. ಆದರೆ ಪಾರದರ್ಶಕತೆ ಇಲ್ಲದಿರುವುದು ಪ್ರಜಾಸತ್ತೆಗೆ ವಿರುದ್ಧವಾದದ್ದು. ದೀರ್ಘಾವಧಿಯಲ್ಲಿ ನಮ್ಮ ಹಿತಾಸಕ್ತಿ ಕುಗ್ಗಿಸುವ ಒಪ್ಪಂದಗಳಿಗೆ ಉತ್ತೇಜನ ದಕ್ಕುವಂತಾಗಬಾರದು ಎಂಬಂಥ ಕಾಳಜಿ ಅಗತ್ಯ. ಸಾರ್ವಜನಿಕ ಚರ್ಚೆಯ ನಂತರವೇ ಈ ಒಡಂಬಡಿಕೆಯನ್ನು ಸರ್ಕಾರ ಅಂತಿಮಗೊಳಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.